ಎಂಥ ಬಾಳಿದು ಬಾಳು, ಚಿಂತೆಯೇ ತುಂಬಿ
ನಿಂತು ನಿಟ್ಟಿಸೆ ವೇಳೆಯಿಲ್ಲದಿರೆ ನಮಗೆ.
ಮರದ ಅಡಿಯಲಿ ನಿಂತು ಕುರಿ ಹಸುಗಳಂತೆ
ಮರೆತು ಮೈಯನು, ನೋಡಲೆಮಗೆ ಹೊತ್ತಿಲ್ಲ.
ಕಾಡಿನೆಡೆ ಸುಳಿದಂದು, ತಾವಾಯ್ದ ತಿನಿಸುಗಳ
ಗೂಡಿಗೊಯ್ಯುವ ಅಳಿಲ ನೋಡೆ ಹೊತ್ತಿಲ್ಲ.
ಇರುಳ ಮೀನುಗಳಂತೆ ಮೀನುಗಳು ತುಂಬಿರುವ
ತೊರೆಗಳನು ತಿಳಿಹಗಲಿನಲಿ ನೋಡೆ ಹೊತ್ತಿಲ್ಲ.
ಚೆಲುವುವೆಣ್ಣಿನ ನೋಟ, ಅವಳ ಅಡಿಗಳ ಮಾಟ,
ಒಲೆವ ಕುಣಿಯುವ ಬೆಡಗು-ಇವ ನೋಡೆ ಹೊತ್ತಿಲ್ಲ.
ಚಿಗುತು ಕಣ್ಣಲಿ ಅವಳ ನಗೆಯ ಕುಡಿ ಬಾಯಲ್ಲಿ
ಮುಗುಳೊಡೆವವರೆಗೆ ಕಾದಿರಲು ಹೊತ್ತಿಲ್ಲ.
ಇಂಥ ಬಾಳ್ ಬಡ ಬಾಳು: ಚಿಂತೆಯೇ ತುಂಬಿ
ನಿಂತು ನಿಟ್ಟಿಸೆ ವೇಳೆಯಿಲ್ಲದಿರೆ ನಮಗೆ.
*****
ಭಾವಾನುವಾದ William H Davies ಅವರ `Leisure’