ನಂಬೋ ನೀ ಮೊದಲು – ನಂಬಲು
ನೀನಾಗುವೆ ಬದಲು;
ನಂಬದ ಬಾಳೇ ಕಂಬನಿ ಕಡಲು
ತನಗೆ ತಾನೆ ಉರುಳು.
ನಂಬದೆ ಹೋದರೆ ಚಿಂತಿಲ್ಲ
ಕಾಣದ ದೈವವನು;
ನಂಬದಿದ್ದರೂ ಏನಂತೆ
ಜಾಣರ ಧರ್ಮವನು;
ನಂಬದೆ ಹೇಗೆ ನಡೆಯುವೆ ನೀ
ಕಾಣುವ ಕಣ್ಣನ್ನು;
ನಂಬದಿದ್ದರೆ ಗತಿಯೇನೋ
ನೀನೇ ನಿನ್ನನ್ನು?
ನಂಬಿಕೆ ಇಲ್ಲದೆ ನಡೆದೀತೇ
ಹೂವಿಗೆ ಮೊಗ್ಗಿನಲಿ?
ನಂಬಿಕೆ ಇಲ್ಲದೆ ಬೆಳೆದೀತೇ
ಮಗುವಿಗೆ ತಾಯಿಯಲಿ?
ನಂಬದೆ ಬರಿದೇ ಕಡಲಾಯ್ತೆ
ಹನಿಯದು ಹೊಳೆಯಲ್ಲಿ?
ನಂಬಿಕೆ ಹೋದರೆ ಗತಿಯೆಲ್ಲಿ
ಜೀವಕೆ ತನ್ನಲ್ಲಿ?
*****