ಮೋಡ ಬಸಿರಿನೊಳಗೆ
ಹೂತಿಟ್ಟ ಬಯಕೆಗಳು ಒಂದೊಂದಾಗಿ
ಸುಡುತ್ತ ಬೂದಿಯಾಗುವಾಗ
ಫಳಾರನೆ ಹೊಡೆಯುವ
ಸಿಡಿಲಿನ ಶಬ್ದಕ್ಕೆ ಹೊಟ್ಟೆಯೊಡೆದು
ಹನಿ ಹನಿಗುಡುತ್ತ
ಸುರಿಯುತ್ತಿದ್ದಂತೆಯೇ ತೊಳೆಯುತ್ತದೆ
ಹಕ್ಕೆ ಗಟ್ಟಿದ ಮನಸನ್ನು
ಮಳೆ ಎಂದರೆ ಪ್ರೀತಿ ನನಗೆ –
ಸತ್ತ ಹಿರಿಯರು ಕಿತ್ತುಕೊಂಡು ಹೋದ
ಉಸಿರು ಕಣ್ಣೀರು
ಈಗ ಬಿಸಿಧಗೆಯಾಗಿ
ಎಲ್ಲವೂ ಒಂದೊಂದಾಗಿ
ಹನಿ ಹನಿಯಾಗಿ ಒಪ್ಪಿಸುತ್ತಿದ್ದಾರೆ
ಅವರೂ ನಮ್ಮನ್ನು ಕಳೆದುಕೊಂಡಂತೆ
ಮಳೆ ಎಂದರೆ ಪ್ರೀತಿ ನನಗೆ –
ಸುಡುವ ಹೀರುವ ಹಿಂಡುವ
ಎಲ್ಲರ ರಕ್ತದ ಮೇಲೆ
ಕಣ್ಣಿಡುವ ಸೂರ್ಯನ ಸಾಮ್ರಾಜ್ಯಕ್ಕೆ
ಆಗಾಗ ಬುರ್ಕಾ ಹಾಕುತ್ತ ಕಣ್ಣುಮುಚ್ಚಾಲೆ
ಆಡಿಸುತ್ತ ಕುತೂಹಲಿಸುವ
ಮಳೆ ಎಂದರೆ ಪ್ರೀತಿ ನನಗೆ
ಕಲ್ಲು ಬಂಡೆಗಳಲಿ
ಕಾಂಕ್ರೀಟು ಬಿರುಕುಗಳಲಿ
ಗುಡಿ ಗುಂಡಾರಗಳ ಮೇಲೆಲ್ಲ
ಚಿಗಿರೊಡೆದು ಹುಲ್ಲಾಗಿಸುವ
ಎಲ್ಲೆಲ್ಲೂ ‘ಹಸಿರು’ ಬಸುರಿಯರ
ಗುಂಪಾಗಿಸುವ. ‘ಹೂ’ ಮಕ್ಕಳ ಚಲ್ಲಾಡಿಸುವ
ಓಟದ ಸರದಾರನಾಗುವ
ಮಳೆ ಎಂದರೆ ಪ್ರೀತಿ ನನಗೆ –
ಅರಳುವ ಹೂಗಳಲಿ ಇನ್ನೂ ಹರೆತುಂಬಿ
ವಯಸ್ಕರ B.P. ಇಳಿಸಿ
ರಾಡಿ ಮಡಗಳು ಕಿಚಿಪಿಚಿಸಲು
ಗಿಡ ಮರ ಮನೆ ಮಠಗಳ ಧೂಳ ತೊಳೆದು
ಮಧ್ಯಾಹ್ನ ಕಾವು ಹೊತ್ತ ತಲೆ
ಸಂಜೆ ಚಡಪಡಿಸುವ ಬಿರುಗಾಳಿ
ಗೂಡು ತಲುಪುವ ಪಕ್ಷಿಗಳ
ವೇಗದ ಆಟೋ ಸೈಕಲ್ ಪಾದಚಾರಿಗಳಿಗೆ
ತಂಪಡರಲು ಕುಣಿಯುವ ಕುಪ್ಪಳಿಸುವ
ಮಳೆ ಎಂದರೆ ಪ್ರೀತಿ ನನಗೆ
*****