ಜೋಪಡಿಯ ಒಳಗಿಂದ
ಖಾಲಿ ಮಡಕೆಯ ಮುಂದೆ
ಅಳುವ ಕಂದನ ಕೂಗು
ಕೇಳಿರುವೆ.
ಸತ್ತ ನಗರದ ರಾಜರಸ್ತೆಯ
ಓಣಿಯಲಿ
ರಾತ್ರಿ ರಾಣಿಯರ ಬೇಹಾರ
ಕಂಡಿರುವೆ.
ನೆಟ್ಟ ಫಸಲಿಗೆ ಕಟ್ಟದ ಬೆಲೆ
ಹೊಟ್ಟೆಗೆ ಒದ್ದೆ ಬಟ್ಟೆ,
ಕಟ್ಟಿ ಮಲಗಿದ ರೈತನ ಕಣ್ಣೀರು
ನೋಡಿರುವೆ.
ಧರ್ಮ ಭೋಧಿಸಿ,
ಪುಷ್ಕಲ ತಿಂದು
ಹಾಯಾಗಿ ಪವಡಿಸಿದ
ಧರ್ಮಾತ್ಮರ ಗೊರಕೆ ಶಬ್ದಕ್ಕೆ
ಬೆದರಿರುವೆ.
ಮೊಣಕೈಗೆ ಸವರಿದ ಬೆಲ್ಲ
ಗದ್ದುಗೆಯ ಮೇಲೇರಿದ ಮಲ್ಲ
ಪುಳ್ಳ ಪುಢಾರಿಯ ರಾಜ ಠೀವಿಗೆ
ಬೆರಗಾಗಿರುವೆ.
ಎಲ್ಲ ನೋವಿನ ಮಧ್ಯೆ
ನೋವ ಕಣ್ಗಳ ಸೆಳೆತ
ಆರಿದ ಗಂಟಲೊಳಗಿಂದ
ಗೀರಲು ಶಬ್ಧ.
ಉಳಿದದ್ದು ಒಂದೇ
ಕೊನೆಗೊಮ್ಮೆ
ಹುಟ್ಟಿ ಬಾ ಗಾಂಧೀ,
ಮತ್ತೊಮ್ಮೆ.
*****