೧. ಹೇಮಕೂಟ ದೃಶ್ಯ
ಬನ್ನಿರಣ್ಣೋ ಬನ್ನಿರಣ್ಣೋ ಭಾರತೀಯರು ಹಂಪೆಗೆ
ಮಾಲ್ಯವಂತ ಮತಂಗರುಷಿಮುಖ ಹೇಮಕೂಟದ ಬೀಡಿಗೆ
ಕಂಡೆವದಿಗೋ ಕಂಡೆವದಿಗೋ ಅದ್ಭುತದ ದೃಶ್ಯಂಗಳ
ತುಂಗಭದ್ರೆಯ ಬದಿಗೆ ನೋಡಾ ಪರ್ವತಂಗಳ ಸಾಲ್ಗಳ
ಏನಿದಚ್ಚರಿ ಪ್ರಕೃತಿದೇವಿಯು ನೃತ್ಯಗೈದಿಹಳೀ ಎಡೆ
ಮನುಜರೆದೆಯನು ಭೇದಿಸಿ ಮುಗ್ಧಗೊಳಿಸುವುದೇ ಎಡೆ
ನಮ್ಮ ದೇಶದ ಹೆಮ್ಮೆಯನು ಪ್ರಕಟಿಸುತ ನಿಂತಿದೆ ಹಂಪೆಯು
ದಿಕ್ಕುದಿಕ್ಕಿಗು ವ್ಯಾಪಿಸಿದೆ ಗತವೈಭವದ ಈ ಕೀರ್ತಿಯು
ಲೆಕ್ಕವಿಲ್ಲದ ದೇಗುಲಂಗಳು ದಿಕ್ಕುಗಾಣದೆ ನಿಂತಿವೆ
ಮಸಣವಾಗಿದೆ ಪಟ್ಟಣವು ವಿಧಿ ಮಹಿಮೆ ತಿಳಿಯಲು ಸಾಧ್ಯವೆ?
***
೨ ವಿರೂಪಾಕ್ಷ ದರ್ಶನ
ಚಿನ್ಮಯಾತ್ಮಕ ಶ್ರೀಗುರು ಪರಮೇಶ ಪಾವನಮೂರುತಿ
ನಿಮ್ಮ ಪಾದಕೆ ನಮಿಸುವೆನು ಓ ಲೋಕಮಾತೆ ಪಾರ್ವತಿ
ಸಂತಸದಿ ನಾ ಪೊರಟು ಬಂದೆನು ನಿಮ್ಮ ಸೇವೆಯ ಗಯ್ಯಲು
ಮಾರುಹೋದೆನು ಇಲ್ಲಿ ತುಂಬಿಹ ಪ್ರಕೃತಿ ಸಿರಿಯನು ಕಾಣಲು
ದೇಗುಲದ ಸಿಂಗರದ ಚಿತ್ರದ ಶಿಲ್ಪದೊಳು ನಾ ಬರೆಯಲೆ?
ಆಗಸವ ಚುಂಬಿಸುತ ನಿಂತಿಹ ಗೋಪುರದ ಬೆಲೆ ಕಟ್ಟಲೆ
ದೇವರಾಯನ ಕಾಲವನು ನೆನೆನೆನೆದು ಕಂಬನಿಗರೆಯಲೆ?
ಭಾಗ್ಯಲಕ್ಷ್ಮಿಯ ಸೂರೆಗೊಂಡಾ ಹಂತಕರ ನಾ ಶಪಿಸಲೆ?
ಭಾರತಾಂಬೆಯ ವೀರಪುತ್ರರೆ ವಿಜಯನಗರದ ಅರಸರೇ
ರಕ್ಕಸರ ಚಂಡಾಡಿ ರಾಜ್ಯವನುಳಿಸಿಕೊಳ್ಳದೆ ಪೋದಿರೆ!
***
೩. ಕೋದಂಡ ರಾಮಸ್ವಾಮಿಯ ದೇವಸ್ಥಾನದ ಮುಂದಿನ ದೃಶ್ಯ
ಆಗದಾಗದು ನಿನ್ನ ಬಣ್ಣಿಸಲಸದಳವು ಓ ಪ್ರಕೃತಿಯೇ
ಬಾಗಿ ನಮಿಸುವೆ ಪರ್ವತಂಗಳೆ ಶರಣು ಶರಣು ತುಂಗೆಯೆ
ನಿನ್ನ ಝರಿಯದು ಕೊಚ್ಚಿತಂದಿಹ ಸಣ್ಣಮಳಲಿನ ಕಣದೊಳು
ಒಂದು ಕಣಕೂ ತೂಗಲಾರದ ಪಾಮರಳು ಏಗೈವಳು
ದಟ್ಟವಾಗಿಹ ಪರ್ವತಂಗಳೆ ವಿಜಯನಗರ ಧ್ವಜಗಳೇ
ಅಟ್ಟಹಾಸದ ನಿಮ್ಮ ಹಿರಿಮೆಯ ಬಣ್ಣಿಸಲು ನಾನಸಮಳೇ!
ಸೂರೆಗೊಂಡಿತು ಮನಸಿದೆಲ್ಲವು ಯಾರು ಕದ್ದರೊ ಕಾಣೆನು
ಮಾರುತಿ ವೈದೇಹಿ ಲಕ್ಷ್ಮಣರೊಡನೆ ಇಲ್ಲಿಹ ರಾಮನೊ?
ತುಂಗೆ ಭೋರೆಂದೆನುತ ಮೊರೆಯಲು ಎದ್ದವೆನ್ನೊಳು ಅಲೆಗಳು
ಬಂದುದೆಲ್ಲವ ಬಣ್ಣಿಸಲು ಸಾಹಸಿಗರೇ ಬಡ ಕವಿಗಳು?
***
೪ ವಿಠ್ಠಲರಾಯನ ದೇವಸ್ಥಾನದ ದೃಶ್ಯ
ಸ್ವಾಮಿ ವಿಠ್ಠಲರಾಯ ನಿನ್ನಯ ಪೆಸರಿನದೆ ಈ ದೇಗುಲ?
ಸಿಂಗರದ ಮಂಟಪವನೊಲ್ಲದೆ ಪೋದೆಯಾ ಬಿಡು ಸಾಕೆಲ!
ಶಿಲ್ಪ ಕಲೆಗಳ ಗಣಿಯ ಸೃಜಿಸಿಹ ವಿಶ್ವಕರ್ಮನದಾವನು?
ದೈವದತ್ತನೊ! ಶಿಲ್ಪದೊಳು ತುಂಬಿಹನು ಜೀವದ ಕಳೆಯನು!
ಒತ್ತಿಹನು ಸೌಂದರ್‍ಯ ಮುದ್ರೆಯ ವಸ್ತುಚಯವನು ಪೋಣಿಸಿ
ಇತ್ತ ನೋಡಿರಿ, ಕಲೆಯ ಪ್ರಿಯರೇ, ಶಿಲ್ಪಿಹೃದಯವ ಶೋಧಿಸಿ
ಸಪ್ತಸ್ವರಗಳ ವೀಣೆ ಮಿಡಿಸುತ ಶಿಲೆಯೊಳಿರುವನು ಸಾಹಸಿ
ಸುತ್ತು ಸ್ತಂಭದಿ ಹಲವುಪರಿ ಶ್ರೀರಾಮಚರಿತೆಯ ಚಿತ್ರಿಸಿ
ಎದ್ದು ಬನ್ನಿರಿ ಕಲೆಯು ಕಾಡೊಳು ವ್ಯರ್ಥವಾಗಿದೆ ಹಾ ವಿಧಿ
ಎತ್ತ ನೋಡಲು ಶಿಥಿಲ ದೃಶ್ಯವೆ, ತಾಳಲಾರೆನು ಈ ಕುದಿ!
***
೫ ವಿದ್ಯಾರಣ್ಯರಿಗೆ
ಧರ್ಮಸ್ಥಾಪಕ ಜ್ಞಾನದಾಯಕ ಏನಿದೇನಿದು ತಾತನೇ
ಕರ್ಮವಿಂತೆಸಗಲ್ಕೆ ಕಾರಣವೇನು ತಿಳಿಸೈ ತಾತನೇ!
ಕೃಷ್ಣರಾಯರು ಗೈದ ಧರ್ಮಗಳೆತ್ತ ಪೋದುವು ಸಮರದಿ
ಕುಲಗುರುವೆ, ನೀನಿಲ್ಲೆ ಕಾದಿರೆ ಉಂಟೆ ಅಪಜಯ ನಗರದಿ?
ಎಲ್ಲಿ ವಿಜಯ ಧ್ವಜಗಳೆಲ್ಲಿ? ಎಲ್ಲಿ ಭೇರಿಮೃದಂಗವು?
ಎಲ್ಲಿ ಕವಿವರರೆಲ್ಲಿ? ಪಂಡಿತರೆಲ್ಲಿ ವೇದಪುರಾಣವು?
ಅಟ್ಟಹಾಸವು ಮೂರು ದಿನಮಿದು! ದೈವಕೃತಿ ಇಂತೆಂಬೆಯ?
ಹುಟ್ಟು ಸಾವಿನ ಗುಟ್ಟು; ಸೃಷ್ಟಿಯ ಕರ್ತನನು ಕೇಳೆಂಬೆಯಾ?
ಗತಿಸಿದರಸರ ಕೀರ್ತಿ ನಿಂತಿದೆ ಸಾಲದೇ ಅದು ಎಂಬೆಯಾ?
ಇದ್ದ ರಾಜ್ಯವನುಳಿಸಿಕೊಂಡರೆ ಸಾಕು ಜನಕಜೆ ಎಂಬೆಯಾ?
*****