ಸ್ಫೂರ್ತಿ ನಿವಾಸನ ಮನೆಯಿಂದ ಬಂದ ಮೇಲೆ ಕೊಂಚ ದಿನ ಎಲ್ಲದರಲ್ಲೂ ನಿರಾಸಕ್ತಳಾಗಿದ್ದಳು. ನಿವಾಸನ ಕುಟುಂಬದ ಕಥೆ ಕೇಳಿ, ಅವನ ಮೇಲಿದ್ದ ಗೌರವ ಆದರ ಮತ್ತಷ್ಟು ಹೆಚ್ಚಾಗಿತ್ತು. ಜೊತೆಗೆ ಅನುಕಂಪ ಕೂಡ ಸೇರಿಕೊಂಡಿತು. ಪಾಪ ನಿವಾಸ್ ಅದೆಷ್ಟು ಸಂಕಟ ಅನುಭವಿಸಿದ್ದಾರೆ. ಚಿಕ್ಕಂದಿನಿಂದಲೂ ವಿದ್ಯಾಭ್ಯಾಸ ಅಂತ ಹೆತ್ತವರಿಂದ ದೂರ ಇದ್ದರು. ಈಗ ಹೆತ್ತವರೇ ಅವರಿಂದ ದೂರ ಆಗಿಬಿಟ್ಟಿದ್ದಾರೆ. ಪಾಪ ಒಂಟಿಯಾಗಿ ಬದುಕುತ್ತ ಮನಸ್ಸಿನಲ್ಲಿ ಅದೆಷ್ಟು ನೋವು ಅನುಭವಿಸುತ್ತಿದ್ದಾರೆ. ಸಹೋದರಿ ಕಣ್ಣ ಮುಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ಆದೇ ಕೊರಗಿನಲ್ಲಿ ತಾಯಿ ಸತ್ತದ್ದು, ಅಪ್ಪನಿಗೆ ಬುದ್ಧಿಭ್ರಮಣೆಯಾಗಿ ಹುಚ್ಚಾಸ್ಪತ್ರೆಯಲ್ಲಿ ಇರುವುದು. ಒಂದೇ ಸಲ ಅಷ್ಟು ದುರಂತಗಳನ್ನು ಕಾಣಬೇಕಾದ ವಿಪರ್ಯಾಸ ನಿವಾಸನದ್ದು. ಆದರೂ ನೋವುಂಡೇ ಇತರರಿಗೆ ನೆರವಾಗುತ್ತಿದ್ದಾರೆ.
ತಾನೆಷ್ಟು ಸಂಕಟ ಅನುಭವಿಸುತ್ತಿದ್ದರೂ ಯಾರಿಗೂ ತೋರಿಸಿಕೊಳ್ಳದೆ ಸದಾ ದುಡಿಮೆಯಲ್ಲಿ ಮುಳುಗಿ ಹೋಗಿರುವ ನಿವಾಸನ ಧೀಮಂತ ವ್ಯಕ್ತಿತ್ವಕ್ಕೆ ಸ್ಫೂರ್ತಿ ಮಾರುಹೋಗಿದ್ದಳು. ಅವನ ಸಂಕಟಕ್ಕೆ ಜೊತೆಯಾಗಿ ಅವನ ನೋವಿನಲ್ಲಿ ಪಾಲುದಾರಳಾಗಿ ಬದುಕಿನ ಹಾದಿಯಲ್ಲಿ ಹೆಜ್ಜೆ ಜೋಡಿಸುವ ಅವಳ ಕನಸಿಗೆ, ಅವಳ ಆಕಾಂಕ್ಷೆಗೆ, ಅವಳ ಬಯಕೆಗೆ ನಿವಾಸ್ ತಣ್ಣೀರು ಎರಚಿದ್ದ, ಅವಳ ಕನಸುಗಳನ್ನು ಭಗ್ನಗೊಳಿಸಿದ್ದ; ಆವಳ ಬಯಕೆಯ ಸೌಧವನ್ನು ಉರುಳಿಸಿದ್ದ. ಅವಳ ಪ್ರೇಮಾರಾಧನೆಯನ್ನು ನಿರಾಕರಿಸಿದ್ದ. ಆದರೇನು ಅವನ ಮೇಲೆ ಅವಳಿಗೆ ರೋಷವಿಲ್ಲ, ಕೋಪವಿಲ್ಲ, ತಿರಸ್ಕಾರವಿಲ್ಲ. ತನಗೆ ಅವನ ಪ್ರೀತಿ ಸಿಗದಿದ್ದರೂ ಪರವಾಗಿಲ್ಲ. ಅವನು ಚೆನ್ನಾಗಿರಬೇಕು. ಬರೀ ಸಂಕಷ್ಟಗಳನ್ನು ಉಣ್ಣುತ್ತಿರುವ ನಿವಾಸನಿಗೆ ಬದುಕ ಬೆಳದಿಂಗಳಾಗಿಸುವ ಸಂಗಾತಿ ದೊರೆತು ಅವನ ಬದುಕು ಹಸನಾಗಬೇಕು, ಅವನ ಮನ ಗೆಲ್ಲುವ, ಅವನ ಪ್ರೀತಿ ಪಡೆಯುವ, ಅವನ ಆಸಕ್ತಿ, ಅಭಿರುಚಿಗೆ ಸರಿಸಮಾನವಾಗಿ ನಿಲ್ಲುವ, ಅವನ ಬದುಕಿನಲ್ಲಿ ಹೆಜ್ಜೆ ಇರಿಸುವ ಅದೃಷ್ಟ ಯಾರಿಗಿದೆಯೋ, ತನಗಂತೂ ಆ ಅದೃಷ್ಟವಿಲ್ಲ. ತಾನೇ ಅಂತಹ ಹುಡುಗಿಯನ್ನು ಹುಡುಕಿಕೊಟ್ಟು ಮದುವೆ ಮಾಡಿಸಬೇಕು. ಅಂತಹ ಹುಡುಗಿ ಸಿಕ್ಕರೆ ನಿವಾಸ್ ಖಂಡಿತಾ ತಮ್ಮ ನಿರ್ಧಾರ ಬದಲಿಸುತ್ತಾರೆ. ಮರಳುಗಾಡಿನಂತಿರುವ ಅವರ ಬದುಕಿನಲ್ಲಿ ಓಯಸ್ಸಿಸ್ಸು ಖಂಡಿತಾ ಚಿಮ್ಮುತ್ತದೆ. ಈ ಪ್ರಯತ್ನ ನನ್ನಿಂದಾಗಬೇಕು. ಅವರು ಮದುವೆಗೆ ಒಪ್ಪುವಂತೆ ನಾನು ಮಾಡಲೇಬೇಕು ಎಂದು ಶಪಥ ಮಾಡಿಕೊಂಡಳು-ಆಗಷ್ಟೆ ಮನಸ್ಸಿಗೆ ನಿರಾಳವಾದದ್ದು. ನಿರಾಶೆ ಮನದಲ್ಲಿ ಹೆಪ್ಪುಗಟ್ಟಿದರೂ, ನಿವಾಸನ ಆಸೆಯಂತೆ, ಸುದರ್ಶನನನ್ನು ಮದುವೆಯಾಗಲು ಒಪ್ಪಿದಳು.
ಸುದರ್ಶನನಿಗಂತೂ ಸ್ಫೂರ್ತಿ ತನ್ನನ್ನು ಒಪ್ಪಿರುವುದು ತಿಳಿದು ಹಕ್ಕಿಯಂತೆ ಹಾರಾಡಿದ. ಅದೇ ಹುರುಪಿನಲ್ಲಿ ಅವಳನ್ನು ಹುಡುಕಿಕೊಂಡು ಹಾಸನಕ್ಕೆ ಬಂದುಬಿಟ್ಟ. ತನಗಾಗಿ ಕಾಯುತ್ತಿದ್ದ ಸುದರ್ಶನನನ್ನು ನೋಡಿ, ಸ್ಫೂರ್ತಿ ಗೆಲುವು ತಂದುಕೊಳ್ಳುತ್ತ ಅವನತ್ತ ಬಂದಳು. ಹಾಗೆ ನಡೆದು ಬರುವಾಗ ಬಿಳಿಯ ಚೂಡಿದಾರ್ ಹಾಕಿದ್ದ ಸ್ಫೂರ್ತಿ ಹಂಸ ನಡೆದು ಬರುವಂತೆ ಭಾಸವಾಗಿ ಕಣ್ಣರಳಿಸಿ ನೋಡಿಯೇ ನೋಡಿದ. ತನ್ನ ಪ್ರೇಮದೇವತೆ ತನ್ನ ಆರಾಧನೆಯ ಪುತ್ಥಳಿ ಜೀವತಳೆದು ಎದುರಿಗೆ ನಿಂತಾಗ ಕ್ಷಣ ಮೈಮರೆತ.
‘ಹಲೋ, ನನ್ನ ಜೊತೆ ಮಾತನಾಡಬೇಕು ಅಂತ ಬಂದವ್ರು, ಎಲ್ಲಿ ಕಳೆದು ಹೋದ್ರಿ’ ಸ್ಫೂರ್ತಿ ಎಚ್ಚರಿಸಿದಳು.
ಅವಳ ಲವಲವಿಕೆಯ ಮಾತುಗಳು ಅವನಿಗೆ ಮುದ ನೀಡಿದವು. ಹೋದಬಾರಿ ಬಂದಾಗ ಇಂತಹ ಲವಲವಿಕೆ ಅವಳಲ್ಲಿರಲಿಲ್ಲ. ತನ್ನನ್ನು ಕತ್ತೆತ್ತಿ ನೋಡಲೂ ಶ್ರಮಪಡುತ್ತಿದ್ದ, ಮಾತಾಡಲೂ ಪ್ರಯಾಸ ಪಡುತ್ತಿದ್ದ, ಹೊತ್ತಾಯಿತೆಂದು ಹಾರಿ ಹೋಗಿಯೇಬಿಟ್ಟಿದ್ದ, ಸ್ಫೂರ್ತಿ ಇವಳೇನಾ ಎನ್ನುವಷ್ಟು ಬೆರಗು ಹುಟ್ಟಿಸಿದ್ದ ಸ್ಫೂರ್ತಿ ಮಾತಿನ ಮಲ್ಲಿಯಾಗಿದ್ದಳು.
‘ಸುದರ್ಶನ, ಇದು ಕಾಲೇಜು ಎಲ್ಲಾ ನಮ್ಮನ್ನು ನೋಡ್ತಾ ಇದ್ದಾರೆ. ನಾಳೇನೇ ನಂಗೆ ಪ್ರಿನ್ಸಿಪಾಲರಿಂದ ಬುಲಾವ್ ಬರುತ್ತೆ ಬಾಯ್‌ಫ್ರೆಂಡ್ ಜೊತೆ ಕಾಲೇಜಿನ ಹತ್ತಿರವೇ ಮಾತಾಡುವಷ್ಟು ಧೈರ್ಯಾನಾ ಅಂತ ನನ್ನ ಕೇಳ್ತಾರೆ. ದಿನಾ ಬಾಯ್‌ಫ್ರೆಂಡ್ ಹುಡುಕಿಕೊಂಡು ಬರ್ತಾ ಇದ್ದಾರೆ ಅಂತ ಅಪ್ಪ ಅಮ್ಮಂಗೆ ಫೋನ್ ಹೋಗುತ್ತೆ. ಬೇಗ ನಡೆಯಿರಿ, ಮೊದ್ಲು ಈ ಜಾಗದಿಂದ ಬೇರೆ ಕಡೆ ಹೋಗೋಣ’ ಎಂದು ಅವಸರಿಸಿದಳು.
‘ಬೈಕ್ ತಂದಿದೀನಿ. ಯಾವ ಕಡೆ ಹೋಗೋಣ ಸ್ಫೂರ್ತಿ’ ಉತ್ಸಾಹದಿಂದ ಅವಳನ್ನೇ ಕೇಳಿದ. ‘ವಾಹ್, ಬೈಕ್ ತಂದಿದ್ದೀರಾ. ನಿಮಗೆ ಗೊತ್ತಾ ನಂಗೆ ಬೈಕ್ ಅಂದ್ರೆ ತುಂಬಾ ಇಷ್ಟ. ಬೈಕಲ್ಲಿ ಕೂತ್ಕೊಂಡು ಹೋಗ್ತ ಇದ್ರೆ ಹಕ್ಕಿ ಹಾಗೆ ಹಾರಾಡಿದ ಖುಷಿ ಸಿಗುತ್ತೆ. ಸ್ಟೇಡಿಯಂ ಕಡೆ ಹೋಗೋಣ ಬನ್ನಿ’ ಎನ್ನುತ್ತ ಅವನ ಹಿಂದೆ ಕುಣಿಯುವ ಹೆಜ್ಜೆಯಲ್ಲಿ ನಡೆದಳು.
ಬಸ್‍ಸ್ವಾಂಡಿನ ಎದುರು ನಿಲ್ಲಿಸಿದ್ದ ಚೈಕ್ ತೆಗೆದುಕೊಂಡು ಅವಳನ್ನು ಕೂರಿಸಿಕೊಂಡು ಸ್ಟೇಡಿಯಂ ಕಡೆ ಗಾಡಿ ಓಡಿಸಿದ. ಸುದರ್ಶನನ ಹಿಂದೆ ಬೈಕಿನಲ್ಲಿ ಕುಳಿತು ಅವನಿಗೆ ಒರಗಿಕೊಂಡಾಗ ಪುಳಕಿತಗೊಂಡಳು. ಅಂತಹುದೇ ರೋಮಾಂಚನ ಹೊಂದಿದ ಸುದರ್ಶನ ವೇಗವಾಗಿ ಗಾಡಿಯನ್ನು ಓಡಿಸುತ್ತ ಸಣ್ಣದಾಗಿ ಸಿಳ್ಳೆ ಹಾಕಿದ.
‘ಬಿದ್ದುಬಿಡ್ತೀರಾ ಗಟ್ಟಿಯಾಗಿ ನನ್ನ ಹಿಡಿದುಕೊಳ್ಳಿ’ ಎಂದು ಹಂಪ್ ನೆಗೆಯುವಾಗ ಸೂಚನೆ ನೀಡಿದ.
ಸಂಕೋಚ ಎನಿಸಿದರೂ ಬಿದ್ದುಬಿಡುವ ಭಯದಿಂದ ಮೆಲ್ಲನೆ ಅವನ ಸೊಂಟವನ್ನು ಬಳಸಿದಳು. ತನ್ನ ಸೊಂಟ ಬಳಸಿದ ಅವಳ ಕೈಯನ್ನು ತನ್ನ ಎಡಗೈಯಿಂದ ಸವರಿದ ಸುದರ್ಶನ.
‘ಇದು ರಸ್ತೆ, ಮುಂದೆ ಹೆಚ್ಚು ಗಮನವಿರಲಿ’ ಅವನ ಸ್ಪರ್ಶದಿಂದ ಅಮಲು ಏರಿದಂತಾಗಿ ಮೆಲ್ಲನೆ ಅವನ ಕಿವಿ ಬಳಿ ಪಿಸುಗುಟ್ಟಿದಳು. ಸ್ಫೂರ್ತಿಯ ಮುಂಗುರುಳು ಕಿವಿ ಬಳಿ ಕಟಗುಳಿ ಇಟ್ಟಂತಾಗಿ ನಸುನಗುತ್ತ ಅವಳ ಕೈಮೇಲಿನಿಂದ ಕೈತೆಗೆದು ಗಾಡಿ ಓಡಿಸಿದ.
ಸ್ಫೂರ್ತಿ ಮತ್ತು ಸುದರ್ಶನ್ ಸ್ಟೇಡಿಯಂ ತಲುಪಿ ಗಾಡಿ ನಿಲ್ಲಿಸಿ ಅಲ್ಲಿದ್ದ ಮೆಟ್ಟಿಲುಗಳ ಮೇಲೆ ಕುಳಿತರು. ಕ್ರೀಡಾಪಟುಗಳು ಆಟ ಆಡುತ್ತಿದ್ದರು. ವ್ಯಾಯಾಮ ಮಾಡುವವರು, ವಾಕಿಂಗ್ ಮಾಡುವವರು, ಮಕ್ಕಳನ್ನು ಕರೆದುಕೊಂಡು ಬಂದ ತಾಯಂದಿರು, ಹರಟೆ ಹೊಡೆಯುತ್ತಿರುವ ಹಿರಿಯ ನಾಗರಿಕರು, ಮೆಟ್ಟಿಲು ಹತ್ತಿ ಇಳಿಯುತ್ತಿದ್ದ ಪುಟಾಣಿಗಳು ಎಲ್ಲರನ್ನು ನೋಡುತ್ತ ಸುದರ್ಶನ ಹೇಳಿದ:
‘ನಾನು ಸ್ಟೇಡಿಯಂಗೆ ಬಂದೇ ಇರಲಿಲ್ಲ. ಸ್ಟೇಡಿಯಂ ಇಷ್ಟೊಂದು ಜನರಿಗೆ ಅನುಕೂಲ ಆಗ್ತಾ ಇದೆ ಅಂತ ಇವತ್ತೇ ನೋಡಿದ್ದು.’
‘ಹೂಂ, ವಾಕಿಂಗ್ ಮಾಡೋರೊ, ಆಟ ಆಡೋರೊ ಬೆಳಿಗ್ಗೆನೂ ಇಲ್ಲಿಗೇ ಬರ್ತಾರೆ. ಯಾವಾಗಲೂ ಹೀಗೆ ಜನ ಇರ್ತಾರೆ. ಕತ್ಲೆ ಆದ್ರೂ ಆಡ್ತಾನೇ ಇರ್ತಾರೆ’
‘ಆದ್ರೆ ನಮ್ಮಂತವರಿಗೆ ಇದು ಸೂಕ್ತ ಜಾಗ ಅಲ್ಲ. ಎಲ್ಲಾದರೂ ಏಕಾಂತವಾಗಿರೋ ಜಾಗಕ್ಕೆ ಹೋಗಬಹುದಿತ್ತು’ ಜನರನ್ನು ನೋಡಿ ನುಡಿದ.
‘ಪರ್ವಾಗಿಲ್ಲ, ಯಾರೂ ಯಾರನ್ನೂ ಗಮನಿಸುವುದಿಲ್ಲ. ಅವರವರ ಲೋಕದಲ್ಲಿ ಅವರಿರುತ್ತಾರೆ. ನಮ್ಮ ಪ್ರೈವೈಸಿಗೇನು ತೊಂದರೆ ಇಲ್ಲ. ಆ ಕಡೆ ನೋಡಿ ಅಲ್ಲೊಂದು ಜೋಡಿ ತಮ್ಮದೇ ಲೋಕದಲ್ಲಿ ಮೈಮರೆತಿದ್ದಾರೆ. ಇಲ್ಲಿ ಅವೆಲ್ಲ ಕಾಮನ್. ತಣ್ಣಗೆ ಗಾಳಿ ಬೀಸ್ತಾ ಇದೆ. ವಾತಾವರಣ ಚೆನ್ನಾಗಿದೆ. ಯಾರೂ ಕುಕೂಹಲ ತೋರುವುದಿಲ್ಲ. ಹಾಸನದಲ್ಲಿ ಸಧ್ಯಕ್ಕೆ ಇದೊಂದೇ ಜಾಗ ಸೇಫ್’ ವಿವರಣೆ ನೀಡಿದಳು.
‘ಸರಿ ನಿಮಗೆ ಇಷ್ಟವಾದ್ರೆ, ನಿಮಗೆ ಮುಜುಗರವಾಗದೆ ಇದ್ರೆ ಆಯ್ತು. ನಂಗೇನು ಅಭ್ಯಂತರವಿಲ್ಲ. ನಿಮಗೆ ಸಂಕೋಚವಾಗಬಹುದು ಅಂದುಕೊಂಡಿದ್ದೆ. ನಂಗೇನು ಕಣ್ಣಿಗೆ ತಂಪು, ಮನಸ್ಸಿಗೂ ತಂಪು’ ತಮ್ಮ ಮುಂದೆ ಟ್ರಾಕ್ ಸೂಟ್ ಹಾಕಿಕೊಂಡು ಓಡುತ್ತಿದ್ದ ಹುಡುಗಿಯರನ್ನು ನೋಡಿಕೊಂಡು ತುಂಟತನದಿಂದ ಹೇಳಿದಾಗ, ಸ್ಫೂರ್ತಿ ‘ಈ ಗಂಡಸರ ಹಣೆ ಬರಹವೇ ಇಷ್ಟು, ಸದಾ ಕಣ್ಣಿಗೆ ತಂಪು ಮಾಡಿಕೊಳ್ಳುವ ಮನಸ್ಸಿನಲ್ಲಿಯೇ ಇರುತ್ತಾರೆ’ ಸಣ್ಣಗೆ ಸಿಡುಕಿದಳು.
‘ರೀ ಕೋಪ ಮಾಡಿಕೊಳ್ಳಬೇಡ್ರಿ. ನಾನು ಸುಮ್ನೆಯ ತಮಾಷೆಗೆ ಹೇಳಿದೆ. ನನ್ನ ಹುಡುಗಿಗಿಂತ ಬೇರೆ ಹುಡುಗಿ ಬೇಕಾ, ಈ ಕಣ್ಣು ಸದಾ ನಿಮ್ಮನ್ನು ಮಾತ್ರ ನೋಡೋಕೆ ಬಯಸುತ್ತವೆ’ ಸೀರಿಯಸ್ಸಾಗಿ ಹೇಳಿದಾಗ ನಾಚಿದಳು ಸ್ಫೂರ್ತಿ. ನನ್ನ ಹುಡುಗಿ ಅಂತ ಅವಳನ್ನು ಪ್ರೇಮಪೂರಿತ ನೋಟ ಬೀರುತ್ತ ನುಡಿದಾಗ ಹೃದಯದಲ್ಲಿ ಅನುರಾಗದ ಅಲೆಗಳು ಎದ್ದವು.
ಅರೇ, ಇದೆಂಥ ಮನಸ್ಸು. ನೆನ್ನೆವರೆಗೂ ನಿವಾಸನ ಜಪ ಮಾಡುತ್ತಿದ್ದ ಈ ಹೃದಯ ಈಗಾಗಲೇ ಸುದರ್ಶನ ಪ್ರೀತಿಯನ್ನು ಒಪ್ಪಿಕೊಂಡು ಅವನ ಬಗ್ಗೆ ಅನುರಾಗ ತಾಳುತ್ತಿದೆ! ಈ ಮನಸ್ಸು ಇಷ್ಟೊಂದು ಚಂಚಲವೇ. ಛೇ, ಛೇ. ನಿವಾಸನ ಬಗ್ಗೆ ಗೌರವ ಆದರ ಇದೆ.
ಅವನಿಂದ ಪ್ರೀತಿ ಪಡೆಯಲು ಸಾಧ್ಯವಿಲ್ಲವೆಂದು ತಿಳಿದ ನಂತರ ತಾನೇ ಸುದರ್ಶನನ ಪ್ರೀತಿಯನ್ನು ತಾನು ಒಪ್ಪಿದ್ದು. ಒಪ್ಪಿದ ಮೇಲೆ ಆ ಪ್ರೀತಿಗೆ ತನ್ನಿಂದ ಸ್ಪಂದನೆ ಸಿಗದಿದ್ದರೆ ಸುದರ್ಶನ ನೊಂದುಕೊಳ್ಳುವುದಿಲ್ಲವೆ? ಈ ಪ್ರೀತಿ ಪ್ರಾಮಾಣಿಕವಾದದ್ದು, ನೈಜವಾದದ್ದು- ತನ್ನನು ತಾನು ಸಮರ್ಥಿಸಿಕೊಂಡಳು. ಮನಸ್ಸುಗಳ ಶೀಘ್ರ ಬದಲಾವಣೆಗೆ ಅಚ್ಚರಿಗೊಂಡಳು ಕೂಡ. ಹೋದ ಬಾರಿ ಸುದರ್ಶನ ಬಂದಾಗ ಅವನ ಭೇಟಿ ಅಸಹನೀಯವೆನಿಸಿತ್ತು. ಅವನೊಂದಿಗೆ ಕಳೆಯುವ ಕ್ಷಣ ಹಿತ ಎನಿಸುತ್ತಿದೆ. ಅವನೊಂದಿಗಿನ ಮಾತು ಸಿಹಿ ಜೇನು ಸವಿದಂತಾಗುತ್ತಿದೆ. ಎಷ್ಟು ಬೇಗ ನಾನು ಪರಿವರ್ತನೆ ಹೊಂದಿದ್ದೇನೆ, ಇದಕ್ಕೆ ಸುದರ್ಶನನ ಪ್ರೇಮವೂ ಕಾರಣವಿರಬಹುದೇ? ಅವನ ಆರಾಧನೆ, ಪ್ರೀತಿ, ಅವನ ಬೇಡಿಕೆ-ನನ್ನ ಕಂಡೊಡನೆ ಪ್ರೇಮದಿಂದ ಅರಳುವ ಅವನ ಮುಖವನ್ನು ಇದೆಲ್ಲವನ್ನೂ ಪ್ರೀತಿಯಿಂದ ನೋಡಿದಳು.
‘ಸ್ಫೂರ್ತಿ, ನೀವು ನನ್ನನ್ನು ಒಪ್ಪಿದ್ದು ನಂಗೆಂಥ ಸಂತೋಷ ನೀಡಿತು ಗೊತ್ತಾ? ನೀವು ಒಪ್ಪದೆ ಇದ್ದ ಪಕ್ಷದಲ್ಲಿ ನಾನು ಏನಾಗಿ ಹೋಗುತ್ತಿದ್ದನೋ… ಮೊಟ್ಟಮೊದಲ ಬಾರಿಗೆ ನಿಮ್ಮನ್ನು ನೋಡಿದ ಕೂಡಲೇ, ಮದ್ವೆ ಅಂತ ಆದ್ರೆ ಅದು ನಿಮ್ಮನ್ನೇ ಅಂತ ತೀರ್ಮಾನಿಸಿಬಿಟ್ಟೆ. ನಿಮ್ಮ ಕೃಷಿಯಾಸಕ್ತಿ ನನ್ನನ್ನು ಸೆಳೆದು, ನಿಮ್ಮಂಥ ಸಂಗಾತಿ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಅನ್ನೊ ಆಶ್ವಾಸನೆ ಸಿಕ್ಕಿತು. ನಾನು ವ್ಯವಸಾಯವನ್ನೆ ನಂಬಿ ಹಳ್ಳಿಯಲ್ಲಿದ್ದೇನೆ. ಬೇರೆ ಯಾರೋ ನನ್ನ ಮದ್ವೆ ಆದರೆ ನನ್ನೊಂದಿಗೆ ಸಹಕರಿಸಲು ಆಕೆಯಿಂದ ಸಾಧ್ಯವೇ? ಈಗಿನ ಕಾಲದ ಹೆಣ್ಣುಮಕ್ಕಳಿಗೆ ಸಿಟಿಯಲ್ಲಿರಬೇಕು, ಕೆಲಸಕ್ಕೆ ಹೋಗುವ ಗಂಡ ಬೇಕು ಅಂತ ಅಪೇಕ್ಷೆ ಪಡುತ್ತಾರೆ. ಆದರೆ ಅಪರೂಪದ ಹೆಣ್ಣು ನೀವು. ಕಾಲೇಜಿನಲ್ಲಿ ಓದುತ್ತಿದ್ದರೂ ರೈತರಿಗಾಗಿ ದುಡಿಯುತ್ತಿದ್ದೀರಾ, ನಿಮ್ಮ ಓದಿನ ನಡುವೆಯೂ ಇಂತಹ ಸಂಘಟನೆಗಳಲ್ಲಿ ದುಡಿಯುತ್ತ ಇದ್ದೀರಿ. ನಾನು ಅದೆಷ್ಟು ಪುಣ್ಯ ಮಾಡಿದ್ದೇನೋ. ನಿಮ್ಮಂತ ಹುಡುಗಿ ಸಂಗಾತಿಯಾಗಿ ಸಿಗಲು…’ ಅವಳ ಕೈ ಹಿಡಿದು ಪ್ರೇಮದಿಂದ ತುಡಿಯುತ್ತ ಅವಳ ಹಸ್ತವನ್ನು ತುಟಿಗಿರಿಸಿಕೊಂಡ. ತಟ್ಟನೆ ಕೈ ಬಿಡಿಸಿಕೊಂಡ ಸ್ಫೂರ್ತಿ- ‘ಸುದರ್ಶನ್, ಇದು ಪಬ್ಲಿಕ್ ಪ್ಲೇಸ್, ನಿಮ್ಮ ರೋಮಾನ್ಸ್ ಎಲ್ಲಾ ಮದುವೆ ಆದ ಮೇಲೆ ಇರಲಿ’ ನಾಚುತ್ತ ನುಡಿದಳು.
ಅವಳ ನಾಚಿಕೆ ತುಂಬಿದ ಮುಖವನ್ನೆ ಆರಾಧನೆಯಿಂದ ಆಸ್ವಾದಿಸಿದ. ಹಳ್ಳಿಯ ಮುಗ್ಧ ಹೆಣ್ಣು ನನ್ನವಳು ಎನಿಸಿ ಅಭಿಮಾನ ತುಂಬಿ ಬಂತು.
‘ಸ್ಫೂರ್ತಿ, ನಿಮ್ಗೆ ನಾನು ವರದಕ್ಷಿಣೆ ಕೇಳ್ತೀನಿ ಅಂತ ಕೋಪ ಇತ್ತು ಅಲ್ವ. ಅದು ನಿಮ್ಮ ಮನೆಗೆ ಕರೆತಂದವರು ಮಾಡಿದ ಅವಾಂತರ. ನಾನು ಮೊದಲಿನಿಂದಲೂ ವರದಕ್ಷಿಣೆ ವಿರೋಧಿ. ಚೊಕ್ಕ ಚಿನ್ನವೇ ಸಿಗುತ್ತಿರುವಾಗ ಹಣ, ಒಡವೆ ಅಂತ ಆಸೆಪಡೋ ಅಸಂಸ್ಕೃತ ನಾನಲ್ಲ. ನಿಮ್ಮ ಮನೆಯಿಂದ ನಾನು ಒಂದು ಪೈಸೇನೂ ಬಯಸೋಲ್ಲ. ಅದ್ದೂರಿ ಮದುವೆ ನಂಗೂ ಇಷ್ಟ ಇಲ್ಲ. ನಿವಾಸ್ ಜೊತೆ ಮಾತನಾಡಿದ್ದೇನೆ. ಒಂದು ಒಳ್ಳೆಯ ದಿನ ಅಂದರೆ ನಿಮ್ಮ ಸಂಘಟನೆಯ ಕಾರ್ಯಕ್ರಮದ ದಿನ ಸರಳವಾಗಿ ಮದುವೆಯಾಗಿಬಿಡೋಣ, ನಿಮ್ಮ ಮನೆಯವರಿಗೆ ಒಬ್ಬಳೇ ಮಗಳು. ಚೆನ್ನಾಗಿ ಮದುವೆ ಮಾಡಬೇಕು ಅಂತ ಆಸೆ ಇದೆಯಂತೆ. ನಾನೂ ಒಬ್ಬನೇ ಮಗ. ನಮ್ಮ ಪೇರೆಂಟ್ಸ್‌ಗೂ ಮದ್ವೆ ಚೆನ್ನಾಗಿ ಆಗಬೇಕು ಅಂತ ಆಸೆ ಇದೆ. ಇಬ್ರು ಮನೆಯಮಿಗೂ ಬೇಸರ ಆಗುತ್ತೆ. ಅದಕ್ಕಾಗಿ ತಲೆ ಕೆಡಿಸಿಕೊಳ್ಳುವುದು ಬೇಡ’ ಮದುವೆ ಕುರಿತು ನನ್ನ ಅಭಿಪ್ರಾಯ ತಿಳಿಸಿದನು.
ಸ್ಫೂರ್ತಿಯೂ ಅದೇ ಮನಸ್ಸಿನವಳು. ತನ್ನ ಮನಸ್ಸಿನಂತೆಯೇ ಸುದರ್ಶನ ನುಡಿಯುತ್ತಿದ್ದಾನೆ. ಮದುವೆಗಾಗಿ ನಾಲ್ಕೈದು ಲಕ್ಷ ಖರ್ಚು ಮಾಡುವುದು. ನಂತರ ಸಾಲ ತಲೆ ಮೇಲೆ ಹೊತ್ತು ತೀರಿಸಲಾರದೆ ಒದ್ದಾಡುವುದು- ಇಂತಹ ಅದ್ಧೂರಿತನ ಬೇಡ ಅಂತ ಅಲ್ಲವೇ… ತಾವು ರೈತರಿಗೆ, ಜನತೆಗೆ ಸಂದೇಶ ಸಾರುತ್ತಿರುವುದು. ನಾನೂ ಅದಕ್ಕೆ ಬದ್ಧಳಾಗಿರಬೇಕಲ್ಲವೇ. ಹೇಳುವುದು ಒಂದು, ಮಾಡುವುದು ಒಂದು ಆಗಬಾರದು ಎಂಬುದು ತನ್ನ ಮನದ ಇಂಗಿತವಾಗಿತ್ತು. ನಾವು ಮಾದರಿಯಾಗಿ ನಡೆದುಕೊಂಡರೆ ಅದರ ಸ್ಫೂರ್ತಿಯಿಂದ ಮತ್ತಿತರರು ನಡೆದುಕೊಂಡಾರು. ಹೇಗೆ ನಡೆದರೂ ಮದುವೆಯೇ, ನಂತರ ಬಾಳುವುದಷ್ಟೆ ಮುಖ್ಯ ಎಂಬುದು ಅವಳ ನಿಲುವಾಗಿತ್ತು. ಈಗ ಅಂತಹ ನಿಲುವಿಗೆ ಬೆಂಬಲ ನೀಡುವ, ಸರಳ ಮದುವೆಯನ್ನು ಒಪ್ಪಿಕೊಳ್ಳುವ ಹೃದಯವಂತ ತನಗೆ ಸಿಕ್ಕಿರುವುದು ನಿಜವಾಗಲೂ ನನ್ನ ಅದೃಷ್ಟ. ನಿವಾಸ್ ಹೇಳಿದ್ದು ಸರಿ. ಸುದರ್ಶನ ತುಂಬಾ ಒಳ್ಳೆ ಮನಸ್ಸಿನ, ತನ್ನನ್ನು ಉತ್ಕೃಷ್ಟವಾಗಿ ಪ್ರೀತಿಸಬಲ್ಲ ವ್ಯಕ್ತಿ. ಇವನೊಂದಿಗಿನ ತನ್ನ ಬದುಕು ಹೂವ ಹಾದಿಯೇ ಸರಿ. ನಿವಾಸ್ ಸಿಗದಿದ್ದರೂ, ಅಂತಹುದೇ ಮನಸ್ಸಿರುವ, ಅಂತಹುದೇ ಅಭಿರುಚಿ, ಆಸಕ್ತಿ ಇರುವ ಸುದರ್ಶನ ನನಗೆ ಲಭಿಸಿದ್ದಾನೆ. ಇನ್ನು ತಾನೇಕೆ ಚಿಂತಿಸಬೇಕು. ಅವನ ಮಾತಿಗೆ ತನ್ನ ಸಂಪೂರ್ಣ ಸಮ್ಮತಿ ತಿಳಿಸಿದಳು.
ಮದುವೆಯ ನಂತರ ತಮ್ಮ ಮನೆಯಿಂದಲೇ ಓದಲು ಹೋಗಬಹುದು. ಎಷ್ಟು ಓದುವೆನೆಂದರೂ ಓದಿಸಲು ತಾನು ಸಿದ್ಧ. ಮನೆಯವರೂ ಈ ಬಗ್ಗೆ ಅಡ್ಡಿ ಮಾಡಲಾರರು ಎಂಬ ಭರವಸೆ ಕೂಡ ನೀಡಿದ. ಕತ್ತಲಾಗುತ್ತ ಬಂದರೂ ಸ್ಫೂರ್ತಿಗೆ ಆತಂಕವಾಗಲಿಲ್ಲ. ನನ್ನವನಾಗುವವನ ಜೊತೆ ತಾನೇ ತಾನು ಇರುವುದು ಎಂಬ ಧೈರ್ಯದಿಂದ ಕುಳಿತೇ ಇದ್ದಳು. ಸುದರ್ಶನನೇ ಕತ್ತಲಾಯಿತು, ಮನೆ ತಲುಪಿಸಿ ತಾನು ಹೊರಡುವೆ ಎಂದು ಮೇಲಕ್ಕೆದ್ದ. ಅವನನ್ನು ಬಿಟ್ಟು ಹೊರಡುವುದೆಂದರೆ ಸಂಕಟವಾಗತೊಡಗಿತು. ಅವನಿಗೂ ಇದು ಹಿಂಸೆಯ ಕೆಲಸವೇ. ಆದರೆ ಹೋಗಲೇಬೇಕಿತ್ತಲ್ಲವೇ. ಕೆಲವೇ ದಿನ ಈ ದೂರ- ಅಲ್ಲೀವರೆಗೂ ವಿಧಿ ಇಲ್ಲದೆ ಸಹಿಸಿಕೊಳ್ಳಲೇಬೇಕು ಎಂದು ಸಮಾಧಾನ ತಾಳುತ್ತ ಒಬ್ಬರನ್ನೊಬ್ಬರು ಬೀಳ್ಕೊಟ್ಟರು.
ಸರಳ ಮದುವೆ ಮುಂದಿನ ತಿಂಗಳಲ್ಲೇ ಮದುವೆ ನಿಗದಿಯಾಯಿತು. ಎರಡೂ ಕಡೆಯ ಹಿರಿಯರು ಮೊದಮೊದಲು ಸರಳ ಮದುವೆಗೆ ಒಪ್ಪಲೇ ಇಲ್ಲ. ನಿವಾಸನ ಮಾತುಗಳು ಹಾಗೂ ಸ್ಫೂರ್ತಿ-ಸುದರ್ಶನರ ಹಠದಿಂದಾಗಿ ಅಸಮಾಧಾನದಿಂದಲೇ ಒಪ್ಪಿದರು- ಎರಡೂ ಕಡೆಯಿಂದ ನೆಂಟರು ನೂರು ಜನ, ಸ್ನೇಹಿತರು ಐವತ್ತು ಜನ ಇಷ್ಟೇ ಜನ ಸಾಕೆಂದು ತೀರ್ಮಾನಿಸಿಕೊಂಡರು. ಹಾರ ಬದಲಾಯಿಸಿಕೊಂಡು, ರಿಜಿಸ್ಪರ್ ಆಫೀಸಿನಲ್ಲಿ ಮದುವೆ ನೋಂದಣಿ ಮಾಡುವುದು, ಬಂದವರಿಗೆಲ್ಲ ಒಂದು ಸರಳ ಸಿಹಿ ಊಟ. ಇದಿಷ್ಟರಲ್ಲೇ ಮದುವೆ ಮುಗಿಸಬೇಕು ಎಂಬುದು ಸ್ಫೂರ್ತಿ ಹಾಗೂ ಸುದರ್ಶನರ ನಿರ್ಧಾರ.
ಸ್ನೇಹಿತರ ಪೈಕಿ ತನ್ನ ಕಾಲೇಜಿನ ನಾಲ್ಕಾರು ಗೆಳತಿಯರು ಹಾಗೂ ಇಳಾಳನ್ನು ಮಾತ್ರ ಸ್ಫೂರ್ತಿ ಆಹ್ವಾನಿಸಿದ್ದಳು. ಇಷ್ಟು ಬೇಗ ಸ್ಫೂರ್ತಿ ಮದುವೆ ನಿಶ್ವಯವಾಯಿತೆ ಎಂದು ಅಚ್ಚರಿಪಟ್ಟಳು ಇಳಾ. ಸ್ಫೂರ್ತಿ ಫೋನಿನಲ್ಲಿಯೇ ಸುದರ್ಶನ ತನ್ನನ್ನು ಮೆಚ್ಚಿದ್ದು, ಮೊದಮೊದಲು ತಾನು ಅವನನ್ನು ನಿರಾಕರಿಸಿದ್ದು, ನಿವಾಸ್ ಆತನ ಬಗ್ಗೆ ಹೇಳಿ ಒಪ್ಪಿಸಿದ್ದು. ಕೊನೆಗೆ ಸುದರ್ಶನನ ಸರಳತೆ, ಆದರ್ಶ, ವಿಚಾರವಂತಿಕೆ, ಆಸಕ್ತಿ ಅಭಿರುಚಿಗೆ ತಾನೂ ಮನಸೋತಿದ್ದು, ಇಬ್ಬರ ಆಸೆಯಂತೆ ಸರಳವಾಗಿ ಮದುವೆ ಆಗುತ್ತಿದ್ದು, ಬರಲೇಬೇಕೆಂದು ಆತ್ಮೀಯವಾಗಿ ಇಳಾಳನ್ನು ಒತ್ತಾಯಿಸಿದಳು. ಸ್ಫೂರ್ತಿಗೋಸ್ಕರ ಮದುವೆಗೆ ಬಂದೇಬರುವೆ ಎಂದು ಮಾತುಕೊಟ್ಟಳು.
ಮದುವೆ ಸ್ಫೂರ್ತಿಯ ಊರಿನಲ್ಲಿಯೇ ನಡೆಯಿತು. ಇಳಾ ಬೆಳಿಗ್ಗೆಯೇ ಬಂದಿದ್ದಳು. ಯಾವ ಆಡಂಬರವೂ ಇಲ್ಲದೆ, ಹಾರ ಬದಲಿಸಿಕೊಳ್ಳುವಷ್ಟರಲ್ಲಿ ಮದುವೆ ಮುಗಿದೇಹೋಯಿತು. ಯಾರೂ ಉಡುಗೊರೆ ನೀಡಬಾರದೆಂದು ಮೊದಲೇ ಹೇಳಿಬಿಟ್ಟಿದ್ದರು. ಹಾಗಾಗಿ ಆ ರಗಳೆಯೂ ಇರಲಿಲ್ಲ. ಒಂದು ಹಬ್ಬದಂತೆ ಮದುವೆ ನಡೆದದ್ದು ಇಳಾಗೆ ಅಚ್ಚರಿ ತರಿಸಿತ್ತು. ಮದುವೆ ಎಂದರೆ ಇಷ್ಟೊಂದು ಸುಲಭವಾಗಿ ನಡೆಯಬಹುದೇ. ಎಲ್ಲಾ ಮದುವೇನೂ ಹೀಗೆ ನಡೆದರೆ ಅದೆಷ್ಟು ಲಕ್ಷಗಳು ಉಳಿಯುತ್ತವೆ. ತಾನು ನೋಡಿದ್ದ ಮದುವೆಗಳೆಲ್ಲಾ ಅದ್ಧೂರಿ ಮದುವೆಗಳೇ. ನಿಶ್ಚಿತಾರ್ಥವೇ ಒಂದು ಮದುವೆಯಂತೆ ಈಗ ನಡೆಯುತ್ತದೆ. ತಾಳಿ ಒಂದು ಕಟ್ಟುವುದಿಲ್ಲ ಅಷ್ಟೆ. ಇನ್ನು ಮದುವೆ ಹಿಂದಿನ ದಿನ ಆರತಕ್ಷತೆ, ವಿವಿಧ ರೀತಿಯ ಶೈಲಿಯ ಊಟ ತಿಂಡಿಗಳು, ಲಕ್ಷ ಲಕ್ಷ ಹಣ ನೀರಿನ ಹೊಳೆಯಂತೆ ಹರಿದಿರುತ್ತದೆ. ಮದುವೆ ದಿನವೂ ಅದ್ಧೂರಿಯೇ. ಬಟ್ಟೆ, ಒಡವೆ ಉಡುಗೊರೆ ಅಂತ ಖರ್ಚೋ ಖರ್ಚು. ನನ್ನ ಮದುವೆಗೂ ಹೀಗೆ ಖರ್ಚು ಮಾಡಬೇಕಾದೀತೆಂದೇ ಅಮ್ಮ ಯೋಚನೆ ಮಾಡುತ್ತಿರುತ್ತಾಳೆ. ಆದರೆ ಇಂತಹ ಸರಳ ಮದುವೆಗಳಿಂದ ಎಷ್ಟೊಂದು ಅನುಕೂಲ.
ತಾನೂ ಕೂಡ ಮದುವೆ ಆಗುವುದೇ ಆದರೆ ಇದೇ ರೀತಿ ಸರಳ ಮದುವೆ ಮಾಡಿಕೊಳ್ಳಬೇಕು. ಆದರೆ ತಮ್ಮಮನೆಯಲ್ಲಿ ಇದು ಸ್ವಲ್ಪ ಕಷ್ಟವೇ. ಅಮ್ಮ, ದೊಡ್ಡಪ್ಪ, ಮಾವಂದಿರೂ ಸುಲಭವಾಗಿ ಒಪ್ಪಲಾರರು. ನೋಡೋಣ ಆ ಕಾಲ ಬಂದಾಗ ಎಂದು ಕೊಂಡು ಸ್ಫೂರ್ತಿಯ ಮದುವೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಳು. ನಿವಾಸ್ ಕೂಡ ಸಡಗರದಿಂದ ಓಡಾಡುತ್ತಿದ್ದ. ಮದುವೆಗೆಂದು ರೇಷ್ಮೆ ಶರ್ಟ್, ಪಂಚೆ ಉಟ್ಟಿದ್ದು ಅವನಿಗೆ ವಿಶೇಷವಾಗಿ ಕಾಣಿಸುತ್ತಿತ್ತು. ಅವನೇ ಮದುಮಗನೇನೋ ಎನ್ನುವಂತೆ ಕಾಣುತ್ತಿದ್ದ. ಆ ದಿರಿಸಿನಲ್ಲಿ ಮತ್ತಷ್ಟು ಚೆಲುವ ಚೆನ್ನಿಗನಂತೆ ಕಾಣಿಸುತ್ತಿದ್ದಾನೆ ಎಂದುಕೊಂಡಳು ಇಳಾ. ಸ್ಫೂರ್ತಿಯ ಬಲವಂತಕ್ಕೆ ಅವಳದೇ ಸೀರೆ ಉಟ್ಟಿದ್ದ ಇಳಾ ದೊಡ್ಡ ಹೆಂಗಸಿನಂತೆ ಕಾಣುತ್ತಿದ್ದಳು. ಅದುವರೆಗೂ ಪುಟ್ಟ ಹುಡುಗಿಯಂತೆಯೇ ಕಾಣುತ್ತಿದ್ದ ಇಳಾ ತಿಳಿಹಸಿರು ರೇಶಿಮೆ ಸೀರೆಯಲ್ಲಿ, ಅಪರೂಪಕ್ಕೆ ಹಾಕಿಕೊಂಡಿದ್ದ ಮುತ್ತಿನ ಓಲೆ, ಜುಮುಕಿ, ಕೊರಳಿನಲ್ಲಿ ಉದ್ದನೆಯ ಮುತ್ತಿನ ಸರ, ಜಡೆ ಹೆಣೆದು ಮಲ್ಲಿಗೆ ಮುಡಿದಿದ್ದು, ಸ್ಫೂರ್ತಿಯ ಪಕ್ಕದಲ್ಲಿ ನಿಂತಿದ್ದರೆ ಎಲ್ಲರೂ ಅವಳನ್ನೇ ನೋಡುತ್ತಿದ್ದರು. ನಿವಾಸ್ ಕೂಡ ಕಣ್ಣರಳಿಸಿ ಅವಳತ್ತ ನೋಡಿದ್ದ. ಎಲ್ಲರ ನೋಟ ಎದುರಿಸಲಾರದೆ ಇಳಾ ಮುಜುಗರಪಡುತ್ತಿದ್ದಳು.
ಎಷ್ಟು ಬೇಗ ಸೀರೆ ಕಳಚಿ ಚೂಡಿದಾರ್ ಹಾಕಿಕೊಂಡೆನೊ ಅಂತ ತವಕಿಸುತ್ತಿದ್ದಳು ಇಳಾ. ನಿವಾಸ್ ಮೆಚ್ಚುಗೆಯಿಂದ ಇಳಾಳತ್ತ ನೋಡುತ್ತಿದ್ದುದನ್ನು ಸ್ಫೂರ್ತಿ ಗಮನಿಸಿದಳು. ಕ್ಷಣ ಅಸೂಯೆಯಿಂದ ಮನಸ್ಸು ನರಳಿದರೂ, ತಕ್ಷಣವೇ, ಆ ಭಾವನೆಯನ್ನು ಕಿತ್ತು ಹಾಕಿದಳು. ಇಳಾ ಮುದ್ದಾದ ಹುಡುಗಿ, ಯಾವುದೇ ಕಲ್ಮಶವಿಲ್ಲದ ನೇರ ನುಡಿಯ ಎದೆಗಾರಿಕೆ ಇರುವ ಹುಡುಗಿ. ವಯಸ್ಸು ಚಿಕ್ಕದು ಎಂಬುದನ್ನು ಬಿಟ್ಟರೆ ನಿವಾಸಗೆ ಇಳಾ ಒಳ್ಳೆ ಜೋಡಿ. ಅವರಿಬ್ಬರ ಮನಸ್ಸು ಒಂದಾಗಲಿ ಎಂದು ಮನಸ್ಸಿನಲ್ಲಿಯೇ ಹಾರೈಸಿದಳು. ಅವಳ ಮನಸ್ಸಿನಲ್ಲಿರುವುದನ್ನು ಅರಿಯದ ಇಳಾ, ನಿವಾಸ್ ಸಹಜವಾಗಿಯೇ ನಡೆದುಕೊಂಡಿದ್ದರು. ಹೊಸ ತರಹದ ಮದುವೆ ಸಮಾಜಕ್ಕೆ ಮಾದರಿಯಾಗಬೇಕೆಂದು ಅಲ್ಲಿಗೆ ಬಂದಿದ್ದವರೆಲ್ಲ ಹೇಳಿದರು. ಸ್ಫೂರ್ತಿಸುದರ್ಶನರ ಮದುವೆ ಒಂದು ಕ್ರಾಂತಿ ಸೃಷ್ಟಿಸಿತು.
ಇಳಾ ಮದುವೆ ಮುಗಿಸಿ ಹೊರಟು ನಿಂತಳು. ಚನ್ನರಾಯಪಟ್ಟಣದವರೆಗೂ ಒಬ್ಬಳೆ ಹೋಗಬೇಕಾಗಿದ್ದು ಅವಳನ್ನು ಬಿಡಲು ನಿವಾಸನೇ ಹೊರಟ, ನಿವಾಸನ ಹಿಂದೆ ಬೈಕಿನಲ್ಲಿ ಕುಳಿತು ಅಲ್ಲಿದ್ದವರಿಗೆ ಕೈ ಬೀಸಿ ಹೊರಟಾಗ ಒಳ್ಳೆ ಜೋಡಿ ಎಂದು ಕೊಂಡರು ಎಲ್ಲರು. ಸ್ಫೂರ್ತಿ ಕೂಡ ಈ ಜೋಡಿ ಒಂದಾಗಲಿ ಎಂದು ತುಂಬು ಮನಸ್ಸಿನಿಂದ ಹಾರೈಸಿದಳು. ಚನ್ನರಾಯಪಟ್ಟಣದ ಬಸ್ ಸ್ಟಾಂಡಿಗೆ ಅವಳನ್ನು ಕರೆ ತಂದು ಬಸ್ ಹತ್ತಿಸಿ, ತಡವಾಗಿದೆ ಜೋಪಾನ ಎಂದು ಸಾರಿ ಸಾರಿ ಹೇಳಿ ಬಸ್ಸು ಹೊರಡುವ ತನಕ ಇದ್ದು ಮನೆ ತಲುಪಿದ ಕೂಡಲೇ ಫೋನ್ ಮಾಡುವಂತೆ ತಿಳಿಸಿ ಬನ್ನು ಹೊರಟಾಗ ಕೈ ಬೀಸಿದ. ಬಸ್ಸು ಅತ್ತ ಹೋದ ಕೂಡಲೇ ಮನಸ್ಸಿಗೆ ಒಮ್ಮೆಲೆ ಶೂನ್ಯ ಆವರಿಸಿದಂತಾಗಿ, ಇದೇನು ಹೊಸತರ… ನೆನ್ನೆ ಮೊನ್ನೆ ಪರಿಚಯವಾದವಳು ಈ ಹುಡುಗಿ. ಇವಳನ್ನು ಮನಸ್ಸು ಇಷ್ಟೊಂದು ಹಚ್ಚಿಕೊಂಡಿದೆಯೇ… ತನ್ನನ್ನೆ ಸಂಶಯಿಸಿಕೊಂಡ. ಛೇ ಇರಲಾರದು, ಬೆಳಿಗ್ಗೆಯಿಂದ ಒಟ್ಟಿಗೆ ಇದ್ದುದರಿಂದ ಹಾಗಾಗಿದೆ.
ಇದುವರೆಗೂ ಹೀಗೆ ಇಡೀ ದಿನ ನಾವು ಒಟ್ಟಿಗಿರಲಿಲ್ಲ. ಹಾಗೆಂದೇ ಇಳಾ ಹೋದ ಕೂಡಲೇ ಕೊಂಚ ಪೆಚ್ಚನಿಸಿರಬೇಕು ಎಂದು ಕೊಂಡು ಅದಕ್ಕಷ್ಟು ಪ್ರಾಮುಖ್ಯತೆ ಕೊಡದೆ ಬೈಕಿನತ್ತ ನಡೆದ. ಬೈಕ್ ಮೇಲೆ ಇಳಾ ಮುಡಿದಿದ್ದ ಮಲ್ಲಿಗೆ ಹೂಗಳು ಬಿದ್ದಿದ್ದವು. ಮೆಲ್ಲನೆ ಅವನೆತ್ತಿಕೊಂಡು ಮೂಗಿನ ಹತ್ತಿರ ಹಿಡಿದು ಅದರ ವಾಸನೆಯನ್ನು ಆಸ್ವಾದಿಸಿದ. ಹಾಯ್ ಎನಿಸಿ ಅರೆಗಳಿಗೆ ಕಣ್ಮುಚ್ಚಿದ. ಇಳಾಳೇ ಅಲ್ಲಿನಿಂತಿರುವಂತೆ ಭಾಸವಾಗಿ ಬೆಚ್ಚಿ ಕಣ್ಣು ಬಿಟ್ಟು, ಥೂ ಇವತ್ತೇನಾಗುತ್ತಿದೆ ನನಗೆ? ಏನೋ ಭಾವ, ಏನೋ ತಲ್ಲಣ. ತಾನು ಸರಿಯಾಗಿದ್ದೇನಾ. ಛೇ… ಎನ್ನುತ್ತ ತಲೆ ಕೊಡವಿಕೊಂಡು, ಬೈಕು ಹತ್ತಿ ಊರ ಕಡೆ ನಡೆದ.
*****