ಹೆಂಡದಂಗಡಿಯಂತೆ ಕತ್ತಲು ಕೋಣೆ
ನಮ್ಮ ಮನೆ ದೇವರ ಕೋಣೆ
ದಿನಕೆರಡು ಬಾರಿ ಅವನ ಸ್ನಾನ
ಊಟ ಉಪಚಾರ ಧೂಮಪಾನ
ಈಸಾಯಿ ಧಪನದಂತೆ
ಧೂಪಾನದ ಹೊಗೆ
ಹಿತ್ತಾಳೆ ತಟ್ಟೆಯಲಿ ಕೆಂಪು
ದಾಸವಾಳದ ಹೂವು
ಆಗತಾನೇ ಕೊರೆದಿಟ್ಟ ಮಾಂಸದ ಹಾಗೆ!
ಮೌನ!
ತಲೆ ಕೆಳಗೆ ಕಾಲು ಮೇಲೆ
ಶೀರ್ಷಾಸನ ಹಾಕಿರುವ
ಬಾವಲಿಗಳ ಗಂಟೆ
ನಾನು ಬೆಳೆದಿದ್ದೇನೆ
ದೇವರಮನೆ ಗುಹೆ ಬಾಗಿಲಿಗೆ ನನ್ನ
ತಲೆ ಮರೆತು ಢಿಕ್ಕಿ ಹೊಡೆದೀತು
ಚೌಕಟ್ಟು ಬೆಳೆದಿಲ್ಲ
ನಾ ಹುಟ್ಟುವಾಗಲೂ ಇತ್ತಂತೆ ಹೀಗೆ
ಸತ್ತಮೇಲೂ ಇರಬಹುದು
ಆದರೂ ನಾನೀಗ ಬೆಳೆದಿದ್ದೇನೆ
ಈ ಕೋಣೆ ಚಿಕ್ಕದಾಯಿತು
ಅಂಬೆಗಾಲಿನ ನನ್ನ ಬೂಟಿನ ಹಾಗೆ
ಎಲ್ಲೊ ಮೂಲೆಯಲಿ ಇತ್ತು
ಕೆಲವು ದಿನ ನನ್ನ ಮಗ ಹಾಕಿ ಮೆರೆದಾಡಿದ ಅದನ್ನ
ಆ ಮೇಲೆ ಮನೆನಾಯಿ ಎಲ್ಲೊ ಕೊಂಡೊಯ್ದು
ಹರಿದು ಹಾಕಿರಬೇಕು
ಈಗ ಎಲ್ಲೆಂದು ಕೇಳಿದರೆ ಸೈತಾನ ಹೇಳುತ್ತಾನೆ :
ಸತ್ಯಸಂಗತಿ ಹೀಗೆ –
ನಾವೆಲ್ಲ ಸೇರಿ ಹೆಸರಿಗಾದರು ಇರಲಿ
ಒಬ್ಬ ನೇತಾರ ದೇವರು ಎಂತ ಮಾಡಿದರೆ
ನಮ್ಮ ತಲೆ ಮೇಲೆ ಕುಳಿತು ಪಕ್ಕೆಗೆ ತಿವಿದ!
ಹೆಗಲು ಜಾಡಿಸಿದೆವು ನಾವು
ಈತ ಪಾತಾಳಕ್ಕೆ ತಳ್ಳಿದ ನಮ್ಮ.
ನಾವು ಬಿದ್ದೆವು ಎಂಬುದಕ್ಕಲ್ಲ
ನಮಗೆ ನೈತಿಕ ಪ್ರಶ್ನೆ ಮುಖ್ಯ
ನಾವೇ ನಿಲ್ಲಿಸಿದ ಬೆರ್ಚಪ್ಪ ನಮಗೇ
ಹಾಕಿದ್ದಾನೆ ಪಂಗನಾಮ!
ನಾನು ಹೇಳುವುದಿಷ್ಟೆ : ಈ ಸಂಸ್ಥೆ
ನಮ್ಮ ನುಂಗ ತೊಡಗಿದೆ.
ಆದರೂ ಹೆದರಬೇಡಿ. ಇದು ಬರೇ
ರಟ್ಟಿನ ಸೆಟ್ಟು – ಸಿನಿಮಾದಲ್ಲಿ
ಕಾಣುವ ಹಾಗೆ
*****