ಲಂಗ ೧
‘ಏನೇ
ಇಷ್ಟೊಂಽಽಽದು ಘಮ್ ಅಂತೀಯಾ
ರಾತ್ರಿಯೆಲ್ಲಾ ಜೋರಾಽಽಽ?
ಒಂದಕ್ಕೊಂದು ಗಂಟು ಹಾಕಿ
ದ ಗಂಟಿನೊಳಗೇ ಕುಳಿತು
ಶುರುವಿಟ್ಟುಕೊಂಡವು ಎಂದಿನಂತೇ ಮಾತಿಗೆ
ಗಂಟು ಮೋರೆಯ ಸಡಿಲಿಸುತ
ಲಂಗ ೨
‘ಅದು ಬ್ಯಾರೆ ಕೇಡು ಈ ಜನುಮಕ್ಕೆ
ನಾನೇನು
ನಿನ್‌ಥರ
ಇದ್ದವರ ಮನೆಯ ಮಗಳಾ?
ಬೆಳಗೆದ್ರೆ ನೀರು ಬರಲಿಲ್ಲ
ತರಕಾರಿ ತರಲಿಲ್ಲ
ಹಾಲು ಸಿಗಲಿಲ್ಲ
ಕರೆಂಟು ಬಿಲ್ಲು ಕಟ್ಟಲಿಲ್ಲ
ನೂಽಽಽರು ರಗಳೆ
ಸಂಜೆ ಟ್ಯೂಷನ್ನಿಗೋದ ಮಕ್ಕಳು
ಮನೆ ಸೇರುವವರೆಗೂ ಜೀವವಿಲ್ಲ
ಕುಡಿದು ತೂರಾಡುವ ಗಂಡ
ನಿಗೆ ಕಾದ ಮೈ
ಕೆಂಡವಾಗಿದ್ದಷ್ಟೇ ಪುಣ್ಯ
ಉಫ್… ನನ್ ಹಣೆ ಬರಹ’
ಮುದುಡಿಕೊಂಡಿದ್ದ ಕೆಂಪು
ಲಂಗದ ಕಡೆ ಮುಖ ತಿರುವಿ
‘ನೀನೇನು
ಎಷ್ಟೊಂದು ಮೆತ್ತಗಾಗಿದ್ದೀಯಾ
ಏನ್ ಸಮಾಚಾರ, ಸುಸ್ತಾ…?’
ಲಂಗ ೩
ತೂಕಡಿಸುವ ಕಣ್ಣುಗಳನ್ನು ಉಜ್ಜಿಕೊಳ್ಳುತ್ತಾ
ಮೂಲೋಕ ಕಾಣುವಂತೆ ಆಕಳಿಸುತ್ತಾ
‘ನನ್ ಸುಸ್ತು ಯಾರ್ ಕೇಳ್ತಾರೆ ಬಿಡಕ್ಕ
ನನಗೋ
ಗಂಟೆಗೊಬ್ಬ ಗೆಳೆಯ
ಅವ ತಂದಿದ್ದು ಉಡುವುದೊರೊಳಗೆ
ಇವ ಕೈ ಮಾಡಿ ಕರೆಯುತ್ತಾನೆ
ಬಾಗಿಲಲ್ಲಿ ಹೂ ಹಿಡಿದು ನಿಲ್ಲುತ್ತಾನೆ
ಇನ್ನೊಬ್ಬ ಕಚ್ಚೆಗೇ ಕೈ ಹಾಕುತ್ತಾನೆ…
ರಾತ್ರಿಯೆಲ್ಲಾಽಽಽ
ಜೀವವಿಲ್ಲದ ಗೊಂಬೆಯಂತೆ
ಗಾಳಿ ಇಲ್ಲದ ಚೆಂಡಿನಂತೆ
ಹಾಸಿಗೆ ತುಂಬಾ ಅವರ ಬುಡಕ್ಕೆ
ಹರಕೆ ಹೊತ್ತವಳಂತೆ ಉರುಳಾಡಿ
ಪ್ರತಿನಿತ್ಯ ಜಾಗರಣೆ
ನಂದೂ ಒಂದು ಬದುಕು
ಅಂತ ಯಾರ್ಗೇಳಾಣ…?’
*
ಉಳಿದ ಲಂಗಗಳು ಮೂಕವಾಗಿ
ಬಾಯಿ ತೆರೆದು ಕೇಳುತ್ತಿರುವಂತೇ
ಎದುರು ಲಂಗದ ಕಣ್ಣಲ್ಲಿ
ಎರಡು ಹನಿ ಉದುರುವ ಮುನ್ನ
ಅಗಸಗಿತ್ತಿ
ಸರಬರನೆ ಎಲ್ಲರನು ಎತ್ತಿ
ಕುದಿವ ಹಂಡೆಯೊಳಗೆ ಒತ್ತಿ
ಕೈ ತೊಳೆದುಕೊಂಡು
ತನ್ನ ಹರಕು ಲಂಗಕ್ಕೆ
ಒರೆಸಿಕೊಂಡಳು
*****