ಇದೇನು ಭಾಗ್ಯವೊ ನಿನ್ನ ಕಂಡೆನು ಮರಳಿ
ದಕ್ಷಿಣದ ಕಾಶಿ ಈಶ
ಸದಮಲಾಭ್ಯುದಯೇಶ ನಮೊನಮೋ ಜಗದೀಶ
ಮುದಿತಳಾದೆನೋ ಸ್ವಾಮಿ ಭಕ್ತಜನಪೋಷಾ
ಹರಡಲೊಲ್ಲದು ನುಡಿಯು ನಿನ್ನ ಹಿರಿಮೆಯ ಬಗೆದು
ಪರಮಾತ್ಮ ನೀಲಕಂಠ
ಶಿರಬಾಗಿ ನಿಂದಿಹೆನು ಹಣ್ಣಾಗಿ ಬಂದಿಹೆನು
ಪರಿಹರಿಸು ದುರಿತವನು ಪಾರ್ವತೀ ರಮಣಾ
ಹೊಗಳಲೆನಗಳವುಂಟೆ ನಿನ್ನ ಮಹಿಮೆಗಳೆಲ್ಲ
ಅಗಣಿತನೆ ವೇದಪುರುಷಾ
ಸಗುಣ ನಿರ್ಗುಣರೂಪ ಸಚ್ಚಿದಾನಂದ ಘನ
ನಿಗಮಾಂತ ಪೂರಿತನೆ ಚರಾಚರನೆ ಶಂಭೋ
ನಿನ್ನನೇ ನಂಬಿಹೆನು ಕಾದು ಕನವರಿಸಿಹೆನು
ಬಾ ಎಂದು ಬಳಸು ನೀನು
ನಿನ್ನದೀ ತನುಮನವು ನಿನ್ನದೀ ಜಪತಪವು
ನಿನ್ನವಳು ಜನಕಜೆಯು ನಿನ್ನಾಣೆ ದೇವ
*****