ಅವರು ಗಲಾಟೆ ಮಾಡುತ್ತ
ಸರಿದು ಹೋದರು ಓಣಿತುಂಬ
ತೊಟ್ಟಿಲಲಿ ಮಲಗಿದ ಕಂದ
ಚಟ್ಟನೇ ಚೀರಿತು, ಅಂಗಳದ
ತುಂಬ ಗಿಡಗಳು ಕಾಣದಂತೆ ಧೂಳು,
ತಲ್ಲಣ ಆವರಿಸಿದ ಮುಂಜಾವು.
ಅವರು ಬಾಯಿ ಮಾಡುತ್ತ ಬಂದರು,
ಜೊತೆಯಲಿ ತುಂಬ ಜನರ ತಂದರು,
ಎಲ್ಲಾ ಹೂಗಳು ಬಳ ಬಳ ಬಿಚ್ಚಿ ವಿಕಾಳ
ಹೊರ ಮರೆತು ಒಳ ಇಣುಕಿದ ಕಿಡಿ ಬಿಂಬ
ಎಲ್ಲರ ಕಣ್ಣ ತುಂಬ ಕರಿ ದಿಗಿಲು.
ಅವರು ಕೈಕಾಲು ಆಡಿಸುತ್ತ ಹೋಗಿ
ಹೋಗಿ ಬಂದರು, ಮತ್ತೆ ಉಗಿಯಾಗಿ
ಹೊಗೆಯಾಗಿ ಹರಡಿದರು, ಎಲ್ಲರ ಎದುರು
ಚಚ್ಚಿದರು, ಬಿಚ್ಚಿದರು, ಕೊಚ್ಚಿದರು, ಹೂಂಕಾರ
ಸ್ಥಬ್ಧಗೊಂಡವು ಉಸಿರುಗಳು ಓಣಿತುಂಬ.
ಅವರು ತಮ್ಮಷ್ಟಕೇ ತಾವೇ ಕಲ್ಪಿಸಿ ವಕ್ರದಾರಿ
ಹಿಡಿದರು ನಡೆಯಲಾಗದೇ ಕುಸಿದರು
ಎಲ್ಲವೂ ಆಯಿತೆಂಬ ಭ್ರಮೆಯಲಿ ಎದೆಗೆ
ಒದ್ದು ನಿಂತರು. ಆಕಾರ ವಿಕಾರಗಳು!
ಚಿಲ್ಲನೇ ರಕ್ತದೋಕುಳಿ ಎಲ್ಲೆಲ್ಲೂ ಹೆರಿಗೆ ಮನೆ.
ಅವರು ಮತ್ತೆ ತಂದೆ ತಾಯಿಯರ ಹೆಸರು
ಮರೆತರು ಉನ್ಮತ್ತ ಚಕಮಕಿಯ ಬೆಂಕಿಯಲಿ
ಉರಿದರು ಪತಂಗಗಳಾಗಿ ನಡೆದ ದಾರಿ
ತುಂಡು ತುಂಡಾಗಿ ಬಯಲ ದಾರಿ ಸಿಗದಾಗಿ
ನಿಂತಲ್ಲೇ ಕುಸಿದರು ಬಂಧವಾಗಲೇ ಇಲ್ಲ ಬಳ್ಳಿ ಬಳಗದಲಿ.
*****