ಹುಲ್ಲೊಳು ಹಾವಾಗಿ, ಹಾವಿಗೆ ಹೆಡೆಯಾಗಿ
ಹರಿಯುತಿದೆ ಚಲುವ ಗಂಗೆ!
ಹಸುವಿಗೆ ಕರುವಾಗಿ ಮೊಲೆಗೆ ಹಾಲಾಗಿ
ಕರೆಯುತಿದೆ ಸರ್ಗ ಗಂಗೆ!
ಶಿವನ ಜಟದಿಂದ; ಹಿಮದ ಶೃಂಗದಿಂದ
ಇಳಿಯುತಿದೆ ಸೊಗಸು ಇಳೆಗೆ.
ನದಿಯ ನೋಟವು; ಓಡುವಾ ಚಲುವಿಂದ
ನುಸುಳುತಿದೆ ಬಾಳ ಸವಿಗೆ
ಕಲ್ಲುಸಕ್ಕರೆ ಹರಳು ಉರುಳಿ ಬಂದಾಗ
ಎಳೆಯ ಮುದ್ದು ಗಳಾನಂದದಿ
ಸಗ್ಗಸೊಗಸೆಲ್ಲ ಭುವಿಗೆ ಇಳಿದಾಗ
ಮಕ್ಕಳು ಕುಣಿವವು ಸಾನಂದದಿ
ಬಾಲ ಮೂಡಣ ರವಿಯು ಆಡಲೆಂದಾಗ
ಚಲುವುಕ್ಕಿ ಕೈ ಮಾಡಿ ಕರೆದಿತ್ತು
ಬಾನಂಚಿನಲಿ ಮುಗುಳು ನಗುವಾಗ
ಹರ್ಷರಂಗಿನೀಂ ಕೆಂಪು ಮೂಡಿತ್ತು
ಬಾಳೆಯ ಸುಳಿಯಾಗಿ, ಎಳೆಯ ಎಸಳಾಗಿ
ಅರಳುತಿದೆ ಸೊಗಸು ಮೊಗ್ಗೆ
ಲೀಲೆ ಜಗವಾಗಿ; ಜಗವು ರಸವಾಗಿ
ನೆಗೆಯುತಿದೆ ಚಲುವ ಬುಗ್ಗೆ!
*****