ದಾರಿ ಎಂದರೆ ಎಲ್ಲರ
ಪಾದದ ಗುರುತುಗಳು
ಹೊತ್ತ ಭಾರದ ಹೃದಯದ
ಮನ ಕಾಣಿಸುವ ಚಲನೆ,
ಫಳಫಳಿಸಿದ ಬೆವರು ಹನಿಗಳು.
ದಾರಿಗುಂಟ ಸಾಗಿದ
ಕಣ್ಣೋಟಗಳು, ಅಂತರಂಗ
ಕಲುಕಿ ಬೀಸುವ ಗಾಳಿ,
ಪೂರ್ವವಲ್ಲದ ನಡುವೆ,
ಒಮ್ಮೊಮ್ಮೆ ಸೂಸುವ ತಂಗಾಳಿ.
ವರ್ಷಗಳು ಋತುಗಳು
ಮೈಲುಗಲ್ಲುಗಳು, ಬಿಳಿಮೋಡ
ತೇಲಿ ನೀಲಬಾನ ಹರಡಿ,
ಹನಿಸಿ ತೇಲು ಕರೆದು
ಜೊತೆಗೂಡಿ ಬರುವ ಕಾಲ್ಗಳು.
ನನ್ನದು ಅವನದಾಗಿ ಅವನದು
ನನ್ನದಾಗಿ ಬಿಸಿಹಾಯುವ ತಾಪ,
ಭಾರವಾದ ಹೆಜ್ಜೆಗಳು ತಮಗೆ
ತಾವೇ ಜೋಲಿ ಸಂಭಾಳಿಸಿ ಸಾಗಿದ
ಮೇರು ಬದುಕ ಬಟ್ಟೆ.
ದಾರಿ ಯಾವುದಯ್ಯ ವೈಕುಂಠಕೆ
ಎಂದ ದಾಸ ದೀನ ಹೀನ.
ಎಳೆದಾರಗಳು ಹೊಂದಿ ಹೆಣೆದ
ಕರಿಬಟ್ಟೆ ಡಾಂಬರು, ಹೆಜ್ಜೆಯ
ಹೆಜ್ಜೆಗಳೂರಿದ ದಿಂಡೀ ಯಾತ್ರೆ.
*****