ಹೊರಟಿದ್ದೇನೆ ಕುಬೇರನ ನಾಡಿಗೆ
ಅಲ್ಲಿ ಏನೆಲ್ಲ ಇದೆಯಂತೆ
ಅದೊಂದು ಮಾಯಾ ಪೆಟ್ಟಿಗೆಯಂತೆ
ಬೇಕೆಂದದ್ದೂ ಬೇಡವೆಂದದ್ದೂ ಕಾಣುತ್ತದಂತೆ
ಸುಮ್ಮನೆ ಕನಸು ಕಾಣಬಾರದಂತೆ;
ಮೈ ಮನಸುಗಳೆಲ್ಲೆಲ್ಲಾ ಕಚಗುಳಿ ಕುತೂಹಲ
ವಿಚಿತ್ರವಲ್ಲದೇ ಮತ್ತಿನ್ನೇನು-
ಕಣ್ಣಿಗೆ ಎಣ್ಣೆ ಹಾಕಿಕೊಂಡೇ ಕಿಟಕಿಯ ಪಕ್ಕ ಕುಳಿತಿದ್ದೇನೆ.
ಅಕ್ಕಪಕ್ಕ-ಮುಂದಿನ-ಹಿಂದಿನ ಸೀಟುಗಳಲ್ಲೆಲ್ಲಾ
ಘಾಟಿಯೋ, ಹುಳಿಯೊಗರಿನ ಎಣ್ಣೆಯ ವಾಸನೆ.
ಅವರೂ ಚುರುಕಾಗಿರಬೇಕೆಂದೇ ತಾನೆ!
ಕುಬೇರನರಮನೆಗೆ ಹೋಗಲು
ಕಣ್ತುಂಬ ಮನತುಂಬ ಲೂಟಿ ಮಾಡಲು-
ಮೋಡಗಳು ಅದೇಕೋ ಹಿಂದೆ ಹಿಂದೆಯೇ ಉಳಿದವು.
ಸಮುದ್ರ ತೆರೆಗಳಿಗೆ ನಗುವಿಲ್ಲ, ಬಾಯಿಗೆ ಬೀಗ ಹಾಕಿಕೊಂಡವೋ
ಅವುಗಳೊಂದಿಗೆ ಮಾತನಾಡುತ್ತಿದ್ದೆನಲ್ಲಾ!!!
ಕುಬೇರನ ವಿಲಾಸಿ ಬುದಕ ನೋಡ ಹೊರಟಿರುವೆನೆಂದು
ಯಾಕೋ ಮುಖ ಕವುಚಿಕೊಂಡು
ಕೇಳಿಯೂ ಕೇಳಿಸದಂತೆ ಮೆಳ್ಳಗಣ್ಣಲ್ಲಿ
ಮೈಯೊಡಮೂರಿ ಆಚೆ ಹೊರಳಿದವು.
ವೈನ್ ಸುರಿವ ಸುಂದರಿ ಕಿಲಕಿಲಸಿ
‘ಮೊದಲ ಸಲ ಅಮೇರಿಕಾ ಪ್ರವಾಸವೆ?
ಸುರಿಯಲೇ ಮಾಯಾನಗರಿಯ ರಹಸ್ಯ.’
ಆರಡಿ ಹೆಣ್ಣಿನ ಮೂರು ಮಾತುಗಳು
ಹಸಿರು ಕಣ್ಣಿನ ಬೆಕ್ಕಿನ ನೋಟ
ಕಿವಿಯವರೆಗಿನ ಬಾಯಗಲ ನಗು
ಕುಬೇರನರಮನೆಯ ಸ್ವಾಗತ ಕಾರಿಣಿಯ
ಬೆಡಗಿಗೆ ಮೊದಲ ಹಂತದಲ್ಲೇ ಬೆಚ್ಚಿ ಬಿದ್ದೆ.
ಕುತೂಹಲದ ಮೂಟೆಯ ನನ್ನ ಮುಖ
ಹಳಬನೊಬ್ಬ ಕುಬೇರನರಮನೆಯ ಹೊಕ್ಕು
ಚಿತ್ರ ವಿಚಿತ್ರ ಸೆಳೆತದ ಭ್ರಮೆ ಸಂತೋಷಿಸಿ
ನೆಮ್ಮದಿ ಕಳೆದುಕೊಂಡದ್ದಾಗಿ,
ಶಾಂತಿಗಾಗಿ ಯೋಗಾಶ್ರಮಗಳು ಹುಡುಕುತ್ತಾ
ಊರೂರ ಅಲೆಯುತ್ತಿರುವುದಾಗಿ ಉಸಿರಾಡಿದ.
ಕಿಟಕಿಯಾಚೆ ಮೋಡಗಳ ಗಹಗಹಿಸುವಿಕೆ
ದೂರದೂರ ಕೆಳಗೆ ಸಮುದ್ರದಬ್ಬರಿಸುವಿಕೆಯ
ಶಬ್ದ ಶಬ್ದ ಶಬ್ದ
ಅದೇಕೋ ಮತ್ತೊಮ್ಮೆ ನನ್ನ ನೂಕಿ
ತೇಲಾಡಿ ಸುತ್ತಾಡಿ ಹೊರಳಾಡಿ
ಗಕ್ಕೆಂದು ಹಿಂದಿರುಗಿ ಹೊರಟೇ ಹೋದವು.
ಹಾಗಾದರೆ ಕುಬೇರನ ದೇಶ ನೋಡಲೆ?
ಅಥವಾ ನಾಳೆ ಬೆಳಗಾಗುವುದರಲ್ಲೇ
ಮರು ಪ್ರಯಾಣಿಸಿ ಯೋಗಾಶ್ರಮ ಹುಡುಕಲೆ?
*****