ತಾಯೆ ನಿನ್ನ ಕಂದನಾದೆನಲ್ಲ ಎಂಥ ಪುಣ್ಯವೇ
ನಿನ್ನ ಅಮ್ಮನೆಂದು ಕರೆವ ಜೀವ ಏನು ಧನ್ಯವೇ!
ನಿನ್ನ ಪಾದ ತೊಳೆಯಲು ಕಾತರಿಸಿದೆ ಕಡಲು
ಕೋಟಿ ಕೋಟಿ ಜೀವಕೆ ರಕ್ಷೆ ನಿನ್ನ ಒಡಲು;
ಹಸಿರು ಮುರಿವ ಶಾಲಿವನದ ಸಾಲು ನಿನಗೆ ವಸ್ತ್ರ
ಅಂಬರದಲಿ ಮಿಂಚಿದೆ ನಿನ್ನ ಕೈಯ ಶಸ್ತ್ರ.
ರಾಮಕೃಷ್ಣರನ್ನು ತೊಡೆಯಲಾಡಿಸಿದಾ ಮಾತೆ
ವ್ಯಾಸ ಭಾಸ ಜನಕ ಕಾಳಿದಾಸ ಜನ್ಮದಾತೆ;
ರಾಮಾಯಣ ಭಾರತ ನೀನಾಡಿದ ಮಾತು
ಬೆರಗಿನಿಂದ ಆಲಿಸಿದೆ ಲೋಕ ಅದಕೆ ಸೋತು
ನಿನ್ನ ದಿವ್ಯರೂಪ ತೇಜ ಗಾಂಭೀರ್ಯದ ಭಾವ
ವಿಶ್ವದಲ್ಲೆ ಎಲ್ಲಿದೆ ಇಂಥ ಹಿರಿಯ ಜೀವ?
ಪ್ರೀತಿ ಸಹನೆ ಸ್ನೇಹದಲ್ಲಿ ಯಾರು ನಿನಗೆ ಸಮವೆ?
ಅದಕೆ ಕರಗಿ ಗಂಗೆಯಾಯ್ತು ಕೈಲಾಸದ ಹಿಮವೇ!
*****