ಅಷ್ಟಾವಕ್ರ ರೂಪ
ಯಾರೋ ಇತ್ತ ಶಾಪ
ತನ್ನಿರುವಿಕೆಗೆ ಮಳೆರಾಯನ
ಸಾಕ್ಷಿಗೆ ಕರೆಕರೆದು
ಅರ್ಥವಿಲ್ಲದ್ದೇ ವಟಗುಟ್ಟಿ ಪಾಪ
ಗಂಟಲೇ ಬರಿದು!
ಎದೆಯಾಳದ ಮಾತು
ಹೇಗೆ ಹೇಳುವುದು?
ಆದರೂ ಯಾರಿಗೇನು ಕಡಿಮೆ?
ಅಲ್ಪವೇ? ಉಭಯಚರವೆಂಬ ಹಿರಿಮೆ?
ಭೂಮಿಯಲೇ ಇದ್ದರೂ
ನೀರಿಗೇ ಬಿದ್ದರೂ
ಬದುಕಬಲ್ಲವು
ಎಲ್ಲೋ ಹೇಗೋ ಬದುಕುವುದಬಲ್ಲವು!
ಬದುಕುವುದಷ್ಟೇ ಅಲ್ಲ
ಸೃಷ್ಟಿಸಿಲ್ಲವೇ ಅಸಂಖ್ಯಾತ
ಗೊದಮೊಟ್ಟೆಗಳ ಜಾಲ?
ಇದ್ದರೇನಾಯ್ತೀಗ ಅವಕ್ಕೆ ಬಾಲ?
ತೆಪ್ಪಗೆ ಕೂತರಲ್ಲವೇ
ತೂಗುವುದು ತಕ್ಕಡಿ?
ಅಂಗಿಯೊಳಗೆ ಹುಳಬಿಟ್ಟವರಂತೆ
ಅತ್ತಿತ್ತ ಕುಪ್ಪಳಿಸಿಯಾಡುವುದೇ
ಬೆಪ್ಪುತಕ್ಕಡಿ!
ಡಿಸೆಕ್ಷನ್ ಟೇಬಲಿನ ಮೇಲೆ
ಬಲಿಪಶುವಿನಂತೆ
ಚರ್ಮ ಸುಲಿದು
ಉದರ ಸೀಳಿ
ನಡೆದಿದೆ ಅಮಾನುಷ ಕೊಲೆ
ಯಾವಾಗಲೋ ಎಗರಿ ಬಿದ್ದಿದೆ ತಲೆ!
ಆಮೇಲೆ?
ತಲೆಯೇ ಇಲ್ಲದವರು
ತಲೆಗಳ ಸಾಮ್ರಾಜ್ಯದಲ್ಲಿ
ಹೇಗೆ ಬದುಕುವರು?
ಸೋಡ ಕನ್ನಡಕದ
ಪಡ್ಡೆ ವಿಜ್ಞಾನಿಗೆ
ಅದರ ತಲೆ ಬೇಕಿಲ್ಲವಂತೆ
ಸದಾ ದೇಹದ್ದೆ ಚಿಂತೆ!
(ನಿಜ ಬದುಕಲು ತಲೆ ಬೇಕೆ?)
ಬೆಲೆಯಿಲ್ಲದಿದ್ದರೆ ಹೋಯ್ತು
ತಲೆ ಇಲ್ಲದಿದ್ದರೆ ಹೋಯ್ತು
ಜೀವಿಯಲ್ಲವೇ?
ಜೀವವಿದ್ದರೆ ಸಾಲದೆ?
ಲೆಕ್ಕಕ್ಕಲ್ಲಾ.
ಆಟಕ್ಕಾದರೂ….!
*****