ಸರಿದೀತೇ ಕಾರಿರುಳು
ಈ ದೇಶದ ಬಾಳಿಂದ?
ಸುರಿದೀತೇ ಹೂ ಬೆಳಕು
ಈ ಭೂಮಿಗೆ ಬಾನಿಂದ?
ಅಲುಗಾಡಿದ ಛಾವಣಿ ಮೇಲೆ
ಬಿರುಕಾಗಿವೆ ಗೋಡೆಗಳು,
ನಡುಗುತ್ತಿದೆ ಕಾಲಡಿ ನಲವೇ
ಗುಡುಗುತ್ತಿವೆ ಕಾರ್ಮುಗಿಲು,
ಕೆಳಸೋರಿದೆ ಮಳೆಧಾರೆಯು
ಹರಕಲು ಸೂರಿಂದ,
ಕೊನೆಯೆಂದಿಗೆ ಮನೆಮಂದಿಗೆ
ಈ ಎಲ್ಲ ಪಾಡಿನಿಂದ?
ಮತ ಜಾತಿಯ ಗಡಿ ಭಾಷೆಯ
ವಿಷ ಸೇರಿದ ನೀರಲ್ಲಿ,
ಅಧಿಕಾರದ ಹಣದಾಹದ
ಹುಸಿ ಊರಿದೆ ಬಾಳಲ್ಲಿ;
ಸುರಿದ ಕಸವ ತೊಳೆದು
ಹೊಗೆ ಧೂಪ ತಳಿಯುವ,
ಕುಸಿದಂಥ ಗಾಲಿ ಎತ್ತಿ
ರಥವನ್ನು ಎಳೆಯುವ.
ಈ ಎಲ್ಲವ ಗೆಲ್ಲುವ ಕೆಚ್ಚು
ಕಿಚ್ಚಾಗಿದೆ ಎದೆಯಲ್ಲಿ,
ತಾಯ್ನಾಡಿನ ಉಜ್ವಲ ಚಿತ್ತ
ಅಚ್ಚಾಗಿದೆ ಕಣ್ಣಲ್ಲಿ;
ಜಯಭಾರತ ಜಯಭಾರತ
ಕೋಟಿ ಕಂಠದಲ್ಲಿ
ಮೊಳಗುತ್ತಿದೆ ಬೆಳಗುತ್ತಿದೆ
ನೆಲ ಬಾನು ಜಲಗಳಲ್ಲಿ.
*****