ಎದೆ ತಂತಿ ಮಿಡಿದಾಗ ಸಿಡಿದ ತಾರಕೆಗಳನು
ಮಾಲೆಯಾಗಳವಡಿಸಿ, ಉಷೆಯ ಚೆಂಗೊರಳಿನಲಿ
ಹಾರವಾಗಿಡುವಾಸೆ ಮನವ ತುಂಬಿರಲಾನು
ಹಿಗ್ಗಿನಲಿ ಕೂಡಿಸಿದೆ ಅವನೆಲ್ಲ. ಇರುಳಿನಲಿ
ಬಚ್ಚಿಟ್ಟು, ಕಾಣದಿದ್ದಾ ಪೋರ, ರವಿಯೆದ್ದು,
ಕಿಚ್ಚಿನಲಿ ಅವುಗಳನು ನೂಕಿದನು. ಅವು ಓಡಿ
ಬಿರಿದ ತಾವರೆಯೆದೆಯ ಮೃದುತೆಯುಡಿಯಲಿ ಬಿದ್ದು
ನಿಂದಿಹುವು ಹನಿಯಾಗಿ, ನಗುತಿಹುದು ಜಗ ನೋಡಿ!
ಬಾಳಿನುಷೆ, ತಾರೆಗಳ ಕಾಣುವಾಸೆಯನುಳಿದು,
ಅವುಗಳೆದೆ ಸತ್ವವೀ ಮಂಜು ಹನಿಗಳ ಮುತ್ತು.
ಮಾಲೆಯನು ಕಂಡು, ನೀನೊಪ್ಪದೆಯೆ ಕಡು ಮುಳಿದು,
ತಾವರೆಯ ಕೀಳದಿರು. ಬಂದಂತೆ ಇಳಿಹೊತ್ತು,
ಈ ಮಂಜು ಮುಗಿಲಿನಲಿ ತಾರೆಯಾಗರಳುವುದು
ಎಂದು ಒಲವನು ನೀಡು, ಎದೆಯುಳಿವಿಗದೆ ಹಿರಿದು!
*****