ಕೇಶವೇ ವಸ್ತ್ರವೆಂದು
ಅದನ್ನೆ ಮೈ ತುಂಬಾ ಹೊದ್ದು
ಉಟ್ಟಿದ್ದೆಲ್ಲವ ಬಿಸುಟು
ಹೊರಟೇಬಿಟ್ಟೆಯಲ್ಲೆ ಅಕ್ಕ
ಮರೆಯಲು ಮನದಾಳದ ದುಃಖ
ನಿನಗಾಗಿ ಅಲ್ಲಿದ್ದ ಚೆನ್ನ
ಹುಡುಕಿ ಹೊರಟೆ ಅವನನ್ನೆ
ಲೋಕದಿದಿರು ನೀ ಆದೆ ಭಿನ್ನೆ
ಅಂಜಲಿಲ್ಲ, ಅಳುಕಲಿಲ್ಲ ನೀ ದಿಟ್ಟೆ
ಬೇಡವೆನಿಸಿದ ಬದುಕು ಬಿಟ್ಟೆ
ಬೇಡವೆನಿಸಿದೆ ಭವದ ಬದುಕು
ಹೇಗೆ ಬಿಟ್ಟು ಬಿಡಲೇ ಅಕ್ಕ
ಬಣ್ಣಗೆಟ್ಟ ಬದುಕಿನಿರುಳಲಿ
ಹೊರಳಿ ನರಳಿದೆ ಎತ್ತಲೆತ್ತಲೋ
ಹಾದಿ ಹುಡುಕಿ ಹೊರಟ ಮನಸ್ಸು,
ಮನಸಲೊಬ್ಬ ದೇಹಕ್ಕೊಬ್ಬ
ಗಂಡಹೆಂಡಿರಾಟದ ಮೈಥುನ
ಕಿತ್ತೆಸೆಯಲಾರದ ಬಂಧನ
ಹೊರಲಾರದ ಭವದ ಹೊರೆಗೆ
ಮನದ ನಡು ಬಾಗಿದೆ
ಹೊತ್ತ ಹೊರೆಯ ಇಳಿಸುವುದೆಂತು
ತೋರೆ
ಸೋತು ಮಲಗಿದೆ ಜೀವಧಾರೆ
ಬಂದು ಬಿಡಲೇ ಕದಳಿಗೆ
ಇದ್ದಾನೇನು ಚೆನ್ನ ಇನ್ನು ಅಲ್ಲಿ
ಬೇಡವಾದ ಬಂಧನದ ಬೇಡಿ
ಕಳಚುವುದೆಂತು ಹೇಳೆ,
ನಿನ್ನಂತರಂಗವ ಒಪ್ಪಿದವರಿದ್ದರು
ಅಂದು
ಇಂದಿದ್ದಾರೇನೇ ಬಸವ ಅಲ್ಲಮರು
*****