ಪಟ್ಟಣಕ್ಕೆ ಹೋಗುವೆನೆಂದು ಕುಣಿಯುತ್ತಿರುವ ತಮ್ಮ ಕುಮಾರ ಕಂಠೀರವ ತಂಗಿಯನ್ನು ನೋಡಿಯಾದರೂ ಬದಲಾಗಲಿ, ಅವಳ ಸಾಧನೆ ಅವನಿಗೆ ಸ್ಫೂರ್ತಿಯಾದೀತೆಂದು ನಿರೀಕ್ಷಿಸಿದ್ದರು ಸುಂದರೇಶ್. ಗಂಡು ಮಗನಾದ ತಮ್ಮ ಮಗನೇ ಕೃಷಿಯಲ್ಲಿ ಆಸಕ್ತಿ ತೋರುತ್ತಿಲ. ತೋಟವೆಂದರೆ…. ತೋಟದ ಕೆಲಸವೆಂದರೆ ಅಸಡ್ಡೆ. ತಾವೇ ಎಲ್ಲವನ್ನು ಹೇಳಿ ಹೇಳಿ ಮಾಡಿಸಬೇಕಿತ್ತು. ಒಂದುವೇಳೆ ತಾವು ಏನೂ ಹೇಳದಿದ್ದರೆ ಸ್ವಂತ ಬುದ್ಧಿಯಿಂದ ಯಾವ ಕೆಲಸಕ್ಕೂ ಕೈಹಾಕದೆ ಸುಮ್ಮನಿದ್ದುಬಿಡುತ್ತಿದ್ದ ಸುಪುತ್ರನ ಬಗ್ಗೆ ಸುಂದರೇಶರಿಗೆ ಸದಾ ಅಸಮಾಧಾನವೇ. ಇರುವ ಒಬ್ಬ ಮಗ ಆಸ್ತಿಯನ್ನು ನೋಡಿಕೊಳ್ಳದಿದ್ದರೆ ಮತ್ಯಾರು ನೋಡಿಕೊಂಡಾರು? ಹೋಗಲಿ ವಿದ್ಯೆಯಾದರೂ ಚೆನ್ನಾಗಿ ಹತ್ತಿ ಒಂದು ನೌಕರಿ ಸಂಪಾದಿಸುವಷ್ಟು ಬುದ್ದೀವಂತನಾದನೇ ಅಂದ್ರೆ ಅದೂ ಇಲ್ಲ. ಪಿ.ಯು.ಸಿಗೆ ಮುಗ್ಗರಿಸಿ ಮನೆಸೇರಿದ್ದ.
ಇವನ ಓದಿಗೆ ಅದಾವ ಕೆಲಸ ಸಿಕ್ಕೀತು? ಸ್ವಂತ ಬಂಡವಾಳ ಹೂಡಿ ಗೆಲ್ಲುವಷ್ಟು ಚಾಣಕ್ಷತನವೂ ಇಲ್ಲ, ಇರುವ ಆಸ್ತಿ ನೋಡಿಕೊಳ್ಳುವ ಮನಸ್ಸು ಇಲ್ಲ. ಒಟ್ಟಿನಲ್ಲಿ ದೊಡ್ಡ ತಲೆನೋವಾಗಿದ್ದ. ಇನ್ನು ಹೆಣ್ಣು ಮಗಳೋ ತೋಟಕ್ಕೂ ತಮಗೂ ಸಂಬಂಧವೇ ಇಲ್ಲ, ತಾವು ಮದುವೆಯಾಗಿ ಹೊರಟು ಹೋಗುವೆವೆಂದು ತುದಿಗಾಲಲ್ಲಿ ನಿಂತಿದ್ದಾರೆ. ತನಗೊಬ್ಬನಿಗೆ ಬೇಕಾಗಿದೆ ಆ ಆಸ್ತಿ! ಎಲ್ಲರ ಮನೆಗಳ ಪರಿಸ್ಥಿತಿಯೂ ಹೆಚ್ಚು ಕಡಿಮೆ ಹೀಗೆಯೇ ಇರುವಾಗ ಇಳಾ ಒಬ್ಬಳು ತೋಟದ ಬಗ್ಗೆ, ಕೃಷಿಯ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದು ಅಚ್ಚರಿ ಹುಟ್ಟಿಸುವಂತಿತ್ತು. ಅಪ್ಪನನ್ನು ಕಳೆದುಕೊಂಡ ದುಃಖದಲ್ಲಿ ಹುಚ್ಚು ಅವೇಶ ಬಂದಿರಬೇಕು. ವ್ಯವಸಾಯದ ಕಷ್ಟಸುಖ ಗೂತ್ತಾದರೆ ಮೈಸೂರಿಗೆ ಓಡುತ್ತಾಳೆ ಎಂದೇ ಭಾವಿಸಿದ್ದರು. ಅವಳ ಕೆಲಸಗಳೆಲ್ಲವೂ ಹುಚ್ಚಾಟಗಳೆಂದೇ ತೋರುತ್ತಿತ್ತು.
ಅಮ್ಮನ ಹಾಲು ಕುಡಿದ ತೇವವೇ ಆರಿಲ್ಲ. ತೋಟವನ್ನೇನು ಮಾಡಿಸುತ್ತಾಳೆ ಎಂದೇ ಉಡಾಫೆ ತೋರಿದ್ದರು. ದುಡ್ಡನ್ನೆಲ್ಲ ಹುಡಿ ಮಾಡಿಬಿಡುತ್ತಾಳೋ, ಅಪ್ಪನಂತೆ ಮತ್ತೆ ಸಾಲದಲ್ಲಿ ಮುಳುಗಿ ಹೋಗುವಂತೆ ಮಾಡಿಬಿಡುತ್ತಾಳೋ ಎಂಬ ಆತಂಕದಿಂದಲೇ ನೋಡುತ್ತಿದ್ದರು. ಏನಾದರೂ ಹೇಳಿದರೆ ತಂದೆ ಇಲ್ಲದ ಮಗು ಎಲ್ಲಿ ನೊಂದುಕೊಳ್ಳುತ್ತದೊ ಎಂದು ನಿಯಂತ್ರಿಸಿಕೊಳ್ಳುತ್ತಿದ್ದರು. ಕೆಲವೊಮ್ಮೆ ಅಪ್ಪನಂತಲ್ಲ ಮಗಳು – ಬುದ್ಧಿವಂತೆ, ಮೌನವಾಗಿಯೇ ಸಾಧಿಸುತ್ತಾಳೇನೋ ಎನಿಸಿದರೂ, ವ್ಯವಸಾಯ ನಂಬಿಕೊಂಡು ಕಷ್ಟ ಪಡುತ್ತಿರುವವರನ್ನು ಕಂಡಾಗ, ಹಾಲುಗಲ್ಲದ ಹುಡುಗಿ ಓದಿಕೊಂಡು ಇರುವುದು ಬಿಟ್ಟು ಇದೇನು ಮಾಡುತ್ತಾಳೋ ಎಂದು ಅಪನಂಬಿಕೆಯಿಂದ ಇರುವಾಗ ಇದೇನು ಸಾಹಸ ಮಾಡಿ ಬಿಟ್ಟಳು. ಅಷ್ಟೊಂದು ಧೈರ್ಯ. ಮುನ್ನುಗ್ಗುವ ಎದೆಗಾರಿಕೆ, ಕೆಲಸಗಳಿಗೆ ಅಂಜದೆ, ಹಿಡಿದದ್ದನ್ನು ಸಾಧಿಸುವ ಛಲ ತೋರಿಸಿ ಗೆದ್ದೇಬಿಟ್ಟಳು. ಮನೆಯ ಹೆಸರನ್ನು ಎತ್ತರಕ್ಕೇರಿಸಿಬಿಟ್ಟಿಳು. ಭಾಷಣದಲ್ಲಿಯೂ ತಮ್ಮನ ಮಗಳನ್ನು ಕೊಂಡಾಡಿದರು. ಹುಟ್ಟಿದರೆ ಇಂತಹ ಮಕ್ಕಳು ಹುಟ್ಟಬೇಕು. ಇಲ್ಲದಿದ್ದರೆ ಮಕ್ಕಳೇ ಬೇಡ ಎಂದು ಮಗನ ಮೇಲಿದ್ದ ಅಸಹಾಯಕತೆಯನ್ನು ಕಕ್ಕಿದರು.
ಒಟ್ಟಿನಲ್ಲಿ ಅಪರೂಪಕ್ಕೆ ಒಂದು ಒಳ್ಳೆಯ ಕಾರ್ಯಕ್ರಮ ನಡೆದು ಎಲ್ಲರೂ ಇಳಾಳನ್ನು ಗುರ್ತಿಸುವಂತಾಯಿತು. ಈ ಸನ್ಮಾನ ಹಾಗೂ ಪ್ರಶಸ್ತಿಯಿಂದ ಇಳಾಳ ಮೇಲಿದ್ದ ಜವಾಬ್ದಾರಿ ಮತ್ತಷ್ಟು ಹೆಚ್ಚಾಯಿತು. ಮುಂದಿನ ಸಾಧನೆಗಳಿಗೆ ಸ್ಫೂರ್ತಿಯೂ ಆಯಿತು. ಕೃಷಿಗೆ ತನ್ನನ್ನು ಮೀಸಲಾಗಿಡುವ ನಿರ್ಧಾರ ಮತ್ತಷ್ಟು ಗಟ್ಟಿಯಾಯಿತು. ಹೇಗೊ ಏನೋ ಎಂಬ ಆತಂಕದ ಹೊರೆ ಕಳಚಿ ನಿರಾಳಭಾವ ಮೂಡಿ, ಮತ್ತಷ್ಟು ತೊಡಗಿಸಿಕೊಳ್ಳಲು ಅನುವು ಮಾಡಿಕೊಟ್ಟಿತು. ಈ ಸಂದರ್ಭದಲ್ಲಿ ಅಪ್ಪನ ನೆನಪು ಮತ್ತಷ್ಟು ಕಾಡಿ ಇದಕ್ಕೆಲ್ಲ ಅಪ್ಪನೇ ಪರೋಕ್ಷವಾಗಿ ಕಾರಣಕರ್ತನಾದನಲ್ಲ, ಅಪ್ಪನಿದ್ದಿದ್ದರೆ ತಾನು ಇಲ್ಲಿರುತ್ತಿದ್ದೇನೆ, ಯಾರ ಬದುಕಿನಲ್ಲಿ ಏನೇನು ಆಗಬೇಕೊ ಅದೆಲ್ಲ ಆಗಲೇಬೇಕಲ್ಲವೇ, ನನ್ನ ಹಣೆಯಲ್ಲಿ ಹೀಗೆ ಬರೆದಿರುವಾಗ ಅಪ್ಪನನ್ನು ಅಪ್ಪನ ಕೃತ್ಯವನ್ನು ದೂಷಿಸಿ ಫಲವೇನು ಎಂದು ಸಮಾಧಾನಿಸಿಕೊಂಡಳು.
ಈ ಕಾರ್ಯಕ್ರಮ ಬೇಡವಾಗಿತ್ತು. ವಿಸ್ಮಯ್ ಯಾಕೀಂತ ಕಾರ್ಯಕ್ರಮ ಹಮ್ಮಿಕೊಂಡರು? ಹೇಗೊ ನಾಲ್ಕು ಜನರ ಮಧ್ಯ ಕಾಣದಂತಿರಲು ಬಯಸುತ್ತಿದ್ದ. ಆದರೆ ಕಾಣುವಂತಾಯಿತು. ಇದೆಲ್ಲ ಬೇಕಿತ್ತೆ? ತನ್ನನ್ನ ಪ್ರಶ್ನಿಸಿಕೊಂಡಳು. ವಿಸ್ಮಯ್ ಉಪಕಾರದ ಹೊರೆ ಹೊರಸಿದ್ದಾರೆ. ಮೊದಲು ಅಮ್ಮನಿಗೆ, ಈಗ ನನಗೆ, ಮನಸ್ಸು ಸಮಾಧಾನ ಹೊಂದಲೇ ಇಲ್ಲ. ಮನೆಗೆ ಬಂದರೂ ಅದೇ ಭಾವ ಕಾಡುತ್ತಿತ್ತು. ಅಂಬುಜಮ್ಮ ‘ಎಷ್ಟು ಜನರ ದೃಷ್ಟಿ ತಗುಲಿದೆಯೊ, ದೃಷ್ಟಿ ತೆಗಿತೀನಿ ತಾಳು’ ಅಂತ ಇಳಾಳನ್ನು ಕೂರಿಸಿ ಮೆಣಸಿನಕಾಯಿ ನಿವಾಳಿಸಿ ಒಲೆಗೆ ಎಸೆದರು. ಅದು ಚಟಪಟ ಅಂತ ಸದ್ದು ಮಾಡಿದಾಗ ‘ನೋಡಿದೆಯಾ ಎಷ್ಟೊಂದು ದೃಷ್ಟಿ ಆಗಿದೆ’ ಅಂತ ಹೇಳಿ ಸಂಭ್ರಮಿಸಿದರು. ‘ಥೂ ಏನಜ್ಜಿ ಇದೆಲ್ಲ. ನಾನೇನು ಮಗುನಾ ದೃಪ್ಪಿಯಾಗೋಕೆ…’ ರೇಗಿದಳು. ‘ನಿಂಗೆ ಈಗ ಗೊತ್ತಾಗಲ್ಲ ನಾಳೆ ಹುಷಾರಿಲ್ಲದೆ ಮಲಗಿದರೆ ಗೊತ್ತಾಗುತ್ತೆ. ಈ ಅಜ್ಜಿ ಮಾಡಿದ್ದು ಸರಿ ಅಂತ. ಅದೆಷ್ಟು ಜನ ಸೇರಿದ್ದು, ಎಲ್ಲರೂ ನಿನ್ನ ನೋಡೋರೆ. ಎಲ್ಲರ ಬಾಯಿಯಲ್ಲೂ ನಿನ್ನ ಗುಣಗಾನವೆ. ಎಂತ ಪುಣ್ಯವಂತರಪ್ಪ ಹೆತ್ತವರು ಅಂತ ಹೇಳ್ತಾ ಇದ್ದರು. ನಿನ್ನನ್ನ ಸನ್ಮಾನ ಮಾಡ್ತ ಇದ್ರೆ ನೋಡೋಕೆ ಎರಡು ಕಣ್ಣು ಸಾಲುತ್ತಿಲ್ಲ ಅನ್ನಿಸ್ತು. ಸಾಯೋಕೆ ಮುಂಚೆ ಅದನ್ನೆಲ್ಲ ನೋಡಿದೆನಲ್ಲ ಅಂತ ಒಂದೇ ಸಂತೋಷ. ಸಾರ್ಥಕವಾಯ್ತು ಕಣೆ ನಿನ್ನ ನಾನು ಸಪೊರ್ಟ್ ಮಾಡಿದಕ್ಕೆ, ನಿನ್ನ ಬಗ್ಗೆ ಕಾಳಜಿ ವಹಿಸಿಕೊಂಡಿದ್ದಕ್ಕೆ, ನನ್ನ ಮೊಮ್ಮಗಳು ಹೀಗೆಲ್ಲ ಆದಳಲ್ಲ ಅನ್ನೊದೇ ಖುಷಿ ಕಣೆ ನಂಗೆ’ ಹೇಳಿಕೊಂಡು ಮತ್ತಷ್ಟು ಸಂಭ್ರಮಿಸಿದರು.
ಅಜ್ಜಿ ಮಾತಾಡಿ ಎಲ್ಲವನ್ನು ಹಂಚಿಕೊಂಡರೆ. ನೀಲಾ ಏನೂ ಹೇಳದೆ ಮನದೊಳಗೇ ಸಂಭ್ರಮಿಸುತ್ತಿದ್ದಳು. ಮುಖ ಅರಳಿ ಕಂಗೊಳಿಸುತ್ತಿತ್ತು. ಮಗಳನ್ನು ಹೊಸಬಳನ್ನು ನೋಡುವಂತೆ ನೋಡುತ್ತಿದ್ದಳು. ಅವಳ ಖುಷಿ ಸಂಭ್ರಮ ಹೆಮ್ಮೆಗಳೆಲ್ಲ ಕಣ್ಣಲ್ಲಿ ತುಂಬಿ ತುಳುಕುತ್ತಿತ್ತು. ಮಗಳು ಎದ್ದು ಹೋಗುತ್ತಿದ್ದಾಗ ಎದ್ದು ನೀಲಾ ಮಗಳನ್ನು ಅಪ್ಪಿಕೊಂಡು ‘ನಿನ್ನಂತ ಮಗಳಿಗೆ ತಾಯಾಗಿದ್ದು ಅದೆಷ್ಟು ಜನ್ಮದ ಪುಣ್ಯವೋ, ಹೆತ್ತ ಹೊಟ್ಟೆಯನ್ನು ತಂಪು ಮಾಡಿಬಿಟ್ಟೆ’ ಕಣ್ಣೀರು ಹರಿಸುತ್ತಲೇ ಮುತ್ತಿಟ್ಟಳು. ಅಮ್ಮನ ಆ ಅಪ್ಪುಗೆಯಿಂದ ಇಹವನ್ನೆ ಮರೆತವಳಂತೆ ಒಂದೂ ಮಾತಾಡದೇ ಸುಖಾನುಭೂತಿ ಅನುಭವಿಸಿದಳು. ಆ ವಾತ್ಸಲ್ಯದಪ್ಪುಗೆಯಲ್ಲಿ ಕರಗಿ ಹೋಗಿ ಪ್ರಪಂಚದಿಂದಲೇ ದೂರ ಹೋದಂತೆ ಮೈ ಮರೆತಳು.
ವಿಸ್ಮಯನ ಉಪಕಾರ ಹೊರೆ ಹೆಚ್ಚಾಗುತ್ತಿದೆ ಎಂದು ಇಳಾಳಿಗೆ ಭಾಸವಾಗ ತೊಡಗಿತು. ತನಗಾಗಿ ಕಾರ್ಯಕ್ರಮ ಆಯೋಜಿಸುವ ಅಗತ್ಯವಿರಲಿಲ್ಲ. ಅನಾವಶ್ಶಕವಾಗಿ ಖರ್ಚು ಮಾಡುವುದೇನಿತ್ತು. ಯಾಕಾಗಿ ಹೀಗೆ ಮಾಡಿದನು. ಇದೆಲ್ಲ ತನಗೆ ಇಷ್ಟವಾಗುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಅವನಿಗೆ ತಿಳಿಸಬೇಕು. ತಾನೇನು ಪರೋಪಕಾರ ಮಾಡಿಲ್ಲ. ಬೇರೆಯವರಿಗಾಗಿ ದುಡಿದಿಲ್ಲ, ದೇಶಕ್ಕೇನಾದರೂ ಕೊಡುಗೆ ಕೊಡುವಂತಹ ಕೆಲಸ ಮಾಡಿಲ್ಲ. ಸಮಾಜ ಸೇವೆಯಂತೂ ನಾನು ಮಾಡಿಯೇ ಇಲ್ಲ. ನಾನು ಮಾಡಿರುವುದು ನನಗಾಗಿ, ನನ್ನ ನೆಮ್ಮದಿಗಾಗಿ ನಮ್ಮ ಮನೆಯ ಸಂಕಷ್ಟ ತೀರಿಸುವ ಸಲುವಾಗಿ, ಅಪ್ಪನಿಂದಾದ ಆಘಾತದಿಂದ ಹೊರ ಬಂದು ನಾನು ನಾನಾಗಿಯೇ ಬದುಕಬೇಕೆಂದು, ಒಂದು ಕಡೆ ಅವಕಾಶ ಮುಚ್ಚಿಹೋದರೆ ಮತ್ತೊಂದು ಕಡೆ ಅವಕಾಶ ಇರುತ್ತದೆ ಎಂದು ತೋರಿಸುವ ಉದ್ದೇಶದಿಂದ, ಅಪ್ಪ ಸೋತಲ್ಲಿ ತಾನು ಗೆಲ್ಲಬೇಕು ಎಂಬ ಛಲದಿಂದ ಕಷ್ಟಪಟ್ಟೆ. ದೈವದ ಸಹಾಯ ನನಗಿತ್ತು. ಮೊದಲೇ ನೊಂದಿರುವ ನಾನು ಮತ್ತಷ್ಟು ನೋಯಬಾರದೆಂಬ ಉದ್ದೇಶದಿಂದಲೇ ನನ್ನ ಮೊದಲ ಪ್ರಯತ್ನ ಯಶಸ್ವಿಯಾಗಿರಬೇಕು. ಅದೇನು ಮಹಾಸಾಧನೆ, ಸನ್ಮಾನ ಮಾಡಿ ಗೌರವ ತೊರುವಂತಹದೇನು ನಾನು ಮಾಡಿರುವುದು, ಚೆನ್ನಾಗಿ ಇಳುವರಿ ಬಂದಿದೆ. ಹಾಗಾಗಿ ಕೃಷಿ ಸಾಧನೆ ಪ್ರಶಸ್ತಿ ದೊರಕಿದೆ. ಅದರಲ್ಲಿ ಏನಿದೆ ಹೆಚ್ಚುಗಾರಿಕೆ, ಆ ಸನ್ಮಾನ ಸ್ವೀಕರಿಸುವಾಗ ನಾಚಿಕೆಯಿಂದ ಕುಗ್ಗಿ ಹೋಗುವಂತಾಗಿತ್ತು. ಅದೆಷ್ಟು ಇರಿಸು ಮುರಿಸು ಉಂಟಾಗಿತ್ತು. ಇದೆಲ್ಲ ಬೇಕಿತ್ತೆ? ವಿಸ್ಮಯ್ ಒಳ್ಳೆ ದೃಷ್ಟಿಯಿಂದಲೇ ಮಾಡಿರಬಹುದು. ಅದಕ್ಕಾಗಿ ತಾನು ಕೃತಜ್ಞಳಾಗಿರಬೇಕಾದುದು ಧರ್ಮವೇ, ಆದರೆ ಇಂತಹುದೆಲ್ಲ ತನಗೆ ಇಷ್ಟವಾಗುವುದಿಲ್ಲ ಎಂದು ವಿಸ್ಮಯನಿಗೆ ಸ್ಪಷ್ಟಪಡಿಸಬೇಕು. ಬೆಳಿಗ್ಗೆ ಜಾಗಿಂಗ್‌ಗೆಂದು ಶಾಲಾ ತೋಟದಲ್ಲಿರುತ್ತಾನೆ. ಅಲ್ಲಿಗೆ ಹೋಗಿ ಮಾತನಾಡಬೇಕೆಂದು ನಿಶ್ಚಯಿಸಿಕೊಂಡಾಗಲೆ ಇಳಾಗೆ ನಿರಾಳವಾದದ್ದು.
ಬೆಳಗ್ಗೆ ಬೇಗ ಎದ್ದು, ಸ್ವೆಟರ್ ಏರಿಸಿಕೊಂಡು ಶಾಲೆಯ ತೋಟದಲ್ಲಿ ಅವನಿಗಾಗಿ ಕಾಯುತ್ತ ನಿಂತಳು. ಅಲ್ಲಿನ ಪ್ರಕೃತಿ ರಮಣೀಯವಾಗಿದ್ದರೂ ಆಸ್ವಾದಿಸುವ ಮನಸ್ಸಿರಲಿಲ್ಲ. ಎಷ್ಟು ಹೊತ್ತಾದರೂ ವಿಸ್ಮಯ್ ಕಾಣಿಸದೆ ಇದ್ದಾಗ ಅವನ ಮನೆಯತ್ತ ಹೆಜ್ಜೆ ಹಾಕಿದಳು. ಶಾಲೆಯ ಸ್ವಲ್ಪ ದೂರದಲ್ಲಿ ರೆಸಾರ್ಟಿಗೆ ಹೊಂದಿ ಕೊಂಡಂತೆ ವಿಸ್ಮಯನ ಮನೆ ಇತ್ತು. ಮನೆಯೆಂದರೆ ಆದೊಂದು ರೂಮ್ ಎಂದೇ ಹೇಳಬಹುದಿತ್ತು. ತಾತ್ಕಾಲಿಕವಾಗಿ ಕಟ್ಟಿದ ಪುಟ್ಟ ಮನೆ. ಒಂದು ರೂಮ್, ಅಡುಗೆಮನೆ, ಬಚ್ಚಲು ಇತ್ತು. ಕಟ್ಟುವಾಗ ನೋಡಿದ್ದಳಷ್ಟೆ. ಕಟ್ಟಿ ವಿಸ್ಮಯ ವಾಸ ಮಾಡಲು ಪ್ರಾರಂಭಿಸಿದ ಮೇಲೆ ಆತ್ತ ಹೋಗಿರಲೇ ಇಲ್ಲ. ದಾರಿಯಲ್ಲಿ ಸಿಗಬಹುದು ಎಂಬ ನಿರೀಕ್ಷೆಯೊಂದಿಗೆ ಅತ್ತ ನಡೆಯುತ್ತಿದ್ದಳು. ಮನೆಯ ಹತ್ತಿರ ಬಂದರೂ ಅವನ ಸುಳಿವಿಲ್ಲ, ಮನೆಯೊಳಗೆ ಹೋಗಲು ಸಂಕೋಚವೆನಿಸಿ ವಾಪಸ್ಸು ಹೋಗಿ ಬಿಡಬೇಕು ಎಂದುಕೊಳ್ಳುವಷ್ಟರಲ್ಲಿ ವಿಸ್ಮಯ ಹೊರಗೆ ಕಾಣಿಸಿದ. ಇಳಾಳನ್ನು ನೋಡಿ ಅಚ್ಚರಿಪಡುತ್ತ –
‘ಆರೇ, ಇಳಾ ನೀವಿಲ್ಲಿ, ಇಷ್ಟು ದೂರ, ವಾಕಿಂಗ್ ಬಂದಿದ್ರಾ?’ ಪ್ರಶ್ನೆ ಕೇಳಿ ಅವನೇ ಉತ್ತರವನ್ನು ಹೇಳಿಬಿಟ್ಟಾಗ, ನಿಮ್ಮನ್ನೆ ಹುಡುಕಿಕೊಂಡು ಬಂದೆ ಎಂದು ಹೇಳಲಾರದೆ, ಯಾವುದೇ ಸುಳ್ಳನ್ನು ಹೇಳಲಾರದೆ ಸುಮ್ಮನೆ ನಕ್ಕಳು.
‘ನಿಮ್ಮ ಮನೆ ಮುಗಿತಾ’ ಬೇರೆ ವಿಷಯ ಮಾತಾಡಿದಳು. ‘ಇನ್ನೇನು ಮುಗಿದ ಹಾಗೆಯೇ, ಬನ್ನಿ ನೋಡುವಿರಂತೆ’ ಎಂದು ಹೊಸ ಮನೆಯತ್ತ ಕರೆದ. ಮನೆ ತುಂಬಾ ಚೆನ್ನಾಗಿ ಕಟ್ಟಿಸುತ್ತಿದ್ದಾನೆ. ಅರಮನೆಯಂತೆ ಇದೆ, ಸುತ್ತಮುತ್ತ ಎಲ್ಲೂ ಇಂಥ ಮನೆ ಇಲ್ಲಾ ಅಂತ ಆಳುಗಳೆಲ್ಲ ಮಾತನಾಡಿಕೊಳ್ಳುವುದನ್ನು ಕೇಳಿದ್ದಳು.
ದುಡ್ಡಿದೆ ಬೇಕಾದಷ್ಟು ಕಟ್ಟಿಸದೆ ಏನು ಮಾಡುತ್ತಾರೆ. ಅದರಲ್ಲೇನು ಹೆಚ್ಚುಗಾರಿಕೆ ಎಂದು ಕೊಂಡು ಹೆಚ್ಚು ಗಮನ ನೀಡಿರಲಿಲ್ಲ. ಎಲ್ಲರೂ ಬಂದು ಮನೆ ನೋಡಿಕೊಂಡು ಹೋಗುತ್ತಿದ್ದರೂ ಇಳಾಗೇನೂ ಆಸಕ್ತಿ ಇರಲಿಲ್ಲ. ಅವಳದೇ ಕೆಲಸ ಸಾಕಷ್ಟಿತ್ತು. ಆದರೆ ಆವನಾಗಿಯೇ ಕರೆಯುವಾಗ ಬೇಡ ಎಂದು ತಿರಸ್ಕರಿಸುವುದು ಸಭ್ಯತೆ ಅಲ್ಲ ಎಂದುಕೊಂಡು ಅವನ ಹಿಂದೆ ನಡೆದಳು.
ಮನೆ ಭವ್ಯವಾಗಿತ್ತು. ಪುಟ್ಟ ಅರಮನೆ ಎಂದೇ ಹೇಳಬಹುದಾಗಿತ್ತು. ಕೋಟಿಗಟ್ಟಲೆ ಮನೆಗೆ ಸುರಿದಂತಿತ್ತು. ಈ ಕೊಂಪೇಲಿ ಯಾಕಪ್ಪ ಇಂತಹ ಮನೆ ಎಂದುಕೊಂಡಳು. ‘ಒಳ್ಳೆ ಅರಮನೆಯನ್ನೆ ಕಟ್ಟಿಸಿದ್ದೀರಿ. ಮಂಜರಬಾದಿನಲ್ಲೊಂದು ಅರಮನೆ ಕಟ್ಟಿಸಬೇಕು ಅಂತ ಇದ್ರಿ’ ಕೆಣಕಿದಳು.
‘ಹುಂ ಜಾಗ ಕೊಟ್ಟಿದ್ರೆ ಅರಮನೆಯನ್ನೊ, ಫೈವ್‌ಸ್ಟಾರ್ ಹೋಟೇಲನ್ನೊ ಕಟ್ಟಿಸಬಹುದಿತ್ತು.’
‘ಪಾಪಾ ಲಾಸಾಯ್ತು. ಇಲ್ಲೊಬ್ಬಳು ರಾಣಿನ, ಅಲ್ಲೊಬ್ಬಳು ರಾಣಿನ ಇಟ್ಕೊ ಬಹುದಿತ್ತು.’ ‘ಛೇ ಛೇ ನಾನು ಏಕ ಪತ್ನಪತ್ನಿವ್ರತಸ್ಥ ಕಣ್ರಿ. ಇಲ್ಲಿರೊ ರಾಣಿನೇ ಅಲ್ಲಿಗೂ ಕರ್ಕೊಂಡು ಹೋಗ್ತ ಇದ್ದೆ’ ಅವಳ ಮಾತಿಗೆ ಪ್ರತಿಯಾಗಿ ನುಡಿದ.
‘ಹಾಗಾದ್ರೆ ರಾಣಿ ಸಿಕ್ಕಿದ್ದಾಳೆ ಅನ್ನಿ. ಗೃಹಪ್ರವೇಶನೂ ಒಟ್ಟಿಗೆ ಅಂತ ಕಾಣುತ್ತೆ, ಬೇಗ ಊಟ ಹಾಕಿಸಿಬಿಡಿ, ನಮ್ಮರನ್ನು ಮರೆಯಲ್ಲ ತಾನೇ.’
‘ಅಯ್ಯೋ ನೀವಿಲ್ದೆ ಗೃಹಪ್ರವೇಶ ಆಗುತ್ತಾ’ ಮತ್ತೇನೋ ಮಾತನಾಡಲಿದ್ದವನು ತುಟಿಕಚ್ಚಿಕೊಂಡ. ಆದರೆ ಇಳಾ ಅದನ್ನೇನು ಗಮನಿಸಲೇ ಇಲ್ಲ. ಮನೆಯ ವೈಭವದಲ್ಲಿ ತನ್ಮಯಳಾಗಿಬಿಟ್ಟಿದ್ದಳು.
‘ಈ ಮನೆಲೇ ಒಂದು ಹತ್ತು ಸಂಸಾರ ವಾಸ ಮಾಡಬಹುದು. ಅಷ್ಟು ದೊಡ್ಡದಿದೆ. ನಿಮ್ಮಒಬ್ಬರಿಗೆ ಇಷ್ಟು ದೊಡ್ಡ ಮನೆ ಬೇಕಾ?’ ಬೆರಗಿನಿಂದ ಕೇಳಿದಳು.
‘ಇಷ್ಟು ದೊಡ್ಡ ಮನೆಯಲ್ಲಿ ಹುಟ್ಟಿ ಬೆಳೆದಿದ್ದು ನಾನು. ಹಾಗಾಗಿ ಅಂತಹುದೇ ಮನೆ ಕಟ್ಟಿಸಿದ್ದೇನೆ. ನನ್ನೊಬ್ಬನಿಗೆ ದೊಡ್ಡದಾಗುತ್ತ ಅಂತ ಯೋಚನೆನೇ ಮಾಡಲಿಲ್ಲ ನೋಡಿ.’
‘ಹೋಗ್ಲಿ ಬಿಡಿ, ಮದ್ವೆ ಮಾಡ್ಕೊಂಡು ಹತ್ತು ಮಕ್ಕಳು ಆದ್ರೆ ಈ ಮನೆಗೆ ಸರಿಯಾಗುತ್ತೆ’ ತಮಾಷೆ ಮಾಡಿದಳು.
‘ಹತ್ತುಮಕ್ಕಳೇ!’ ಅಚ್ಚರಿಪಡುತ್ತ, ‘ಹೆತ್ತು ಕೊಟ್ಟರೆ ಸಾಕೋಕೇನು ನನ್ನ ಅಭ್ಯಂತರವಿಲ್ಲ’ ಅವಳನ್ನೆ ನೋಡುತ್ತ ಹೇಳಿದಾಗ ಇಳಾ ಗಲಿಬಿಲಿಗೊಂಡು ಮನೆಯ ಮುಂಭಾಗಕ್ಕೆ ಬಂದು ‘ಇಲ್ಲೊಂದು ಗಾರ್ಡನ್ ಮಾಡಿದ್ರೆ ಚೆನ್ನಾಗಿರುತ್ತೆ. ಮಧ್ಯೆ ಉಯ್ಯಾಲೆ ಹಾಕಿದ್ರೆ ಉಯ್ಯಾಲೆ ಮೇಲೆ ತೂಗಿಕೊಳ್ಳುತ್ತ ಗಾರ್ಡನ್ನಲ್ಲಿರೋ ಗಾಳೀನ ಸವಿಯಬಹುದು.’
‘ನೀವು ಹೇಗೆ ಹೇಳ್ತಿರೋ ಹಾಗೆ ಮಾಡಿಸೋಣ’ ತಟಕ್ಕನೆ ಹೇಳಿದಾಗ ‘ಆಯ್ಯೋ ನಾನು ಸುಮ್ನೆ ಹೇಳಿದೆ ಅಷ್ಟೆ. ನಿಮಗೆ ಹೇಗೊ ಹಾಗೆ ಮಾಡ್ಕೊಬೇಕು. ಏಕೆಂದರೆ ಇದು ನಿಮ್ಮ ಮನೆ. ನೀವು ಸದಾ ಇಲ್ಲಿರಬೇಕಾದೋರು. ಒಟ್ಟಿನಲ್ಲಿ ನಮ್ಮೂರನ್ನೆ ಬದಲಾಯಿಸಿಬಿಟ್ಟಿರಿ. ನೀವು ಬರೋಕೆ ಮುಂಚೆ ಈ ಜಾಗ ಎಲ್ಲಾ ಹಾಳುಬಿದ್ದಿತ್ತು. ನಿಮ್ಮ ಟೇಸ್ಟೆ ಚೆನ್ನಾಗಿದೆ. ತುಂಬ ಬುದ್ಧಿವಂತರಪ್ಪ ನೀವು’ ಇಳಾ ಹೊಗಳುತ್ತಿದ್ದರೆ, ಛೇ ಈ ಹುಡುಗಿಗೆ ಸೂಕ್ಷ್ಮತೇನೆ ಇಲ್ಲ. ಇನ್ನೂ ಪುಟ್ಟ ಹುಡುಗಿಯೇ ಎಂದು ಬೈಯ್ದುಕೊಂಡ.
‘ನಿಮ್ಮ ತಾಯಿ ತಂದೆ, ನಿಮ್ಮ ಮನೆಯವರಾರೂ ಒಂದು ಸಲನೂ ಬಂದಿಲ್ಲ ಇಲ್ಲಿ. ಗೃಹಪ್ರವೇಶಕ್ಕೆ ಬರ್ತಾರಾ?’ ಎಂದು ಕೇಳಿದಾಗ ವಿಸ್ಮಯನ ಮುಖ ಮಂಕಾಯಿತು. ಗೆಲುವು ಕಳೆದು ಕೊಂಡವನಂತೆ ಮನೆಯ ಮುಂದಿನ ಮೆಟ್ಟಿಲಿನ ಮೇಲೆ ಕುಳಿತು ಎತ್ತಲೊ ನೋಡುವವನಂತೆ ಮಗ್ನವಾದಾಗ, ಹತ್ತಿರ ಬಂದ ಇಳಾ ಏನೋ ಅಪಶೃತಿ ಅವನ ಬದುಕಿನಲ್ಲಿದೆ ಎಂದು ಊಹಿಸಿ, ಅವನ ಪಕ್ಕವೇ ಕೂರುತ್ತ-
‘ನಿಮಗೆ ಬೇಸರ ಆದ್ರೆ ಆ ವಿಚಾರ ಮತ್ತೆ ತಾನು ಕೇಳಲ್ಲ. ನೀವು ಬಂದಾಗಿನಿಂದಲೂ ಒಬ್ರೆ ಇದ್ದದ್ದನ್ನು ನೋಡಿ ಹಾಗೆ ಕೇಳಿಬಿಟ್ಟೆ. ದಯವಿಟ್ಟು ಕ್ಷಮಿಸಿ ಪಶ್ಚಾತ್ತಾಪದ ದನಿಯಲ್ಲಿ ಹೇಳಿದಳು.
‘ನಿಮ್ಮ ತಪ್ಪೇನು ಇಲ್ಲ ಬಿಡಿ ಸಹಜವಾಗಿ ಎಲ್ರೂ ಕೇಳೋದನ್ನೆ ನೀವು ಕೇಳ್ತಾ ಇದ್ದೀರಿ, ನಾನೇ ಸ್ವಲ್ಪ ಎಕ್ಸೈಟ್ ಆಗಿಬಿಟ್ಟಿ. ಮನಸ್ಸಿನ ನೋವನ್ನ ಯಾರ ಬಳಿಯಾದ್ರೂ ಹೇಳಿಕೊಂಡ್ರೆ ಕಡಿಮೆ ಆಗುತ್ತೆ ಅಂತಾರೆ. ಆದರೆ ಯಾರ ಬಳಿನೂ ಹೇಳಿಕೊಳ್ಳುವಷ್ಟು ಹತ್ತಿರ ಇರೋ ಸ್ನೇಹಿತರಾಗಲಿ, ಬಂಧುಗಳಾಗಲಿ ಯಾರಿದ್ದಾರೆ ನಂಗೆ’ ಎಂದಾಗ ಇಳಾ ಮರುಗಿ ಹೋದಳು.
‘ಯಾಕೆ, ಹಾಗೆ ಅಂದುಕೊಳ್ಳುತ್ತೀರಾ, ನಿಮ್ಗೆ ಹೇಳಿಕೊಳ್ಳಬೇಕು ಅನ್ನಿಸಿದ್ರೆ ಕೇಳೋಕೆ ನಾನು ರೆಡಿ ಇದ್ದೇನೆ ಪ್ಲೀಸ್ ಹೇಳಿ’ ಕಕ್ಕುಲತೆಯಿಂದ ಹೇಳಿದಳು.
ಅವಳ ಕಾಳಜಿ, ಕಕ್ಕುಲತೆ ಅವನನ್ನು ತಟ್ಟಿತು.
‘ನಮ್ಮ ತಂದೆ ತಾಯಿಗೆ, ನಾವು ಮೂರು ಜನ ಮಕ್ಕಳು, ನಾನೇ ದೊಡ್ಡವನು. ಒಬ್ಬತಮ್ಮ, ಒಬ್ಬಳು ತಂಗಿ ಇದ್ದಾರೆ ನಂಗೆ. ಚಿಕ್ಕ ವಯಸ್ಸಿನಿಂದಲೂ ನಮ್ಮ ಅಪ್ಪ. ನನ್ನ ತಮ್ಮನ್ನ, ತಂಗೀನಾ ಪ್ರೀತಿಸೋ ಹಾಗೆ ನನ್ನ ಪ್ರೀತಿಸ್ತಾ ಇಲ್ಲ ಅಂತ ಗೊತ್ತಾಗ್ತ ಇತ್ತು. ಹಾಗಂತ ನನ್ನನ್ನೇನೂ ದ್ವೇಷ ಮಾಡ್ತ ಇರಲಿಲ್ಲ. ನಾನು ಕೇಳಿದ್ದನ್ನ ಕೊಡಿಸ್ತ ಇದ್ದರು. ಆದ್ರೆ ತಮ್ಮನ್ನ, ತಂಗಿನಾ, ಮುದ್ದಾಡೊ ಹಾಗೆ, ಅವರನ್ನ ಎತ್ತಿಕೊಂಡು ಆಟ ಆಡಿಸೋ ಹಾಗೆ, ಆವರ ಜೊತೆ ಬೆರೆಯೋಥರ ನನ್ನ ಜೊತೆ ನಮ್ಮಪ್ಪ ಇರ್‍ತ ಇರ್ಲಿಲ್ಲ. ಕೆನ್ನೆ ತಟ್ಟಿಯೋ, ತಲೆ ಸವರಿಯೋ ಮಾಡಿಬಿಟ್ಟರೆ ಅವರ ಪ್ರೀತಿ ಮುಗಿದು ಹೋಗುತ್ತಿತ್ತು. ನನ್ನನ್ನು ಓದಿನ ನೆವ ಹಾಕಿ ಅಷ್ಟಾಗಿ ಹೊರಗೆ ಕರೆದುಕೊಂಡು ಹೋಗ್ತಿರಲಿಲ್ಲ. ತಮ್ಮ, ತಂಗಿನಾ ಬೈಯುವಂತೆ, ರೇಗುವಂತೆ, ಕೈ ಎತ್ತಿ ಹೊಡೆಯುವಂತೆ ಕೂಡ ನಂಗೆ ಮಾಡ್ತ ಇರಲಿಲ್ಲ. ನಮ್ಮಪ್ಪ ನನ್ನನ್ನ ಬೈದಿದ್ದೆ ನಂಗೆ ಗೊತ್ತಿಲ್ಲ. ಒಂದೇ ಮನೆಯಲ್ಲಿ ಈ ರೀತಿ ನಡೆಯುತ್ತ ಇರುವಾಗ ನಂಗೆ ಅಸಹನೆ ಕಾಣಿಸಿಕೊಳ್ತ ಇತ್ತು. ಅಮ್ಮನ ಮುಂದೆ ರೇಗುತ್ತಿದ್ದೆ, ಅಪ್ಪನ್ನ ಬೈಯ್ತ ಇದ್ದೆ. ಅಮ್ಮ ಏನೋ ಸಮಾಧಾನಿಸಿ ಸುಮ್ಮನಿರಿಸಿ ಬಿಡುತ್ತಿದ್ದಳು. ಅಪ್ಪನನ್ನು ವಹಿಸಿಕೊಂಡು ಏನಾಗಿದೆ ನಿಂಗೆ, ಎಷ್ಟು ಚೆನ್ನಾಗಿ ನೋಡ್ಕೊತಾರೆ’ ಅಂತ ನನ್ನ ಬೈಯ್ದು ಬಿಡುತ್ತಿದ್ದಳು. ಆಗೆಲ್ಲ ನಂಗೆ ರೋಷ ಉಕ್ಕುತ್ತಾ ಇತ್ತು. ಆಪ್ಪನ ಜೊತೆ ಬೇಕು. ಆಪ್ಪ ನನ್ನನ್ನು ತಬ್ಬಿ ಮುದ್ದಾಡಬೇಕು ಅಪ್ಪನ ಜೊತೆ ಕ್ರಿಕೆಟ್ ಆಡಬೇಕು. ಅಪ್ಪನನ್ನ ಒಲೈಸಬೇಕು ಅಂತ ಸದಾ ತಹ ತಹಿಸುತ್ತಿದ್ದೆ. ಅಪ್ಪನ ನಿರ್ಲಿಪ್ತತೆ, ನನ್ನ ದೂರ ಇರಿಸುವಿಕೆ ಅರ್ಥವೇ ಆಗದೆ ತಳಮಳಿಸುತ್ತಿದ್ದೆ. ಈ ಎಲ್ಲ ಬೇಗುದಿಗಳಿಗೆ, ತಳಮಳಗಳಿಗೆ, ವ್ಯತ್ಯಾಸಗಳಿಗೆ ಕಾರಣ ಸಿಕ್ಕಿಬಿಟ್ಟಿತು, ನನ್ನ ರೋಷ, ನನ್ನ ಪ್ರತಿಭಟನೆ, ನನ್ನ ಆಸೆ, ಇವೆಲ್ಲ ತಪ್ಪು ಅಂತ ಗೊತ್ತಾಗಿಬಿಟ್ಟಿತು. ನಾನು ಅಪ್ಪನಿಂದ ಪ್ರೀತಿಯನ್ನಾಗಲಿ, ವಾತ್ಸಲ್ಯವನ್ನಾಗಲಿ, ಸಾಮಿಪ್ಯವನ್ನಾಗಲಿ ಬಯಸಬಾರದು, ಅವರು ಕೊಟ್ಟರಷ್ಟೆ ತೆಗೆದುಕೊಳ್ಳಬೇಕು. ನಾನಾಗಿಯೇ ಅವರಲ್ಲಿ ಏನನ್ನು ಕೇಳೊ ಅಧಿಕಾರವಾಗಲಿ, ಹಕ್ಕಾಗಲಿ ನನ್ನಗಿಲ್ಲ ಅಂತ ಗೊತ್ತಾಯ್ತು. ಏಕೆಂದರೆ ಅವರು ನನ್ನ ಅಪ್ಪನೇ ಅಲ್ಲ.
ನಾನು ಸಣ್ಣ ಮಗುವಿದ್ದಾಗಲೇ ನನ್ನಪ್ಪ ಅಪಘಾತದಲ್ಲಿ ತೀರಿಹೋಗಿದ್ದರು. ಈಗಿರೋ ಅಪ್ಪ. ನನ್ನ ಅಮ್ಮನಿಗೆ ಬಾಳು ಕೊಟ್ಟವರು. ನನ್ನನ್ನು ಮಗನಾಗಿ ಒಪ್ಪಿಕೊಂಡೋರು, ಪ್ರಪಂಚದ ಮುಂದೆ ನನ್ನನ್ನು ಮಗನಾಗಿ ಒಪ್ಪಿಕೊಂಡಿರೋ ಅವರಿಗೆ ಅಪ್ಪನಾಗಿ ಒಬ್ಬ ಮಗನಿಗೆ ನೀಡಬೇಕಾದುದನ್ನು ನೀಡಲು ಅವರಿಂದಾಗಲೇ ಇಲ್ಲ. ಆದರೆ ಅದೇ ಪ್ರೀತಿಯನ್ನು ತಮ್ಮ ಮಕ್ಕಳಿಗೆ ನೀಡುವಾಗ ನನ್ನ ಮನಸ್ಸಿನ ಮೇಲೆ ಆಗುವ ಪರಿಣಾಮದ ಬಗ್ಗೆ ಅವರು ಆಲೋಚನೇನೆ ಮಾಡಲೇ ಇಲ್ಲ. ನನ್ನನ್ನು ಪ್ರೀತಿಸಲೂ ಇಲ್ಲ. ದ್ವೇಷಿಸಲೂ ಇಲ್ಲ. ಅವರು ನನ್ನ ಅಪ್ಪ ಅಲ್ಲ ಅಂತ ಗೊತ್ತಾದ ಮೇಲೆ ನಾನು ನನ್ನ ಚಿಪ್ಪೊಳಗೆ ಸೇರಿಕೊಂಡು ಬಿಟ್ಟೆ, ನಾನಾಯಿತು, ನನ್ನ ವಿದ್ಯಾಭ್ಯಾಸವಾಯಿತು ಅಂತ ನನ್ನೊಳಗಿನ ಎಲ್ಲ ನಿರಾಶೆಗಳನ್ನು ಅದುಮಿಡುತ್ತ ಒಳಗೊಳಗೆ ನೋಯುತ್ತ ಎಲ್ಲರಿಂದ ದೂರವೇ ಇದ್ದುಬಿಟ್ಟೆ. ನನ್ನ ಒಳ್ಳೆ ಸ್ಕೂಲಿನಲ್ಲಿ, ಕಾಲೇಜಿನಲ್ಲಿ ಓದಿಸಿದರು. ಹಾಸ್ಟಲಿನಲ್ಲಿಟ್ಟರೆ ಅಮ್ಮ ಎಲ್ಲಿ ನೊಂದುಕೊಳ್ಳುವಳೋ ಅಂತ ಅಲ್ಲಿ ಬಿಡದೆ, ಡೊನೇಷನ್ ಕೊಟ್ಟು ಇಂಜಿನಿಯರಿಂಗ್ ಸೇರಿಸಿದರು. ಆದರೆ ಆ ಮನೆಯಿಂದಲೇ ನಾನು ದೂರ ಇರಬೇಕು ಅಂತ ಬಯಸಿದ್ದೆ. ನನ್ನ ವಿದ್ಯಾಭ್ಯಾಸ ಮುಗಿಯೋತನಕ ಅವರ ಜೊತೆಗೇ ಇದ್ದು ಮಾನಸಿಕವಾಗಿ ಅಂತರವಿಟ್ಟುಕೊಂಡೇ ಬೆಳೆದೆ. ಎಂಜಿನಿಯರಿಂಗ್ ಮುಗಿಸಿದ ಕೂಡಲೆ ಆ ಮನೆಯಿಂದ, ಆ ಜನರಿಂದ ದೂರವಾಗಬೇಕು ಅಂತ ರೆಸಾರ್ಟ್ ನೆವ ಹೇಳಿ ಇಲ್ಲಿ ಬಂದೆ.
ನಾನು ಕಳೆದುಕೊಂಡದ್ದೆಲ್ಲ ಇಲ್ಲಿ ನನಗೆ ಸಿಕ್ಕಿತು. ಈ ಜನರ ಪ್ರೀತಿ, ವಿಶ್ವಾಸ, ಅವರು ತೋರೊ ಅಂತಃಕರಣ ನನ್ನನ್ನು ಇಲ್ಲಿಯೇ ನೆಲೆಸುವಂತೆ ಮಾಡಿದೆ. ನನ್ನ ಶಾಲೆಯ ಜನ, ಮಕ್ಕಳು, ಪೋಷಕರು, ಇಲ್ಲಿ ಕೆಲಸ ಮಾಡುವ ಆಳುಗಳೂ ಕೂಡ ನನಗೆ ಪ್ರೀತಿ ವಿಶ್ವಾಸ ತೋರುತ್ತಿದ್ದಾರೆ. ಆ ಪ್ರೀತಿ ವಿಶ್ವಾಸದಲ್ಲಿ ನನ್ನವರನ್ನೆಲ್ಲ ಮರೆತು ಬಿಟ್ಟಿದ್ದೇನೆ. ಅವರಿಗೂ ನನ್ನನ್ನು ನೆನಸಿಕೊಳ್ಳುವಷ್ಟು ಪುರುಸೂತ್ತು ಇಲ್ಲ. ತಿಂಗಳಿಗೊ, ಎರಡು ತಿಂಗಳಿಗೂ ಫೋನ್ ಮಾಡಿ ವಿಚಾರಿಸಿದರೆ ಅಪ್ಪನ ಕರ್ತವ್ಯ ಮುಗಿದು ಹೋಗುತ್ತದೆ. ತಮ್ಮ ತಂಗಿಯರನ್ನ ನಾನು ಹಚ್ಚಿಕೊಂಡೆ ಇಲ್ಲ. ಅವರಿಗೂ ನಾನು ಬೇಕಾಗಿಲ್ಲ. ಇನ್ನು ಅಮ್ಮನಿಗೊ ನನ್ನ ಮೇಲೆಯೇ ಅಸಮಾಧಾನ, ಇಷ್ಟು ಒಳ್ಳೆಯ ಮನಸ್ಸಿನ ವ್ಯಕ್ತಿಯನ್ನು ಅಪ್ಪ ಎಂದು ಒಪ್ಪಿಕೊಳ್ಳಲಾರದೆ ದೂರವಿದ್ದೇನೆ ಎಂದು. ಹೇಗೊ ಸುಖವಾಗಿರಲಿ ಎಂದು ದೂರದಿಂದಲೇ ಹಾರೈಸುತ್ತಾಳೆ. ನನ್ನ ಹೆತ್ತ ತಂದೆಯ ಆಸ್ತಿಯೆಲ್ಲವನ್ನು ಜೋಪಾನವಾಗಿ ಕಾಪಾಡಿ ನನಗೊಪ್ಪಿಸಿದ್ದಾರೆ, ತಾವು ದುಡಿದ ಆಸ್ತಿಯಲ್ಲಿಯೂ ಭಾಗ ಮಾಡಿ ಕೊಡುವಷ್ಟು ಹೃದಯವಂತಿಕೆ ತೋರಿಸಿದ್ದಾರೆ. ಬೇಕಾದಷ್ಟು ಹಣವಿದೆ, ಆಸ್ತಿ ಇದೆ. ಆದರೆ ನಾನು ಬಯಸಿದ್ದೇನು ನನಗೆ ಸಿಗಲಿಲ್ಲ. ಎಲ್ಲರು ಇದ್ದರೂ ನಾನು ಒಂಟಿ.’
ತನ್ನೆಲ್ಲ ಕಥೆ ವ್ಯಥೆಯನ್ನು ಇಳಾಳೊಂದಿಗೆ ಹಂಚಿಕೊಂಡು ಮನಸ್ಸನ್ನು ಹಗುರ ಮಾಡಿಕೊಂಡ. ಈ ವಿಷಾದಭರಿತ ವಿಸ್ಮಯನ ಮಾತುಗಳಿಂದ ಇಳಾ ದ್ರವಿಸಿ ಹೋದಳು. ಬಾಲ್ಯದಿಂದಲೂ ನೋವುಂಡು ಬೆಳೆದು, ತನ್ನ ನೋವನ್ನು ತಾನೇ ನುಂಗಿಕೊಂಡು ಇಷ್ಟೊಂದು ಹೃದಯವಂತಿಕೆ ಸುಸಂಸ್ಕೃತತೆ, ಸಹೃದಯತೆ ಬೆಳೆಸಿಕೊಂಡು ಇಡೀ ಸಮಾಜವೇ ಒಪ್ಪುವಂತೆ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡ ವಿಸ್ಮಯ್ ಬಗ್ಗೆ ಗೌರವ ಮೂಡಿತು. ತನ್ನದೇ ಮಹಾ ನೋವು ಎಂದು ಕೊಂಡಿದ್ದವಳಿಗೆ ತಾಯಿ ಇದ್ದು ತಾಯಿ ಪ್ರೀತಿ ತೋರದ, ಅಪ್ಪನೆನಿಸಿಕೊಂಡವರೂ ಮಗನನ್ನೆಂದು ಒಪ್ಪಿಕೊಳ್ಳಲಾರದ, ಒಡಹುಟ್ಟಿದವರಿದ್ದೂ ಇಲ್ಲದಂತಿರುವ ನೋವು ಕಡಿಮೆಯದಲ್ಲ. ತನ್ನ ಯಾವ ಮಾತುಗಳೂ ಅವನ ನೋವನ್ನು, ಅವನ ಹತಾಶೆಯನ್ನು ಕಡಿಮೆ ಮಾಡುವುದಿಲ್ಲ ಎಂದು ಮನಗಂಡ ಇಳಾ ತಾನೂ ಕೂಡ ಮೌನದ ಮೊರೆ ಹೊಕ್ಕಳು. ಆ ಸಮಯದಲ್ಲಿ ತನ್ನಿಂದೇನಾದರೂ ಮಾಡುವಂತಿದ್ದರೆ ಆ ಕ್ಷಣದಲ್ಲಿಯೇ ಮಾಡಿಬಿಡುವ ಮನಸ್ಥಿತಿಯಲ್ಲಿದ್ದಳು.
‘ಇಳಾ ನನ್ನ ಕಥೆ ಕೇಳಿ ಮೌನವಾಗಿಬಿಟ್ರಾ. ಅದೇನು ಅಂತ ದುರಂತ ಕಥೆ ಅಲ್ಲ ಬಿಡಿ, ಪ್ರಪಂಚದಲ್ಲಿ ಅದೇಷ್ಟೊ ಮಂದಿ ನನಗಿಂತಲೂ ದುರದೃಷ್ಟವಂತರಿರುತ್ತಾರೆ. ಅವರ ಮುಂದೆ ನನ್ನದೇನು ವ್ಯಥಯೇ ಅಲ್ಲ. ಅತಿಸೂಕ್ಷ್ಮತೆಯನ್ನು ಹೊಂದಿದ್ದರಿಂದ ನಾನು ನೋವು ಪಡುವಂತಾಯಿತು ಅಷ್ಟೆ’ ಮತ್ತೆ ತಾನೇ ಸಮಾಧಾನ ತಂದು ಕೊಂಡ.
‘ಈ ಊರಿಗೆ ಬಂದ ಮೇಲೆ ನನ್ನ ಬದುಕಿನಲ್ಲಿ ಸಂತೋಷ ಸಿಕ್ಕಿದೆ. ನಾನು ಉಲ್ಲಾಸದಿಂದಿದ್ದೇನೆ. ನಾನು ಇಲ್ಲಿಯೇ ಇರಬೇಕು ಅನ್ನೋ ಆಸೆ ಬಲವಾಗಿದೆ. ನನ್ನ ಬಾಳಿನಲ್ಲಿ ತಂಗಾಳಿ ಬೀಸ್ತಾಯಿದೆ. ಆರಣೋದಯದ ಪಲ್ಲವಿ ಪಲ್ಲವಿಸುತ್ತಾಯಿದೆ. ಅದಕ್ಕೆ ಮತ್ತೊಂದು ಕಾರಣವೂ ಇದೆ…’ ಅವಳನ್ನೆ ನೋಡುತ್ತ ಹೇಳುತ್ತಿದ್ದವನು ಮಾತು ನಿಲ್ಲಿಸಿದ. ‘ಮತ್ತೊಂದು ಕಾರಣನಾ….’ ಚಕಿತಳಾಗಿ ನುಡಿದಳು.
‘ಇಳಾ ನನ್ನ ಬದುಕಿನ ಬೆಳದಿಂಗಳಾಗಿ ಬರ್ತೀರಾ, ನನ್ನನ್ನ ಒಪ್ಕೊತೀರಾ, ಅವತ್ತೇ ಹೇಳಿದ್ದೆ. ನೀವು ಅಂದ್ರೆ ನಂಗಿಷ್ಟ ಅಂತ’ ದೀನನಾಗಿ ಕೇಳುತ್ತಿದ್ದಾನೆ. ಕಣ್ಣುಗಳಲ್ಲಿ ಪ್ರೇಮದ ಪ್ರಖರತೆ ಮಿನುಗುತ್ತಿದೆ. ಈ ಪ್ರಪಂಚದ ಒಲವನ್ನೆಲ್ಲ ಬಾಚಿ ಕೊಡಬಲ್ಲೆ ಅನ್ನೂ ಆಶ್ವಾಸನೆ ಆ ಕಣ್ಣುಗಳಲ್ಲಿದೆ. ಆರಾಧನೆಯ ಜ್ಯೋತಿ ಅಲ್ಲಿ ಬೆಳಗುತ್ತಿದೆ. ಇದೇ ಪ್ರೇಮವೇ, ಇದೇ ಪ್ರೀತಿಯೇ?- ಅರ್ಥ ಮಾಡಿಕೊಳ್ಳಲಾರದೆ ತಬ್ಬಿಬ್ಬಾಗಿದ್ದಾಳೆ. ಆ ಕ್ಷಣದಲ್ಲಿ ಏನು ಉತ್ತರಿಸಬೇಕೊ ತಿಳಿಯದೆ ಮಾತುಗಳೇ ನಿಂತು ಹೋಗಿವೆ.
ಅವಳ ಕೈಯನ್ನು ತೆಗೆದುಕೊಂಡು ತನ್ನ ಕೆನ್ನಗೆ ಒತ್ತಿಕೊಂಡ ವಿಸ್ಮಯ್ ‘ಇಳಾ ನಾನು ನಿಮ್ಮನ್ನ ತುಂಬಾ ತುಂಬಾ ಪ್ರೀತಿಸುತ್ತೇನೆ. ಈ ಪ್ರಪಂಚದಲ್ಲಿ ನಿಮ್ಮ ಪ್ರೀತಿ ಒಂದೇ ಸಾಕು ನಂಗೆ, ನಿಮಗಾಗಿ ಬದುಕುತ್ತೇನೆ. ಈ ಉಸಿರು ಆಡುವುದೇ ನಿಮಗಾಗಿ, ಈ ಹೃದಯ ಮಿಡಿಯುವುದೇ ನಿಮ್ಮ ಸನಿಹದಲ್ಲಿ, ಅನುರಾಗದ ಹೊಳೆ ಹರಿಯುವುದೇ ನಿಮ್ಮಿಂದ, ಇದುವರೆಗೂ ನಾನು ಯಾವ ಹೆಣ್ಣನ್ನು ಇಷ್ಟೊಂದು ಆರಾಧಿಸಿಲ್ಲ. ಯಾವ ಹೆಣ್ಣು ನನ್ನ ಬದುಕಿನಲ್ಲಿ ನಿಮ್ಮಷ್ಟು ಪ್ರಭಾವ ಬೀರಿಲ್ಲ. ನೀವಿಲ್ಲದೆ ನಾನಿಲ್ಲ ಇಳಾ’ ಭಾವ ಪರವಶತೆಯಿಂದ ಹೇಳುತ್ತಿದ್ದರೆ ಇಳಾ ಕರಗಿ ಹೋದಳು. ಅವನ ಪ್ರೇಮದ ಅಲೆಯಲ್ಲಿ ಕೊಚ್ಚಿಹೋದಳು.
ವಿಸ್ಮಯ್ ನನ್ನವನು, ನಾನು ಅವನಿಗೆ ಸೇರ ಬೇಕಾದವಳು. ಇದು ಜನ್ಮ ಜನ್ಮಾಂತರದ ಬಂಧ, ಹಾಗೆಂದೇ ಎಲ್ಲಿಯೋ ಇದ್ದ ವಿಸ್ಮಯನನ್ನು ಇಲ್ಲಿಗೆ ಎಳೆದು ತಂದಿದೆ. ನಾನು ಅವನಿಗಾಗಿಯೇ ಹುಟ್ಟಿದವಳು. ಇದು ವಿಧಿಲೀಲೆ, ಈ ಲೀಲೆ ನಡೆಯಲೆಂದೇ ನನ್ನ ಬದುಕಿನಲ್ಲಿ ಏನೆಲ್ಲ ನಡೆದುಹೋದವು. ವಿಸ್ಮಯ್ ವಿಸ್ಮಯ್ ಎಂದು ಪಿಸುಗುಡುತ್ತ ಅವನ ಮಡಿಲಿಗೆ ಜಾರಿದಳು. ಮೃದುವಾಗಿ ಅವಳನ್ನು ಬಳಸಿ ‘ಥ್ಯಾಂಕ್ಯೂ… ಥ್ಯಾಂಕ್ಯೂ ಇಳಾ. ನಾನೆಂಥ ಅದೃಷ್ಟವಂತ, ನಿನ್ನ ಪ್ರೇಮ ನನಗೆ ಸಿಕ್ಕಿತು. ನಿನ್ನ ಪಡೆಯಲೆಂದೇ ನನ್ನ ಬದುಕು ಈ ತಿರುವು ಕಂಡಿತೇನೊ’ ಬಡಬಡಿಸಿದ. ಒಂದೂ ಮಾತಾಡದೆ ಇಳಾ ಅವನೆದೆಯಲ್ಲಿ ಕಣ್ಮುಚ್ಚಿ ಹೊಸ ಲೋಕದ, ಹೊಸ ಅನುಭವದ ಹೊಸ ಸಂಬಂಧದ ಅನುಬಂಧದಲ್ಲಿ ಬಂಧಿಯಾದಳು. ಸಾವಿರ ಮಾತು ಹೇಳಲಾರದ ಭಾವ ಅವಳ ಸ್ಪರ್ಶದಲ್ಲಿತ್ತು. ನಿಧಿ ಸಿಕ್ಕಿದ್ದಂತೆ ಆಪ್ಯಾಯಮಾನವಾಗಿ ಅವಳನ್ನು ಅಪ್ಪಿಕೊಂಡು ತೋಳ ಬಿಗಿಯನ್ನು ಹೆಚ್ಚಿಸಿದ.
ಅದೆಷ್ಟು ಹೊತ್ತು ಹಾಗೆ ಕುಳಿತಿದ್ದರೋ, ಇಳಾಳೇ ಮೊದಲು ಎಚ್ಚೆತ್ತು ‘ತುಂಬಾ ಹೊತ್ತಾಯಿತು ನಾನು ಬಂದು, ಮನೆಯಲ್ಲಿ ಹೇಳದೆ ಬಂದಿದ್ದೀನಿ’ ಮೆಲ್ಲನೆ ಹೇಳುತ್ತ ಅವನ ತೋಳುಗಳಿಂದ ಹೊರ ಬಂದಳು. ಸುಖಾನುಭೂತಿಯಿಂದ ಅವಳೆಡೆ ನೋಡಿ ‘ಈ ಕಾಲ ಹೀಗೆ ನಿಂತು ಹೋಗಬಾರದೆ, ನಾವಿಬ್ಬರೂ ಸದಾ ಜೊತೆಯಾಗಿಯೇ ಇದ್ದುಬಿಡಬಹುದು’ ಎಂದು ಮುತ್ತಿನಲಿ ಹೇಳಿದ.
‘ಕಾಲ ನಿಂತು ಹೋಗುವುದಿಲ್ಲ. ನಿಮ್ಮಾಸೇನೂ ನೆರವೇರುವುದಿಲ್ಲ. ಇನ್ನು ಸ್ಪಲ್ಪ ಹೊತ್ತು ಹೀಗೆ ಕುಳಿತಿದ್ದರೆ, ನಾನು ಕಳೆದು ಹೋಗಿದ್ದೇನೆ ಅಂತ ಸುದ್ದೀ ಆಗುತ್ತೆ. ನಾನು ಹೊರಡುತ್ತೇನೆ’ ಎದ್ದಳು.
ಅವಳ ಕೈ ಹಿಡಿದು ಜಗ್ಗಿ ‘ಹೋಗಲೇಬೇಕಾ, ನೀವು ಹೋಗಿಬಿಟ್ಟರೆ ಪ್ರಪಂಚನೇ ಶೂನ್ಯ ಎನಿಸಿಬಿಡುತ್ತದೆ, ನಾನು ಬಂದುಬಿಡ್ತೀನಿ ನಿಮ್ಮ ಮನೆಗೆ’ ತುಂಟ ಬಾಲಕನಂತೆ ನುಡಿದ.
‘ಹಾಗೆಲ್ಲ ಬರೋಕೆ ಸಾಧ್ಯ ಇಲ್ಲ. ಮೊದಲು ಪರ್ಮಿಶನ್ ತಗೋಬೇಕು ಹಿರಿಯರಿಂದ, ಅ ಮೇಲೆ ಬರೋಕೆ ಸಾಧ್ಯ’ ಎಂದಳು.
‘ಪರ್ಮಿಶನ್ ಈಗ್ಗೆ ತಗೋತಿನಿ ಇಳಾ, ಮೇಡಂ… ನಿಮ್ಮನೆಗೆ ಬರ್ತಿನಿ ಅಂದ್ರೆ ಬೇಡಾ ಅಂತಾರ’ ನುಡಿದ.
‘ಆಯ್ಯೋ ಪರ್ಮಿಶನ್ ಅಂದ್ರೆ, ನಿಮ್ಮ ಮಗಳನ್ನ ನಂಗೆ ಮದ್ವೆ ಮಾಡಿಕೊಡ್ತೀರಾ ಅಂತಾ ಕೇಳೋದು’ ಪರಿಹಾಸ್ಯ ಮಾಡುತ್ತ ಹೇಳಿದಳು.
‘ನೀಲಾ ಮೇಡಂ, ಆಗಲ್ಲ ಆಂದು ಬಿಟ್ರೆ’ ತಟ್ಟನೆ ಗಂಭೀರವಾದ. ಆತಂಕದ ಛಾಯೆ ಕಾಣಿಸಿತು.
‘ಆಗ ಏನು ಮಾಡ್ತಿರಾ’ ಆಟವಾಡಿಸುವ ಧಾಟಿಯಲ್ಲಿ ಆಂದಳು.
‘ಆಗಲ್ಲ ಆಂದ್ರೆ ಹೊತ್ತುಕೊಂಡು ಹೋಗ್ತಿನಿ ಪೃಥ್ವಿರಾಜನಂತೆ ಅಂತೀನಿ’ ವೀರಾವೇಶದಿಂದ ಹೇಳಿದಾಗ ಪಕ ಪಕನೇ ನಕ್ಕಳು ಇಳಾ. ಅವಳ ನಗುವನ್ನೆ ನೋಡುತ್ತ ಆಸ್ವಾದಿಸುತ್ತ ಬೆರಗುಗೊಂಡನು.
‘ಅಂಥ ಶ್ರಮ ಬೇಡ. ಅಮ್ಮ ಕುಣಿದಾಡಿಕೊಂಡು ಒಪ್ತಾಳೆ. ನಿಮ್ಮನ್ನ ಕಂಡ್ರೆ ತುಂಬ ಅಭಿಮಾನ ಅಮ್ಮನಿಗೆ, ನಿಮ್ಮಂತ ಅಳಿಯ ಸಿಗೋದೇ ತನ್ನ ಪುಣ್ಯ ಅಂದುಕೊಳ್ತಾಳೆ. ಆ ಬಗ್ಗೆ ನಾನು ಭರವಸೆ ಕೊಡ್ತೀನಿ. ಆದ್ರೆ ನಿಮ್ಮ ಮನೆಯವರು ಏನಂತರೊ’ ಸಂದೇಹಿಸಿದಳು.
‘ನಾನು ಯಾರನ್ನು ಮದ್ವೆ ಮಾಡಿಕೊಂಡರೂ ಅವರದೇನು ಅಭ್ಯಂತರವಿಲ್ಲ. ಒಟ್ಟಿನಲ್ಲಿ ನಾನು ಮದುವೆ ಅದ್ರೆ ಸಾಕು, ’ನಿನ್ನಂಥ ಚಿನ್ನದ ಹುಡುಗಿ ಸಿಗುತ್ತಾಳೆ ಅಂದ್ರೆ ಯಾರು ತಾನೇ ಬೇಡಾ ಅಂತಾರೆ, ನಾನಂತು ಮನೆ ಅಳಿಯ ಆಗಿ ಇದ್ದುಬಿಡ್ತೀನಿ’ ಅಂತ ನಕ್ಕನು.
‘ನನಗೂ ಬೇರೆ ಕಡೆ ಹೋಗುವ, ಅಲ್ಲಿ ಕಷ್ಟಪಡುವ ತೊಂದರೆಯೇ ತಪ್ಪಿತು, ನಿಮ್ಮನ್ನ ಮದ್ವೆ ಆದ ಮೇಲೂ ನನ್ನ ತೋಟ, ಗದ್ದೆ ಅಂತ ಕೆಲಸ ಮಾಡಿಸಬಹುದು. ಅಮ್ಮನ್ನ ಬಿಟ್ಟು ಹೋಗುವಂತಿಲ್ಲ. ಅಮ್ಮನಿಗೆ ಎಂಥ ಅಳಿಯ ಸಿಗ್ತಾನೋ ಅಂತ ಭಯ ಆಗ್ತಾ ಇತ್ತು. ಒಟ್ಟಿನಲ್ಲಿ ನನಗಂತೂ ನಿಮ್ಮನ್ನ ಮದ್ವೆ ಆಗೊದ್ರಿಂದ ಪ್ಲಸ್ ಪಾಯಿಂಟ್ಸ್ ಜಾಸ್ತಿ ಇವೆ. ಆದ್ರೆ ಹೀಗೆ ನೀವು ನನ್ನ ಮೆಚ್ಚಿಕೊಳ್ತೀರಾ ಅನ್ನೋ ನಂಬಿಕೆನೇ ನನಗೆ ಬರ್ತಾ ಇಲ್ಲ. ಇದೇನು ಕನಸಾ, ನಿಜನಾ ಅಂತ ಸಂದೇಹ ಕಾಡ್ತಾ ಇದೆ’
ಎದ್ದು ನಿಂತಿದ್ದ ಅವಳ ಪಕ್ಕಕ್ಕೆ ಬಂದು ಕೈಗಳಿಂದ ಅವಳ ಮೊಗ ಹಿಡಿದು ಹಣೆಗೆ ತುಟಿ ಒತ್ತಿ ‘ಈಗ ನಂಬಿಕೆ ಬಂತಾ? ಇದು ನಿಜಾ ಅಂತ… ನಾನೇ ಸಾಕ್ಷತ್ ವಿಸ್ಮಯ್ ಈ ಮುದ್ದು ಹುಡುಗಿ ಇಳಾಳ ಪ್ರೇಮದ ಬಲೆಯಲ್ಲಿ ಬಿದ್ದು ಯಾವಾಗ ನನ್ನವಳಾಗ್ತಾಳೆ ಅಂತಾ ಕಾಯತ್ತಾ ಇದ್ದೀನಿ, ಪ್ಲೀಸ್ ಬೇಗ ನಮ್ಮ ಮನೆಗೆ ಬಂದುಬಿಡಿ- ನಿಮ್ಮನ್ನ ಬಿಟ್ಟಿರೋಕೆ ನಂಗೆ ತುಂಬಾ ಕಷ್ಟ ಆಗ್ತ ಇದೆ’ ನಿವೇದಿಸಿಕೊಂಡ.
‘ಆಗ್ಲೆ ಕಷ್ಟನಾ, ನಾನಿನ್ನೂ ನಿಮ್ಮ ಹೆಂಡತಿ ಆಗೇ ಇಲ್ಲ. ಕಷ್ಟ ಅಂತ ಮನೆಯವರೆಗೂ ಹುಡುಕಿಕೊಂಡು ಬಂದುಬಿಡಬೇಡಿ. ಆಗ ನಂಗೆ ಕಷ್ಟವಾಗುತ್ತೆ. ನೀವು ಹೀಗೆ ಆಡ್ತ ಇದ್ರೆ ನೋಡಿದವರು ಏನಂತಾರೆ? ಪ್ರೇಮದ ಅಮಲು ಏರಿಬಿಟ್ಟಿದೆ. ನಾನಿನ್ನೂ ಇಲ್ಲಿಯೇ ಇದ್ರೆ ಅಪಾಯ. ಬರ್ತೀನಿ’ ಅವನಿಂದ ಬಿಡಿಸಿಕೊಂಡು ಓಡಿದಳು. ಓಟಕ್ಕೆ ಕುಣಿತದ ನಡೆ ಬಂದಿತ್ತು. ಹರ್ಷದಿಂದ ಬೀಗುತ್ತ ಎದೆಯೊಳಗೆ ತುಂಬಿಕೊಂಡ ಮಧುರಾನುಭೂತಿಯಿಂದ ಆಕಾಶದಲ್ಲಿ ತೇಲುತ್ತಿರುವಂತೆ ಭಾಸವಾಯಿತು. ಹೊಸ ಅನುಭವ, ವಿಸ್ಮಯನ ಸಾನಿಧ್ಯ, ಅವನ ಪ್ರೇಮ, ಅವನ ಸಮರ್ಪಣೆ ಹೊಸ ಲೋಕದ ಬಾಗಿಲು ತೆರೆದಂತಾಯಿತು. ಅವಳು ಅವಳಾಗಿರಲಿಲ್ಲ. ಎಲ್ಲಿದ್ದೆನೋ, ಹೇಗಿದ್ದೆನೋ ಒಂದು ಅರ್ಥವಾಗದಂತಾಗಿ ಅನುರಾಗದ ಅಲೆಗಳಲ್ಲಿ ಕೊಚ್ಚಿ ಹೋಗಿ ಮನೆಮುಟ್ಟಿದ್ದೆ ತಿಳಿಯಲಿಲ್ಲ. ಬಾಗಿಲಲ್ಲಿಯೇ ನೀಲಾ ಕಾಯುತ್ತ ನಿಂತಿದ್ದರೂ, ಅವಳನ್ನು ನೋಡುತ್ತಿದ್ದರೂ ನೋಡದವಳಂತೆ ಒಳ ಹೋದಾಗ ‘ಏನಾಯ್ತು ಈ ಹುಡುಗಿಗೆ ಎಲ್ಲಿ ಹೋಗಿದ್ದಳು ಇಷ್ಟು ಹೊತ್ತು’ ಎಂದುಕೊಂಡು ಅವಳ ಹಿಂದೆಯೇ ಬಂದಳು. ಒಂದೂ ಮಾತಾಡದೆ ತನ್ನ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದು ಹೊಸ ಪರಿ ಎನಿಸಿ ಯಾವುದೋ ಲಹರಿಯಲ್ಲಿದ್ದಾಳೆ. ಅವಳ ಲಹರಿ ಹಾಳು ಮಾಡುವುದು ಬೇಡ, ನೆನ್ನೆ ತಾನೇ ಅಷ್ಟೊಂದು ಜನ ಮುಂದೆ ಅವಳ ಸಾಧನೆಗೆ ಗರಿ ಸಿಕ್ಕಿದೆ. ಅದೇ ಮೂಡ್‌ನಲ್ಲಿರಬೇಕು, ಹುಚ್ಚು ಹುಡುಗಿ ಎಂದು ಕೊಂಡ ನೀಲಾ ಮಗಳ ತಂಟೆಗೆ ಹೋಗಲಿಲ್ಲ. ಅವಳಿಗೂ ಹೃದಯ ತುಂಬಿದಂತಿತ್ತು. ಮೋಹನ ಸತ್ತ ಮೇಲೆ ಅದೆಷ್ಟೊ ದಿನಗಳ ನಂತರ ಇಂತದೊಂದು ಸಂತೋಷದ ವಾತಾವರಣ ಅಲ್ಲಿ ನಿರ್ಮಾಣವಾಗಿತ್ತು.
ತನ್ನ ಹಾಗೂ ವಿಸ್ಮಯನ ಪ್ರೇಮದ ಬಗ್ಗೆ ತಾಯಿ ನೀಲಾಳಿಗೆ ಹೇಗೆ ಹೇಳುವುದೆಂದು ಇಳಾ ಗೊಂದಲದಲ್ಲಿ ಬಿದ್ದಳು. ಅಮ್ಮ ಕುಣಿದಾಡುತ್ತ ಒಪ್ಪಿಬಿಡುತ್ತಾಳೆ ಎಂದು ವಿಸ್ಮಯನ ಮುಂದೆ ಹೇಳಿದ್ದಳು. ಆದರೆ ಅದನ್ನ ತಿಳಿಸಲೇ ಹಿಂಜರಿಕೆಯಾಗಿ ಅವತ್ತೆಲ್ಲ ಹಾಗೆಯೇ ಕಳೆದುಬಿಟ್ಟಳು. ಈಗ ಹೇಳೋಣ… ಆಗ ಹೇಳೋಣ… ಎಂದುಕೊಂಡೇ ಕಾಲ ತಳ್ಳಿದಳು. ತನ್ನಿಂದ ಹೇಳಲು ಅಸಾಧ್ಯವಾಗಬಹುದು, ವಿಸ್ಮಯನೇ ಅಮ್ಮನನ್ನು ಕೇಳಿಕೊಳ್ಳಲಿ ಎಂದು ತೀರ್ಮಾನಿಸಿ ಎದೆ ಭಾರ ಕಳೆದುಕೊಂಡಳು. ವಿಸ್ಮಯ್ ತನ್ನ ಪ್ರೇಮವನ್ನು ಕುರಿತು ಹೇಳುವಾಗ ಅಮ್ಮನ ಪ್ರತಿಕ್ರಿಯೆ ಹೇಗಿರುತ್ತದೊ ನೋಡೋಣ ಎಂದು ಸುಮ್ಮನಿದ್ದುಬಿಟ್ಟಳು.
ಈ ಬಾರಿಯ ಕೃಷಿ ಸಾಧನೆ ಪ್ರಶಸ್ತಿ ಬಂದಿರುವುದನ್ನು ಅಭಿನಂದಿಸಲು ನಿವಾಸ್ ಖುದ್ದಾಗಿ ಇಳಾಳ ಊರಿಗೆ ಬಂದಿಳಿದ. ದೊಡ್ಡ ಬೊಕೆ ಹಿಡಿದುಕೊಂಡು ಕಾರಿನಿಂದ ಇಳಿಯುತ್ತಿರುವ ನಿವಾಸನನ್ನು ಕಂಡು ಆಶ್ಚರ್ಯದಿಂದ ಕಾರಿನತ್ತ ಓಡಿಬಂದಳು.
‘ಸಾರ್, ನೀವು ಬರ್‍ತೀನಿ ಅಂತ ಒಂದು ಮಾತು ತಿಳಿಸಿರಲಿಲ್ಲವಲ್ಲ. ಆಶ್ಚರ್ಯ ಆಗ್ತಾಯಿದೆ. ಇಷ್ಟು ದೂರ ಬಂದಿದ್ದೀರಲ್ಲ…’ ಸಡಗರದಿಂದ ಸ್ವಾಗತಿಸಿದಳು.
‘ನಿಮ್ಗೆ ಸರ್‌ಪ್ರೈಸ್ ಕೊಡಬೇಕು ಅಂತನೇ ನಾನು ಮೊದಲೇ ತಿಳಿಸಿರಲಿಲ್ಲ. ಕೃಷಿ ಸಾಧಕಿಗೆ ಅಭಿನಂದನೆಗಳು. ನಾನು ಹೇಳ್ತ ಇರ್ಲಿಲ್ವ, ನೀವೇನಾದರೂ ಸಾಧಿಸಿಯೇ ಸಾಧಿಸುತ್ತೀರಾ ಅಂತ. ಆದ್ರೆ ಇಷ್ಟು ಬೇಗ ಆ ದಿನ ಬರುತ್ತೆ ಅಂತ ಅಂದುಕೊಂಡಿರಲಿಲ್ಲ. ನನ್ನ ಆಲೋಚನೆಗಳಿಗಿಂತಲೂ ನೀವು ಫಾಸ್ಟ್ ಆಗಿ ಸಾಧನೆ ಗರಿ ಪಡೆದುಕೊಂಡುಬಿಟ್ಟಿರಿ. ಈ ಸಾಧನೆಗೆ ಮತ್ತಷ್ಟು ಗರಿಗಳು ಸೇರಲಿ ಅಂತ ನನ್ನಾಸೆ’ ಬೊಕೆ ನೀಡುತ್ತ ಹಾರೈಸಿದ.
ಬೊಕೆ ತೆಗೆದುಕೊಂಡು ‘ಇದೆಲ್ಲ ಯಾಕೆ ಸಾರ್, ಹಾಗೆ ಅಭಿನಂದನೆ ಹೇಳಿದ್ದರೇ ಆಗಿತ್ತು, ಒಳಗೆ ಬನ್ನಿ… ಅಮ್ಮ ಅಜ್ಜಿಯ ಪರಿಚಯ ಮಾಡಿಸ್ತಿನಿ’ ಒಳಗೆ ಬಂದಳು. ಅವಳ ಜೊತೆ ನಿವಾಸ್ ಕೂಡ ಒಳ ಬಂದು ಸೋಫಾದ ಮೇಲೆ ಕುಳಿತ.
ಒಳಹೋದ ಇಳಾ ಜೊತೆಯಲ್ಲಿ ನೀಲಾಳನ್ನು, ಅಂಬುಜಮ್ಮನನ್ನು ಕರೆತಂದಳು. ‘ಇವರು ನಮ್ಮ ತಾಯಿ ನೀಲಾ ಅಂತ. ನಮ್ಮ ಅಜ್ಜಿ, ಅಮ್ಮನ ದೊಡ್ಡಮ್ಮ’ ಅಂತ ಪರಿಚಯಿಸಿದಳು.
‘ನಿಮ್ಮ ಬಗ್ಗೆ ಇಳಾ ಹೇಳ್ತಿರುತ್ತಾಳೆ. ನೀವು ಬಂದಿದ್ದು ತುಂಬಾ ಸಂತೋಷ, ನಿಮ್ಮ ಮಾರ್ಗದರ್ಶನ ಅವಳ ಕೆಲಸಗಳಿಗೆ ಸ್ಫೂರ್ತಿ, ಈ ವಯಸ್ಸಿಗೆ ಅದೆಷ್ಟು ಸಾಧನೆ ಮಾಡಿದಿರಪ್ಪ ನೀವು’ ಎಂದು ಬಾಯಿ ತುಂಬ ಹೊಗಳುತ್ತ ಅಭಿಮಾನದಿಂದ ಹೇಳಿದಳು.
ಅವಳ ಹೊಗಳಿಕೆಗೆ ನಸುನಕ್ಕು ‘ನಿಮ್ಮ ಮಗಳ ಸಾಧನೆ ಮುಂದೆ ನಮ್ಮದೇನು ಇಲ್ಲ ಬಿಡಿ, ಸಾಧನೆ ಮಾಡೋಕೆ ಹುಟ್ಟಿರೋಳು ನಿಮ್ಮ ಮಗಳು’ ಅಂತರಾಳದಿಂದ ನುಡಿದ. ಅಂಬುಜಮ್ಮ ಅವನನ್ನೇ ಮಿಕಿ ಮಿಕಿ ನೋಡುತ್ತಿದ್ದು ಒಂದೂ ಮಾತಾಡಿರಲಿಲ್ಲ.
ಎಲ್ಲೋ ಮೊದಲೇ ನೋಡಿದಂತೆ, ತುಂಬಾ ಪರಿಚಿತ ಮೊಗದಂತೆ ನಿವಾಸ್ ಕಾಣಿಸಿ ಎಲ್ಲಿರಬಹುದು ಎಂದು ನೆನೆಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ಎಷ್ಟೆ ನೆನಪಿಸಿಕೊಂಡರೂ ನೆನಪಾಗಲೇ ಇಲ್ಲ. ಚನ್ನರಾಯಪಟ್ಟಣದವನು ನಿವಾಸ್ ಎಂದು ಇಳಾ ಹೇಳಿದ್ದಳು. ತಾನಂತೂ ಚನ್ನರಾಯಪಟ್ಟಣಕ್ಕೆ ಹೋಗಿಯೇ ಇಲ್ಲ. ತಮ್ಮ ಕಡೆಯವರಾಗಲಿ, ಪರಿಚಿತರಾಗಲಿ ಅಲ್ಲಿ ಯಾರೂ ಇಲ್ಲ, ಹಾಗಿದ್ದರೆ ನಿವಾಸನನ್ನು ಎಲ್ಲಿ ನೋಡಿದ್ದೇನೆ. ತುಂಬಾ ಪರಿಚಿತ ಮುಖ ಎನಿಸುತ್ತಿದೆ- ಗೊಂದಲದಲ್ಲಿಯೇ ಮುಳುಗಿದ್ದರು. ಅದೇ ಗೊಂದಲದಲ್ಲಿಯೇ ಕಾಫಿ ತಂದಿತ್ತರು. ಕಾಫಿ ಕುಡಿದಾದ ಮೇಲೆ ತೋಟ ನೋಡುವೆನೆಂದಾಗ ಇಳಾ ಅವನಿಗೆ ತೋಟ ತೋರಿಸಿಬರಲು ಹೊರಟಳು. ತಾನೂ ಬರುವುದಾಗಿ ಅಂಬುಜಮ್ಮ ಅವರ ಹಿಂದೆ ಹೊರಟರು. ಅವನು ಯಾರು? ಅವನನ್ನು ತಾನು ಎಲ್ಲಿ ನೋಡಿದ್ದೆ? ಎಂದು ತಿಳಿದುಕೊಳ್ಳುವ ಕುತೂಹಲದಿಂದ ಅವರ ಜೊತೆಯಲ್ಲಿಯೆ ನಡೆದರು.
ತೋಟ ನೋಡಿ ತುಂಬಾ ಮೆಚ್ಚಿಕೊಂಡ. ಎರೆಹುಳು ಘಟಕ, ಹಸುಗಳ ಕೊಟ್ಟಿಗೆ, ಅಂಗಾಂಶ ಕೃಷಿಯ ಪ್ರಯೋಗ ಕೋಣೆ ಎಲ್ಲಾ ನೋಡಿ ‘ಇಳಾ ನಿಮ್ಗೆ ಆ ದೇವರು ವರ ಕೊಟ್ಟುಬಿಟ್ಟಿದ್ದಾನೆ. ಇಲ್ಲದೆ ಇದ್ರೆ ಇಷ್ಟು ಬೇಗ ಇದರಲ್ಲಿ ಪಳಗಲು ಸಾಧ್ಯವಿಲ್ಲ. ಅಪರೂಪದ ತಿಳುವಳಿಕೆ ನಿಮಗಿದೆ, ಆದ್ದರಿಂದಲೇ ನೀವು ಇಲ್ಲಿ ಯಶಸ್ಸು ಗಳಿಸುತ್ತಿರುವುದು, ಅದೆಷ್ಟು ವರ್ಷಗಳಿಂದ ಕೃಷಿ ಮಾಡುತ್ತಿದ್ದರೂ ಗೆಲುವಿಗಿಂತ ಸೋಲನ್ನ ಅನುಭವಿಸಿದವರು ತುಂಬಾ ಜನ, ಅಂತಹ ಸಮಯದಲ್ಲಿ ಇನ್ನೊಂದು ರಿಸ್ಕ್ ತಗೊಂಡು ಗೆದ್ದುಬಿಟ್ಟಿರಿ. ಈ ಗೆಲುವು ಸದಾ ಹೀಗೆ ಇರಬೇಕು.’
ಮಾತನಾಡುತ್ತ ಇಡೀ ತೋಟ ಸುತ್ತಾಡಿದರು. ಒಂದೂ ಮಾತನಾಡದೆ ಬರುತ್ತಿದ್ದ ಅಂಬುಜಮ್ಮ ತಟ್ಟನೆ ನಿಂತುಕೊಂಡರು. ‘ಏನಪ್ಪ ನೀನು ದೇವರಾಜರಾಯರ ಮಗನಾ?’ ನಿವಾಸನನ್ನು ಕೇಳಿದರು.
‘ಹೌದು, ನಿಮಗೆ ಅವರು ಗೊತ್ತಾ?’ ಚಕಿತನಾಗಿ ನಿವಾಸ್ ಉತ್ತರಿಸಿದ.
‘ಗೊತ್ತೇನು, ನನ್ನ ಇಡೀ ಬದುಕಿನ ಸಂತೋಷವನ್ನೆಲ್ಲ ನುಂಗಿ ನೀರು ಕುಡಿದವರು. ನಮ್ಮನ್ನ ಬೀದಿಪಾಲು ಮಾಡಿ ನಮ್ಗೆ ಸೇರಬೇಕಾದ ಆಸ್ತಿನೆಲ್ಲ ಲಪಟಾಯಿಸಿ ಮೋಸ ಮಾಡಿದೋರು, ನಾನು ಶಾಪ ಹಾಕದ ದಿನವಿಲ್ಲ, ರಾಜನಂತೆ ಬೆಳೀಬೇಕಾದ ನನ್ನ ಮಗನ ಅದೃಷ್ಟವನ್ನು ಕಿತ್ತುಕೊಂಡೋರು, ಅವರು ನನ್ನ ಭಾವ ಅಂತ ಹೇಳಿಕೊಳ್ಳೋಕು ಅಸಹ್ಯ ಆಗುತ್ತೆ’ ಎಂದವರೆ ದುರ್ದಾನ ತೆಗೆದುಕೊಂಡವರಂತೆ ಸಿಟ್ಟಿನಿಂದ ಕಂಪಿಸುತ್ತ ವಾಪಸ್ಸು ತಿರುಗಿ ಸರಸರನೆ ನಡೆದುಬಿಟ್ಟಾಗ ನಿವಾಸ್ ದಿಗ್ಮೂಢನಾಗಿ ನಿಂತುಬಿಟ್ಟ.
ಇಲ್ಲಿ ಹೀಗೆ ಚಿಕ್ಕಮ್ಮನನ್ನು ಕಾಣುತ್ತೇನೆ, ಅವರಿಲ್ಲಿ ಸಿಗುತ್ತಾರೆ ಎಂಬ ಯಾವ ನಿರೀಕ್ಷೆಯೂ ಅವನಿಗೆ ಇಲ್ಲದೆ ದಂಗುಬಡಿದು ಹೋಗಿದ್ದಾನೆ. ತಾನಿಷ್ಟು ದಿನ ಹುಡುಕುತ್ತಿದ್ದ ಚಿಕ್ಕಮ್ಮ ಇಲ್ಲಿಯೇ ಇದ್ದರೆ? ಅವರಿಗಾಗಿ ತಾನು ಅದೆಷ್ಟು ಹುಡುಕಾಟ ನಡೆಸಿದ್ದೆ… ಯಾರ್ಯಾರ ಬಳಿ ಅವರನ್ನ ವಿಚಾರಿಸಿದ್ದ. ಆದರೆ ಅದು ಪ್ರಯೋಜನವೇ ಆಗಿರಲಿಲ್ಲ. ಇಂದು ನಾನು ಕಾಯುತ್ತಿದ್ದ ಸಮಯ ಬಂದಿದೆ, ತಲೆ ಮೇಲಿನ ಹೊರೆ ಇಳಿಸಿಕೊಳ್ಳುವ, ಎದೆಭಾರ ಕಳೆದುಕೊಳ್ಳುವ ಸುವರ್ಣ ಗಳಿಗೆ ಬಂದಿದೆ-ತಕ್ಷಣವೆ ಚೇತರಿಸಿಕೊಂಡು ಹಿಗ್ಗಿದನು.
ಈ ಅನಿರೀಕ್ಷಿತ ಘಟನೆಯಿಂದ ಇಳಾ ಕೂಡ ಬೆಪ್ಪಾಗಿ ಹೋಗಿದ್ದಳು. ನಿವಾಸ್ ತನ್ನ ಹತ್ತಿರದ ಸಂಬಂಧಿ, ಅಜ್ಜಿಯ ಭಾವನ ಮಗ, ಆದರೆ ಆತನ ತಂದೆ ದೊಡ್ಡ ಮೋಸಗಾರ, ಅಜ್ಜಿಯ ಆಸ್ತಿಯನ್ನು ಲಪಟಾಯಿಸಿದ ವಂಚಕ, ಅಜ್ಜಿಯ ಎಲ್ಲಾ ಕಷ್ಟಗಳಿಗೆ ಕಾರಣರಾದವರು ನಿವಾಸನ ತಂದೆ. ಈ ಸತ್ಯವನ್ನು ಅರಗಿಸಿಕೊಳ್ಳಲಾರದೆ ಪ್ರಯಾಸಪಟ್ಟಳು. ನಿವಾಸನಿಗೇನು ಹೇಳಿ ಸಂತೈಸಬೇಕು, ಅಜ್ಜಿಯ ಕೋಪವನ್ನು ಹೇಗೆ ಶಮನಗೊಳಿಸಬೇಕು ಎಂದು ತಿಳಿಯದೆ ನಿಶ್ಚಲಳಾಗಿ ನಿಂತುಬಿಟ್ಟಳು.
‘ಇಳಾ ಈಗ ಮನೆಗೆ ಹೋಗೋಣ ಬನ್ನಿ’ ಅವಳ ಕೈ ಹಿಡಿದು ಸರಸರನೆ ಅಂಬುಜಮ್ಮ ಹೋದ ದಾರಿಯಲ್ಲಿ ನಡೆದನು. ಇಳಾಳ ಕೈಹಿಡಿದುಕೊಂಡಿದ್ದೇನೆ ಎಂಬ ಅರಿವೇ ನಿವಾಸನಿಗಿರಲಿಲ್ಲ. ಇಳಾ ಸಂಕೋಚಿಸಿದರೂ ಅವನ ಈಗಿನ ಮನಸ್ಥಿತಿ ಬಗ್ಗೆ ಯೋಚಿಸುತ್ತ ಅತ್ತ ಗಮನ ನೀಡದೆ ಅವನ ಜೊತೆ ಮನೆ ಸೇರಿದಳು.
ಅಂಬುಜಮ್ಮ ಏನೂ ಆಗದವರಂತೆ ಅಡುಗೆ ಮನೆಯಲ್ಲಿದ್ದರು. ಅವರು ಬಂದಿದ್ದನ್ನು ನೋಡಿ ‘ಇಳಾ, ಊಟಕ್ಕೇಳಿಸಮ್ಮ ಅಮನ್ನ, ಬೇಗ ಪಾಯಸ ಮಾಡಿ ಬಿಡುತ್ತೇನೆ, ನೀಲಾ ಕೂಡ ಅಷ್ಟು ಹೊತ್ತಿಗೆ ಬರ್ತಾಳೆ, ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವಿರಂತೆ’ ಎಂದು ಹೇಳುತ್ತಿದ್ದರೆ ಅಜ್ಜಿಯನ್ನೆ ಅದ್ಭುತ ಎಂಬಂತೆ ನೋಡಿದಳು! ಅವರ ದೊಡ್ಡ ಗುಣದ ಬಗ್ಗೆ ತಲೆದೂಗುತ್ತ ಅತಿಥಿ ಸತ್ಕಾರ ಮಾಡುವ ಅವರ ಮನಸ್ಸು ಅದೆಷ್ಟು ವಿಶಾಲ ಎಂದುಕೊಂಡಳು. ಮನಸ್ಸಿನಲ್ಲಿಯೇ ಅಜ್ಜಿಯನ್ನು ಮೆಚ್ಚಿಕೊಂಡಳು.
ಸೀದಾ ಅಡುಗೆಮನೆಗೆ ಬಂದ ನಿವಾಸ್ ‘ಚಿಕ್ಕಮ್ಮ, ನಮ್ಮನ್ನ ಕ್ಷಮಿಸಿಬಿಡಿ, ನಿಮಗೆ ಮಾಡಿದ ಅನ್ಯಾಯಕ್ಕೆ ನಮ್ಮ ಇಡೀ ಮನೆಯೇ ದುರಂತಮಯವಾಗಿದೆ. ಅಕ್ಕ ಆತ್ಮಹತ್ಯೆ ಮಾಡಿಕೊಂಡಳು. ಅಮ್ಮ ಅದೇ ಚಿಂತೆಯಲ್ಲಿ ಕೊರಗಿ ನಮ್ಮನ್ನೆಲ್ಲ ಬಿಟ್ಟುಹೋದಳು. ನಮ್ಮ ಇಡೀ ಜಮೀನ್ನು ಸರ್ಕಾರ ವಹಿಸಿಕೊಂಡಿತು. ಇದನ್ನೆಲ್ಲ ನೋಡಿ ಅಪ್ಪ ದುರ್ಬಲಗೊಂಡು ಮಾನಸಿಕ ಸ್ವಾಸ್ಥ ಕೆಡಿಸಿಕೊಂಡು ಹುಚ್ಚರಾಗಿದ್ದಾರೆ. ನಾವು ಮಾಡಿದ ಪಾಪದ ಫಲವನ್ನು ನಾವೇ ಅನುಭವಿಸಬೇಕು ಚಿಕ್ಕಮ್ಮ. ಈ ದುರಂತಗಳಿಂದ ಕಂಗೆಟ್ಟು ನಾನು ಕೆಲಸಬಿಟ್ಟು ಜಮೀನು ಕೊಂಡು ವ್ಯವಸಾಯ ಮಾಡುತ್ತ ಇದ್ದೀನಿ. ಜಮೀನಿಗೆ ಸರ್ಕಾರ ಕೊಟ್ಟ ಹಣದಲ್ಲಿ ನಿಮ್ಮ ಪಾಲಿನ ಹಣವನ್ನು ಬ್ಯಾಂಕಿನಲ್ಲಿಟ್ಟು ನಿಮಗಾಗಿ ಹುಡುಕುತ್ತಿದ್ದೆ. ಯಾರೂಬ್ಬರೂ ನಿಮ್ಮ ವಿಚಾರ ತಿಳಿಸಲಿಲ್ಲ. ನಿಮ್ಮಕಡೆಯವರ ಬಗ್ಗೆಯೂ ನಂಗೆ ಸರಿಯಾದ ಮಾಹಿತಿ ಸಿಗಲಿಲ್ಲ. ನನ್ನ ತಂದೆಯನ್ನು ಕ್ಷಮಿಸಿ, ನಿಮ್ಮ ಹಣ ತೆಗೆದುಕೊಳ್ಳಿ ಚಿಕ್ಕಮ್ಮ’ ಅಂಬುಜಮ್ಮನ ಕಾಲಿಗೆ ಬಿದ್ದು ಬೇಡಿಕೊಂಡ.
‘ಅಯ್ಯೋ ನೀನ್ಯಾಕಪ್ಪ ನನ್ನ ಕಾಲಿಗೆ ಬೀಳ್ತಿಯಾ. ನಿಂದೇನು ತಪ್ಪಿದೆ ಇದರಲ್ಲಿ. ಇದೆಲ್ಲ ಆಗುವಾಗ ನೀನು ಹುಟ್ಟಿಯೇ ಇರಲಿಲ್ಲ. ನಾನು ನಿನ್ನನ್ನು ನೋಡಿಯೇ ಇರಲಿಲ್ಲ. ನಿಮ್ಮಪ್ಪನ ಹೋಲಿಕೆ ಇದ್ದುದರಿಂದ ಎಲ್ಲೊ ನೋಡಿದಂತೆ ಅನ್ನಿಸಿತು. ನಿಮ್ಮಪ್ಪನ ಮೇಲೆ ಕೋಪ ಇದೆ. ಅಸಹ್ಯನೂ ಇದೆ. ಆದ್ರೆ ನಾನು ಯಾವತ್ತೂ ನಿಮ್ಮ ಮನೆ ಸರ್ವನಾಶ ಆಗಲಿ ಅಂತ ಶಾಪ ಹಾಕಿರಲಿಲ್ಲ. ಎಷ್ಟೆ ಆಗಲಿ ನನ್ನ ಗಂಡನ ಅಣ್ಣನ ಸಂಸಾರ ಅದು. ನಿಮ್ಮಕ್ಕ, ನಿಮ್ಮಮ್ಮ ಸತ್ತುಹೋಗಿಬಿಟ್ಟರೆ? ಪಾಪ…’ ಕಣ್ಣೀರು ಹಾಕಿದರು.
ಚಿಕ್ಕಮ್ಮನ ಹೃದಯವಂತಿಕೆಗೆ ಮಾರುಹೋದ ನಿವಾಸನು ‘ಚಿಕ್ಕಮ್ಮ ನಿಮ್ಮದೆಂತಹ ದೊಡ್ಡ ಗುಣ, ಸರ್ವನಾಶ ಮಾಡಿದ ವಂಚಕನ ಮಗ ನಾನು ಅಂತ ಗೊತ್ತಾದರೂ ನನ್ನನ್ನು ಕ್ಷಮಿಸಿದ್ದೀರಿ, ಅದೇ ರೀತಿ ನಿಮಗೆ ಸೇರಬೇಕಾದ ಹಣವನ್ನು ತೆಗೆದುಕೊಂಡು ನನ್ನನ್ನು ಋಣಮುಕ್ತನಾಗಿ ಮಾಡಿ’ ಕೇಳಿಕೊಂಡನು.
‘ಈಗ್ಯಾಕಪ್ಪ ನಂಗೆ ಹಣ, ಆವಾಗ ಬೇಕಿತ್ತು, ಬದುಕಬೇಕಿತ್ತು, ಮಗನನ್ನು ಸಾಕಬೇಕಿತ್ತು. ಮಗನಿಗೊಂದು ನೆಲೆ ಕಾಣಿಸಲು ಹಣ ಬೇಕಿತ್ತು. ಈಗ ಅವನು ಚೆನ್ನಾಗಿದ್ದಾನೆ. ಒಳ್ಳೆ ಕೆಲಸ ಇದೆ. ನಿಮ್ಮ ಮನೆಯಲ್ಲಿ ಇನ್ನೊಂದು ದುರಂತ ನಡೆದಿರುವಾಗ ಆ ಹಣ ನಾ ಹೇಗೆ ತೆಗೆದುಕೊಳ್ಳಲಿ, ನೀನೇ ಇಟ್ಟುಕೊಳ್ಳಪ್ಪ’ ಹಣ ತೆಗೆದುಕೊಳ್ಳಲು ನಿರಾಕರಿಸಿದರು.
‘ಚಿಕ್ಕಮ್ಮ, ನಿಮಗೆ ಬೇಡವಾದ್ರೆ ಬಿಡಿ, ಆದ್ರೆ ಅಣ್ಣನಿಗಾದರೂ ಆ ಹಣ ಸೇರಲೇಬೇಕು. ಅದು ಅವನ ಹಣ, ಅದನ್ನ ಇಟ್ಟುಕೊಳ್ಳುವ ಯಾವ ಹಕ್ಕಾಗಲಿ, ಅಧಿಕಾರವಾಗಲಿ ನನಗಿಲ್ಲ. ದಯವಿಟ್ಟು ಚಿಕ್ಕಮ್ಮ, ಬೇಡ ಅನ್ನಬೇಡಿ. ಅದು ನಿಮ್ಮ ಹಣ, ನಾಳೇನೇ ಅಣ್ಣನ ಹತ್ತಿರ ಹೋಗಿ ಈ ವಿಚಾರ ತಿಳಿಸೋಣ’ ಒತ್ತಾಯಿಸಿದ.
ಅವನ ಒತ್ತಾಯಕ್ಕೆ ಮಣಿದ ಅಂಬುಜಮ್ಮ ನಿರ್ಲಿಪ್ತತೆಯಿಂದಲೇ ಒಪ್ಪಿಕೊಂಡರು. ನಾಳೆ ನಿವಾಸನೊಂದಿಗೆ ಮಗನ ಮನೆಗೆ ಬರಲು ಸಮ್ಮತಿಸಿದರು.
ನೀಲಾ ಬಂದಾಗ ಇಳಾ ಸಂಭ್ರಮದಿಂದ ನಿವಾಸ್ ಅಜ್ಜಿಯ ಭಾವನ ಮಗ, ತಮಗೆ ಹತ್ತಿರದ ಸಂಬಂಧಿ ಎಂಬ ವಿಚಾರವನ್ನು ತಿಳಿಸಿದಳು. ನೀಲಾಗೂ ಈ ವಿಚಾರ ಸಂತೋಷ ತಂದಿತು. ಅವರ ಆಸ್ತಿಯ ಹಣವನ್ನು ಬ್ಯಾಂಕಿನಲ್ಲಿಟ್ಟು ಅವರಿಗಾಗಿ ಹುಡುಕಾಡಿದ್ದು ಈಗ ಅಕಸ್ಮಿಕವಾಗಿ ಇಲ್ಲಿ ಸಿಕ್ಕಿದ್ದು, ನಾಳೆಯೇ ದೊಡ್ಡಮ್ಮ ನಿವಾಸನೊಂದಿಗೆ ಮಗನ ಮನೆಗೆ ಹೊರಟಿರುವುದು ತಿಳಿದು ಕೊನೆಗೂ ದೊಡ್ಡಮ್ಮನ ಆಸ್ತಿ ಕೈ ಸೇರುವಂತಾಯಿತಲ್ಲ ಎಂದು ಸಮಾಧಾನಿಸಿದಳು. ನಿವಾಸನ ಮನೆಯ ದುರಂತದ ಚಿತ್ರಣ ನೀಡಿದ ಅಂಬುಜಮ್ಮ ತುಂಬಾ ನೊಂದಕೊಂಡರು. ತಮ್ಮ ಆಸ್ತಿ ನೀಡದೆ ಮೋಸಮಾಡಿದ ಭಾವನಿಗೆ ಶಾಪ ಹಾಕುತ್ತಿದ್ದು ನಿಜವಾದರೂ ಅದು ಕೋಪದಿಂದಷ್ಟೆ. ಅವರ ಮನೆಯವರ ಬಗ್ಗೆ ಅಂಬುಜಮ್ಮನಿಗೆ ಯಾವುದೇ ಕೋಪವಿರಲಿಲ್ಲ. ನಿವಾಸನ ತಾಯಿ ಎಷ್ಟೋ ಬಾರಿ ಗಂಡನಿಗೆ ಹೇಳಿದ್ದರು. ಅವರ ಆಸ್ತಿ ಅವರಿಗೆ ಕೊಟ್ಟುಬಿಡಿ, ಅವರು ನಮ್ಮ ಮುಂದೆ ಕಷ್ಟಪಡುತ್ತಿದ್ದರೆ ನಾವು ನೋಡಿಕೊಂಡು ಹೇಗೆ ಸಹಿಸುವುದು ಎಂದು ಗಂಡನೊಂದಿಗೆ ಜಗಳವಾಡಿದ್ದರು. ಆದರೆ ಆ ಮನುಷ್ಯ ಯಾರ ಮಾತನ್ನು ಕೇಳುವಂತಿರಲಿಲ್ಲ. ಆತ ಮಾಡಿದ ತಪ್ಪಿಗೆ ಆಕೆ ಶಿಕ್ಷೆ ಅನುಭವಿಸುವಂತಾಗಿದ್ದು ಅಂಬುಜಮ್ಮನವರಿಗೆ ನೋವೇ ತಂದಿತ್ತು. ಒಟ್ಟಿನಲ್ಲಿ ಕೊನೆಗೂ ಆಸ್ತಿಯ ಹಣ ಕೈ ಸೇರುತ್ತಿದೆ. ಇನ್ನು ಮಗನುಂಟು, ನಿವಾಸನುಂಟು, ವೈರಾಗ್ಯ ಭಾವ ತಾಳಿದರು.
ಭಾವನ ಮಗನಿಗೆ ಹಬ್ಬದ ಅಡುಗೆಯನ್ನೆ ಮಾಡಿ ಬಡಿಸಿ ಕಕ್ಕುಲಾತಿಯಿಂದ ಉಪಚಾರ ಮಾಡಿ ತಿನ್ನಿಸಿದ್ದರು. ದೊಡ್ಡಮ್ಮ ನಿವಾಸನಿಗೆ ತೋರುತ್ತಿರುವ ಪ್ರೀತಿ ಕಾಳಜಿ ನೋಡಿ ‘ಪಾಪ, ತಮಗೆ ಅನ್ಯಾಯ ಮಾಡಿದವನ ಮಗನಾದರೂ ಅದೆಷ್ಟು ಅಕ್ಕರೆ ತೋರುತ್ತಿದ್ದಾರೆ. ನಿವಾಸ್ ಕೂಡ ಒಳ್ಳೆ ಹುಡುಗ, ಇಲ್ಲದಿದ್ದರೆ ಹಣ ಜೋಪಾನವಾಗಿ ತೆಗಿದಿರಿಸಿ ಕೊಡುತ್ತಿದ್ದನೆ? ಇಂಥ ಪ್ರಮಾಣಿಕರು ಈ ಕಾಲದಲ್ಲೂ ಇರುವರೆ ಎಂದು ನೀಲಾ ಸೋಜಿಗಪಟ್ಟಳು.
‘ಸಾರ್, ಅಮ್ಮನ ಶಾಲೆಯ ತೋಟ ತುಂಬಾ ಚೆನ್ನಾಗಿದೆ ನೋಡುತೀರಾ’ ಊಟ ಮುಗಿಸಿದ ಮೇಲೆ ಇಳಾ ಕೇಳಿದಳು.
‘ಶಾಲೆಯ ತೋಟ ಬೇಡ, ನಿಮ್ಮ ತೋಟವನ್ನೆ ಸರಿಯಾಗಿ ನೋಡಲಿಲ್ಲವಲ್ಲ, ಅಲ್ಲಿಗೆ ಹೋಗೋಣ ನಡೆಯಿರಿ’ ಎಂದು ಎದ್ದು ನಿಂತ.
‘ಈಗಿನ್ನು ಊಟ ಮಾಡಿದ್ದೀರಾ, ಕೊಂಚ ಕುತ್ಕೊಂಡು ರೆಸ್ಟ್ ತಗೊಂಡು ಆ ಮೇಲೆ ಹೋಗಬಹುದಲ್ವಾ’ ನೀಲಾ ಹೇಳಿದಳು.
‘ನಾನು ಬಂದಿರುವುದೇ ಇಳಾಳ ಕೃಷಿ ಹೇಗಿದೆ ಅಂತ ನೋಡೋಕ್ಕೆ, ಕುತ್ಕೊಂಡು ಯಾಕೆ ಟೈಂ ವೇಸ್ಟ್ ಮಾಡಬೇಕು, ಹೋಗಿ ಬರುತ್ತೇವೆ’ ಹೊರಟುನಿಂತನು.
ಇಬ್ರೂ ಜೊತೆಯಾಗಿ ಹೋಗುತ್ತಿದ್ದರೆ-ನೀಲಾ, ಅಂಬುಜಮ್ಮ ನಿಂತು ನೋಡಿದರು. ‘ನೀಲಾ, ನಮ್ಮ ಇಳಾಗೆ, ಆ ಹುಡುಗನ್ನ ಕಂಡ್ರೆ ತುಂಬಾ ಇಷ್ಟ ಅಂತ ಕಾಣುತ್ತೆ. ಅವನು ತುಂಬಾ ಒಳ್ಳೆ ಹುಡುಗನಂತೆ ಕಾಣಿಸುತ್ತಾನೆ, ಅಪ್ಪನಂತಲ್ಲ ಅವನು, ಒಂದೇ ಸಲಕ್ಕೆ ಒಳ್ಳೆ ಅಭಿಪ್ರಾಯ ಮೂಡಿಸಿದ್ದಾನೆ. ಯಾರಿಗೊ ಇಳಾಳನ್ನು ಕೊಟ್ಟು ಮದುವೆ ಮಾಡುವ ಬದಲು ಇವನಿಗೆ ಮಾಡಿದ್ರೆ ಹೇಗಿರುತ್ತೆ ನೀಲಾ, ನಂಗೂ ಕರುಳ ಸಂಬಂಧ, ಏನಂತಿಯಾ’ ಮನದೊಳಗಿದ್ದದ್ದನ್ನು ಹೊರ ಹಾಕಿದರು.
‘ನಂಗೂ ಹಾಗೆ ಅನ್ನಿಸುತ್ತೆ ದೊಡ್ಡಮ್ಮ, ನೋಡೋಣ ಇರು, ಅವರ ಅಭಿಪ್ರಾಯ ಹೇಗಿರುತ್ತೋ, ಇಳಾ ಅಂತು ಮದುವೆ ವಿಷಯ ಎತ್ತಿದರೆ ರೇಗಿಬಿಡುತ್ತಾಳೆ, ನಂಗೂ ನಿವಾಸ್ ಹಿಡಿಸಿದ್ದಾನೆ. ಇಬ್ರೂದೂ ಒಂದೇ ಆಸಕ್ತಿ, ಒಂದೇ ಅಭಿರುಚಿ, ಮದ್ವೆ ಆದ್ರೆ ನಂಗೂ ಸಂತೋಷವೇ. ಆದ್ರೆ ಅವರ ಸ್ನೇಹ ಹೇಗೊ ಏನೋ…’ ಮುಂದುವರಿಯಲು ಹಿಂಜರಿದಳು.
‘ಅವರ ಮನಸ್ಸಿನಲ್ಲಿ ಮದ್ವೆ ವಿಚಾರ ಇಲ್ಲದೆ ಇದ್ರೆ, ನಾವೇ ಆ ವಿಚಾರ ಎತ್ತೋಣ ಬಿಡು, ಸಂತೋಷವಾಗಿ ಒಪ್ಪಿಕೊಳ್ತಾರೆ, ಬೇಗ ಮದ್ವೆ ಮಾಡಿ ಇಳಾಳ ಮಗುವನ್ನು ಎತ್ತಿ ಆಡಿಸೋಣ’ ಅವರಾಗಲೇ ಇಳಾ- ನಿವಾಸಗೆ ಮದುವೆ ಮಾಡಿ ಮಗುವನ್ನು ಎತ್ತಿ ಆಡಿಸುವಂತೆ ಕನಸು ಕಂಡರು. ದೊಡ್ಡಮ್ಮನ ಕನಸು ಕಂಡು ನೀಲಾ ನಕ್ಕಳು.
ತೋಟದೊಳಗೆ ನಿವಾಸ್ ಗಿಡಗಳನ್ನು ನೋಡಿ ಕೆಲವು ಸೂಚನೆಗಳನ್ನು ನೀಡಿದ. ಕೊಡಗಿನ ಕಿತ್ತಲೆಗೆ ಒಳ್ಳೆ ಬೇಡಿಕೆ ಇರುವುದರಿಂದ ಮತ್ತಷ್ಟು ಕಿತ್ತಲೆ ಗಿಡಗಳನ್ನು ಹಾಕಿಸುವಂತೆಯೂ, ಕಾಫಿಗಿಡದ ಜೊತೆಗೆ ಆ ಗಿಡಗಳನ್ನು ಚೆನ್ನಾಗಿ ನೋಡಿಕೊಂಡರೆ ಒಳ್ಳೆ ಪಸಲು ಸಿಗುತ್ತದೆ. ಹಾಗೆಯೇ ಏಲಕ್ಕಿ ಗಿಡಗಳಿಗೆ ರೋಗ ಬಡಿಯದಂತೆ ಸುಲಭವಾಗಿ ಪರಿಹಾರಗಳನ್ನು ತಿಳಿಸುತ್ತ, ಕಾಫಿ ಗಿಡದ ಮಧ್ಯದಲ್ಲಿ ಅರಿಶಿಣ ಕೂಡ ಹಾಕಿ ಬೆಳೆಸಬಹುದು, ಕಾಫಿ ಒಂದನ್ನೆ ನೆಚ್ಚಿಕೊಳ್ಳುವುದು ಬೇಡ, ಒಂದರಲ್ಲಿ ತಪ್ಪಿದರೆ ಮತ್ತೊಂದರಲ್ಲಿ ಆದಾಯ ಬರುತ್ತಿರುವಂತೆ ನೋಡಿಕೊಳ್ಳಬೇಕು- ಹೀಗೆ ಮಾತನಾಡುತ್ತ ಇಡೀ ತೋಟ ಸುತ್ತಿ ಮರದ ಕೆಳಗೆ ವಿಶ್ರಮಿಸಲು ಕುಳಿತುಕೊಂಡರು.
ನಿವಾಸ್ ಬಹಳ ಸಂತೋಷದಲ್ಲಿದ್ದ. ಅವನ ಬಹುದಿನದ ಹೊರೆಯೊಂದು ಇಳಿದಂತಾಗಿ ಹಗುರವಾಗಿದ್ದ. ತಾನು ಹುಡುಕುತ್ತಿದ್ದ ಚಿಕ್ಕಮ್ಮ ಸಿಕ್ಕಿದ್ದು, ತಮ್ಮವರನ್ನು ಕ್ಷಮಿಸಿ ಋಣಭಾರದಿಂದ ತನ್ನನ್ನು ಮುಕ್ತ ಮಾಡಿದ್ದು, ಚಿಕ್ಕಮ್ಮನ ದೊಡ್ಡತನ, ಅವರ ಪ್ರೀತಿ ಆದರ-ಎಲ್ಲವೂ ಅವನ ಮನಸ್ಸನ್ನು ತುಂಬಿ ಈ ಚಿಕ್ಕಮಮ್ಮ ಮೊದಲೆ ಸಿಕ್ಕಿದ್ದರೆ? ತಮ್ಮ ಮನೆಯ ದುರಂತಗಳನ್ನು ತಪ್ಪಿಸಬಹುದಿತ್ತೇನೋ ಎಂದು ನೆನಸಿಕೊಂಡು ನಿಡುಸುಯ್ದು. ತಲೆಯ ಮೇಲಿನ ಭಾರ ಕಡಿಮೆ ಆದ ಮೇಲೆ ಮನಸ್ಸು ಇನ್ನಿತರ ವಿಚಾರಗಳತ್ತ ಹರಿದಿತ್ತು.
ಇಳಾ ಚಿಕ್ಕಮ್ಮನ ಮೊಮ್ಮಗಳೆಂದು, ತೀರಾ ಹತ್ತಿರದ ಸಂಬಂಧಿ ಎಂದು ಅರಿವಾಗಿ ಮನದ ಮೂಲೆಯೊಂದರಲ್ಲಿ ಹೊಸ ಆಸೆಯ ಅಲೆಯೊಂದು ಎದ್ದಿತು. ಮೊಟ್ಟ ಮೊದಲ ಬಾರಿಗೆ ಮಧುರವಾದ ವೀಣೆ ಅವನೆದೆಯಲ್ಲಿ ಮಿಡಿಯ ತೊಡಗಿತು. ಆ ಮೃದು ಮಧುರವಾದ ಭಾವನೆಯಿಂದ ಅವನೆದೆ ಹಿತವಾಗಿ ಕಂಪಿಸಿತು. ಇನ್ನು ತಡಮಾಡಕೂಡದು, ತನ್ನೆದೆಯ ಭಾವನೆಗಳನ್ನಲ್ಲ ಇಳಾಳ ಮುಂದೆ ಹೇಳಿಬಿಡಬೇಕು, ತನ್ನೊಲುಮೆಯನ್ನು ಒಪ್ಪಿಕೊಳ್ಳುವಂತೆ ಅವಳನ್ನೇ ಕೇಳಿಬಿಡಬೇಕೆಂದು ನಿರ್ಧರಿಸಿ-
‘ಇಳಾ, ಮುಂದಿನ ನಿಮ್ಮ ಬದುಕಿನ ಕನಸು ಹೇಗಿರಬೇಕು ಅಂತ ಅಂದು ಕೊಂಡಿದ್ದೀರಾ. ಅಂದ್ರೆ ನಿಮ್ಮನ್ನ ಮದುವೆಯಾಗುವಾತ ಹೇಗಿರಬೇಕು? ಯಾರಾಗಬಹುದು ಅಂತ ಆಲೋಚನೆ ಮಾಡಿದ್ದೀರಾ?’ ಪೀಠಿಕೆ ಹಾಕಿದ.
ಆ ಮಾತು ಕೇಳಿ ವಿಸ್ಮಯನ ನೆನಪಿನಿಂದ ಕೆಂಪಾದಳು. ಏನಂತ ಹೇಳುವುದು, ತಾನು ವಿಸ್ಮಯನ ಪ್ರೇಮದ ಬಲೆಯಲ್ಲಿ ಬಿದ್ದಿದ್ದೇನೆಂದೇ, ವಿಸ್ಮಯ್ ನನ್ನನ್ನು ಉತ್ಕಟವಾಗಿ ಪ್ರೀತಿಸುತ್ತಿದ್ದಾನೆಂದೇ, ಅವನ ಆರಾಧನೆಯನ್ನು ಹೇಗೆಂದು ಬಣ್ಣಿಸಲಿ- ಮೌನವಾದಳು.
ಅವಳಿಂದ ಯಾವ ಉತ್ತರವೂ ಸಿಗದಿದ್ದಾಗ ಅವಳೆಡೆ ನೋಡಿದನು. ಕನಸುಗಣ್ಣಿನಲ್ಲಿ ಯಾವುದೊ ಹೊಳಪು ನಕ್ಷತ್ರದಂತೆ ಹೊಳೆಯುತ್ತಿದೆ. ಅರೆಬಿರಿದ ತುಟಿಗಳಲ್ಲಿ ನೂರು ಮಾತುಗಳಿವೆ.
ಮೊಗ ಕೆಂದಾವರೆಯಾಗಿದೆ, ಇಡೀ ತನು ನಸು ಕಂಪಿಸುತ್ತಿದೆ. ಏನಿದು ಇಳಾಳ ಹೊಸ ಪರಿ- ವಿಚಿತ್ರವೆನಿಸಿತು. ಬೇರೆಯೇ ಲೋಕಕ್ಕೆ ಸೇರಿದ ಅಲೌಕಿಕ ಭಾವದ ಪ್ರತಿಮೆಯಂತೆ ಕುಳಿತೇ ಇದ್ದಾಳೆ.
‘ಇಳಾ, ಯಾವ ಲೋಕದಲ್ಲಿದ್ದೀಯಾ?’ ನಿವಾಸನ ದ್ವನಿ ಎಚ್ಚರಿಸಿದಾಗ ವಿಸ್ಮಯನ ನೆನಪಿನಿಂದ ಈಚೆ ಬಂದು ‘ಹೇಳಿ ಸಾರ್’ ಎಂದಳು.
‘ಇಷ್ಟು ವರ್ಷ ನಮ್ಮ ಮನೆಯ ದುರಂತಗಳಿಂದಾಗಿ ನನಗೆ ಬೇರೆ ಯಾವ ಕಡೆಯೂ ಮನಸ್ಸು ಹೊರಳಿರಲಿಲ್ಲ. ಅಕ್ಕನ ಸಾವು ನನಗೆ ಆಘಾತ ತಂದಿತ್ತು. ಅದಕ್ಕಿಂತ ದೊಡ್ಡ ಆಘಾತ ಅಮ್ಮನ ಸಾವು. ಅಮ್ಮನನ್ನು ನಾನು ತುಂಬಾ ಹಚ್ಚಿಕೊಂಡಿದ್ದೆ. ಅಮ್ಮನಿಲ್ಲದ ಬಾಳು ನನ್ನ ಕಲ್ಪನೆಯಲ್ಲಿಯೇ ಇರಲಿಲ್ಲ. ಅಪ್ಪನಿಂದ ಮಾನಸಿಕವಾಗಿ ಅಮ್ಮ ತುಂಬಾ ನೊಂದಿದ್ದಳು. ಅಮ್ಮನನ್ನು ಸುಖವಾಗಿಟ್ಟುಕೊಳ್ಳಬೇಕು. ಹಾಗೆ ಸುಖವಾಗಿಟ್ಟುಕೊಳ್ಳಬೇಕಾದರೆ ನಾನು ಚೆನ್ನಾಗಿ ಓದಿ ಒಳ್ಳೆ ಕೆಲಸ ಸಂಪಾದಿಸಬೇಕು ಎಂಬ ಹಠದಿಂದ ಚೆನ್ನಾಗಿ ಓದಿದೆ. ಎಂ.ಬಿ.ಎ. ಮುಗಿಸಿ ಒಳ್ಳೆ ಕೆಲಸವನ್ನು ಹಿಡಿದೆ. ನನ್ನ ಜೊತೆ ಬಾ ಎಂದು ಅಮ್ಮನಿಗೆ ಹೇಳಿದರೆ ಅಮ್ಮ ಅಪ್ಪನನ್ನು ಬಿಟ್ಟು ಬಂದಿರಲು ಒಪ್ಪಲೇ ಇಲ್ಲ. ಆ ದಿನಗಳಲ್ಲಿಯೇ ಅಕ್ಕ ಯಾರನ್ನೊ ಮೆಚ್ಚಿ ಮದುವೆಯಾಗುವುದಾಗಿ ಹಠ ಹಿಡಿದಳು. ಪ್ರೇಮ ವಿವಾಹಗಳೆಂದರೆ ಸಿಡಿದೇಳುತ್ತಿದ್ದ ಅಪ್ಪ ಅದೇ ಕಾರಣಕ್ಕಾಗಿ ಚಿಕ್ಕಪ್ಪನನ್ನು ದೂರ ಇಟ್ಟಿದ್ದರು. ಮಗಳು ಯಾವ ಕಾರಣಕ್ಕೂ ತಾನು ಮೆಚ್ಚಿದವನ ಜೊತೆ ಹೋಗಬಾರದೆಂದು ದಿಗ್ಬಂಧನ ಹೇರಿದರು. ಕೋಣೆಯಲ್ಲಿ ಕೂಡಿ ಹಾಕಿ ಬೇರೊಂದು ಮದುವೆ ಮಾಡುವ ಪ್ರಯತ್ನ ನಡೆಸಿರುವಾಗಲೇ ಅಕ್ಕ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಳು. ಅಕ್ಕನ ಸಾವು ಅಮ್ಮನಿಗೆ ದೊಡ್ಡ ಆಘಾತವುಂಟಾಗಿ ಅದೇ ಕೊರಗಿನಲ್ಲಿ ಸಾವು ತಂದುಕೊಂಡಳು. ಅಪ್ಪನಿಗೆ ಹುಚ್ಚು ಹಿಡಿಯಿತು. ಈ ಎಲ್ಲಾ ಪ್ರಕರಣಗಳಿಂದ ನನ್ನೆದೆಯ ಎಲ್ಲಾ ಮಧುರ ಭಾವಗಳು ಸತ್ತುಹೋದವು.
‘ಆದರೆ ಚಿಕ್ಕಮ್ಮ ಸಿಕ್ಕಿದ್ದು, ಅವಳು ನನ್ನನ್ನು ಕ್ಷಮಿಸಿದ್ದು ನನ್ನೆದೆಯ ಭಾರವನ್ನೆಲ್ಲ ಕಡಿಮೆ ಮಾಡಿವೆ. ಅದೇ ಹಗುರ ಭಾವದಲ್ಲಿ ಹೊಸ ಕನಸು ಸೃಷ್ಟಿಯಾಗಿದೆ. ಆ ಕನಸಿನ ದೋಣಿಯಲ್ಲಿ ತೇಲ್ತಾ ಇದ್ದೀನಿ, ನನ್ನ ಕನಸು ನನಸಾಗುವುದೇ?… ‘ನಿವಾಸ್ ಹೇಳುತ್ತಲೇ ಇದ್ದಾನೆ. ಅವನ ಹೊಸ ಕನಸಿನ ಕಲ್ಪನೆ ಇಲ್ಲದ ಇಳಾ ಅವನ ಮಾತುಗಳನ್ನೆ ತದೇಕಚಿತ್ತಳಾಗಿ ಕೇಳುತ್ತ ಕುತೂಹಲಗೊಂಡಿದ್ದಾಳೆ.
‘ನನ್ನ ಕನಸು ಯಾವುದು ಗೊತ್ತಾ ಇಳಾ? ನನ್ನ ಕನಸುಗಳಿಗೆ ಸಾಕಾರ ಕೊಡುವ, ನನ್ನ ಮನಸ್ಸಿಗೆ ಹಿತನೀಡುವ, ನನ್ನೆಲ್ಲ ಕೆಲಸಗಳಲ್ಲೂ ಸಹವರ್ತಿಯಾಗಿ ನಿಂತು ಪ್ರೋತ್ಸಾಹ ನೀಡುವ, ನನ್ನದೇ ಕ್ಷೇತ್ರದ ಬಗ್ಗೆ ಆಸಕ್ತಿ ತೋರುವ, ಅಭಿರುಚಿ ಬೆಳೆಸಿಕೊಂಡಿರುವ ಹುಡುಗಿಯನ್ನು ಮದುವೆಯಾಗಿ ಬದುಕಿನ ನಂದನವನದಲ್ಲಿ ವಿಹರಿಸುವುದು…’ ಕನಸು ಕಾಣುತ್ತಿರುವ ದನಿಯಲ್ಲಿ ನುಡಿದ.
‘ತುಂಬಾ ಒಳ್ಳೆ ನಿರ್ಧಾರ ಸರ್, ಒಂಟಿಯಾಗಿಯೇ ಬದುಕುತ್ತಿರುವ ನೀವು ಮದುವೆ ಆಗಬೇಕು. ಆಗಲೇ ಬದುಕಿಗೊಂದು ಅರ್ಥ, ನಿಮಗಾಗಿ ಜೀವವೊಂದು ಮಿಡಿಯುತ್ತಿದೆ, ಆ ಜೀವ ತಾನಾಗಿಯೇ ಬದುಕುತ್ತಿದೆ ಎಂದಾಗ ಬದುಕು ಸಾರ್ಥಕತೆ ಕಾಣುತ್ತದೆ. ಬೇಗ ಮದುವೆ ಆಗಿ ಬಿಡಿ ಸಾರ್’ ಅವನ ನಿರ್ಧಾರವನ್ನು ಬೆಂಬಲಿಸಿದಳು. ಅವಳ ಮಾತುಗಳಿಂದ ಅವನ ಹೃದಯ ಅರಳಿತು.
‘ಇಳಾ, ಆ ಸಂಗಾತಿ ನೀವೇ ಆಗ್ತೀರಾ’ ದನಿಯಲ್ಲಿ ಪ್ರೀತಿಯ ಜಲಪಾತವೇ ಧುಮ್ಮಿಕ್ಕುತ್ತಿತ್ತು. ಒಲುಮೆಯ ಹೊಳೆಯಲ್ಲಿ ತೇಲುತ್ತ ಇಳಾಳನ್ನೆ ನೋಡುತ್ತ ಕೇಳಿದನು. ಅವನ ಮಾತು ಕೇಳಿ ಬೆಚ್ಚಿದಳು. ಶಿಲೆಯಂತೆ ನಿಂತುಬಿಟ್ಟಳು. ನಿವಾಸನೇ ಹೀಗೆ ಕೇಳುತ್ತಿರುವುದು! ಇವನಿಗೆ ನನ್ನ ಮೇಲೆ ಪ್ರೀತಿ ಇದೆಯೇ? ಇದೇನಾಗಿ ಹೋಯ್ತು. ತನ್ನೊಂದಿಗಿನ ಯಾವ ಗಳಿಗೆಯಲ್ಲೂ ಈ ಭಾವ ವ್ಯಕ್ತಪಡಿಸದ ನಿವಾಸ್ ಮನದಲ್ಲಿ ಈ ಭಾವ ಗುಪ್ತಗಾಮಿನಿಯಂತಿತ್ತೆ? ಆ ಭಾವದ ಸೂಚನೆಯೂ ಒಂದು ಬಾರಿಯು ವ್ಯಕ್ತವಾಗಿರಲಿಲ್ಲ. ನಿವಾಸ್ ತನ್ನನ್ನು ಪ್ರೀತಿಸುವುದೆ? ಅಂತಹ ಕಲ್ಪನೆ ಕೂಡ ಅಸಾಧ್ಯವೆನಿಸಿತು. ಹೀಗೆ ನಮ್ಮ ಮನೆಗೆ ಬಂದಾಗ ನಿವಾಸ್ ಈ ಭಾವ ವ್ಯಕ್ತಪಡಿಸಿದ್ದು ಯಾಕೊ ಸೂಕ್ತವೆನಿಸಲಿಲ್ಲ. ನಿವಾಸ್ ಬಗ್ಗೆ ಆದರವಿದೆ, ಸ್ನೇಹವಿದೆ, ಎಲ್ಲದಕ್ಕಿಂತ ಹೆಚ್ಚಾಗಿ ಗೌರವವಿದೆ, ಆತ್ಮೀಯತೆ ಇದೆ. ಅದು ಬಿಟ್ಟರೆ ತನ್ನಲ್ಲಿ ಮತ್ತಾವ ಭಾವವೂ ಇಲ್ಲ. ವಿಸ್ಮಯ್ ಬಗ್ಗೆಯೂ ಹಾಗೆ ಇತ್ತಲ್ಲವೆ? ಆದರೆ ಹೃದಯದ ಜಾಗ ಖಾಲಿಯಾಗಿದ್ದು, ವಿಸ್ಮಯನ ಪ್ರೀತಿಗೆ ಮನಸ್ಸು ಓಗುಟ್ಟಿತ್ತು. ಅದರೀಗ ನಿವಾಸನಿಗೆ ಏನು ಹೇಳುವುದು, ಒಂದು ವೇಳೆ ನಿವಾಸನೇ ವಿನ್ಮಯನಿಗಿಂತ ಮುಂಚೆ ತನ್ನ ಪ್ರೇಮವನ್ನು ಅರುಹಿದ್ದರೆ, ಈ ಮನಸ್ಸು ಒಪ್ಪುತ್ತಿತ್ತೆ…? ಯೋಚಿಸಿ ಗೊಂದಲಕ್ಕೊಳಗಾದಳು.
ಅವಳ ಮೌನ, ತಗ್ಗೆಸಿದ ತಲೆ, ನಿರ್ಭಾವದ ಮೋರೆ ಆ ಗಳಿಗೆಯಲ್ಲಿ ಅಪ್ರಸ್ತುತ ಎನಿಸಿ, ವಿವ್ಹಲಕ್ಕೊಳಗಾದನು.
‘ಸಾರ್, ನಿಮಗೆ ಹೇಗೆ ಹೇಳಬೇಕೊ ಅಂತ ತಿಳಿತಾ ಇಲ್ಲ, ನೆನ್ನೆವರೆಗೂ ಈ ಹೃದಯ ಖಾಲಿ ಹಾಳೆಯಂತಿತ್ತು. ನಾನು ಯಾರ ಬಗ್ಗೆಯೂ ಚಿಂತಿಸಿದವಳಲ್ಲ, ಯಾರನ್ನು ಪ್ರೀತಿ ದೃಷ್ಟಿಯಿಂದ ನೋಡಿದವಳಲ್ಲ. ಮದುವೆ ಈ ಸಮಾಜದಲ್ಲಿ ಅನಿವಾರ್ಯ ಅಂತ ಗೊತ್ತಿತ್ತು. ಹಾಗೆಂದೇ ಮದುವೆಯಾಗುವುದೇ ಆದರೆ ನನ್ನದೇ ಮನಸ್ಸು ಉಳ್ಳ, ನನ್ನ ಭಾವನೆಗಳಿಗೆ ಬೆಲೆ ಕೊಡುವ ವ್ಯಕ್ತಿ ಸಿಕ್ಕರೆ ಆಗಲಿ ಎಂದುಕೊಂಡಿದ್ದೆ. ಅಂತಹ ವ್ಯಕ್ತಿ ನೆನ್ನೆ ತನ್ನ ಮನದ ಭಾವಗಳನ್ನು ಹೇಳಿಕೊಂಡು ಖಾಲಿ ಆಗಿದ್ದ ಈ ಹೃದಯದ ಹಾಳೆ ಮೇಲೆ ತನ್ನ ಹೆಸರು ಬರೆದುಬಿಟ್ಟ. ಒಂದೇ ಒಂದು ದಿನ ನೀವು ತಡ ಮಾಡಿಬಿಟ್ಟಿರಿ, ಈಗಾಗಲೇ ಈ ಹೃದಯ ಮನಸ್ಸು ವಿಸ್ಮಯನ ಸೊತ್ತಾಗಿ ಹೋಗಿದೆ. ನಾನು ಅವನ ಪ್ರೇಮವನ್ನು ಒಪ್ಪಿಕೊಂಡು ಅವನಿಗೆ ಆಶ್ವಾಸನೆ ಕೊಟ್ಟುಬಿಟ್ಟಿದ್ದೇನೆ. ನನ್ನದೆ ಕೂಡ ಒಲವಿನ ಪಲ್ಲವಿಯನ್ನು ಹಾಡುತ್ತಿದೆ. ಅವನನ್ನು ನನ್ನವನು ಎಂದು ಒಪ್ಪಿಕೊಂಡುಬಿಟ್ಟಿದ್ದೇನೆ. ದಯವಿಟ್ಟು ಕ್ಷಮಿಸಿ.’
ನಿಜವನ್ನು ಅರುಹಿ ತನ್ನದೆಯ ಗೊಂದಲವನ್ನು ಕೊಡವಿಕೊಂಡು ಬಿಟ್ಟಳು. ಅವನ ಪ್ರತಿಕ್ರಿಯೆ ನೋಡುವ ಧೈರ್ಯವಿಲ್ಲದೆ ಮೆಲ್ಲನೆ ಎದ್ದು ಬಂದು ಬಿಟ್ಟಳು. ಪಾತಾಳಕ್ಕೆ ತಳ್ಳಿದಂತಾಗಿ, ಕುಸಿದು ಹೋದನು. ಶೂನ್ಯಭಾವ ಆವರಿಸಿತು. ಅವಳಿಲ್ಲದಿದ್ದರೆ ಬದುಕಿನಲ್ಲಿ ಅರ್ಥವಿಲ್ಲ ಎನಿಸಿ, ತಾನು ಹೇಗೆ ಈ ಪ್ರೀತಿಯ ಸುಳಿಯಲ್ಲಿ ಸಿಲುಕಿದೆ-ಎಂದು ತನ್ನೊಳಗನ್ನು ಹುಡುಕ ತೊಡಗಿದ. ಎಂತಹ ವಿಪರ್ಯಾಸ ಸ್ಥಿತಿ ಇದು! ಒಂದು ಅದೃಷ್ಟವನ್ನು ನಾನೇ ದೂರಮಾಡಿಕೊಂಡೆ, ಮತ್ತೊಂದು ಅದೃಷ್ಟವನ್ನು ಹುಡುಕಿ ಹಿಡಿಯಲು ಹೋದರೆ, ಆ ಅದೃಷ್ಟವೇ ತನ್ನಿಂದ ದೂರ ಹೋಗುತ್ತಿದೆ. ಒಂದು ಪ್ರೀತಿ ಹುಡುಕಿ ಬಂದಾಗ ಅರ್ಥಮಾಡಿಕೊಳ್ಳದೆ ತಳ್ಳಿದೆ. ಆ ಪ್ರೀತಿಗೆ ಅದೆಂತ ಆಫಾತವಾಗಿರಬಹುದು? ಅದೇ ಆಘಾತ ತನಗಿಂದು ಉಂಟಾಗಿದೆ. ಬದುಕು ಚಕ್ರವಲ್ಲವೆ? ಅಂದು ಮೇಲಿದ್ದೆ… ಇಂದು ಕೆಳಗಿದ್ದೇನೆ… ವಿಷಾದದಿಂದ ನಕ್ಕನು.
ಯಾರಿಗೆ ಯಾರೂ ಅನಿವಾರ್ಯವಲ್ಲ, ವಿಧಿ ಬರಹಕ್ಕೆ ಬದ್ದರಾಗಿರಲೇಬೇಕು. ತಾನು ಬಯಸಿದ ಪ್ರೀತಿ ತನಗೆ ಸಿಗಲಿಲ್ಲವೆಂದ ಮಾತ್ರಕ್ಕೆ ತಾನೇಕೆ ನೊಂದುಕೊಳ್ಳಬೇಕು? ಬಯಸಿದ ಪ್ರೀತಿ ಪಡೆವ ಅದೃಷ್ಟವಿಲ್ಲ ಅಷ್ಟೆ. ಬಯಸಿದ್ದಲ್ಲವೂ ಕೈಗೆ ಎಟುಕಲೇಬೇಕೆಂದರೆ ಹೇಗೆ? ನಮ್ಮಾಸೆಯಂತೆ ನಡೆಯದಿರುವುದೇ ಜೀವನ? ತಾನು ಕುಗ್ಗಬಾರದು- ಈ ನಿರಾಶೆ ನನ್ನನ್ನು ಸೋಲಿಸಬಾರದು, ನನ್ನ ಬದುಕಿಗೊಂದು ಧ್ಯೇಯವಿದೆ, ಗುರಿ ಇದೆ. ಆ ಗುರಿ ಸಾಧನೆಯಲ್ಲಿ ಈ ನಿರಾಶೆ ಮರೆಯಬೇಕು. ಈಗಾಗಲೇ ಇಳಾ ತನ್ನ ಪ್ರತಿಕ್ರಿಯೆಗಾಗಿ ಕಾಯುತ್ತಿರುತ್ತಾಳೆ. ನಾನು ನೊಂದುಕೊಂಡರೆ ಅವಳು ನೋಯುತ್ತಾಳೆ. ಹೂ ಮನದ ಹುಡುಗಿಗೆ ಯಾವುದೇ ಗಾಯವಾಗಬಾರದು. ಅವಳು ಸದಾ ನಗುತ್ತಿರಬೇಕು. ಅವಳ ಬದುಕು ಹೊನ್ನಾಗಬೇಕು, ಅವಳು ನಡೆವ ಹಾದಿಯಲ್ಲಿ ಹೂ ಹಾಸಿರಬೇಕು. ಕಲ್ಲುಮುಳ್ಳು ಅವಳನ್ನು ಘಾಸಿಗೊಳಿಸಬಾರದು. ಅವಳ ನಿರಾಕರಣೆ ನನ್ನಲ್ಲಿ ಯಾವ ಗಾಯವೂ ಆಗಿಲ್ಲ ಎಂದು ನಾನು ತೋರಿಸಿಕೊಳ್ಳಲೇಬೇಕು. ನನ್ನ ಗೆಲುವಿನ ನಡೆನುಡಿ ಅವಳಿಗೆ ಸಮಾಧಾನ ತರಿಸಬೇಕು ಎಂದು ನಿರ್ಧರಿಸಿಕೊಂಡವನೇ ಎದ್ದು ಇಳಾ ಹೋದ ಹಾದಿಯಲ್ಲಿ ಹೆಜ್ಜೆ ಹಾಕಿದ.
ಕೊಂಚ ದೂರದಲ್ಲಿ ಇಳಾ ನಿಂತುಕೊಂಡಿದ್ದಾಳೆ. ಸಾಕಷ್ಟು ಯೋಚನೆ ಅವಳನ್ನು ಘಾಸಿಗೊಳಿಸಿದೆ ಎಂದು ಅವಳ ಮೊರೆಯೇ ಹೇಳುತ್ತಿದೆ. ತಪ್ಪಿತಸ್ಥ ಭಾವದಿಂದ ಬಳಲಿ ಹೋಗಿದ್ದಾಳೆ. ಹತ್ತಿರ ಬಂದ ನಿವಾಸ್-
‘ಅರೆ, ಇಲ್ಲೆ ಇದ್ದೀರಾ, ನಾನು ಮನೆಗೆ ಹೋಗಿರಬಹುದು ಅಂತ ಅಂದುಕೊಂಡಿದ್ದೆ. ನನಗಾಗಿ ಇಲ್ಲೇ ಕಾಯುತ್ತಿದ್ದೀರಾ, ನಡೆಯಿರಿ ಹೋಗೋಣ’ ನಿರ್ಭಾವದಿಂದ ನಿವಾಸ್ ಹೇಳುತ್ತಿದ್ದರೆ, ಅವನ ಮುಖದಲ್ಲೇನಾದರೂ ಹತಾಶೆಯ ಭಾವ ಕಾಣುತ್ತಿದೆಯೇ ಎಂದು ಇಳಾ ಹುಡುಕಿದಳು.
‘ಇಳಾ, ಯಾವುದೇ ತಪ್ಪಿತಸ್ಥ ಭಾವನೆ ನಿನಗೆ ಬೇಡ, ನಿನ್ನ ಆಯ್ಕೆಯನ್ನು ನಾನು ಸ್ವೀಕರಿಸಿದ್ದೇನೆ, ವಿಸ್ಮಯ್ ತುಂಬಾ ಅದೃಷ್ಟವಂತ, ಹಾಗಂತ ನನಗೆ ಬೇಸರವೇ ಅಗಲಿಲ್ಲವೇ ಅಂದುಕೊಳ್ಳಬೇಡ. ದುರಂತಗಳನ್ನೆ ನೋಡಿ ಬದುಕುತ್ತಿರುವ ನನಗೆ ನಿನ್ನ ನಿರಾಕರಣೆಯಿಂದ ಕೊಂಚ ನೋವಾದರೂ ಸಹಿಸುವ ಶಕ್ತಿ ಈ ಹೃದಯಕ್ಕೆ ಇದೆ. ಇಲ್ಲಿಗೆ ಈ ಪ್ರಕರಣವನ್ನು ಮರೆತುಬಿಡೋಣ, ನಾನು ನಿನ್ನ ಪ್ರೇಮವನ್ನು ಬಯಸಿದ್ದೆ ಎಂಬ ಸತ್ಯ ನಮ್ಮಿಬ್ಬರ ಮಧ್ಯೆಯೇ ಕರಗಿ ಹೋಗಿಬಿಡಲಿ, ಅದು ನಿನ್ನ ಮುಂದಿನ ಬಾಳಿನಲ್ಲಿ ಮುಳ್ಳಾಗಿ ಕಾಡದಿರಲಿ, ನಮ್ಮ ಮುಂದಿನ ಸ್ನೇಹ ವಿಶ್ವಾಸಕ್ಕೆ ಅಡ್ಡಿಯಾಗದಿರಲಿ, ನಾವು ಮೊದಲಿನಂತೆಯೇ ಗೆಳೆಯರಾಗಿ ಉಳಿಯೋಣ, ನಮ್ಮ ಸ್ನೇಹಕ್ಕೆ ಯಾವುದೇ ಅಡ್ಡಿ ಬಾರದಿರಲಿ, ಸ್ನೇಹ ಈಗ ನೆಂಟಸ್ತಿಕೆಯಲ್ಲಿ ನಿಂತಿದೆ. ಮುಂದೆ ಸದಾ ನಾವು ಒಬ್ಬರನೊಬ್ಬರು ಸಂಧಿಸಲೇಬೇಕಾಗುತ್ತದೆ. ಆಗ ಈ ನೆನಪು ನಮ್ಮಿಬ್ಬರನ್ನು ಚುಚ್ಚಬಾರದು. ನೀನು ಯಾವತ್ತಿಗೂ ನನ್ನ ಅಭಿಮಾನದ ಹುಡುಗಿಯೇ…’ ಆತ್ಮೀಯವಾಗಿ ಹೇಳಿ ಇಳಾಳ ಮುಜುಗರವನ್ನು ತೊಡೆದು ಹಾಕಿದ.
ಮತ್ತೂ ಪೆಚ್ಚಾಗಿಯೇ ಇರುವ ಇಳಾಳನ್ನು ನೋಡಿ ‘ಇಳಾ, ನೀನು ನನ್ನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ ಅಂತ ಸನ್ಯಾಸಿಯಂತೆ ಮೀಸೆ ಗಡ್ಡ ಬಿಟ್ಟುಕೊಂಡು ದೇವದಾಸನಂತೆ ಆಡಲಾರೆ. ಆದಷ್ಟು ಬೇಗ ನನಗೊಂದು ಹುಡುಗಿಯನ್ನು ಹುಡುಕಿ ಮದುವೆಯಾಗುತ್ತೇನೆ. ಈಗ ಸಮಾಧಾನ ಆಯಿತಾ?’ ಎಂದಾಗ ಚಿಂತೆಯ ಕಾರ್ಮೋಡ ಕರಗಿದಂತಾಗಿ ಹಿತವಾಗಿ ನಕ್ಕಳು.
‘ವೆರಿಗುಡ್, ನೀವು ಹೀಗೆ ಸದಾ ನಗ್ತಾ ಇರಬೇಕು. ಈ ನಗು ಶಾಶ್ವತವಾಗಿ ನಿಮ್ಮ ಬಾಳಿನಲ್ಲಿ ಇರಬೇಕು ಎಂದೇ ಈ ಗೆಳೆಯ ಸದಾ ಹಾರೈಸುತ್ತಾನೆ’ ಅವಳ ತಲೆ ಸವರಿ ನುಡಿದ. ಮನದೊಳಗಿನ ದುಗುಡಗಳೆಲ್ಲ ಕಳೆದುಕೊಂಡು ನಿರಾಳ ಮನಸ್ಸಿನಿಂದ ಇಬ್ಬರೂ ಮನೆಗೆ ಬಂದರು.
ನೀಲಾ ಶಾಲೆಗೆ ಹೋಗದೆ ಇವರಿಗಾಗಿಯೇ ಕಾಯುತ್ತ ಕುಳಿತುಕೊಂಡಿದ್ದಳು. ನಿವಾಸ್ ಹೋಗುವ ಮೊದಲು ಅವನ ಮನದಲ್ಲಿ ಇಳಾಳ ಬಗ್ಗೆ ಇರುವ ಆಸಕ್ತಿ ಎಂತಹುದು ಎಂದು ಕೇಳುವ ತವಕದಲ್ಲಿದ್ದಳು.
‘ಚಿಕ್ಕಮ್ಮ, ಹೊರಡಿ ಇವತ್ತು ನಮ್ಮೂರಿನಲ್ಲಿದ್ದು ನಾಳೆ ಅಣ್ಣನ ಮನೆಗೆ ಹೋಗೋಣ’ ಅಂಬುಜಮ್ಮನನ್ನು ಹೊರಡಲು ಆಗ್ರಹಿಸಿದನು. ಅಂಬುಜಮ್ಮ ಬಿಸಿ ಬಿಸಿ ಬೋಂಡ ತಂದಿಡುತ್ತ ‘ಹೋಗೋಣ, ನಿನ್ನ ಜೊತೆ ಸ್ವಲ್ಪ ಮಾತಾಡಬೇಕು’ ಅವನ ಪಕ್ಕ ಕುಳಿತುಕೊಳ್ಳುತ್ತ ಹೇಳಿದರು.
‘ಏನು ಚಿಕಮ್ಮ, ಮತ್ತೇ ಆ ಹಣ ಬೇಡ ಅಂತ ಹೇಳಿ ನನ್ನನ್ನು ಇಕಟ್ಟಿಗೆ ಸಿಕ್ಕಿಸಬೇಡಿ, ಅಣ್ಣನಿಗೆ ಈ ಹಣದ ಅಗತ್ಯ ಖಂಡಿತಾ ಇರುತ್ತದೆ. ಮೊದಲು ನೀವು ಹೊರಡಿ’ ಒತ್ತಾಯಿಸಿದ.
‘ಆ ವಿಚಾರ ಅಲ್ಲಪ್ಪ ನಾನು ಕೇಳ್ತ ಇರೋದು, ನೀನಿನ್ನೂ ಮದ್ವೆ ಆಗಿಲ್ಲ ಯಾಕೆ? ಹಿರಿಯವಳಾಗಿ ನಾನು ಆ ಜವಾಬ್ದಾರಿ ತಗೋಬೇಕಲ್ಲಪ್ಪಾ’ ಆತ್ಮೀಯವಾಗಿ ಹೇಳುತ್ತಿದ್ದರೆ, ನಿವಾಸನ ಕಣ್ಣುಗಳು ಹನಿಗೂಡಿದವು.
‘ಚಿಕ್ಕಮ್ಮ ನಿಮ್ಮದೆಂತಹ ಹೃದಯ, ನಮ್ಮಪ್ಪ ಮಾಡಿದ ತಪ್ಪನ್ನು ಕ್ಷಮಿಸಿ, ಅವರ ಮಗನ ಒಳಿತಿಗಾಗಿ ಬಯಸುತ್ತ ಇದ್ದೀರಿ, ಇಷ್ಟು ದಿನ ನಂಗೆ ಅಮ್ಮ ಇಲ್ಲ ಅಂತ ಕೊರಗುತ್ತ ಇದ್ದ. ಆ ಕೊರತೆ ನೀವು ನೀಗಿಸಿಬಿಟ್ಟಿರಿ ಚಿಕ್ಕಮ್ಮ, ಇಷ್ಟು ದಿನ ಮದುವೆ ಆಗೋ ಆಲೋಚನೆ ಇರಲಿಲ್ಲ. ಆದ್ರೆ ಈಗ ನೀವು ನೋಡಿದ ಹುಡುಗಿನೇ ಮದ್ವೆ ಆಗ್ತೀನಿ, ನಿಮ್ಗೆ ಎಂತಹ ಸೊಸೆ ಬೇಕು ಅಂತ ನೀವೇ ಆರಿಸಿಬಿಡಿ ಚಿಕ್ಕಮ್ಮ’ ಎಂದಾಗ ಸಂತೋಷದಿಂದ ಬಿರಿದರು ಅಂಬುಜಮ್ಮ.
‘ಆಯ್ಯೋ ನನ್ನ ರಾಜ, ಎಂತ ಮುತ್ತಿನಂತ ಮಾತಾಡಿದೆಯಪ್ಪ. ಹಿರಿಯರನ್ನು ಕಂಡರೆ ಅದೆಷ್ಟು ಗೌರವ ನಿಂಗೆ. ನಾನು ಹೇಳಿದ ಹುಡುಗಿನಾ ಮದ್ವೆ ಆಗ್ತೀಯಾ, ಕೇಳಿದೆಯಾ ನೀಲಾ ನಮ್ಮ ನಿವಾಸ್ ಶುದ್ದ ಅಪರಂಜಿ, ಇಂತ ಅಪರಂಜಿನ ಬಿಟ್ಟವರುಂಟೇ’ ಸಡಗರಿಸಿದರು.
‘ನೋಡು ನಿವಾಸ್, ಈಗ ನೀನು ನಮ್ಮ ಭಾವನ ಮಗ, ನೀಲಾಗೆ ತಮ್ಮನಾಗಬೇಕು. ಅಂದ್ರೆ ಇಳಾಗೆ ಸೋದರಮಾವ, ಈ ಸಂಬಂಧನ ನಾವ್ಯಾಕೆ ಶಾಶ್ವತಗೊಳಿಸಬಾರದು. ಇಳಾನಾ ನೀನ್ಯಾಕೆ ಮದ್ವೆ ಆಗಬಾರದು’ ಉತ್ಸಾಹದಿಂದ ಹೇಳುತ್ತಿದ್ದರೆ ಕೊಂಚ ಮಂಕಾದ ನಿವಾಸ್, ತಕ್ಷಣವೇ ಚೇತರಿಸಿಕೊಂಡು.
‘ಅಯ್ಯೋ ಚಿಕ್ಕಮ್ಮ ಆ ಅದೃಷ್ಟ ನನಗೆಲ್ಲಿದೆ? ಇಳಾ ಆಗ್ಲೆ ತನ್ನ ರಾಜಕುಮಾರನ್ನ ಹುಡುಕಿಕೊಂಡಿದ್ದಾಳೆ’ ಹಾಗೆಂದ ಕೂಡಲೇ ಶಾಕ್‌ಗೆ ಒಳಗಾದ ನೀಲಾ- ನಮ್ಮ ಇಳಾ ಈಗಾಗಲೇ ಹುಡುಗನ್ನ ನೋಡಿಕೊಂಡಿದ್ದಾಳೆಯೇ!… ಆಘಾತಕ್ಕೊಳಗಾಗಿ ನಿರಾಶಯಿಂದ ಕುಗ್ಗಿದಳು.
‘ಹೌದು ಅಕ್ಕ, ನಿಮ್ಮ ಮಗಳು ಚೊಕ್ಕ ಚಿನ್ನ, ಚಿನ್ನದಂತಹ ಹುಡುಗನನ್ನ ಆರಿಸಿಕೊಂಡಿದ್ದಾಳೆ. ಅವಳು ಶಾಶ್ವತವಾಗಿ ನಿಮ್ಮ ಕಣ್ಣು ಮುಂದೆಯೇ ಇರುತ್ತಾಳೆ.’
‘ಯಾರಪ್ಪ ಆ ಹುಡುಗ’ ಆಳವಾದ ಸ್ವರದಲ್ಲಿ ಅಂಬುಜಮ್ಮ ಕೇಳಿದರು.
‘ಗೆಸ್ ಮಾಡಿ ನೋಡೋಣ…. ಸಾಧ್ಯವೇ ಇಲ್ಲ. ನೀವು ಗೆಸ್ ಮಾಡೊಕೆ’ ಆಟವಾಡಿಸಿದ.
ಇಳಾ ತಲೆ ತಗ್ಗಿಸಿ ಕುಳಿತುಬಿಟ್ಟಿದ್ದಳು. ನೀಲಾ, ಅಂಬುಜಮ್ಮ ಕಾತುರತೆಯಿಂದ ನಿವಾಸನನ್ನು ನೋಡಿದರು.
ಹೆಚ್ಚು ಸತಾಯಿಸದಂತೆ ‘ಈ ಮನೆಗೆ ಅಳಿಯನಾಗಿ ಬರುವ ಅದೃಷ್ಟವಂತ ವಿಸ್ಮಯ್’ ಎಂದು ಘೋಷಿಸಿಬಿಟ್ಟ.
‘ನಮ್ಮ ವಿಸ್ಮಯನೇ’ ಅಚ್ಚರಿ, ಆನಂದ, ಉದ್ವೇಗದಿಂದ ನೀಲಾ ಚೀರಿದಳು.
‘ಹೌದು ಅಮ್ಮ, ವಿಸ್ಮಯನೇ ಈ ವಿಚಾರ ನನಗೆ ತಿಳಿಸಿದ. ಎಲ್ಲಾ ರೀತಿಯಲ್ಲೂ ಯೋಗ್ಯವಾಗಿರುವ ವಿಸ್ಮಯನನ್ನು ನಿರಾಕರಿಸಲು ನನಗೆ ಕಾರಣವೇ ಸಿಗಲಿಲ್ಲ. ನಿನ್ನನ್ನು, ಈ ತೋಟವನ್ನು ಬಿಟ್ಟುಹೋಗುವುದು ಹೇಗೆ ಎಂಬ ಚಿಂತೆಯಲ್ಲಿದ್ದೆ. ಅದನ್ನು ನೆನೆಸಿಕೊಂಡಾಗಲೆಲ್ಲ ಮದುವೆಯೇ ಬೇಡವೆನಿಸುತ್ತಿತ್ತು- ವಿಸ್ಮಯನಂತ ಹೃದಯವಂತ ಗುಣವಂತ ಈ ಮನೆಗೆ ಅಳಿಯ ಆದರೆ ನಿನಗೂ ಸಂತೋಷವಾಗುತ್ತೆ ಅಂತ ಒಪ್ಪಿಕೊಂಡೆ’ ಮೆಲುದನಿಯಲ್ಲಿ ಇಳಾ ಹೇಳಿದಾಗ ನೀಲಾಗೆ ತುಂಬಾ ಸಂತೋಷವಾಯಿತು. ವಿಸ್ಮಯ್ ಚೊಕ್ಕ ಚಿನ್ನ ಎಂದು ಬಹು ಹತ್ತಿರದಿಂದ ನೋಡಿದ್ದಳು. ತನ್ನ ಮಗಳಿಗೆ ಅವನಿಗಿಂತ ಸರಿಯಾದ ಜೋಡಿ ಸಿಗಲಾರದು. ಅಂಬರದ ತಾರೆ ಕೈಗೆ ಎಟುಕಿದಂತಿದೆ. ಶ್ರೀಮಂತ ಸಹೃದಯಿ, ಸನ್ನಡತೆ ಎಲ್ಲವೂ ಮಿಳಿತವಾಗಿದ್ದ ಭವ್ಯ ವ್ಯಕ್ತಿತ್ವದ ವಿಸ್ಮಯ್ ತನ್ನ ಅಳಿಯ ಎಂದು ಊಹಿಸಿಯೇ ಸಂಭ್ರಮಗೊಂಡಳು. ನಿರಾಶೆಯಾಗಿದ್ದರೂ ಅಂಬುಜಮ್ಮ ಕೂಡ ವಿಸ್ಮಯನನ್ನು ಸಂತೋಷದಿಂದ ಒಪ್ಪಿಕೊಂಡರು. ಅಂತೂ ಈ ಮನೆಗೆ ಕವಿದಿದ್ದ ಗ್ರಹಣ ನಿಧಾನವಾಗಿ ಬಿಡುಗಡೆಗೊಂಡು ಹೊಸ ಬೆಳಕಿನ ಕಿರಣ ಪ್ರವೇಶಿಸತೊಡಗಿತ್ತು.
ಅಂಬುಜಮ್ಮ ನಿವಾಸನ ಜೊತೆ ಹೋಗಿ ಮಗನ ಕೈಗೆ ಅವನ ಹಕ್ಕಿನ ಹಣವನ್ನು ಒಪ್ಪಿಸಿ ಮತ್ತೆ ವಾಪಸ್ಸು ನೀಲಾಳ ಮನೆಗೆ ಬಂದುಬಿಟ್ಟರು. ಈ ಮನೆಯೇ ಅವರ ಮನೆಯಂತಾಗಿತ್ತು. ಸಾಯುವ ತನಕ ಇದೇ ಮನೆಯಲ್ಲಿರಲು ಅವರು ತೀರ್ಮಾನಿಸಿದ್ದರು. ಒಂದು ಒಳ್ಳೆಯ ದಿನ ನೋಡಿ ನೀಲಾ ತನ್ನ ಅಣ್ಣ ತಮ್ಮಂದಿರು ಭಾವ ಅತ್ತಿಗೆಯರನ್ನಲ್ಲ ಆಹ್ವಾನಿಸಿ, ಇಳಾಳ ಮದುವೆಯ ಮಾತುಕತೆ ನಡೆಸಿದಳು. ವಿಸ್ಮಯ್ ಕೂಡ ಅಗಮಿಸಿದ್ದ. ತನ್ನ ಮದುವೆ ಸರಳವಾಗಿ ನಡೆಯಬೇಕೆಂದು ಇಳಾ ಪಟ್ಟುಹಿಡಿದಳು. ವಿಸ್ಮಯನಿಗೂ ಇಳಾಳ ತೀರ್ಮಾನದ ಬಗ್ಗೆ ವಿರೋಧವಿರಲಿಲ್ಲ. ಆದರೆ ನೆಂಟರಿಸ್ಟರು ಆಡಿಕೊಂಡು ನಗುವಂತೆ ಆಗಬಾರದು ಮದುವೆ ಗ್ರಾಂಡಾಗಿಯೇ ಮಾಡೋಣವೆಂದು ದೊಡ್ಡಪ್ಪ, ಮಾವಂದಿರು ಹೇಳಿದಾಗ ಇಳಾ ಸ್ಪಷ್ಟವಾಗಿ ನಿರಾಕರಿಸಿಬಿಟ್ಟಳು. ಇಷ್ಟವಿಲ್ಲದಿದ್ದರೂ ಇಳಾಳ ಮನಸ್ಸನ್ನು ನೋಯಿಸಲಾರದೆ ಎಲ್ಲರೂ ಒಪ್ಪಿಕೊಂಡರು.
ಮನೆಯ ಹತ್ತಿರವೇ ನೂರಾರು ಜನರ ಸಮ್ಮುಖದಲ್ಲಿ ಇಳಾ, ವಿಸ್ಮಯನ ಮಡದಿ ಆದಳು. ಅಷ್ಟು ಸರಳವಾಗಿ ಮದುವೆ ನಡೆದದ್ದನ್ನು ಅಲ್ಲಿ ಯಾರೂ ನೋಡಿರಲಿಲ್ಲ. ಇಳಾ-ವಿಸ್ಮಯರ ಸುಂದರ ದಾಂಪತ್ಯ ಹಸಿರ ಸಿರಿಯ ಸೊಬಗಿನಲ್ಲಿ ಪ್ರಾರಂಭವಾಗಿತ್ತು. ಮರಗಳಿಂದ ಬೀಸುವ ತಂಗಾಳಿ ಅಲ್ಲಿ ಸುಯ್ಯತೊಡಗಿತು.
*****
ಮುಕ್ತಾಯ