ಗಳಿಸಿಕೊಂಡಿಹೆವಿಂದು ಸ್ವಾತಂತ್ರ್‍ಯ ಭಾಗ್ಯವನು
ಉಳಿಸಿಕೊಳ್ಳುವೆವೇನು ಅದನು ಮುಂದಿನ್ನು?
ಜಾತಿ ಮತ ಪಂಥಗಳ ಭೇದಗಳನೆ ಹಿಡಿದು,
ರೀತಿ ನೀತಿಯ ತೊರೆದು, ಗುಣಕೆ ಮನ್ನಣೆ ತಡೆದು,
ಭೀತಿಯನ್ನೊಡ್ಡಿ ಜನತೆಯ ಹಕ್ಕುಗಳ ಕಡಿವ
ಸರ್ವಾಧಿಕಾರ ಬರೆ ಸ್ವಾತಂತ್ರ್‍ಯವೆ?
ಬಡವ ಬಲ್ಲಿದನೆಂಬ ಭೇದಗಳು ಇನ್ನುಳಿಯೆ
ಅವರಿಬ್ಬರೊಳದ್ವೇಷದುರಿ ಹೊತ್ತಿ ಬಲ್‌ಬೆಳೆಯೆ
ನಾಡೊಳು ಅಶಾಂತಿ ಅಂತಃಕಲಹಗಳು ಮೊಳೆಯೆ-
ಕಾದಾಡುವಾ ಹಕ್ಕೆ ಸ್ವಾತಂತ್ರ್‍ಯವೆ?
ಅರೆಹೊಟ್ಟೆ ತಿನ್ನುವುದೆ ನಿತ್ಯನಿಯಮವದಾಗೆ
ಇನ್ನು ಮಾರದೆ ಉಳಿಯೆ ಬಡತನದ ಬಿರುಬೇಗೆ
ಊರು ಕೇರಿಗಳೆಲ್ಲ ಭಿಕ್ಷುಕರ ಬೀಡಾಗೆ
ಸಾವು ಬದುಕಿನ ನರಕ ಸ್ವಾತಂತ್ರ್‍ಯವೆ?
ನಾಡ ಮಕ್ಕಳು ಮಂದಿ ಅಜ್ಞಾನದಲಿ ಮುಳುಗಿ
ಎಲ್ಲೊ ಹಲಕೆಲರು ಪಂಡಿತರೆನಿಸಿ ಬೆಳಗಿ
ಸ್ವಾರ್ಥಸಾಧಕರ ಪಡೆ ನಾಡೆಲ್ಲ ತಿರುಗುತಿರೆ
ಅವರ ತಾಳಕೆ ಕುಣಿಯೆ ಸ್ವಾತಂತ್ರ್‍ಯವೆ?
ಸಾಮ್ಯವಾದದ ಹೆಸರ ಹಲಗೆಯನು ಮುಂದಿಟ್ಟು
ವಿಜ್ಞಾನ ಯುಗವೆಂದು ಧರ್ಮವನು ಕಟ್ಟಿಟ್ಟು
ಪ್ರಾಚೀನ ಸಂಸ್ಕೃತಿಯ ಸುಟ್ಟು ಕರಿಬೊಟ್ಟಿಟ್ಟು
ಮುಂದುವರಿಯುವೆವೆನಲು ಸ್ವಾತಂತ್ರ್‍ಯವೆ?
ನಮ್ಮ ನಡೆ ನುಡಿ ನೋಟ ನಮ್ಮ ನಯ ನೀತಿ ನೆಲೆ
ನಮ್ಮ ನಾಡಿನ ಜ್ಞಾನ ಭಂಡಾರದತುಳ ಬೆಲೆ
ಧರ್ಮಬಾಹಿರ ಯಂತ್ರಜೀವನದಿನಾಗೆ ಕೊಲೆ
‘ನಾವು ನಾವಲ್ಲದಿಹ’ ಬದುಕು ಸ್ವಾತಂತ್ರ್‍ಯವೆ?
ತನ್ನ ನಂಬಿದ ಬೆಳಕ ಹಿಡಿದು ನಿಲಲಾಗದಿರೆ
ತನ್ನ ಕಾಣ್ಕೆಯ ಸತ್ಯ ನುಡಿಯಲನುವಿಲ್ಲದಿರೆ
ತನ್ನ ಇಚ್ಛೆಯ ಬಾಳ್ಕೆ ನಡೆಸಲೆಡೆಯಿಲ್ಲದಿರೆ
ದೊರೆತ ಸ್ವಾತಂತ್ರ್‍ಯವದು ಸ್ವಾತಂತ್ರ್‍ಯವೆ?
ದೇವನೆದುರಿನಲೆಲ್ಲ ಸರ್ವಸಮರೆನಿಸುತ್ತ
ಧರ್ಮ ನೆಲೆ ತಪ್ಪದೊಲು ಸಮತೆಯನು ಸಾಧಿಸುತ
ಇಹದ ಹಾಲಿಗೆ ಪರದ ಸಕ್ಕರೆಯ ಬೆರಸುತ್ತ
ಬಾಳಲಪ್ಪುದೆ ಅಮೃತ ಸ್ವಾತಂತ್ರ್‍ಯವಲ್ತೆ?
*****