ಹೊಲೆ ಮನೆ
ಹೊಲೆಯಾಗುವ ಮನೆ
ಸತ್ತವರ ಮನೆ
ಸಾವಿನ ಮನೆ
ನನಗೆ ಡಿಕಾಕ್ಷನ್ ಮಾತ್ರ ಸಾಕು
ಎಂದರು ಇವರು
ಏನೊ ತಲೆನೋವು
ರಾತ್ರಿಯಿಡೀ ಆ ಮುದುಕನ ಬಳಿ ಕುಕ್ಕರಕುಳಿತು
ಎಳೆಯುತ್ತಿದೆ ನರ
ಸುಮ್ಮನೇ ಇರುವುದು ಇಲ್ಲಿ
ಸುಮ್ಮನಿರುವುದೆ ನಮ್ಮ ಕೆಲಸ
ಮತ್ತು ನಿರೀಕ್ಷಿಸುವುದು
ಒಳ ಕೋಣೆಯಿಂದ ನೊಣಗಳ ಗಲಾಟೆ
ಸುಮ್ಮನೇ ಇರುವುದಕಿಂತ
ಒಂದಾಟ ಇಸ್ಪೀಟು ಆಡಬಹುದಿತ್ತು
ಒಳಕೋಣೆಯಿಂದ ಈಗಾಗಲೆ
ಶ್ವಾಸದ ಗೊಗ್ಗರ ಧ್ವನಿ
ಚಟ್ಟ ತಯಾರಾಗಿದೆ ನಿನ್ನೆಯೇ
ಇನ್ನೇನು ಕೆಲಸವಿಲ್ಲ
ಮರಣವನ್ನು ನಿರೀಕ್ಷಿಸುವುದೊಂದೆ ಕೆಲಸ
ನಮ್ಮ ಕೆಲಸ
ನಿನ್ನೆಯಿಂದಲೂ ಇದೇ ಕೆಲಸ
ಕಲಸಿ ಹಾಕು ಹಚ್ಚಡದ ಮೇಲೆ
ಹಳತಾಗಿದೆ ಈ ಎಲೆ
ಸ್ವಲ್ಪ ಪೌಡರ್ ಹಾಕು
ಬಿಡ್ಡು ಯಾರದ್ದು?
ಕವಚಿಹಾಕು ತುರುಪ್ಫು
ನಿತ್ರಾಣವಾಗಿದ್ದರು ಅವರು
ದೇವರಿಗೆ ಸುತ್ತು ಹಾಕುತ್ತ ಹಾಕುತ್ತ
ಬಿದ್ದು ಬಿಟ್ಟರು ಪಾಪ!
ಬಿದ್ದಲ್ಲೆ ಹೊಡೆಯಿತು ಲಕ್ವ
ನಾಲೆಗೆ ತೆವಳಿದರೂ ಮಾತಿಲ್ಲ
ಮಗಚು ನಿನ್ನ ತುರಪ್ಫು
ಏನೊ ಕಳಾವರೊ?
ನನ್ನಲ್ಲಿ ಇಲ್ಲ
ಕಲಸಿ ಹಾಕು ಇನ್ನೊಮ್ಮೆ.
ಅವರು ಹೇಳಿದರು
ಇವರು ಹೇಳುತ್ತಾರೆ
ನಾವು ಹೇಳುವೆವು
ಹೀಗೆ ನವೆಯುವುದಕಿಂತ
ಹೀಗೆ ಸವೆಯುವುದಕಿಂತ
ಹೀಗೆ ಬದುಕುವುದಕಿಂತ
ಬದುಕದಿರುವುದೆ ಒಳಿತು
ಆದರೂ
ನಮಗೆ ಕಾಯುವ ಕೆಲಸ
ಕಾಯುವುದೊಂದೆ ನಮ್ಮ ಕೆಲಸ.
*****