ನೋಡದೊ ಸ್ವಾತಂತ್ರ್‍ಯಾಕಾಶದಲಿ
ಹಾರುತ್ತಿದೆ ನವ ರಾಷ್ಟ್ರಧ್ವಜವು!
ಹಾರಲಿ! ಏರಲಿ! ಈ ಹೊಸ ಬಾವುಟ!
ಚಿರ ಬಾಳಲಿ ನವ ಭಾರತ ಕೂಟ!
ಹಿಂದೂ ಮುಸ್ಲಿಮ ಸಿಕ್ಕರು ಒಂದು
ಹಿಂದೆ ಇಂದು ಮುಂದೆಂದೆಂದೂ-
ಇಂತು ಸಾರುತಿದೆ ಈ ಹೊಸ ಬಾವುಟ:
ಗೆಲ್ಲಲಿ ಎಲ್ಲರು ಒಂದೆನುವೀ ದಿಟ!
ಬಾರ ಬಾರ ಹರಿಕಾರ ಸಮೀರ
ತಾರ ತಾರ ಬಾವುಟಕ್ಕೆ ವಿಹಾರ
ತೋರ ತೋರ ಬಾವುಟದಾಕಾರ:
ಹಾಡಲಿ ಹರಸಲಿ ಲೋಕವಪಾರ!
ನಿಲ್ಗೆ ಚಂದ್ರತಾರಂಬರಮೀ ಧ್ವಜ
ಪುಣ್ಯಭೂಮಿಯಲಿ ನವ ಕಲ್ಪ ಕುಜ!
ತುಂಬಿ ಬಿಡುತಿರಲಿ ಫಲಪುಷ್ಪವ್ರಜ,
ಆಶ್ರಯ ಹೊಂದಲಿ ಸರ್ವಪ್ರಜಾ.
ಹಸುರು ಬಿಳಿಪು ಕೇಸರಿಗಳು ಕೂಡಿದ
ಮೂಬಣ್ಣದ ನಡುವೆಯಲದೊ ನೋಡು:
‘ಅಶೋಕ ಚಕ್ರ’ವು ಮೆರೆಯುತಿದೆ,
ಶಾಂತಿಯ ಯುಗವನು ತೆರೆಯುತಿದೆ.
ಅಂದು ಅಶೋಕನು ಧರಿಸಿದ ಚಕ್ರ:
ಯುದ್ಧವ ನಿಲಿಸಿದ ಶಾಂತಿಯ ಚಕ್ರ;
ಶಾಂತಿ ಪುಷ್ಟಿ ತುಷ್ಟಿಗಳನು ತುಂಬುವ,
ಭಗವಾನ್ ಬುದ್ಧನ ಧರ್ಮದ ಚಕ್ರ.
ಹಿಂದೆ ಕೃಷ್ಣನೇ ತೋರಿದ ದಾರಿ-
ಗಾಂಧಿ ಮಹಾತ್ಮರು ಎತ್ತಿಹಿಡಿದ ಗುರಿ-
ಸತ್ಯ ಅಹಿಂಸೆ ದಾನ ಧರ್ಮ ದಯೆ:
ಶೋಕವ ಹರಿಸುವ ‘ಅಶೋಕ’ ಚಕ್ರ.
ಯುದ್ಧವನೆಸಗದೆ, ಯಾರನು ಕೊಲ್ಲದೆ,
ಕೊಲ್ಲಬಂದವರ ರಕ್ತವ ಚೆಲ್ಲದೆ,
ಆಳರಸರ ಹೃದಯವ ಮಾರ್ಪಡಿಸಿದ
ದಿವ್ಯಮಂತ್ರವಿದು: ಅಶೋಕ ಚಕ್ರ.
ನಾಡಿನ ದಾಸ್ಯದ ಶೋಕವ ಕಳೆದು
ಹೆರರಿಗೆ ಶೋಕವ ತರುವುದನುಳಿದು
ಶಾಂತಿಯ ಬೆಳಸುವ ಧ್ಯೇಯವ ತಳೆದು
ತಿರುಗುತ ಬೆಳಗುತಲಿಹುದೀ ಚಕ್ರ.
ಭಾರತೀಯ ಸಂಸ್ಕೃತಿಗಿದೆ ಗುರುತು:
ಭೇದಭಾವಗಳನೆಲ್ಲರು ಮರೆತು
ಕೂಡಿ ಬಾಳೆ ಶೋಕವೆ ಹೊರತು:
ಆ ಬಾಳ ತರಲಿ ಈ ಶುಭ ಚಕ್ರ!
ಸತ್ಯ ಅಹಿಂಸೆಗಳಡಿಗಲ್ ಮೇಲೆ
ಸಮತೆಯ ಸೌಧವ ಕಟ್ಟಲು ನಾಳೆ
ಜನತೆಯ ಶೋಕವು ನೀಗುವುದಾಗಳೆ:
ಅದರ ಮುಂಗುರುಹು ಅಶೋಕ ಚಕ್ರ!
ಭಾರತ ಮಾತೆಗೆ ಕಿರೀಟವಿಟ್ಟು
ನಾಡಿಗೆ ನಲ್‌ನಗು ಮುಖವನು ಕೊಟ್ಟು
ವಿಶ್ವಕೆ ಶಾಂತಿಯ ಹರಕೆಯನಿಟ್ಟು
ತಿಗುತ್ತಿರಲಿ ಸನಾತನ ಚಕ್ರ!
ಎನಿತು ಸೂಳು ತಿರುಗಿದುದೀ ಚಕ್ರ,
ಎನಿತು ಸೂಳು ನಿಂತುದೊ ಈ ಚಕ್ರ;
ನಿಲ್ಲದೆ ತಿರುಗಲಿ ಅಶೋಕ ಚಕ್ರ,
ಗೆಲ್ಲಲಿ ಜಗವನೆ ಧರ್ಮದ ಚಕ್ರ!
ಶ್ರೀ ಕೃಷ್ಣ ಬುದ್ಧ ಅಶೋಕ ಗಾಂಧೀ
ಪ್ರಭೃತಿಪ್ರವರ್ತಿತ ಚಕ್ರಕ್ಕೆ ನಮೋ
ಧರ್ಮದ ಚಕ್ರಕೆ ನಮೋ ನಮೋ
ಅಶೋಕ ಚಕ್ರಕೆ ನಮೋ ನಮೋ
ಅಶೋಕ ಚಕ್ರಾಂಕಿತ ಧ್ವಜಕೆ ನಮೋ
ಭಾರತ ಮಾತೆಗೆ ನಮೋ ನಮೋ
ಭಾರತ ಜನತೆಗೆ ತೇಜವನೆರೆದು
ಸಲಹುವ ದೇವಗೆ ನಮೋ ನಮೋ
*****