ಈ ನೆಲ ಬರಡಾಗಿ ಬಿದ್ದಿದೆ ಜಡವಾಗಿ
ಇದನ್ನೆಬ್ಬಿಸಿ ಹಸಿರ ಚಿಗುರಿಸುವುದು ಹೇಗೆ?
ಈ ಗಿಡಗಳು ಬಾಡಿ ಬರಲಾಗಿವೆ
ಇವು ಹೂಗಳ ಬಿಟ್ಟು ಕಾಯಿ ಹಣ್ಣುಗಳಾಗಿ
ಸಫಲವಾಗುವುದು ಹೇಗೆ?
ಮಾನವರ ನಡುವೆ ಗೋಡೆ ಗೋಡೆಗಳು
ಸಂದುಗೊಂದುಗಳಲ್ಲೇ ನೋಟಗಳು
ಇವನೆಲ್ಲ ಕೆಡವಿ ಎಲ್ಲರೂ ಒಂದೇ
ಆಕಾಶ ನೋಡುತ್ತ ಬಯಲಲ್ಲಿ ಹಾಡುತ್ತ
ಕುಣಿಯುವಂತೆ ಮಾಡುವುದು ಹೇಗೆ?
ಈ ಬಂಡಿ ಮುಂದೆ ಹೋಗಲೇ ಒಲ್ಲದು
ಎತ್ತುಗಳು ನೆಲಕಚ್ಚಿ ಬಿದ್ದಿದೆ
ಇವುಗಳ ಬಾಲ ತಿರುವಿ ಮೇಲಕ್ಕೆಬ್ಬಿಸಿ
ಬಂಡಿ ಮುಂದೆ ಹೋಗಲು
ಎಳೆಯುವಂತೆ ಮಾಡುವುದು ಹೇಗೆ?
ಈ ಕಣ್ಣುಗಳು ಮತ ಧರ್ಮಗಳ
ಬಣ್ಣ ಗಾಜುಗಳಿಂದ ಅಲಂಕೃತವಾಗಿವೆ
ನೋಡಿದ್ದೆಲ್ಲ ಬಣ್ಣ ಬಣ್ಣ
ಗಾಜುಗಳ ಒಡೆದು ವರ್ಣರಹಿತವಾದ
ನಿಜ ಮಾನವನ ಎದೆಯಾಗಸವ
ನೋಡುವಂತೆ ಮಾಡುವುದು ಹೇಗೆ?
ಈ ಬಳ್ಳಿಗಳು ಅಲ್ಲಲ್ಲಿಗೆ ಅಲ್ಲಲ್ಲಿಗೆ
ಮುರುಟಿಕೊಂಡು ಸಂದುಗೊಂದುಗಳಲ್ಲಿ
ತೂರಿಕೊಳ್ಳುತ್ತಿವೆ ಕತ್ತಲಲ್ಲೇ ಸುತ್ತುತ್ತಿವೆ
ಇವು ಗಾಳಿ ಬೆಳಕುಗಳಿಗೆ
ಚಾಚಿಕೊಂಡು ಅಗಲ ಉದ್ದವಾಗಿ
ಹಬ್ಬುವಂತೆ ಮಾಡುವುದು ಹೇಗೆ?
ಈ ಹುಳುಗಳು ತಮ್ಮ ಸುತ್ತಲೇ ಸುತ್ತುತ್ತ
ತಮ್ಮ ಬಾಲಗಳ ತಾವೇ ನುಂಗುತ್ತ
ಒದ್ದಾಡುವುದ ಬಿಡಿಸಿ
ಮೈಸೆಟಸಿ ನೆಟ್ಟಗೆ ಮುಂದಕ್ಕೆ
ಸಾಗುವಂತೆ ಮಾಡುವುದು ಹೇಗೆ?
ಬಕಪಕ್ಷಿಗಳು ತೇಲುಗಣ್ಣು ಮಾಡಿಕೊಂಡು
ಗದ್ದುಗೆಯೇರಿ ಕುಳಿತುಕೊಂಡು
ಮೇಲುಮೇಲಕ್ಕೆ ಕೈ ಮಾಡಿ ಗುಂಡಿಗಳಲ್ಲಿ
ಎಲ್ಲ ಮೀನುಗಳ ಬಳಿಗೆ ಸೇರಿಸಿಕೊಂಡು
ತೇಲಾಡುವಂತೆ ಮಾಡುತ್ತಿವೆ
ಅವುಗಳನ್ನು ಬಿಡಿಸಿ ಹಾಯಾಗಿ
ಸಾಗರದಪಾರ ತಿಳಿ ಜಲದ ಮೇಲೆ
ಲೀಲಾಜಾಲವಾಗಿ ಈಜಾಡುವಂತೆ
ಮಾಡುವುದು ಹೇಗೆ?
ಕಟ್ಟಿದ ಸಂಕೋಲೆಗಳಿಂದ
ಕೆಸರೂಳಗೆ ಕಾಲುಗಳ ಕೀಳಲಾರದೆ
ಕೀಳಲು ಸೆಣಸಾಡುತ್ತ ಎಳೆದಾಡುವ
ಈ ಪ್ರಾಣಿಗಳ ಬೇಡಿಗಳ ಬಿಡಿಸಿ
ಗಟ್ಟಿ ನೆಲದ ಮೇಲೆ
ಓಡಾಡುವಂತೆ ಮಾಡುವುದು ಹೇಗೆ?
*****