ಹೃದಯ ತುಂಬಿ; ದುಂಬಿಯಾಗಿ
ರಸಿಕವರ್ಣ ಮೂಡಲಿ; ಒನಪುಗರಿಯು ಚಿಗುರಲಿ
ಅಂತರಂಗ ಹರ್ಷ ಕೂಗಿ
ಸೃಷ್ಟಿ ಸ್ಪುರಿಸಿ ರಾಗ ಮಾಡಲಿ; ಹೃದಯ ತಾಳ ಹಾಕಲಿ
ಪಕ್ಕ ಬೀಸಿ, ಮುಂದೆ ಈಸಿ
ಚುಕ್ಕೆಯಡೆಗೆ ಓಡಲಿ, ರವಿಯ ಒಡನೆ ಆಡಲಿ
ಮೇಲೆ ಏರಿ, ಹೃದಯ ಸೋಸಿ
ಸತ್ಯ ಶಿವನ ಕಾಣಲಿ; ನಿತ್ಯ ಸೊಗಸು ಸವಿಯಲಿ
ರಸಿಕ ಹಕ್ಕಿ ಹೃದಯ ಕುಕ್ಕಿ
ಚಲ್ವ ಚಣಿಲವೊಲ್ ಜಿಗಿದು ಪುಟಿದು ಆಡಲಿ
ಸೈರವೆಳಸಿ ಸೊಗಸು ಸೊಕ್ಕಿ
ಸಲಿಲ ಸುಧೆಗೆ ಹಾರಲಿ; ಮಿನುಗು ಮೀನವಾಗಿ ಈಸಲಿ
ಪಿಕರುತಿಯ ಕಂಠ ಕರೆದು
ಕಾಡನೆಲ್ಲ ನಗಿಸಲಿ; ಕಾವ್ಯ ಕಿನ್ನರಿಯ ನುಡಿಸಲಿ
ತಂತಿ ಮಿಡಿದು; ಕಾವ್ಯ ಕುಣಿದು
ಹೃದಯ ತಣಿದು ಹಾಡಲಿ; ಬಾಳ ಬನವ ಮಾಡಲಿ
ಹೂವ ಹರಿದು, ಹಣ್ಣ ಕಡಿದು
ಸವಿಯ ರಸವ ಕುಡಿಯಲಿ; ನವಿರು ನಾಡಿ ನುಡಿಯಲಿ
ನೆಲ್ಲಿ ಕವಳಿ ಎಲ್ಲ ಜಗಿದು
ಕಬ್ಬು ಮುರಿದು ಮೆಲ್ಲಲಿ; ಸೃಷ್ಟಿ ಸೊಬಗು ಸವಿಯಲಿ
ಚಲುವು ಚಿಮ್ಮಿ; ಹರ್ಷ ಹೊಮ್ಮಲಿ
ಕಾವ್ಯಲತೆಯು ಕುಡಿಯನೊಡೆದು ನವ್ಯ ವಾಗಿ ನಿಲ್ಲಲಿ
ಸರ್ಗಗಂಗೆ ವರ್ಷ ಕರೆಯಲಿ
ಗರಿಯನುಚ್ಚಿ ಮುದದಿ ಕುಣಿವ ಕಾವ್ಯಕಲಾಪಿಯಾಗಲಿ
*****