ಇಲ್ಲ ಅಕ್ಕಪಕ್ಕದ ಪರಿವೆ
ಬೇಕಿಲ್ಲ ಕಣ್ಕಾಪಿನಾಚೆಯ ಗೊಡವೆ
ಉದ್ದಾನು ಉದ್ದ ಕಣ್ಣು ಹಾಯ್ದಷ್ಟು ದೂರ
ದಾರಿ ಮಲಗಿದೆ ಹೀಗೇ… ನೇರ
ಏರುಪೇರಿಲ್ಲ. ಅಡೆತಡೆಗಳೂ ಇಲ್ಲ
ಚೌಕಟ್ಟು ಮೀರಿ ನೋಡುವಂತಿಲ್ಲ
ತನ್ನ ಪರಿಧಿಯೊಳಗೆ ಕಂಡದ್ದೇ ಸತ್ಯ
ಮಿಕ್ಕಿದ್ದೆಲ್ಲವೂ ಮಿಥ್ಯ!
ಖುರಪುಟದಡಿಯಲ್ಲಿ ನಲುಗಿದ ಹುಲ್ಲು
ಬೆಚ್ಚಿ ನಿದ್ದೆಯಿಂದೆದ್ದ ಕಲ್ಲು
ತನ್ನ ಘನಕಾರ್ಯದ ಗಮ್ಮತ್ತು
ಮೂಡಿತ್ತು ಮೀಸೆಯಡಿಯಲ್ಲಿ ಗತ್ತು!
ಯಾರಿತ್ತ ಶಾಪವೋ?
ಯಾರ ಕೋಪವೋ?
ಜಾರಿತ್ತು ಒಂದೊಂದೇ ಹನಿ ಕಣ್ಣೀರು
ಅಲ್ಲಲ್ಲಾ ಪನ್ನೀರು!
ಕಣ್ಕಾಪು ಪಾರದರ್ಶಕವಾಗಿ ತೊಯ್ದಿತ್ತು
ಕುದುರೆ ವಿಶ್ವದರ್ಶನ ಮಾಡಿತ್ತು
‘ದಾರಿಯಾಚೆಗಿನ ಬದುಕು ಕದ್ದವರೇ
ನನ್ನ ಕನಸು ಕದಿಯುವಿರೇ?’
ಬಡಬಡಿಸಿ ಕೆನೆಕೆನೆದು ನಕ್ಕಿತ್ತು
ಕಣ್ಕಾಪು ಬಿಗಿದ ಕುದುರೆ ಸದ್ದಿಲ್ಲದೇ ಬಿಕ್ಕಿತ್ತು!
*****