ಅದೇಕೆ ಶರಧಿ ನೀ ಹೀಗೆ
ಉಕ್ಕಿ ಆರ್ಭಟಿಸುವೆ
ಎದೆಯಾಳದ ಭಾವಗಳ
ಹರಿಬಿಡುವೆಯಾ ಹೀಗೆ
ನೀ ಎಷ್ಟೆ ಉಕ್ಕಿದರೂ
ವೇಗೋತ್ಕರ್ಷದಿ
ಬೋರ್ಗರೆದರೂ
ನಿಲ್ಲಲಾರೆ ನೀ
ಕೊನೆಗೂ ದಡದಿ
ಉಕ್ಕಿದಷ್ಟೆ ವೇಗದಿ
ಹಿಂದಕ್ಕೋಡುವೆ
ಪುಟಿದೆದ್ದ ಚಂಡಿನಂತೆ
ಗುರುತ್ವಾಕರ್ಷಣೆಯ
ಮೀರ ಲುಂಟೇ
ನೀ ಉಕ್ಕಿದ್ದೆನ್ನುವ
ಕುರುಹು ಮಾತ್ರ
ಮರಳ ಕಣದೊಳಗುಳಿಸಿ
ತೆರೆಗಳೊಡನಾಡುವ ನಿನ್ನ ಈ ಪರಿ
ಸೋಜಿಗವೋ ಸೋಜಿಗ
ಮರುಕವೋ ಮರುಕ
ಭಾವೋದ್ವೇಗದಿ ನೀ
ಎಷ್ಟೆಷ್ಟೇ ಉಕ್ಕಿದರೂ
ತೊರೆದು ಬಿಡಲಾರೆ
ಈ ಭವ ಬಂಧನವ
ತೆರೆದ ಅಲೆಗಳಂತೆ
ಹೊರಕ್ಕೋಡುವ ತವಕ
ಮತ್ತೂ ಹಿಂದಕೆ
ಭವ ಭಂಧನಕೆ
ಈ ಹುಚ್ಚು ಪರಿಯ
ಬಿಟ್ಟು ಮೌನವಾಗಿ
ಇರಬಾರದೆ ನದಿಯಂತೆ ಕೊಳದಂತೆ
*****