ಎಲ್ಲೋ ಬೆಳೆದ ಗಿಡಮರಗಳ
ಒಣ ತರಗಲೆಗಳ ಸವರಿ ಗಾಳಿ,
ತೇಲಿ ಬಿಟ್ಟ ಕಣಜ ಬದುವಿನ ಕಾಳು,
ಹೋಗಿದ್ದಾರೆ ಮೋಡಗಳ ಕರೆತರಲು
ಕೈಯೊಂದು ಬೇಕಿದೆ ಹನಿಗಳ ಸಿಂಪಡಿಸಲು
ಎಟುಕು ಮೊಳಕೆಗೆ ಕಾದು ಕುಳಿತ ಮರ್ಮರ.
ಯಾರಿಗೆ ಗೊತ್ತು ಕಾವು ಕೊಡುವ ಖಾತ್ರಿ
ಬಹಳ ದೂರದಲ್ಲಿನ ನಕ್ಷತ್ರಗಳು ಮಿಣುಕಿ
ಕಣ್ಣ ಎವೆ ತೆರೆಯುವುದರೊಳಗೆ ಬೇರಿಗಿಳಿದ
ಜೀವ ಫಸಲು ಆಗಲು ಹಾತೊರೆದ ಕ್ಷಣ
ಕತ್ತಲ ಸಾಗರದಲಿ ತೇಲಿಸಿದ ಭರವಸೆಗಳು.
ಹನಿ ಇಬ್ಬನಿ ಹರಿದ ಸಾಲು ಉಸಿರು ಬಸಿರು.
ಎಲ್ಲೋ ಬೆಸೆದ ಮೋಡಗಳ ನಡುವೆ
ರಾತ್ರಿಗಳ ಚಿಕ್ಕಿಗಳು ಬೆರೆತು ತೂಕಡಿಸಿ,
ಹಕ್ಕಿ ಪಕ್ಷಿಗಳು ಎದೆಗೆ ಅಮರಿಕೊಂಡ ಪ್ರೀತಿ,
ಸಾಲು ಸಾಲು ಕಿರಣಗಳ ಸ್ಪರ್ಶಕೆ ಮೈ ದಡವಿ
ಅರಳೀ ಘಮ್ಮೆಂದು ಹೂವಗಂಧ
ಗಾಳಿ ಕಾಳು ನಕ್ಷತ್ರ ಇಬ್ಬನಿ ಮಿನುಗಿದ ಧರೆ.
ಮಳೆ ಗಾಳಿ ಮೋಡ ಉಡಿ ತುಂಬಿದ ಮಾಯೆ
ಜಗಕೆ ಅರಳಲು ಹೇಳಿ ಸ್ಪರ್ಶಕೆ ಮರುಳಾದಳು
ರೂಪ ರಸಗಂಧ ಆನಂದ ಲೋಕ ಕಣ್ಣುಗಳ,
ಹಿಗ್ಗಿದ ಸುಗ್ಗೀ ಕುಣಿತದಲಿ ಬೆಳಕಾಡಿಸಿ,
ಒಡಲ ಹರಿದು ಹರಿಸಿ ಚೆಂದ,
ಆಟವಾಡಿದಳು ಸಿರಿಗಂಧಿ ಎಂದಿಗೂ ಅಮರ.
*****