ವಿಶ್ವ ನಕ್ಷೆಯ ಬರೆದ ಋಷಿಯೆ
ಆತ್ಮ ಪಕ್ಷಿಯ ಹಾರಿಸು
ಬಾಳ ಕಾವ್ಯವ ಹೆಣೆದ ಕವಿಯ
ಜೀವ ಶಕ್ತಿಯ ಉಕ್ಕಿಸು

ನೋಡು ಮೂಡಣ ನೋಡು ಪಡುವಣ
ನೋಡು ಕಡಲಿನ ಕೊಂಕಣ
ನೋಡು ಚುಂಬನ ಚಲುವಿನೌತಣ
ನೋಡು ಕಾಮದ ರಿಂಗಣ

ತಾಳ ತಪ್ಪಿತು ಕಾವ್ಯ ಕೆಟ್ಟಿತು
ವಿಶ್ವ ತಂಗುಳವಾಯಿತು
ಜೀವ ಹಳಸಿತು ಭಾವ ಕೊಳೆಯಿತು.
ಜೇನು ವಿಷದಲಿ ಕೂಡಿತು

ಬೇಕು ಬೇಕೈ ಹೊಸತು ಋತುವನ
ಕೊಳಲಿನಂಥಾ ಜೀವನ
ತಾಳವಾದನ ನಾದ ಮೋಹನ
ಛಂದ ತಪ್ಪದ ರಿಂಗಣ

ಹೊಸತು ಮಂತ್ರಾ ಹೊಸತು ತಂತ್ರಾ
ಎಲ್ಲ ಋಷಿವನ ಜೀವನಂ
ಅಗ್ನಿ ರುದ್ರಂ ಶುಭದ ಭದ್ರಂ
ಎಲ್ಲ ಶಿವಗುಣ ತೋರಣಂ
*****