ನೊರೆನೊರೆಯಾದ ಮೋಡಗಳ ಕ್ಷೀರಸಾಗರ
ಥೇಟ್ ಕ್ಯಾಲಂಡರಿನ ಚಿತ್ರದಂತೆಯೇ
ದೇವದಾನವರ ಕಡಲಮಂಥನ ಪನ್ನಗಶಯನ ವಿಲಾಸಿ ವಿಷ್ಣು
ಕಾಲೊತ್ತುವ ಆಭರಣ ಪ್ರಿಯೆ ಲಕ್ಷ್ಮಿ-
ನೋಡಲು ಸುಸ್ತಾಗಿ ಕಲಾಕಾರನನು ಬೈಯ್ದು ಹಿಂದೊರಗಿ ನಿದ್ರಾವಶ.
ವಿಷವುಂಡ ನೀಲಕಂಠನ ತೇಲುಗಣ್ಣು ಮೆಳ್ಳಗಣ್ಣು
ಜೀವನೆತ್ತಿಯ ಮೇಲೆ ಅದರೊಳಗೆ
ಗಂಗೆ ನೋರೂಡಿಸಿ ಬದುಕಿಸಿ ಮುಗುಳ್ನಗೆ-
ಸಪ್ತಹೆಡೆಯ ವಿಷಾನಿಲ ಸುತ್ತೆಲ್ಲ
ಹದಿನಾಲ್ಕು ಕಣ್ಣುಗಳಿಗೆ ರತ್ನ ಪಚ್ಚೆಯ ಸಿಂಗಾರ
ನೂರಿಪ್ಪತ್ತು ಹರಳಿನ ವಜ್ರದೆಳೆ
ಮಣಿಮಾಣಿಕ್ಯದ ಭಾರವಾದ ಎದೆ, ಸೊಕ್ಕಿದ ಮೈ
ಲಕ್ಷ್ಮಿಯ ಮೃದು ಸ್ಪರ್ಶ ವಿಷ್ಣುವಿನ ಐಶಾರಾಮಿ ನಗೆ-
ಮಗಳನ್ನೇ ಕೆಡವಿದ ಬ್ರಹ್ಮ ಪರಾರಿ
ಗುಡಿಗುಂಡಾರ ಮಠಗಳಿಲ್ಲದೆ ಎಲ್ಲಿದ್ದಾನೋ
ಆದರೂ ಇದು ಬ್ರಹ್ಮನ ಸೃಷ್ಟಿ;
ಸರಸ್ವತಿ ಗೋಜಲಿಗೆ ಬಿದ್ದು ವೀಣೆ ಹಿಡಿದು
ತಂತಿ ಮೀಟಿದರೆ ಅಪಸ್ವರ ಮತ್ತೆ ಮತ್ತೆ
ತಂತಿ ಬಿಗಿದು ಲಯಹೊಂದಿಸಲು ಪುಸ್ತಕ ತಡಕಾಡಿ
ವೀಣಾ ಪಾಣಿಗೆ ಕಣ್ಣುತೇವ
ಹೊಯ್ದಾಟ, ಅಲುಗಾಟ, ಕುಲಕಾಟ-
ಅರೆನಿದ್ರೆ-
ಮತ್ತೆ ಕಿಡಕಿ, ಮತ್ತದೇ ಕ್ಷೀರಸಾಗರ
ನೊರೆ ನೊರೆ
ಅರೆರೆ! ವೃಷಭಾವತಿಯಂತಿದೆಯಲ್ಲ, ಕಸಕಡ್ಡಿ ಕಚಡ-
ಕಣ್ಣು ಒರೆಸಿಕೊಂಡಷ್ಟೂ ಕಂಡುಬರುವ
ಫ್ಯಾಕ್ಟರಿಯ ಕೊಳೆಯ ನೊರೆ ಥೂ, ಥೂ
ದಟ್ಟ ಹೊಗೆಯ ಸದ್ದಿಲ್ಲದ ಕಡಲಿಗೆ ರಾಜಕೀಯ ಕಡಗೋಲು
ಒಂದೆಡೆ ರಾಜಕೀಯ ಮತ್ತೊಂದೆಡೆ ನಕ್ಸಲ್ ಭಯೋತ್ಪಾದಕರು
ಮಂಥಿಸಿದಷ್ಟು ಮಂಥಿಸಿದಷ್ಟು ಕೊಳಕೆದ್ದು ಗಬ್ಬುವಾಸನೆ.
ರಕ್ತ ಸಾವು ನೋವುಗಳ ಚೀತ್ಕಾರ
ಹೊಯ್ದಾಟ, ಅಲುಗಾಟ, ಕುಲುಕಾಟ-
ಮತ್ತದೇ ಕಿಡಕಿ ಮತ್ತದೇ ನೊರೆಯ ಕ್ಷೀರಸಾಗರ
ಮೇಲೆ ಇಡಿಯಾಗಿ ಫಳಫಳಿಸುವ ಸೂರ್ಯ.
ಕ್ಯಾಲೆಂಡರಿನ ಆಟೋಟಕೆ ಕಡಿವಾಣ ಹಾಕಿ
ಹೈವಾನಾದದ್ದು; ದುರುಳರಿಗೆ ಮಟ್ಟಹಾಕಲು.
ಎಲ್ಲೆಡೆ ಬಿಸಿವಾತಾವರಣ ಬಿಸಿಯುಸಿರೇರಿಸಿ
ಎದೆಗೊದ್ದು ಕೆಡುವುತ್ತಿರುವುದು
ಮಾಯಾಲೋಕದ ಮಂಥನ.
*****