ಪಡುವಣ ದಿಗಂತದಲಿ ಅಗ್ನಿದೇವನ ಒಂದು
ಕಾಲ್ಚೆಂಡು ಮೇಲ್ಹಾರಿ ಕೆಳಬೀಳ್ವುದೊ!
ಬ್ರಹ್ಮಗಿರಿ ಎಂದೆಂಬ ಬೆಟ್ಟದಾ ಅರುಗಾಗಿ
ದಿನಕರನು ಇಣಿಕಿಣಿಕಿ ಮರೆಸೇರ್ವನೊ!
ಎಲ್ಲಿಂದ ಯಾವೆಡೆಗೆ? ಯಾವೂರು ಪೋಗ್ವನೊ
ಅಗ್ನಿಯಾ ಚಂಡು ಈ ಕೆಂಬಣ್ಣದೀ;
ಪಡುವಣದ ಪ್ರಾಂತದಲಿ ನೀರು ನೆಲದಲಿ ಎಲ್ಲ
ರಂಗು ಕುಂಕುಮ ಚೆಲ್ಲಿ-ಮುನ್ನೋಡ್ವನು!
ಜೀವ ರಾಶಿಗಳೆಲ್ಲ ಗೂಡು ಸೇರುವ ಪೊಳ್ತು
ಏಳು ವರ್ಣದ ಬಿಲ್ಲು ನಡುಗೋಲಿಯೊ!
ಹಾರಿ ಬಿದ್ದಿತು ಅಲ್ಲಿ, ಪಾಕಡಾಚೆಲಿ ನೋಡು,
ದೇವ ನಾವೆಯ ಒಳಗೆ ತೇಲಿ ಪೋಪಂ!
ತುಳುನಾಡ ಸಂಪಾಜೆ ಘಾಟಿ ದಾಟುತ ಹಾರ್‍ವ
ಪಕ್ಷಿಗಳೊ ಕೂಹೂಹು ಕೂಗಿ ಎಲ್ಲ;
ತಪ್ಪಲಿನ ಬಯಲಿನಲಿ ದುಡಿದು ಹಾಡುತ ಪೋಪರ್
ಕಿನಕಾಪು ನೀರಿ ಬೀಸಿ ಹೆಂಗಳೆಲ್ಲ?
ದನವು ಕರಗಳು ಎಲ್ಲ ಮೇಕೇರಿ ಬಯಲಿನಲಿ
ಕರೆ ಕರೆದು ಸೇರಿದವು ಕೊಟ್ಟೆಯನು;
ಕೋಟೆ ಗಂಟೆಯೊ ಆರು ಬಡಿಯೆ ಸೇರಿದರೆಲ್ಲ
ಆಡುತಿಹ ಮಕ್ಕಳೂ ಮನೆ ಸೇರಲು.
ಸಂಜೆ ಸಮಯವೊ ನೋಡು, ತಂಪುಗಾಳಿಯು ಸುತ್ತು,
ಬಾನ್ಕರೆಯಲೊಂದು ಮಗು ಅಳುತಲಿಹುದು,
ತನ್ನ ಮುಗುಳ್ನಗೆಯನ್ನು ಮುದ್ದು ಮಾತುಗಳನ್ನು
ತೋರಿ, ತಾಸಿನ ಕಾಲ ಬಾಳಿ ಇಲ್ಲಿ!
ಬೆಳಕಿನಲಿ ಸುಖವಿಹುದು, ಅದು ಲೋಕನ್ಯಾಯ,
ರಾತ್ರಿ ಕಷ್ಟದ ನಂಟು, ಶೋಕ ಮೂಲ;
ಅಗಲಬೇಡ ನೀ, ಬೇಡ ಸೂರ್ಯದೇವ
ನೋಡಲಾರೆನು ನೀನು ಅಗಲ್ವುದೆಮ್ಮ!
ಸೃಷ್ಠಿ ಚಿತ್ರವ ಜಗಕೆ ತೋರಿ ನೀ ಮಿಗಿಲಿಂ
ಯಾವ ನಾಡೊಳು ಪೋಗಿ ನಿದ್ರಿಸುವಿಯೊ?
ಕಾಡು ಮಾಡನು ಎಲ್ಲ, ಗುಡ್ಡ ಬಯಲಲಿ ಮಲೆಯೊಳ್
ಹೊಂಬೆಳಕ ಚಿಮುಕಿಸುತ ಪೋಪೆ ಎಲ್ಲಿ?
*****