ಸ್ಥಳೀಯತೆಯಿಂದ ಅಂತರ ರಾಷ್ಟ್ರೀಯತೆಗೆ…

ಸ್ಥಳೀಯತೆಯಿಂದ ಅಂತರ ರಾಷ್ಟ್ರೀಯತೆಗೆ…

(೨೦೧೩ರ ಆರಂಭದಲ್ಲಿ ನಡೆದ ಅಸ್ಸಾಮಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾಡಿದ ಆಂಗ್ಲ ಭಾಷಣದ ಕನ್ನಡ ರೂಪ)

ಮೊಟ್ಟ ಮೊದಲಿಗೆ, ನನ್ನನ್ನು ಆಹ್ವಾನಿಸಿದ ‘ಅಸ್ಸಾಂ ಸಾಹಿತ್ಯ ಸಭಾ’ದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅಂತೆಯೇ ನನ್ನ ಪ್ರಯಾಣವನ್ನು ಪ್ರಾಯೋಜಿಸಿದ ನ್ಯಾಷನಲ್ ಬುಕ್ ಟ್ರಸ್ಟ್ ಸಂಸ್ಥೆಯನ್ನು ನೆನೆಯುತ್ತೇನೆ. ಮುಖ್ಯವಾಗಿ ಅಸ್ಸಾಂ ಜನತೆಯ ಕಲಾಭಿರುಚಿ ಮತ್ತು ಪ್ರತಿಭಾ ವೈವಿಧ್ಯಕ್ಕೆ ನಮಿಸುತ್ತೇನೆ. ದಕ್ಷಿಣದ ಮೂಲೆಯಿಂದ ಬಂದು ಈಶಾನ್ಯದ ಅಸ್ಸಾಂ ಭೂಮಿಯಲ್ಲಿ ಸನ್ಮಾನ ಸ್ವೀಕರಿಸಿದ್ದು ನನಗೆ ತುಂಬಾ ಸಂತೋಷವನ್ನುಂಟು ಮಾಡಿದೆ. ಭೌಗೋಳಿಕ ಗಡಿಯನ್ನು ಮೀರಿದ ಅಸ್ಸಾಂ ಸಾಂಸ್ಕೃತಿಕ ಮನಸ್ಸು ಆದರ್ಶಪ್ರಾಯವಾಗಿದೆ. ಭೌಗೋಳಿಕ ಎಲ್ಲೆಯನ್ನು ಮೀರಿದ ಸೌಹಾರ್ದಯುತ ಸಾಂಸ್ಕೃತಿಕ ಪ್ರಕ್ರಿಯೆಯು ಎಲ್ಲ ರಾಜ್ಯಗಳ ಆದರ್ಶವಾಗಲಿ ಎಂದು ಹಾರೈಸುತ್ತೇನೆ.

೧೯೧೭ರಲ್ಲಿ ಸ್ಥಾಪಿತವಾದ ಅಸ್ಸಾಂ ಸಾಹಿತ್ಯ ಸಭಾದ ಚಟುವಟಿಕೆಗಳು ರಚನಾತ್ಮಕವಾಗಿವೆಯೆಂದು ಅರಿತಿದ್ದೇನೆ. ಜನಸಾಮಾನ್ಯರಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಯ ಆಸಕ್ತಿಯನ್ನು ಬೆಳೆಸುವುದರ ಜೊತೆಗೆ ವಿದ್ವತ್ಪೂರ್ಣ ಚರ್ಚೆ ಮತ್ತು ಪ್ರಕಟಣೆಗಳಿಗೂ ಮುಂದಾಗಿರುವುದರ ಮೂಲಕ ಅಸ್ಸಾಂ ಸಾಹಿತ್ಯ ಸಭಾ ಒಂದು ಉತ್ತಮ ಮಾದರಿಯನ್ನು ನಿರ್ಮಿಸುತ್ತಾ ಬಂದಿದೆ.

ಚಿಂತನಶೀಲರೂ ವಿದ್ವಜ್ಜನರೂ ಒಂದು ಕಡೆ, ಜನಸಾಮಾನ್ಯರು ಇನ್ನೊಂದು ಕಡೆ ಎನ್ನುವಂತಹ ಕಂದಕ ಹೆಚ್ಚಾಗುತ್ತಿರುವ ಇಂದಿನ ಸನ್ನಿವೇಶದಲ್ಲಿ ಕಂದಕವನ್ನು ಮುಚ್ಚುವ ಕೆಲಸ ಆಗಬೇಕಾಗಿದೆ. ಜನಸಾಮಾನ್ಯರು ಮತ್ತು ವಿದ್ವಜ್ಜನರ ನಡುವೆ ಸಾಂಸ್ಕೃತಿಕ ಸೇತುವನ್ನು ನಿರ್ಮಾಣ ಮಾಡಬೇಕಾದ ಜರೂರು ನಮ್ಮ ಮುಂದಿದೆ. ಇಲ್ಲದಿದ್ದರೆ ಸಂಸ್ಕೃತಿಯನ್ನು ಬದುಕುವ ಜನರು ಒಂದು ಕಡೆ, ಸಂಸ್ಕೃತಿಯನ್ನು ಬರೆಯುವ ಜನರು ಇನ್ನೊಂದು ಕಡೆ ಉಳಿದುಬಿಡುವ ಅಪಾಯ ಹೆಚ್ಚಾಗಲಿದೆ. ನನಗೆ ತೋಚಿದಂತೆ ನಮ್ಮ ದೇಶದಲ್ಲಿ ಈ ಅಪಾಯದ ಗುರುತುಗಳು ಸಾಕಷ್ಟು ಕಾಣಿಸುತ್ತಿವೆ. ಜನಸಾಮಾನ್ಯರಿಗೂ ತಮಗೂ ಸಂಬಂಧವೇ ಇಲ್ಲವೆಂಬಂತೆ ವಿಜೃಂಭಿಸುವ ವಿದ್ವತ್ ಪಡೆಗಳು ಸಂಸ್ಕೃತಿಯನ್ನು ಒಂದು ಲೋಲುಪತೆಯೆಂಬಂತೆ ಪರಿಭಾವಿಸಿದರೆ ಲಾಭ ಕೋರಪಡೆಗಳು ಸಂಸ್ಕೃತಿಯನ್ನು ಮಾರಾಟದ ಸರಕಿನಂತೆ ಕಾಣುತ್ತಿವೆ. ಸಾಂಸ್ಕೃತಿಕ ಲೋಲುಪತೆ ಎಷ್ಟು ಅಪಾಯಕಾರಿಯೋ ಅಷ್ಟೇ ಅಪಾಯಕಾರಿಯಾದುದು ಸಂಸ್ಕೃತಿಯನ್ನು ಸರಕು ಎಂದು ಭಾವಿಸುವ ಮನೋಧರ್ಮ, ಅಸ್ಸಾಂ ಸಾಹಿತ್ಯ ಸಭಾದ ಈ ಸಮಾವೇಶವು ಸಾಂಸ್ಕೃತಿಕ ಸಂಭ್ರಮ ಮತ್ತು ಸಾಂಸ್ಕೃತಿಕ ಅರಿವು – ಎರಡನ್ನೂ ಒಟ್ಟಿಗೇ ಸೇರಿಸಿ ಸಾಂಸ್ಕೃತಿಕ ಸೇತುವಾಗುವ ಒಂದು ಉದಾಹರಣೆ ಎಂದು ನಾನು ಭಾವಿಸುತ್ತೇನೆ. ನಾನು ಈ ಸಮಾವೇಶದಲ್ಲಿ ಸಂತೋಷ ದಿಂದ ಭಾಗವಹಿಸಲು ಇದೂ ಒಂದು ಕಾರಣವಾಗಿದೆ. ಸ್ಥಳೀಯ, ಭಾಷೆ, ಸಾಹಿತ್ಯ ಸಂಸ್ಕೃತಿ ಗಳನ್ನು ವಿಸ್ತರಿಸುವ ರಚನಾತ್ಮಕ ಪ್ರಯತ್ನಗಳು ಇಂದು ತೀರಾ ಅಗತ್ಯವಾಗಿವೆ. ಯಾಕೆಂದರೆ ಜಾಗತೀಕರಣದ ಪ್ರಭಾವದಲ್ಲಿ ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಗಳಿಗೆ ಹಿನ್ನೆಲೆಯುಂಟು ಮಾಡುವ ಪರಿಸ್ಥಿತಿ ಒಂದು ಕಡೆಗಿದ್ದರೆ, ಏಕಸಂಸ್ಕೃತಿ ಮತ್ತು ಏಕಧರ್ಮವೇ ಶ್ರೇಷ್ಠ, ಉಳಿದದ್ದೆಲ್ಲ ಕನಿಷ್ಠ ಎಂದು ಪ್ರತಿಪಾದಿಸುವ ಶಕ್ತಿಗಳೂ ಮುಂಚೂಣಿಗೆ ಬರುತ್ತಿವೆ. ಒಂದು ಕಡೆ ಆರ್ಥಿಕ ಏಕಮುಖತೆ, ಇನ್ನೊಂದು ಕಡೆ ಧಾರ್ಮಿಕ ಏಕಮುಖತೆ – ಎರಡೂ ಸೇರಿ ಭಾರತದ ಬಹುಮುಖತೆಗೆ ಧಕ್ಕೆ ತರುತ್ತಿವೆ.

ಭಾರತವು ಬಹುಭಾಷೆಗಳ ದೇಶ, ಬಹುಸಂಸ್ಕೃತಿಗಳ ದೇಶ, ಬಹುಧರ್ಮಗಳ ದೇಶ. ಬಹುರೂಪತೆಯೇ ಭಾರತೀಯತೆ ಎಂದು ನನ್ನ ಭಾವನೆ. ಪ್ರಾದೇಶಿಕತೆ ಮತ್ತು ರಾಷ್ಟ್ರೀಯತೆಗಳು ಪರಸ್ಪರ ವಿರುದ್ಧವಾಗದೆ ಬದುಕುವುದರಲ್ಲಿ ಭಾವೈಕ್ಯತೆಯ ಸತ್ವವಿದೆ. ರಾಷ್ಟ್ರೀಯತೆಯ ಹೆಸರಿನಲ್ಲಿ ಪ್ರಾದೇಶಿಕ ಭಾಷೆ-ಸಂಸ್ಕೃತಿಗಳನ್ನು ನಿರ್ಲಕ್ಷಿಸಬಾರದು. ಅಂತೆಯೇ ಪ್ರಾದೇಶಿಕತೆಯ ಹೆಸರಿನಲ್ಲಿ ರಾಷ್ಟ್ರೀಯತೆಯನ್ನು ಧಿಕ್ಕರಿಸಬಾರದು. ಹಾಗೆ ನೋಡಿದರೆ, ನಮ್ಮದು ಒಂದೇ ರಾಷ್ಟ್ರೀಯತೆಯ ದೇಶ ಅಲ್ಲ. ಬಹುರಾಷ್ಟ್ರೀಯತೆಗಳ ಒಕ್ಕೂಟವೇ ನಮ್ಮ ದೇಶ – ಎಂದು ನಾವು ಭಾವಿಸಬೇಕು. ಪ್ರಾದೇಶಿಕತೆಗೆ ಅಥವಾ ಸ್ಥಳೀಯತೆಗೆ ರಾಷ್ಟ್ರೀಯತೆಯ ಗೌರವ ಸಿಗಬೇಕು, ಅಂತೆಯೇ ರಾಷ್ಟ್ರೀಯತೆಗೆ ಪ್ರಾದೇಶಿಕತೆ ಅಥವಾ ಸ್ಥಳೀಯತೆಯು ವಿರುದ್ಧವಾಗದೆ ಗೌರವಿಸು ವಂತಾಗಬೇಕು. ಇದೇ ನಿಜವಾದ ಒಕ್ಕೂಟ ವ್ಯವಸ್ಥೆಯ ಆದರ್ಶ.

ಭಾಷೆ, ಸಂಸ್ಕೃತಿ, ಧರ್ಮಗಳಲ್ಲಿ ತಾರತಮ್ಯ ಉಂಟು ಮಾಡದೆ ಇದ್ದರೆ ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆಗಳು ಒಟ್ಟಿಗೇ ಭಾವೈಕ್ಯತೆಯಿಂದ ಬದುಕಲು ಸಾಧ್ಯ. ಆದ್ದರಿಂದ ನಮ್ಮ ದೇಶದ ಎಲ್ಲ ಭಾಷೆಗಳೂ ರಾಷ್ಟ್ರೀಯ ಭಾಷೆಗಳೆಂದು ಭಾವಿಸಬೇಕು; ಎಲ್ಲ ಸಂಸ್ಕೃತಿಗಳೂ ರಾಷ್ಟ್ರೀಯ ಸಂಸ್ಕೃತಿಗಳೆಂದು ತಿಳಿಯಬೇಕು; ಎಲ್ಲ ಧರ್ಮಗಳೂ ರಾಷ್ಟ್ರೀಯ ಧರ್ಮಗಳೆಂದು ಗೌರವಿಸಬೇಕು. ನಮ್ಮ ದೇಶದಲ್ಲಿ ಎಲ್ಲ ಭಾಷೆಗಳೂ ಸಮಾನ; ಎಲ್ಲ ಸಂಸ್ಕೃತಿಗಳೂ ಸಮಾನ; ಎಲ್ಲ ಧರ್ಮಗಳೂ ಸಮಾನ ಎಂದು ತಿಳಿಯಬೇಕು.

ನಮ್ಮ ಸಂವಿಧಾನವು ಜಾತ್ಯತೀತ ತತ್ವವನ್ನು ಒಂದು ಪ್ರಮುಖ ಆದರ್ಶವೆಂದು ಸ್ವೀಕರಿಸಿದೆ. ಇದಕ್ಕಾಗಿ ನಮ್ಮ ಸಂವಿಧಾನ ಕರ್ತೃಗಳನ್ನು ಅಭಿನಂದಿಸುತ್ತ ಭಾಷೆಗಳ ವಿಷಯದಲ್ಲಿ ಸಂವಿಧಾನವು ಸಮಾನತೆಯನ್ನು ಘೋಷಿಸುವ ತಿದ್ದುಪಡಿಯನ್ನು ತರಬೇಕೆಂದು ಈ ಮೂಲಕ ನಾನು ಒತ್ತಾಯಿಸುತ್ತೇನೆ. ಈ ಒತ್ತಾಯಕ್ಕೆ ಕಾರಣವಿದೆ. ಸಂವಿಧಾನದ ೩೪೪ ಮತ್ತು ೩೫೧ನೇ ವಿಧಿಗಳು ಭಾಷಾ ವಿಷಯಕ್ಕೆ ಸಂಬಂಧಿಸಿದ್ದು ಹಿಂದಿ ಭಾಷೆಗೆ ಬೇರಾವ ಭಾಷೆಗೂ ಇಲ್ಲದ ಪ್ರಾಶಸ್ತ್ರವನ್ನು ಕೊಡಲಾಗಿದೆ. ಹಿಂದಿಯ ಉದ್ಧಾರಕ್ಕಾಗಿ ಆಯೋಗಗಳ ರಚನೆ, ಸಂಸದೀಯ ಸಮಿತಿಯ ರಚನೆ ಮತ್ತು ನಿರಂತರ ಪರಿಶೀಲನೆ, ದೇಶಾದ್ಯಂತ ಹಿಂದಿ ಪ್ರಸಾರಕ್ಕೆ ಯೋಜನೆ – ಇಂತಹ ಅಂಶಗಳನ್ನು ಸಂವಿಧಾನದಲ್ಲೇ ಅಳವಡಿಸಲಾಗಿದೆ. ಇದೇ ಸೌಲಭ್ಯವನ್ನು ಎಲ್ಲ ಭಾಷೆಗಳಿಗೂ ವಿಸ್ತರಿಸಬೇಕು. ನಮ್ಮ ದೇಶದ ಎಲ್ಲ ಭಾಷೆಗಳೂ ಸಂಸ್ಕೃತಿಗಳೂ ಸಮಾನವೆಂದು ಸಂವಿಧಾನದ ಮೂಲಕವೇ ಘೋಷಿಸಬೇಕು. ಎಲ್ಲ ಭಾಷೆಗಳಿಗೂ ಹಿಂದಿಗೆ ನೀಡಿರುವ ಸಂವಿಧಾನಾತ್ಮಕ ಸೌಲಭ್ಯವನ್ನು ಕೊಡಬೇಕು. ಬಹುಭಾಷೆ, ಮತ್ತು ಬಹುಸಂಸ್ಕೃತಿಗಳ ದೇಶದಲ್ಲಿ ಎಲ್ಲ ಭಾಷೆ ಮತ್ತು ಸಂಸ್ಕೃತಿಗಳನ್ನು ಸಮಾನವಾಗಿ ಕಂಡು ಸೌಲಭ್ಯ ಒದಗಿಸುವುದು ಸಂವಿಧಾನದ ಭಾಗವಾಗದಿದ್ದರೆ, ಭಾಷಾ ಸಮಾನತೆ, ಸಾಂಸ್ಕೃತಿಕ ಸಮಾನತೆಗಳು ಕೇವಲ ಆದರ್ಶಗಳಾಗಿ ಉಳಿಯುತ್ತವೆ. ಆದ್ದರಿಂದ ಸಂವಿಧಾನದ ೩೪೪ ಮತ್ತು ೩೫೧ನೇ ವಿಧಿಗಳಲ್ಲಿರುವ ವಿಶೇಷ ಸೌಲಭ್ಯವನ್ನು ದೇಶದ ಎಲ್ಲ ಭಾಷೆಗಳಿಗೂ ವಿಸ್ತರಿಸುವ ತಿದ್ದುಪಡಿ ತರಬೇಕೆಂದು ಸ್ಥಳೀಯ ಭಾಷೆ, ಸ್ಥಳೀಯ ಸಂಸ್ಕೃತಿಗಳ ಪರವಾಗಿರುವವರು ಒತ್ತಾಯಿಸುವ ಅಗತ್ಯವಿದೆ. ಅನಿವಾರ್ಯವಾದರೆ ಹೋರಾಟಕ್ಕೂ ಮುಂದಾಗಬೇಕಾಗಿದೆ. ಇಲ್ಲದಿದ್ದರೆ ಜಾಗತೀಕರಣದ ಭರಾಟೆಯಲ್ಲಿ ಸ್ಥಳೀಯ ಭಾಷೆಗಳು ನಾಶದಂಚಿಗೆ ಸರಿಯುವ ಅಪಾಯವಿದೆ.

ಜಾಗತೀಕರಣದ ಹೆಸರಿನಲ್ಲಿ ಈಗ ಅನೇಕರು ಸದಾ ಅಂತರಾಷ್ಟ್ರೀಯತೆ ಮಾದರಿಗಳ ಬಗ್ಗೆಯೇ ಮಾತಾಡುತ್ತಾರೆ. ಒಂದು ಅಂಶವನ್ನು ನಾವಿಲ್ಲಿ ನೆನಪಿಡಬೇಕು. ಸ್ಥಳೀಯತೆಯಿಲ್ಲದೆ, ಪ್ರಾದೇಶಿಕತೆಗೂ ಅರ್ಥವಿಲ್ಲ, ರಾಷ್ಟ್ರೀಯತೆಗೂ ಅರ್ಥವಿಲ್ಲ, ಅಂತರರಾಷ್ಟ್ರೀಯತೆಗೂ ಅರ್ಥವಿಲ್ಲ, ಸ್ಥಳೀಯತೆಯ ಮೂಲಕವೇ ನಾವು ರಾಷ್ಟ್ರೀಯವೂ ಅಂತರರಾಷ್ಟ್ರೀಯವೂ ಆಗುವ ಪ್ರಕ್ರಿಯೆಗೆ ಮುಂದಾಗಬೇಕು. ಸ್ಥಳೀಯ ಭಾಷೆ ಸಂಸ್ಕೃತಿಗಳು ತಾಯಿ ಬೇರು. ತಾಯಿ ಬೇರಿಲ್ಲದೆ ಯಾವುದೇ ವೃಕ್ಷ ಬೆಳೆಯುವುದಿಲ್ಲ. ಬೇರು ಭದ್ರವಿಲ್ಲದ ವೃಕ್ಷ ಗಟ್ಟಿಯಾಗಿ ನಿಲ್ಲುವುದಿಲ್ಲ. ಆದ್ದರಿಂದ ಸ್ಥಳೀಯ ಭಾಷೆ ಮತ್ತು ಸ್ಥಳೀಯ ಸಂಸ್ಕೃತಿಗಳು ಬೇರು ಆಗಬೇಕು. ರಾಷ್ಟ್ರೀಯತೆ ಕಾಂಡವಾಗಬೇಕು; ಟಿಸಿಲುಗಳು ಅಂತರರಾಷ್ಟ್ರೀಯತೆಯಾಗಬೇಕು. ಸ್ಥಳೀಯ ಸಂಸ್ಕೃತಿ ಮೂಲದಿಂದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾದರಿಗಳನ್ನು ಬೆಳೆಸುವ ಪ್ರಕ್ರಿಯೆ ಮುಖ್ಯವಾಗಬೇಕು. ಇದು ಏಕಕಾಲಕ್ಕೆ ಸ್ಥಳೀಯವೂ ರಾಷ್ಟ್ರೀಯವೂ ಅಂತರರಾಷ್ಟ್ರೀಯವೂ ಆಗುವ ಮನೋಧರ್ಮವಾಗುತ್ತದೆ. ಕೇವಲ ಅಂತರರಾಷ್ಟ್ರೀಯವಾಗುವ ಮಾದರಿಯು ಬೇರಿಲ್ಲದ ಬರಡು ಕೊರಡಿನಂತಾಗುತ್ತದೆ.

ಆದ್ದರಿಂದ ನಾವೀಗ ಎಚ್ಚರವಾಗಿರಬೇಕು ಸಾಂಸ್ಕೃತಿಕ ವಿವೇಕವನ್ನು ಮೆರೆಯಬೇಕು ಜಾಗತೀಕರಣದ ಹೆಸರಿನಲ್ಲಿ ಮುಂದೆ ಒಡ್ಡುತ್ತಿರುವ ಅಂತರರಾಷ್ಟ್ರೀಯವೆಂಬ ‘ಹುಸಿ ಮಾದರಿ’ ಗಳಿಗೂ ನಾವು ಮರುಳಾಗಬಾರದು. ರಾಷ್ಟ್ರೀಯತೆ ಹಾಗೂ ರಾಷ್ಟ್ರಭಕ್ತಿಯ ಹೆಸರಿನಲ್ಲಿ ಮುಂದು ಮಾಡುತ್ತಿರುವ ‘ಹುಸಿ ಸಂಸ್ಕೃತಿ’ ಮಾದರಿಯಲ್ಲೂ ಮೈಮರೆಯಬಾರದು. ಸ್ಥಳೀಯ ಭಾಷೆ ಮತ್ತು ಸ್ಥಳೀಯ ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ಮೂಲಕವೇ ರಾಷ್ಟ್ರೀಯವೂ ಅಂತರ ರಾಷ್ಟ್ರೀಯವೂ ಆಗಬೇಕು. ಇದೇ ಸಂದರ್ಭದಲ್ಲಿ ಸಂಸ್ಕೃತಿ ಎಂದರೆ ಸ್ಥಗಿತ ಮಾದರಿಗಳಲ್ಲ ಎಂಬ ವಿವೇಕವೂ ಇರಬೇಕು. ಸಂಸ್ಕೃತಿಯಲ್ಲಿರುವ ಸ್ಥಗಿತ ಸಾಂಪ್ರದಾಯಿಕ ಅಂಶಗಳನ್ನು ತೊಡೆದುಕೊಂಡು ಹೊಸ ಆವಿಷ್ಕಾರಗಳನ್ನು ಅಂತರ್ಗತ ಮಾಡಿಕೊಂಡು ಪ್ರಗತಿಪರ ಸಾಮಾಜಿಕ ಚಲನಶೀಲತೆಗೆ ಕಾರಣವಾಗಬೇಕು. ಸದಾ ಚಲನಶೀಲವಾಗಿರುವುದೇ ಸಂಸ್ಕೃತಿಯ ಗುಣಲಕ್ಷಣವಾಗಬೇಕು. ಪ್ರಗತಿಪರ ಆಶಯಗಳೇ ಜನಸಂಸ್ಕೃತಿಯ ಆತ್ಮ ಎಂದು ಭಾವಿಸಬೇಕು. ಈ ದಿಕ್ಕಿನಲ್ಲಿ ಕ್ರಿಯಾಶೀಲರಾಗಬೇಕು. ಜೀವಪರವಲ್ಲದ ಪ್ರತಿಗಾಮಿ ಅಂಶಗಳನ್ನು ಸಂಸ್ಕೃತಿಯ ಚೌಕಟ್ಟಿನಿಂದ ಹೊರಗಟ್ಟಬೇಕು. ಆಗ ಸಂಸ್ಕೃತಿಗಳ ವಿಕಾಸವಾಗುತ್ತದೆ; ಭಾಷೆಗಳ ಬೆಳವಣಿಗೆ ಯಾಗುತ್ತದೆ; ಬದುಕಿಗೆ ಬೆಲೆ ಬರುತ್ತದೆ.

ಆದ್ದರಿಂದ, ಜನಸಾಮಾನ್ಯರ ಸುಂದರ ಬದುಕಿಗಾಗಿ, ಸಮಾನತೆಯ ಸಮಾಜಕ್ಕಾಗಿ ಕನಸು ಕಟ್ಟೋಣ. ಕನಸನ್ನು ನನಸು ಮಾಡಲು ನಮ್ಮ ನಮ್ಮ ಕ್ಷೇತ್ರಗಳಲ್ಲಿ ಕ್ರಿಯಾಶೀಲರಾಗೋಣ. ಜನ ಸಂಸ್ಕೃತಿಯನ್ನು ಉಳಿಸಿ ಬೆಳೆಸೋಣ. ಇದು ನಮ್ಮೆಲ್ಲರ ಸಾಮಾಜಿಕ ಸಾಂಸ್ಕೃತಿಕ ಬದ್ಧತೆಯಾಗಲಿ ಎಂದು ಹಾರೈಸುತ್ತ ನನ್ನ ಮಾತುಗಳನ್ನು ಮುಗಿಸುತ್ತೇನೆ – ನಮಸ್ಕಾರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನದಿ
Next post ಅವಳೀಗ ತಾಯಾಗಿದ್ದಾಳೆ

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…