ಯುವ ಲೇಖಕ ಹಾಗೂ ರಾಜಕೀಯ ಪ್ರಜ್ಞೆ

ಯುವ ಲೇಖಕ ಹಾಗೂ ರಾಜಕೀಯ ಪ್ರಜ್ಞೆ

ಚಿತ್ರ: ಫ್ಲೋರಿಯನ್ ಪಿರ್‍ಚರ್‍

ನನಗೆ ರಾಜಕೀಯ ಪ್ರಜ್ಞೆ ಹೆಚ್ಚಿನ ಮಹತ್ವದ್ದಾಗಿ ಕಾಣುವುದೇಕೆಂದರೆ ಸಾಮಾಜಿಕ ಪ್ರಜ್ಞೆ, ಪರಂಪರೆಯ ಪ್ರಜ್ಞೆ, ಸಮಕಾಲೀಕ ಪ್ರಜ್ಞೆ, ಸಾರ್ವಕಾಲೀಕ ಹೀಗೆ ಬಹುಮುಖಿ ಪ್ರಜ್ಞೆಗಳ ಅಂತರಂಗದಲ್ಲೆ ಅದು ಅಡಗಿ ಅವುಗಳೆಲ್ಲವನ್ನೂ ನಿಯಂತ್ರಿಸುತ್ತ ಅವುಗಳ ಮೇಲೆ ತನ್ನ ಪ್ರಭಾವವನ್ನು ಪ್ರತಿಸ್ಠಾಪಿಸುತ್ತಾದ್ದರಿಂದ. ಬಹು ಹಿಂದೆ ಕವಿಗೆ ಅಥವಾ ಲೇಖಕನಾದವನಿಗೆ ಈ ರಾಜಕೀಯ ಸುಳಿವೇ ಇರುತ್ತಿರಲಿಲ್ಲ ಎಂದರೂ ಸರಿಯೆ. ಅವನು ಆಸ್ಥಾನದ ಕವಿಯಾಗಿ ಉಳಿಯಬೇಕಾದರೆ ರಾಜನಿಗೆ ಮೆಚ್ಚಿಗೆಯಾಗುವ ಕಾವ್ಯ ರಚಿಸಿ ಸೈ ಎನ್ನಿಸಿಕೊಂಡು ಉಸಿರಾಡಬೇಕಿತ್ತು. ಅಂತಹ ಕವಿಗೆ ರಾಜಕೀಯ ಪ್ರಜ್ಞೆ, ಆ ಕಾಲಕ್ಕೆ ಅವನಿಗೇ ಕೊಡಲಿ ಪೆಟ್ಟಾಗುತ್ತಿತ್ತು. ಹೀಗಾಗಿ ಪ್ರತಿಭಟನೆಯ ಧ್ವನಿಯುಳ್ಳ ಮಾನವೀಯ ಹೃದಯದ ಕವಿಗಳು ತಮ್ಮ ಕಾವ್ಯದಲ್ಲಿ ಸೂಕ್ಷ್ಮವಾಗಿ ಬಂಡಾಯ ವ್ಯಕ್ತಪಡಿಸಿರುವುದನ್ನು ನಾವು ಗುರುತಿಸಬಹುದು. ಆದರೆ ಪ್ರಜೆಗಳೇ ಪ್ರಭುಗಳಾಗುವ ಈ ಕಾಲದಲ್ಲಿ, ಬದುಕಿನ ಸೂಕ್ಷ್ಮ ಪ್ರಜ್ಞೆಯ ಅರಿವು ತಾನಾಗಿಯೇ ಎಳೆ ಎಳೆಯಾಗಿ ತೆರೆದುಕೊಳ್ಳುತ್ತಿರುವ ಈ ಸಂಕೀರ್ಣ ಜಗತ್ತಿನಲ್ಲಿ ರಾಜಕೀಯ ಪ್ರಜ್ಞೆ ಇಲ್ಲದ ಲೇಖಕ ಅವನ ಸಾಧನೆ, ಉದಾತ್ತ ಭಾವನೆ ಎಲ್ಲವೂ ನಿರ್ವೀರ್ಯವಾಗುತ್ತದೆ ಎಂಬುದು ನಿರ್ವಿವಾದ. ಏಕೆಂದರೆ ಪ್ರಜೆಗಳ ಸೌಖ್ಯ ಸಮೃದ್ಧಿಗೆ ವಿಚಾರವಂತರು, ತಜ್ಞರು, ಧೀಮಂತರು ಕೈಗೊಳ್ಳುವ ಯೋಜನೆಗಳೆಲ್ಲಾ ಕಾರ್ಯಗತದಾಗಬೇಕಾದರೆ ರಾಜಕೀಯವೇ ಅವಕ್ಕೆ ಕೀಲಿಯಾಗಿರುವುದರಿಂದ.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಒಂದು ವಿಚಿತ್ರ ರೀತಿಯಲ್ಲಿ ಬಂತು. ಗಣನೀಯ ಪ್ರಮಾಣದಲ್ಲಿ ಸಾವುನೋವುಗಳಾಗದೆ, ರಕ್ತಪಾತವಾಗದೆ, ಕ್ರಾಂತಿಯ ಕಾವು ತಟ್ಟದೆ, ನಮ್ಮಲ್ಲಿ ಯಾವ ಒಂದು ರೀತಿಯ ಜವಾಬ್ದಾರಿಯುತ ನೈತಿಕ ಹೊಣೆಯ ಅರಿವನ್ನೂ ಮಾಡಿಕೊಡಲಾರದಷ್ಟು ಶಾಂತರೀತಿಯಲ್ಲಿ ಬಂತು. ಅಂದು ಮಹಾತ್ಮ ಗಾಂಧಿಯ ಹಿಂದೆ ಟೋಪಿ ಹಾಕಿಕೊಂಡು ಹೋ ಎಂದು ನುಗ್ಗಿದವರೆಲ್ಲ ಬುದ್ಧಿ ಇರಲಿ ಇಲ್ಲದಿರಲಿ ನಾಯಕರಾಗಿ ಸ್ವಾತಂತ್ರ್ಯಾನಂತರ ಟೋಪಿ ಹಾಕದೆ ಏನನ್ನೂ ಮಾಡಲೂ ಸಾಧ್ಯವಿಲ್ಲ ಎನ್ನುವುದನ್ನು ಅರಿವು ಮಾಡಿಕೊಟ್ಟರು. ಆ ನಿಟ್ಟಿಗೆ ಅವರದು ಕುರುಡನಿಗೂ ಕಾಣುವಂಥ ಆನೆ ನಡೆದ ದಾರಿ.

ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮಗಾಂಧಿ ಮುಗ್ಧ ವಿದ್ಯಾರ್ಥಿಗಳನ್ನು ಸ್ವಾತಂತ್ರ್ಯಗಳಿಕೆಗಾಗಿ ಬಳಸಿಕೊಂಡು ಎಸಗಿದ ಅಪಚಾರ ಶತಮಾನಗಳು ಕಳೆದರೂ ಸರಿಪಡಿಸಲಾಗದಂಥದು. ಉದ್ದೇಶ ಒಳ್ಳೆಯದಾದರೂ ಅದರಿಂದ ಆಗುವ ಪರಿಣಾಮ ಅಪಾಯಕಾರಿಯಾದದ್ದು ಎನ್ನುವುದನ್ನು ಸ್ಪಷ್ಟಪಡಿಸಲು ಇಂದು ಸ್ವೇಚ್ಛೆಯಾಗಿ ವರ್ತಿಸುವ ವಿದ್ಯಾರ್ಥಿ ಸಮೂಹಗಳೇ ಸಾಕ್ಷಿಯಾಗಿವೆ. ತೀರ ಕೀಳುದರ್ಜೆಯ ರಾಜಕಾರಣಿಯೂ ಸಹ ಇಂದು ಈ ವಿದ್ಯಾರ್ಥಿಗಳನ್ನು ತನ್ನ ಕೈಗೊಂಬೆಗಳನ್ನಾಗಿ ಮಾಡಿಕೊಳ್ಳುವಷ್ಟು ವಿಷವೃತ್ತವಾಗಿದೆ, ನಮ್ಮ ವಿದ್ಯಾರ್ಥಿಗಳ ಅಸಹಾಯಕ ಸ್ಥಿತಿ. ಮೇಲೆ ಮೇಲೆ ಶುಭ್ರವಾದ ಬಟ್ಟೆ ಧರಿಸಿ, ಅಂತರಂಗದಲ್ಲಿ ಹೊಲಸನ್ನು ಬಿತ್ತಿ ಬೆಳೆಯುತ್ತಿರುವುದು ಬದುಕಿನ ಪ್ರತಿ ಹಂತದಲ್ಲೂ ಅರಿವಿಗೆ ಬರುತ್ತಿದೆ. ಒಂದು ಮಗ್ಗುಲಿನಿಂದ ಮತ್ತೊಂದು ಮಗ್ಗುಲಿಗೆ ಹೊರಳುವ ವಿಟನಂತೆ ಅವರ ಪಕ್ಷಾಂತರ, ಗಳಿಗೆ ಗಳಿಗೆಗೆ ಬದಲಾಗುವ ಗೋಸುಂಬೆ ಬಣ್ಣದ ತನಗಳು ಕಣ್ಣಿಗೆ ಹೊಡೆಯುವಷ್ಟು ಸ್ಟಷ್ಟವಾಗಿವೆ. ಇದನ್ನು ಒತ್ತಿ ಎತ್ತಿ ಹೇಳಲು ಕಾರಣ ಈ ರಾಜಕೀಯದಿಂದ, ರಾಜಕೀಯ ಧುರೀಣರೆನಿಸಿಕೊಂಡವರಿಂದ ಇಂದು ದೇಶ ಎದುರಿಸುತ್ತಿರುವ ಇಕ್ಕಟ್ಟಿನ ಪರಿಸ್ಥಿಯನ್ನು, ದೇಶದ ಜನತೆಯ ಎದೆಯಾಳದಲ್ಲಿ ಸುಪ್ತವಾಗಿ ಹೊಗೆಯಾಡುತ್ತಿರುವ ಆಂತರಿಕ ಕೋಲಾಹಲವನ್ನು ಸ್ಪಷ್ಟಪಡಿಸುವ ಸಲುವಾಗಿ. ಕಿಂಚಿತ್ತಾದರೂ ಅರ್ಹತೆ, ಯೋಗ್ಯತೆ ಇರದ ತಮ್ಮ ಮಕ್ಕಳನ್ನು ಮಹಾ ಪಿತೃದೇವತೆಗಳು ಸ್ವಾತಂತ್ರ್ಯಾ ನಂತರ ರಾಜಕಾರಣಿಗಳ ಸಡಿಲಗಚ್ಚೆಯ ಸಹಾಯದಿಂದ ಇಂಜಿನಿಯರೇ ಆಗಿ, ಡಾಕ್ಚರೇ ಆಗಿ, ಪ್ರಾಧ್ಯಾಪಕರೇ ಆಗಿ, ಇತ್ಯಾದಿ ಆಗಬಾರದ್ದೆಲ್ಲಾ ಆಗಿ ಹಾಗೆಯೇ ಆಗುತ್ತಾ ದೇಶಕ್ಕೆ ಆಗಿರುವ- ಆಗುತ್ತಿರುವ ಅನರ್ಥಪರಂಪರೆಗಳ ಅರಿವು ಇಂದಿನ ಲೇಖಕನ ಲೇಖನಿಯಲ್ಲಿ ಧ್ವನಿಸದೆ ಹೋದರೆ ಅವನ ಬರವಣಿಗೆ ಹೊಲಸಿಗೆ ಹೊಸ ಉಡಿಗೆ ತೊಡಿಸಿದಂತಾಗಿ ಅದು ಹೊಗಳಿಕೆಗೆ ಪ್ರಶಂಸೆಗಳಿಗೀಡಾಗಿ, ಕ್ರಿಯಾತ್ಮಕವಾಗದೆ ಬರಿಯ ಆರಾಧನೆಗಷ್ಟೇ ಉಳಿದುಬಿಡುವ ಸಂಭವ ಹೆಚ್ಚಾಗಿದೆ. ಹಾಗೆಯೇ ಇದ್ದದ್ದನ್ನು ನೇರವಾಗಿ ಹೇಳಿದಾಗಲೂ ಅದು ಎದುರಿಸಬೇಕಾದ ಎರಡು ತೊಡರಿನ ಸಾಧ್ಯತೆಗಳೂ ಹೆಚ್ಚಾಗಿಯೇ ಇವೆ. ಇಂದು ಸರಿ ಎಂದು ತೋಚಿದ್ದನ್ನು ಬಿಚ್ಚಿ ಬೆಚ್ಚುವಂತೆ ಹೇಳುವ ಒಂದು ಎದೆಗಾರಿಕೆಯಾಗಲೀ, ಹೇಳಿದರೂ ಮೆಚ್ಚುವ ತಾಕತ್ತಾಗಲೀ ಇರುವುದೇ ಕಡಿಮೆ.

ಹೀಗೆ ಈ ಒಂದು ಜನಾಂಗ ಯಾವುದನ್ನು ಎದೆಗಾರಿಕೆಯಿಂದ ಸ್ವೀಕರಿಸುವ ಶಕ್ತಿಯಿಲ್ಲದೆ ಹೆಮ್ಮರದ ಅಡಿನೆರಳಿನಲ್ಲೆ ತೊಳಲುತ್ತಿರಲು ಕಾರಣವೆಂದರೆ ಎಲ್ಲ ಕ್ಷೇತ್ರವನ್ನೂ ಆವರಿಸಿ ಜ್ಞಾನದ ಆಳಕ್ಕಿಳಿಯದಂತೆ ನಿಷ್ಕ್ರಿಯಗೊಳಿಸಿರುವ, ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿಗಳು ಬರಿ ಪದವಿ ಪತ್ರಗಳನ್ನಷ್ಟೇ ಹೊತ್ತು ಹೊರಬರುವಂತೆ ಅಸಮರ್ಥವಾಗಿಸಿರುವ ರಾಜಕೀಯ ವಾತಾವರಣ. ನಿಷ್ಠೆ, ನಿಸ್ಪೃಹತೆಯ ಬಗ್ಗೆ, ಸಮಾಜದ ಕೊಳಕಿನ ಬಗ್ಗೆ ಕಿಡಿಯಾಗುವ, ದೊಡ್ಡದೊಡ್ಡ ಮಾತಿನ ಭಾಷಣ ಬಿಗಿಯುವ ವಿದ್ಯಾರ್ಥಿಯ ಹೃದಯದ ಮೂಲೆಯಲ್ಲೂ ಸಮಯ ಸಿಕ್ಕರೆ ಕದ್ದು ಕಾಪಿ ಹೊಡೆಯುವ ಗೋಸುಂಬೆತನ ಅಡಗಿರುವುದು ಈ ರಾಜಕೀಯ ಪ್ರಭಾವದಿಂದಲೇ. ಧರ್ಮವನ್ನು ಎತ್ತಿ ಹಿಡಿಯುತ್ತವೆ ಎನ್ನುವ ದೇವಸ್ಥಾನದಲ್ಲಿ ಸಹ ಎದ್ದು ಹೊಡೆಯುತ್ತಿರುವ ಈ ಕಮಟುವಾಸನೆ ಬುದ್ಧಿಜೀವಿಗಳ ಸೂಕ್ಷ್ಮ ಗ್ರಹಿಕೆಗೆ ಬಾರದಿಲ್ಲ. ಚರ್ಚಿನ ಮಸೀದಿಯ ದೇವಸ್ಥಾನದ ಗೋಪುರಗಳು ಗಗನ ಚುಂಬಿಯಾಗಿ ಏರಿದಷ್ಟೂ ಅವು ನಮ್ಮ ಅಜ್ಞಾನದ ಆಳವನ್ನು ಬಿಂಬಿಸುವ ಪತಾಕೆಗಳಾಗುತ್ತಾ, ಮೇಲೆ ಮೇಲೆ ಧರ್ಮದ ಹೆಸರು ಕೇಳಿ ಬಂದರೂ ಅಂತರಂಗದಲ್ಲಿ ವೈಷಮ್ಯದ ಬೇರು ಬಲವಾಗುತ್ತಾ ಒಂದು ಮುಗ್ಧವಾದ ನರಕವನ್ನು ನಮ್ಮ ಸುತ್ತ ಸೃಷ್ಟಿಸುತ್ತಿರುವುದು ಸೂಕ್ಷ್ಮ ಮತಿಯ ಅರಿವಿಗೆ ವೇದ್ಯವಾದದ್ದೆ.

ತಾನು ನಿಷ್ಪಕ್ಷಪಾತ ನಾಯಕನೆಂದುಕೊಳ್ಳುತ್ತ ಸಮಯ ಬಂದಾಗ ಜಾತಿಗೆ, ಮತಕ್ಕೆ, ಭಾಷೆಗೆ, ರಕ್ತಸಂಬಂಧಕ್ಕೆ, ಇದಾವುದಿರದಿದ್ದರೂ ಕಡೆಗೆ ತೊಗಲಿನ ತೀಟೆಗೆ ಬಲಿಯಾಗುವ ಜನನಾಯಕನ ರಾಜಕೀಯದ ಬಗ್ಗೆ ನಿದ್ರಿಸುವಾಗಲೂ ಜಾಗೃತವಾಗಿರಬೇಕು. ಹರಿಜನ- ಗಿರಿಜನರ ಉದ್ಧಾರದ ಹೆಸರಿನಲ್ಲಿ ದೇಶದ ಕಬಳಿಸುತ್ತಿರುವ ರಕ್ಕಸರ ಬಗ್ಗೆ ಅವರನ್ನು ಒಂದಾಗಿಸಿಕೊಳ್ಳುವ ಹೆಸರಿನಲ್ಲಿ ಈಗಲೂ ನಗರಗಳಲ್ಲಿ ಹರಿಜನರ ಕಾಲೊನಿಗಳನ್ನು ಸುಲಭ ಬೆಲೆಯ ನೆಪದಲ್ಲಿ ಅವರಿಗಾಗಿಯೇ ಮೀಸಲಿಟ್ಟು ಬಲು ನಾಜೂಕಿನಿಂದ ಅವರನ್ನು ಹೊರಗಿರಿಸುವ ಜಾಣತನದ ಹಾಗೂ ಕಿಲಾಡಿತನದ ಬಗ್ಗೆ ರೇಡಿಯೊ, ಚಲನಚಿತ್ರ, ವೃತ್ತಪತ್ರಿಕೆ, ಟೆಲಿವಿಷನ್, ಮತ್ತಿತರ ಪ್ರಸಾರಗಳ ವೈಭವದ ಗದ್ದಲದಲ್ಲಿ ಮರೆಯಾಗಿರುವ ವಾಸ್ತವ ವಿಷಯಗಳಾದ ಹಸಿವು, ಅಜ್ಞಾನ, ಅಸಮತೆ ಹಾಗೂ ಅಸಹಾಯಕತೆಯ ಬಗ್ಗೆ ವೇದಿಕೆಯ ಮೇಲೆ ವಿಚಾರದ ಹೊಳೆ ಹರಿಸಿ ಒಳಗೊಳಗೇ ಅಧಿಕಾರಿಗಳ ಬಾಲ ಬಡುಕರಾಗುವ ಬುದ್ಧಿಜೀವಿಗಳ ಬಗ್ಗೆ ಲಂಚ, ಹೆಂಡ, ಮತ್ತಿತರ ಅವ್ಯವಹಾರಗಳಿಂದ ಮುಗ್ಧ ಹಳ್ಳಿಗರನ್ನು ಹಾದಿ ತಪ್ಪಿಸಿ ಚುನಾವಣೆಯಲ್ಲಿ ಗೆದ್ದು ನಶೆಯಲ್ಲಿರುತ್ತ ಬಡವರ ಉದ್ಧಾರದ ಭಾಷಣ ಬಿಗಿಯುತ್ತ ಅವರನ್ನು ಅಜ್ಞಾನದಲ್ಲೇ ಕೊಳೆ ಹಾಕುತ್ತಿರುವ ರಾಜಕಾರಣಿಗಳ ಬಗ್ಗೆ ದೇಶದ ಬಡಜನರ ಅಜ್ಞಾನದಿಂದಾಗಿ ದೇಶದ ಒಂದು ಮನೆತನವೇ ನಾಯಕರಾಗಲೂ, ದೇವರಾಗಲೂ ಸಾಧ್ಯವಿರುವ ಅವರ ನಿಶ್ಶಕ್ತ ಮನಸ್ಸಿನ ಬಗ್ಗೆ ದೇವರ ಪಟದಲ್ಲಿ ಜಿರಲೆ ತುಂಬಿ ತತ್ತಿ ಹಾಕುತ್ತಿದ್ದರೂ ಪೂಜಿಸುವ, ಮೋಕ್ಷದ ಮತ್ತಿನಲ್ಲಿ ಉಳಿದು ಹೊಸ್ತಿಲ ಮೇಲೆ ಇರುವ ಬದುಕಿನ ವಾಸ್ತವ ಸಮಸ್ಯೆಗೆ ಬೆನ್ನು ಮಾಡಿರುವ ಆಸ್ತಿಕರ ಬಗ್ಗೆ; ಹಾಗೆಯೇ ಹಳೆಯದು ಎಂದಾಕ್ಷಣ ತಿರಸ್ಕರಿಸಿ ಪರಂಗಿಯವರಿಗೆ ತಮ್ಮ ತನುಮನಗಳೆಲ್ಲವನ್ನು ತೆತ್ತು ಭೂಮಿ ಆಕಾಶಗಳೆರಡನ್ನೂ ಕಾಣದೆ ಅತಂತ್ರರಾಗಿ ಸ್ವೇಚ್ಛೆಗೆ ತಿರುಗುವ ಅಪಾಯದ ನಾಸ್ತಿಕ ಗುಂಪಿನ ಬಗ್ಗೆ ಉಸಿರಿರುವವರೆಗೂ ತಮ್ಮ ದರ್ಪದ ವಬ್ಬಾಳಿಕೆಯನ್ನು ನಡೆಸುವ ಹಿರಿಯರ ಕಪಿಮುಷ್ಟಿಯ ಮನೋಭಾವದ ಬಗ್ಗೆ; ತನ್ನ ವಂಶದ ಮನೆತನದ ಪ್ರಭಾವದಿಂದ ಬಿಡಿಸಿಕೊಂಡು ತನ್ನ ಸ್ವಂತ ಬೇರುಬಿಡಲು ನಿಶ್ಶಕ್ತವಾಗಿರುವ ಮನೋದೌರ್ಬಲ್ಯದ ಬಗ್ಗೆ; ಮೇಲೆ ಸುಂದರವಾಗಿ ಕಂಡರೂ ಒಳಗೆ ಹೊಲಸನ್ನು ತುಂಬಿಕೊಂಡಿರುವ ಕಪ್ಪೆಚೆನ್ನಿಗರ ಬಗ್ಗೆ; ಪಾತಿವ್ರತ್ಯದ ಬಗ್ಗೆ ಮಾತನಾಡುವ ನಾಲಗೆಯಷ್ಟೇ ಚುರುಕಾಗಿ ಕಂಡಕಂಡಲ್ಲಿ ಕಣ್ಣಿನರೆಪ್ಪೆ ಹೊಡೆಯುವ ಸತೀವ್ರತರ ಬಗ್ಗೆ; ಸುತ್ತಲೂ ಎದ್ದಿರುವ ಕತ್ತಲಗೋಡೆಗಳ ಮಧ್ಯ ಸಿಕ್ಕು ತತ್ತರಿಸುತ್ತಿರುವ ಮುಗ್ಧ ಮಕ್ಕಳ ದುರಂತ ಪರಿಸ್ಥಿಯ ಬಗ್ಗೆ; ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು ಎಂದು ಉದ್ದುದ್ದ ಘೋಷಣೆ ಕೂಗುತ್ತ ಒಳಗೊಳಗೇ ಅವರ ಬೀಜ ಹಿಸುಕಿ ನಿರ್ವೀರ್ಯರನ್ನಾಗಿ ಮಾಡುತ್ತಿರುವ ನಮ್ಮ ವಿಷವೃತ್ತ ಪರಿಸರದ ಬಗ್ಗೆ; ಬಾಯಿಯಲ್ಲಿ ಬರಿಯ ನಿಪ್ಪಲ್ ಇಟ್ಟರೆ ಸುಮ್ಮನಾಗುವ ಮುಗ್ಧ ಮಗುವಿನ ಸ್ಥಿತಿಯಲ್ಲಿರುವ ದೇಶದ ಜನತೆಯ ಮೂಕ ಸ್ಥಿತಿಯ ಬಗ್ಗೆ ಉಪದೇಶಗಳನ್ನು ನೀಡುತ್ತಾ ಸಮಯ ಬಂದಾಗ ಆ ಹೊಣೆಗೆ ಬಾಧ್ಯರಾಗದೆ ಬಲು ನಾಜೂಕಿನಿಂದ ಜಾರಿಕೊಳ್ಳುವ ಜಾಣರ ಬಗ್ಗೆ ದೇಶದ ಬಗ್ಗೆ; ಕಳಕಳಿಯುಳ್ಳ ಯುವಕರ ಹೃದಯದಲ್ಲಿರುವ ಕಿಲುಬಿನ ಬಗ್ಗೆ; ದಾನಧರ್ಮಗಳನ್ನು ಮಾಡುವ ಛತ್ರಚಾಮರಗಳನ್ನು ಕಟ್ಟಿಸುವ ಮಹಾಮಹಾ ದಾನಿಗಳ ಕಿಸೆಗೆ ಬರುವ ಹಣದ ಸ್ವರೂಪದ ಬಗ್ಗೆ ಇದ್ದಕ್ಕಿದ್ದಂತೆ ಬಂಗಲೆ ಕಟ್ಟುವ, ಕಾರಿನ ಮಾಲೀಕರಾಗುವ ಜಾಣ ಭಡವರ ಬಗ್ಗೆ; ಮಾನವನನ್ನು ಗರ್ಭದಿಂದ ಗೋರಿಯವರೆಗೆ ನುಂಗಿ ನೊಣೆಯುತ್ತಿರುವ ವಿಷವೃತ್ತವಾದ ವಾತಾವರಣದ ಬಗ್ಗೆ ಯಾವಾಗಲೂ ಲೇಖಕನ ಲೇಖನಿ ಹರಿತವಾಗಿರಬೇಕು. ಕ್ರಾಂತಿಯಾಗದೆ ಶಾಂತಿ ಸಾಧ್ಯವಾಗದಷ್ಟು ಹದಗೆಟ್ಟಿರುವ ದೇಶದ ವಾತಾವರಣ ಸುವ್ಯವಸ್ಥಿತವಾಗಬೇಕಾದರೆ ಲೇಖನಿಯ ಅಂತರಂಗ ಕ್ರಾಂತಿಯನ್ನಾಲಂಗಿಸಬೇಕಾದ್ದು ಅನಿವಾರ್ಯ.

ಆಗಸ್ಟ್ ೧೯೭೬
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವೃತ್ತ
Next post ಗೃಹಿಣಿ

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…