ಶ್ರೀ ಕೃಷ್ಣರಾಜ ರಜತಮಹೋತ್ಸವ ಪ್ರಗಾಥ


ಕಾಯಿ, ತಾಯಿ, ಕೃಪೆಯ ತೋರಿ
ನಮ್ಮ ಕೃಷ್ಣನ ;
ಬೆಳ್ಳಿಬೆಟ್ಟದೊಡತಿ, ಗೌರಿ,
ಬೆಳ್ಳಿಯೊಸಗೆಗೊಸಗೆ ಬೀರಿ
ಕಾಯಿ ಕೃಷ್ಣನ,
ಏಳು, ವಾಣಿ, ವೀಣೆದಾಳು,
ಅಮೃತವಾಣಿಯಿಂದ ಹೇಳು
ಪುಣ್ಯದರಸು, ಧರ್ಮದಾಳು,
ದೊರೆಯ ಕೃಷ್ಣನ.
ಹೊನ್ನು ನಡೆಯ, ಹೊನ್ನು ನುಡಿಯ,
ಕನ್ನಡಿಗರ ವಯಿರಮುಡಿಯ,
ಒಡೆಯ ಕೃಷ್ಣನ.


ಏನು ಲಲಿತಾದ್ರಿಯಲಿ ಬೆಳಕುಗಳುಷೆಗೆ ಕಾಂತಿಯನೀವವು !
ಮೇಲಕೇರುವ ಬೆಳಕದಾವುದು ? ಇಳಿವ ಬೆಳಕುಗಳಾವುವು ?
ಆವ ದೇವಿಯರಿವರು ಮೂವರು ?-ಕನ್ನಡದ ಸಿರಿಯೊಬ್ಬಳು,
ಅಕ್ಕತಂಗಿಯರಂತೆ ತಬ್ಬುತ, ಕಡಲ ರಾಣಿಯದೊಬ್ಬಳು,
ಶ್ರೀಭರತಮಾತೆಯರೊಬ್ಬಳು :
ತನ್ನ ಮಕ್ಕಳ ಬೀರಗನಸುಗಳುಬ್ಬುತಿರೆ ನಸುನಗುವಳು ;
ಭರತಮಾತೆ ! ಪ್ರೇಮಮಾತೆ !
ಮಹಿಮೆಯಲಿ ಕಳೆ ಮಿಗುವಳು.
ಗೌರಿಯೋಲಗದಿಂದ ಬಂದಳು, ಪೂರ್ಣಕುಂಭವ ತಂದಳು ;
ದೂರ ವಿನಯದಿ ನಿಂದ ಕನ್ನಡಹೆಣ್ಣ ಬಳಿಯಲಿ ನಿಂದಳು ;
ಕಳಶವಿಂತೆಂದಳು-

“ಬಾಳು, ಕನ್ನಡದರಸಿ, ಗೌರಿಯ ಕೃಪೆಯ ಸುಧೆಯನು ಚೆಲ್ಲಿಸು
ಕೃಷ್ಣರಾಜನ ಕೀರ್ತಿ ಹಬ್ಬಿದ ಚೆಲುವುನಾಡನು ಗೆಲ್ಲಿಸು.
ಕೃಷ್ಣರಾಜನ ಸಿರಿಯ ಮುಡಿಯಲಿ ಸಕಲಭಾಗ್ಯವ ಸಲ್ಲಿಸು.
ತನ್ನ ಬಾಳನು ನಾಡ ಮೇಲ್ಮೆಗೆ ಮುಡಿಪುಕಟ್ಟಿದ ಧೀರನು.
ತನ್ನ ಗುರಿಯನ್ನು ಬಿಡದೆ ಕೊಳುವನು, ಆತ್ಮಗುಣದಲಿ ವೀರನು.
ಹೋಗು, ಸೊಬಗಿಯೆ, ಬಾಳು”-ಎಂದಳು.
ಬಳಿಯ ಕೆಳದಿಯ ಕೈಯ ಕೊಂಡಳು ;
ಮುಗಿಲ ಮರೆಯಲಿ ಸಂದಳು.


ಮಂಗಳ ಮಸಗಿತು ಮೈಸೂರರಮನೆ ; ಸಿಂಗರವಾಯಿತು ಮೈಸೂರು.
ಕೃಷ್ಣನ ವೈಭವವೆಲ್ಲವ ತೋರುವ, ಸಾರುವ, ಮೀರುವ ಮೈಸೂರು,
ನಾಲ್ಮಡಿ ಕೃಷ್ಣನ ಮೈಸೂರು.
ಬೆಟ್ಟವೊ, ಕೆರೆಯೋ, ಬೀದಿಯೊ, ಬನವೋ, ಮನೆಯೋ, ಮಹಲೋ, ಎಲ್ಲೆಲ್ಲು,
ದಟ್ಟಗೆ ಕೂಡುವ, ಭಕ್ತಿಯನಾಡುವ, ಹರ್ಷವ ತೋಡುವ ಸವಿಸೊಲ್ಲು,
ನಾಲ್ಮಡಿ ಕೃಷ್ಣನ ಸವಿಸೊಲ್ಲು.
ಎಳೆಯರು, ನಾಡಿನ ಬೆಳೆಸಿರಿಮೊಳೆಗಳು, ಆಡಿ, ಪಾಡಿ, ಕುಣಿಕುಣಿದಾಡಿ,
ಓದುವ ಹೆಣ್ಗಳು ಗಂಡುಗಳುಲಿವರು, ಸಸಿಯನು ನೆಡುವರು, ಕೊಂಡಾಡಿ,
ನಾಲ್ಮಡಿ ಕೃಷ್ಣನ ಕೊಂಡಾಡಿ.
ಅರಿವನು ಹರಡುವ, ಸಿರಿಯನು ಬೆಳಸುವ, ಪರಿಪರಿ ಕೃಷಿಯನು ರೂಡಿಸುವ,
ತನ್ನೊಂದೊಲುಮೆಗೆ ಮರುಗಿಸಿ ಹಲಬಗೆ ನಾಡಿಗರೊಂದೆನೆ ಕೂಡಿಸುವ,
ಆಡುವ, ಹಾಡುವ, ಬರೆಯುವ, ಕೊರೆಯುವ, ಕಟ್ಟುವ ಕಳೆಗಳ ಹೂಡಿಸುವ,
ಹೊಸ ಹೊಸ ತೆರದಲಿ ಮನವನು ಮುಟ್ಟುವ ಕವಿಗಳಿಗುತ್ಸವಮಾಡಿಸುವ,
ಪ್ರೇಮದ ಸ್ವಾಮಿಗೆ, ಕೃಷ್ಣಗೆ, ಹಿರಿಯರು ಬಿನ್ನಹಗೈವರು ತಲೆಬಾಗಿ,
ನೆಚ್ಚಿನ ಮೆಚ್ಚಿನ ಬಿನ್ನಹ ಕರಗಿಸೆ, ಹೃದಯವನೆರೆವನು ಮುಡಿಪಾಗಿ,
ನಾಲ್ಮಡಿ ಕೃಷ್ಣನ ಮುಡಿಪಾಗಿ.
ಕನ್ನಡದೇವಿಯ ಬಯಕೆಯ ಕಳಶದ ಸುಧೆ ಸುರಿದೆತ್ತಲು ಚೆನ್ನಾಯ್ತು ;
ಪ್ರೇಮದ ಸ್ವಾಮಿಯ ಕೃಷ್ಣನ ಭಕ್ತಿಯ ರಸ ಹರಿದೆತ್ತಲು ಹೊನ್ನಾಯ್ತು.
ಮಂಗಳಮಯವಾಯಿತು ನಾಡು ;
ಸಿಂಗರದಾ ಕನ್ನಡನಾಡು.
ಪಡುಗಡಲಿನ ತೆರೆ ಮುದ್ದಾಡುವ ಕರೆ, ಹೊಳೆ ಹಾಲಿಳಿಯುವ ಘಟ್ಟದೆಡೆ,
ಪಂಪನ ರನ್ನನ ಪುಟವಿಡಿಸಿದ ಕಡೆ, ಹಂಪೆಯ ತಾಂಡವವಾಡಿದೆಡೆ,
ಹೊಯ್ಸಳರೆತ್ತಲು ಕಡೆಯಿಸಿ ನಿಲಿಸಿದ ಗುಡಿಗಳ ಸೊಬಗಿನ ಕಣ್ಣ ಸೆಳೆ,
ಜಲಜಲನುಕ್ಕುವ ಕಾಲುವೆ ಬಯಲಲಿ ಪಚ್ಚೆಯ ಪಯಿರಿನ ತುಂಬುಬೆಳೆ-
ಮಂಗಳಮಯ ತಾನೆತ್ತಲು ನಾಡು,
ಸಿಂಗರದಾ ಸಿರಿಗನ್ನಡನಾಡು.
ಅತ್ತಲು, ತಾನೆತ್ತಲು, ಒಮ್ಮನ, ಒಕ್ಕೊರಲಾಗುತ ಜನ ಕೂಡಿ,
ನಿರ್ಮಲಚಿತ್ತನ, ಪುಣ್ಯ ಚರಿತ್ರನ, ಕೃಷ್ಣನ ಹರಸುತ ಜನ ಹಾಡಿ,
ಜಯ, ಜಯ ಎಂಬರು, ಬೆಳೆ ಬಾಳೆಂಬರು,
ನಿನ್ನದು ಕನ್ನಡದೆದೆಯೋಲವೆಂಬರು-
ಮಂಗಳ ಮಸಗಿತು ಮೈಸೂರರಮನೆ ; ಧನ್ಯತೆ ಪಡೆಯಿತು ಮೈಸೂರು,
ಕನ್ನಡನಾಡಿನ ಮನ್ನಣೆ ಪಡೆಯಿತು ನಾಲ್ಮಡಿ ಕೃಷ್ಣನ ಮೈಸೂರು.


ಎಂತೆನ್ನ ಬಗೆ ಹಾರುವುದು ನೆಗೆದು ಸಂದು
ಮೈಸೂರ ಮೊತ್ತಮೊದಲೊಸಗೆ ಬೆಳೆದಂದು !
ಸೆರೆಯಿಟ್ಟು ಕಾಡಿದಾ ಖೂಳನನು ಕೊಂದು,
ಅರಸರರಸಿಯರೆಲ್ಲ ಹರಸುತಿರೆ, ಬಂದು,
ಕೈ ಹಿಡಿದ ರಾಣಿಯನು ನಗುತ ಕರೆತಂದು,
ಮುದ್ದಾದ ಮೈಸೂರ ತಾವರೆಯ ತಂದು,
ದೇವಿ ಚಾಮುಂಡಾಂಬೆಯೆದಿರಿನಲಿ ನಿಂದು,
ಕೈಮುಗಿದು ಬೇಡಿದನು ಯದುರಾಯನಂದು :
“ಕಾಯಿ, ತಾಯಿ, ಕೃಪೆಯ ತೋರಿ,
ನಿನ್ನ ಮಗನನು ;
ನಲುಗಿ, ನಿನ್ನ ನೆರಳ ಸೇರಿ
ನಲಿವ ಹೆಣ್ಣನು.
ಧರ್ಮದೊಲವ ನಮಗೆ ನೀಡು,
ಸತ್ಯ ನಿಲಿಸುವಂತೆ ಮಾಡು,
ಹಿರಿಯ ಮೈತ್ರಿಗಳನು ಕೂಡು,
ಕರುಣದಿಂದ ಬಿಡದೆ ನೋಡು,
ಕಾಯಿ, ತಾಯಿ, ನಮ್ಮ ನಾಡು,
ನಮ್ಮ ಮನೆಯನು,
ನಡಸಿ ಬೆಳಸಿ, ಹಿರಿದುಮಾಡು
ನಮ್ಮ ಮನೆಯನು.’


ಇಂತೆಂದು ಬೇಡಿದನು ಮೈಸೂರ ಮನೆತನದ ಮೊದಲಿಗನು ಬಾಗಿ,
ಮನಮುಳುಗಿ ಭಕ್ತಿಯಲಿ, ಚಿತ್ರದಾಳುಗಳಂತೆ ನಿಶ್ಯಬ್ದವಾಗಿ,
ಮೂಡುವಚ್ಚರಿಹದವ ಹಾರುತ್ತ, ಸಭೆಯಲ್ಲ, ಎವೆಹೊಯ್ಯದಲ್ಲಿ
ನಿಂದಿಹುದು. ಅಹ! ಅಲುಗಿತಭಯಹಸ್ತದ ಹೂವು ; ಸಿಡಿದು ಮುಡಿಯಲ್ಲಿ
ನೆಲಸಿದುದು, ಯದುರಾಯಮಕುಟದಲಿ, ದೇವಿಕೆರೆ ಸಂಪಗೆಯದೊಂದು.
ಕೂಗಿದಳು ನೆರವಿಯಲಿ ಮುತ್ತೈದೆ, ಬೆದರಿದಳು ಮೈಮೇಲೆ ಬಂದು,
ಕೆದರಿದಳು ಬಿರಿದಲೆಯ ನರೆನವಿರ, ಬಿರುಬಿರನೆ ಕಣ್ತಿರುಹಿ, ನಕ್ಕು,
ಕದಡುಬಗೆ ತಿಳಿಯಾಗಿ, ದೂರದೆಸೆ ಬಳಿಯಾಗಿ, ಮುಂದಹುದ ಹೊಕ್ಕು,
ನುಡಿದಳವಳಂದು-
ಹಣ್ಮುದುಕಿ ನೋಟವನು ನುಡಿದಳವಳಂದು-
ಗಿರಿಯ ನೆತ್ತಿಯ ಮೇಲೆ ಗಂಭೀರಘೋಷದಲಿ ಗುಂಪಿನೆಲಿ ಒಂದು
ಮಳೆ ಕುಡಿವ ಹಕ್ಕಿವೊಲು ಕುಡಿಯುತಿರೆ ಕನ್ನಡದ ಕಲಿಗಳಾ ಸಿರಿಯ,
ಪಾವನದ ಮುತ್ತೈದೆ ಸವಿಗರೆದು ನುಡಿದಳಾ ಮೈಸೂರ ಸಿರಿಯ,
ಕನ್ನಡದ ನಾಡ ಸಿರಿಯ.


“ಮೆಚ್ಚಿದೆನು, ಮೆಚ್ಚಿದೆನು, ವಿಸಯನಿಧಿ ; ನನ್ನೊಲುಮೆಗುವರಿ, ಈ ಅರಸಿ,
ಚಿಕ್ಕದೇವಾಂಬೆಯನು ದುಃಖವಾವರಿಸುತಿರೆ, ಅದ ನಿನ್ನ ಕರಸಿ,
ಪರಿಹರಿಸಿ, ರಾಜ್ಯವನು ನಿನ್ನ ತೋಳಿನಲಿರಿಸಿ ಕಾಯುವೆನು, ಬಾಳು.
ಕೃಷ್ಣದೇವನ ಕುಲದ ನೆಲದರಿಕೆಯಾಳಿಕೆಯ ಹೆಮ್ಮೆಯಿಂದಾಳು.
ನಿನ್ನ ಮಕ್ಕಳ ಸಾಲು ಕುಡಿಯೊಡೆದು ಹಬ್ಬುವುದು, ಬೆಳಗುವುದು ಬೀಡು ;
ಕಡೆಗಾಣದಂತೆಂತು ನಿಮಿರುವುದು ಯಾದವರ ಸಂತಾನ, ನೋಡು ;
ಕರ್ನಾಟಚಕ್ರವರ್ತಿಗಳು ಹೊಳೆಹೊಳೆಯುತಿಹರೆಂತು ಹಸರಾಂತು !
ರಾಜೊಡೆಯ, ನರಸಿಂಹ, ಚಿಕದೇವ, ಮುಮ್ಮಡಿಯ ಕೃಷ್ಣೇಂದ್ರನಿಂತು,
ಹೊಸಯುಗದ ಚಾಮೇಂದ್ರ-ಹಿರಿಯರೆಲ್ಲರ ಪುಣ್ಯ ಫಲಿಸಿ ಬಂದಂತೆ.
ನಿರ್ಮಲದ ಗಗನದಲಿ ನೆಲಸಿ ಶಾಂತಿಯೊಳಿರುವ ಚಂದ್ರನೆಂಬಂತೆ,
ನಾಲ್ಮಡಿಯ ಶ್ರೀ ಕೃಷ್ಣ-ಶ್ರೀ ಕೃಷ್ಣ-ಸಾಕೆನಿತು ಮಾತಿನಿತು ಸಾಕು.
ಪರಮತೇಜಸ್ವಿಗಳು, ರಣಧೀರರಪ್ರತಿಮವೀರರಾಗಿದ್ದು,
ಚಕ್ರವನು ತಡೆಯಿಲ್ಲದೋಡಿಸುತ, ಆಡುತ್ತ ದುರ್ಗಗಳ ಗೆದ್ದು,
ಯುದ್ಧಕಾನಂದಿಸರು ; ಕತ್ತಿಹೊಳಪನು ಚಿನ್ನ ದೊರೆಯೊಳಗೆ ಮರಸಿ,
ತೊಡವೆನಿಸಿ ಮಡಗಿಹರು, ಶಾಂತಿಯಲಿ ಮನಸೋತು ಸಾತ್ವಿಕವನರಸಿ.
ಸೌಮ್ಯಮೂರ್ತಿಗಳವರು, ಸಾಧುಗಳು, ಪ್ರೇಮಿಗಳು, ಭಕ್ತಿಬೋಧಕರು,
ಕಾವ್ಯರಸಿಕರು, ಗಾನಕೌಶಲರು, ಕಲ್ಯಾಣಕಾರ್ಯಸಾಧಕರು.
ಗುರುಗಳನ್ನು ಹಲವರನು ಸೇವಿಸುತ, ಧರ್ಮಸಾರವನ್ನು ಕಡೆಯುವರು,
ಸ್ವಾಮಿಭಕ್ತಿಯೊಳೆರಡನೆಣಿಸದೆಯೆ, ತಮ್ಮೊಡೆಯತನವ ನಡೆಯುವರು.
ಬ್ರಹ್ಮದಲಿ, ಕ್ಷಾತ್ರದಲ್ಲಿ, ನೀತಿಯಲಿ, ನೆರೆ ಪಳಗಿ ಮೈಮೆವೆತ್ತಿಹರು.
ಒಮ್ಮೆ ನಾಡನು ತಿರುಗಿ ಹಳ್ಳಿಗರ ನೆಮ್ಮದಿಯ ನೇರ್ಪಡಿಸುತಿಹರು.
ಒಮ್ಮೆ ಹೊಳಲನು ಮೆರೆದು ಮಿತ್ರರಾಜರ ಬರಿಸಿ ಸುಖಗೊಳಿಸುತಿಹರು.
ಹೊಳೆಗಳನು ತಡೆಗಟ್ಟಿ ಬೆಂದ ಕಾಡನು ಬೆಳಸಿ ಹಸುರೆರಚುತಿಹರು.
ಬೆಟ್ಟದಲಿ ವಿಹರಿಸುತ ಜಾತ್ರೆಗಳ ಸಂಭ್ರಮಕೆ ಸಡಗರಿಸುತಿಹರು.
ಜ್ಞಾನಿಗಳ ಗೋಷ್ಠಿಯಲಿ ಕೇಳುವರು, ಬರಸುವರು, ತಾವೆ ಬರೆಯುವರು.
ಪ್ರಜೆಗಳೊಲುಮೆಯ ಸೆಳೆದು, ರಾಜರಲಿ ಗಣ್ಯತೆಯ ಪಡೆದು ಮೆರೆಯುವರು.
ಮೈಸೂರರಸರ ಮೊದಲಿಗ, ನೋಡು,
ಇಂತಹ ದೊರೆಗಳ ಸೇರಿದ ನಾಡು,
ಸಿಂಗರದಾ ಸಿರಿಗನ್ನಡನಾಡು,
ಮಂಗಳಮಯದಾ ನನ್ನೀ ನಾಡು,
ಕಂದದು, ಕುಂದದು, ಕೊರಗದು, ನೋಡು,
ಮೈಸೂರರಸರ ಅರಮನೆ, ನೋಡು
ಉರಿ ಕೊಳೆ ಸಗ್ಗದೆ ಶಿಲೆಯಲಿ ಬೀಡು
ಉರಿಯನೆ ಹೊದೆಯುತ ನಗುವುದು ನೋಡು,
ಹೊಳೆವುದು, ಬೆಳೆವುದು, ಸೆಳೆವುದು, ನೋಡು,
ಸುಖದಲಿ ನೆರೆದಾ ಜನವನು ನೋಡು.
ನಾಲ್ಮಡಿ ಕೃಷ್ಣನ ಹರಸುವರು !
ಆತನ ಸುಖದಲಿ ಬೆರಸುವರು ;
ಇಂತಹ ಜನವನು, ನಾಡನು, ದೊರೆಯನು
ನಾನೆಂದೆಂದೂ ಹರಸುವೆನು,
ನಾನೆಂದೆಂದೂ ಕಾಯುವೆನು,
ಕಾಯುವೆನು.”


ಕಾಯಿ, ತಾಯಿ, ಗೌರಿದೇವಿ, ಕೃಷ್ಣರಾಜನ !
ಬೆಳ್ಳಿ ಬೆಟ್ಟದೊಡತಿ, ಗೌರಿ,
ಬೆಳ್ಳಿಯೊಸಗೆಗೊಸಗೆ ಬೀರಿ
ಕಾಯಿ ಕೃಷ್ಣನ
ಕನ್ನಡಿಗರ ವಯಿರಮುಡಿಯ ರಾಯ ಕೃಷ್ಣನ !
*****
೧೯೨೭

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಂಜಿಗೆ ನೆನೆಯದ
Next post ಥಾಮಸ್ ಮಾನ್‌ನ Death in Venice ಕಲಾವಿದನ ಬದುಕಿನ ದುರಂತ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys