ನೇತ್ರಾವತಿ ಮೈ ತುಂಬಿಕೊಂಡ
ಕರಿಚಂದ್ರ ಕಾಳ ಸೀರೆ ಎಲ್ಲೆಲ್ಲೂ
ನಾನೀ ನೂಲಿನೆಳೆಯ ಕಸೂತಿ
ಅದು ಕರುಳ ಬಳ್ಳಿ ಹಬ್ಬಹರಡಿ
ಮುರಗಿ ಹೆಣಿಕೆಯ ವಂಕಿ ಚಿತ್ತಾರ
ನಡೆಯ ನಾಜೂಕು ಹರವು

ಖುಷಿ ಪ್ರೀತಿಯ ಕುಸುರಿ ಕಣ್ಣರಳಿ
ಮದುವೆ ಮನೆ ಕೋಮಲ ಎಳೆಹಾಸು
ಮೃದು ಮನದ ಅಲೆಗಳ ತರಂಗ
ಮೌನ ಅಭಿವ್ಯಕ್ತಿ ಎಲ್ಲೆಲ್ಲೂ ಚಿತ್ರಕಾವ್ಯ
ಹಸಿರು ಬಟ್ಟೆಯ ಆಲಯ ಹಸಿರು.

ಬೆಳಕ ಪ್ರಭೆಯ ಝಳು ಝಳು ಕನ್ನಡಿ
ಪ್ರತಿಫಲಿಸಿತು ವಿಕಸಿದ ಸಾಕ್ಷೀ ಬೀಜಗಳು
ಭೂಮಿ ಗರ್ಭದಲ್ಲಿ ಮೊಳಕೆಯ ಚಿಗುರು
ಋತುಗಾನದ ಕೊಳಲು ನಿನಾದ
ಆತ್ಮಬೇರುಗಳಲ್ಲಿ ಇಳಿದ ತಂಪು ಕಂಪನಗಳು.

ನಿನಾದದಲಿ ಸುಗಮ ಬದುಕು
ಹರಿದ ಲಯ ಕರುಣೆ ಪ್ರೀತಿ
ಒಳಗೂ ಹೊರಗು ಚಿಗುರ ಚಿಮ್ಮಿ
ಹೂವು ಹಣ್ಣು ಕಾಯಿ ಸ್ಪರ್ಶ ಚಿಟ್ಟೆ
ಬಟ್ಟ ಬಯಲು ಗಾಳಿಗೆ ಹಾರಿದ ಪಟ
ನೇತ್ರಾವತಿ ಅಮ್ಮ ಹೆಂಡತಿ ಮಗಳಾಗಿ ಹರಿದಳುಭವದಲಿ.
*****