ಒಂದಿಷ್ಟು,
ಒಂದಿಷ್ಟೇ ಇಷ್ಟು
ಹಸಿಮಣ್ಣು ನೀಡು ಗೆಳೆಯ
ನನ್ನದೇ ಕಲ್ಪನೆ ಬೆರೆಸಿ
ಸುಂದರ ಮನೆಯಾಗುತ್ತೇನೆ
ಚಿತ್ರವಿಚಿತ್ರ ಕಲಾಕೃತಿಯಾಗುತ್ತೇನೆ
ಮಡಿಕೆ, ಕುಡಿಕೆ, ಕುಂಡವಾಗುತ್ತೇನೆ
ಎಲ್ಲಾ ಒಂದಿಷ್ಟೇ ಇಷ್ಟು ಹಸಿಮಣ್ಣಿನಿಂದ!
ಒಂದಿಷ್ಟೇ ಇಷ್ಟು
ಹಸಿಮಣ್ಣು ನೀಡು ಗೆಳೆಯ
ಬೀಜ ಬಿತ್ತಿ, ಮೊಳಕೆಯೊಡೆದು
ಎತ್ತರೆತ್ತರದ ಮರವಾಗಿ ಬೀಗುತ್ತೇನೆ
ಹಕ್ಕಿ ಪಕ್ಷಿಗಳಿಗೆ ಆಸರೆಯಾಗುತ್ತೇನೆ
ಎಲ್ಲಾ ಒಂದಿಷ್ಟೇ ಇಷ್ಟು ಹಸಿಮಣ್ಣಿನಿಂದ!
ನೀ ನನ್ನ ಚೆಂದದ ಹಕ್ಕಿ ಮಾಡಿಯೂ
ಹಾರದಂತೆ ರೆಕ್ಕೆ ಕತ್ತರಿಸಿ
ಗುರಿ ಸೇರದಂತೆ ಕಾಲು ಕತ್ತರಿಸಿ
ಹಾಡದಂತೆ ನಾಲಿಗೆ ಕತ್ತರಿಸಿದರೂ
ನಾ ಬೆಳೆವ ಪರಿಗೆ ಬೆರಗಾಗಿ
ನನ್ನ ಕತ್ತು ಕತ್ತಿರಿಸಿದರೂ ಸರಿಯೇ
ಒಂದಿಷ್ಟೇ ಇಷ್ಟು
ಹಸಿಮಣ್ಣು ನೀಡು ಗೆಳೆಯ
ನಾ ಅದರಲ್ಲೇ ಹೂತು
ಪರಿಪಕ್ವವಾಗಿ ಮಾಗಿ,
ತ್ರಿವಿಕ್ರಮನಂತೆ ಬೆಳೆದು
ಕಲ್ಪವೃಕ್ಷವಾಗಿ ಹೊರಹೊಮ್ಮುತ್ತೇನೆ
ಯೋಚಿಸು ಗೆಳೆಯಾ ದಯಮಾಡಿ
ಎಲ್ಲಾ ಒಂದಿಷ್ಟೇ ಇಷ್ಟು
ಹಸಿಮಣ್ಣಿನ ಪ್ರಶ್ನೆಯಷ್ಟೇ!
*****
ಸಂಪೂರ್ಣ ವಿವರಣೆ ಸಾರಾಂಶ