ಬೆಳಕಿನ ಹಾಡಿಗೆ ಕಾಯುತಲಿರುವೆವು
ಇರುಳಿನ ಅಂಚಿನಲಿ
ಅರುಣನ ಹೊಂಚಿನಲಿ
ಸುಮ ಫಲ ಚಿಗುರನು ಮುಡಿದ ಮರಗಳನು
ಮೊರೆಯುವ ತೊರೆಗಳನು,
ಕಾಳಮೇಘಗಳ ಸೀಳಿ ಹಾಯುವ
ಮಿಂಚಿನ ದಾಳಿಯನು,
ಯಾವ ತೇಜವದು ತಾಳಿ ನಿಂತಿಹದೊ
ಎಲ್ಲ ಲೋಕಗಳನು
ಕೀರ್ತಿಸಿ ಬರೆವೆವು ಆ ಹಿರಿತತ್ವವ
ನಮ್ಮ ಸ್ತೋತ್ರಗಳನು
ಕಾತರಿಸಿವೆ ಈ ನಯನಗಳು
ಬೆಳಕಿನ ಸ್ವಾಗತಕೆ
ಲೋಕದ ಒಳಹೊರಗೆಲ್ಲವ ತುಂಬಿದ
ಜ್ಯೋತಿಯ ದರ್ಶನಕೆ;
ಈ ಚಿಂತನೆಯೊಳೆ ಅಲೆಯುತಲಿದೆ ಮನ
ಅನಂತ ದೂರಕ್ಕೆ
ತರುವುದೆಂತು ಇದು ಆ ಚಿರಂತನವ
ಮಾತಿನ ಬಂಧನಕೆ?
*****