ಸದಾ ಕಿಚಿಪಿಚಿಗುಡುವ
ಗೊಂದಲದ ಗುಬ್ಬಿ ಗೂಡು
ಕೇಳುವುದಿಲ್ಲ ಒಂದಾದರೂ
ಸುಮಧುರ ಹಾಡು
ಬಿಡುವಿಲ್ಲದೇ ತುಯ್ಯುವ ಒಂದು ವೀಣೆ
ನಿರಂತರ ಕಾಡುವುದೇಕೋ ಕಾಣೆ!
ಮಧ್ಯಂತರದಲಿ ನಿಂತ
ನಾನು-ನನ್ನಂತವರು
ದವಡೆಯ ಕೊನೆಯ ಹಲ್ಲುಗಳನ್ನು
ಅರ್ಧವಷ್ಟೇ ಕಂಡವರು.
ಹಳತು ಸರಿಯೋ?
ಹೊಸದು ಸರಿಯೋ?
ಸದಾ ಮಂಥನದ ಚಿಂತನ
ಹಳವಂಡಗಳ ಸೃಷ್ಟಿಸಿ
ನವ ಸೃಷ್ಟಿಕರ್ತರ ಜನನ.
ಎಲ್ಲ ಕಾಲಕ್ಕೂ ಮಿಡಿಯುತ್ತಿದ್ದ ತಾಯಿಬೇರು
ಇತ್ತೀಚೆಗೆ ಒಮ್ಮೊಮ್ಮೆ ಮಾತ್ರ
ಎಲ್ಲೋ ಮಿಸುಕು
ಮುಂದಿನವರಿಗೆ ಅದೂ ಇಲ್ಲವೇನೋ?
ಸಧ್ಯ ನಮ್ಮಂತೆ
ದ್ವಂದ್ವದಲಿ ಸುಯ್ಯಬೇಕಿಲ್ಲ!
ಅದೂ ಬೇಕು, ಇದೂ ಬೇಕು
ಎಲ್ಲವೂ ಬೇಕು ಎನ್ನುವಂತಿಲ್ಲ
ಇಲ್ಲಿ ಆಯ್ಕೆಗಿರುವುದೊಂದೇ ಬದುಕು
ಎದೆಗೆ ಗುರಿಯಿಟ್ಟಿದೆ ಬಂದೂಕು!
ವರಗಳು ಶಾಪವಾಗಿ,
ಶಾಪಗಳೇ ವರವಾಗಿಬಿಡುವ
ಈ ಮನ್ವಂತರದ ಕಾಲದಲಿ
ಅತ್ತಬಾಗದೇ, ಇತ್ತ ಬೀಗದೇ
ಸ್ಥಿರನಿಂತ ಸೂರ್ಯನಂತೆ
ಗೆದ್ದೂ ಬೀಗದೆ, ಸೋತೂ ಬಾಗದೆ
ಎಲ್ಲ ಚಡಪಡಿಕೆ ಎದೆಯೊಳಗೆ ಮುಚ್ಚಿಟ್ಟು
ಸದಾ ಧಗಧಗ ಉರಿವ
ಕೆಂಪುಸೂರ್ಯನ ಬಗಲಲ್ಲೇ ಬಚ್ಚಿಟ್ಟು
ಮೇಲೆ ಆತ್ಮವಿಶ್ವಾಸದ ನಗೆಯ
ಮುಸುಕು ಹೊದ್ದರಾಯ್ತು
ಎಲ್ಲ ತನ್ನಂತೆ ತಾನೇ ಸರಿಹೋದೀತು!
*****