ನಾನೊಂದು ಹಾಳೂರಿಗೆ ಹೋದರೆ,
ಅಲ್ಲಿ ನಾಯಿಗಳು ಅಟ್ಟಿಕೊಂಡು ಬಂದವು.
ಹುಲಿಕರಡಿ ಅಡ್ಡಲಾದವು.
ಇವ ಕಂಡು ನಾ ಹೆದರಿಕೊಂಡು,
ನನ್ನ ಕೈಗೊಂದು ಕಲ್ಲು ತಕ್ಕೊಂಡು
ನೋಡುತ್ತ ಬರುತಿರಲು,
ಆ ನಾಯಿಗಳು ಓಡಿದವು.
ಹುಲಿಕರಡಿಗಳೂ ಅಲ್ಲಿಯೇ ಬಯಲಾದವು.
ಆ ಊರು ನಿರ್ಮಳವಾಯಿತ್ತು.
ಆ ನಿರ್ಮಳವಾದ ಊರ ಹೊಕ್ಕು ನೋಡಲು,
ಆ ನೋಡುವ ನೋಟವು,
ಆ ಊರನಾಳುವ ಅರಸು
ಆ ಊರಲೆ ಕೂಡಿ ಒಂದಾದರು.
ಆ ಒಂದಾದುದನೆ ನೋಡಿ,
ದ್ವಂದ್ವವನೆ ಹರಿದು,
ನಿಮ ಸಂಗಸುಖದೊಳಗೋಲಾಡಿ ಸುಖಿಯಾದೆನಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****
ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ