ಹಕ್ಕಿ ಹಕ್ಕಿ ಇದು
ಲೋಹದ ಹಕ್ಕಿ
ಎನದರ ಚೆಂದ ಏನದರ ಅಂದ
ಮೈಯೆಲ್ಲ ನುಣ್ಣನುಣ್ಣನೆ ಹೊಳಪು
ಸೊಕ್ಕಿದ ರೆಕ್ಕೆಯ ಭುಜಬಲ
ಯಾರು ಸಮಾನರೆನಗೆನ್ನುವ ಅಹಂ!
ನಾನೂರು ಜನರ ಹೊರುವ ಭರವಸೆಯ
ಮೂರೇ ಕಾಲಿನ ಸಾಮರ್ಥ್ಯದ ಹಕ್ಕಿ
ಎದೆಗೂಡೊಳಗೆ ಕಾಲಿಟ್ಟುಕೊಂಡೇ
ಸಮುದ್ರ, ಬೆಟ್ಟ, ಮರುಭೂಮಿ
ಹಿಮಪರ್ವತ ಮೇಲೆ ಮೇಲೆ
ಹಾರಾಡುವ ಪಕ್ಷಿ, ಆದರೂ
ತನ್ನ ರಸ್ತೆಯಲ್ಲಿಯೇ ಮುನ್ನುಗ್ಗುವ ಚಾಲಾಕಿ.
ನಾನೀನಾಡಿನವನೆಂಬ ಹೆಸರುಹೊತ್ತ
ಹೆಮ್ಮೆಯ ಪತಾಕೆ ಬೆನ್ನಮೇಲೆ
ಅಲ್ಲಲ್ಲಿ ಕೆಂಪು ಹಸಿರು ಬಿಳಿ
ಮಿಣುಮಿಣುಕು ದೀಪ
ನಾನಿದ್ದೇನೆ ಜೋಕೆ-ಹಾದಿಬಿಡಿ ಎಂಬಂತೆ…..
ಚುರುಕು ಕಣ್ಣು, ಮೋಡ-ಮಳೆಗೆ ಹೊಂದಿಕೊಂಡೇ
ಹಾರುವ ಹಕ್ಕಿ ನೆಲದೆದೆಗೆ ಹೆಜ್ಜೆ ಊರುವಾಗಲೂ
ಜಾಣ ಬಲುಜಾಣ
ಸಪಾಟ ಹೊಟ್ಟೆ ಒಳಗೊಳಗೆ ಡುಮ್ಮನಿದ್ದರೂ
ತೋರುಗೊಡದ ಟ್ರಿಂ ಬಾಯ್.
ಎದೆ ಏರಿಸಿ ಆಕಾಶಕ್ಕೆ ಬಿಟ್ಟಂತೆ ಬಾಣ
ನೇರ ಗುರಿ ತಲುಪುವವರೆಗೂ
ಏನದರ ಗತ್ತು ಗಮ್ಮತ್ತು, ಅಬ್ಬಾ
ಒಳಗಿದ್ದವರ ನಡುಕ ನೋಡಬೇಕದವರ
ದೇವರ ಪಠಣ…. ದೇವರೆ….
ಆಹಾ! ಎಲ್ಲರ ಭಾಷೆ ಗೊತ್ತಿರುವಂತೆ
ಜವಾಬ್ದಾರಿ ಹೊತ್ತ ಈ ಹೈದಹಕ್ಕಿ
ನೆಗೆಯುತ ತೇಲಾಡಿಸಿ ತೂಗಾಡಿಸಿ
ಕನಸುಗಳ ತೋಟಕೆ ಬಿಡುವ ರೀತಿ….
*****