ಹಕ್ಕಿಯೊಂದು ಮೇಲೆ ಹಾರಿ ತೇಲಿಹೋಯಿತು
ಚಿಕ್ಕಿಯಾಗಿ ಬಾನಿನಲ್ಲಿ ಸೇರಿ ಹೋಯಿತು
ಇದೇ ಮಣ್ಣಿನಲಿ ಹುಟ್ಟಿ ರೆಕ್ಕೆ ಪುಕ್ಕಗಳನು ತಳೆದು
ಬಿಳಿಯ ಹಂಸವಾಗಿ ಮಹಿಮೆ ಪಡೆದುಕೊಂಡಿತು
ಹದ್ದು ಕಾಗೆ ಗೂಗೆಗಳಲೆ ಬೆಳೆದು ನಿಂತಿತು
ಎನಿತೊ ಬೆಳ್ಳಕ್ಕಿಗಳನು ಸೃಷ್ಟಿ ಮಾಡಿತು
ಯುಗಯುಗಳ ಜನಮನದಲಿ ತತ್ತಿ ಮೂಡಿ ಕಾವು ಕುಳಿತು
ಯುಗಧರ್ಮದ ಸಾರ ರೂಪ ಹಕ್ಕಿಯಾಯಿತು
ಊರು ಸೀಮೆ ನಾಡು ದೇಶಗಳನು ಮೀರಿತು
ಭೂಮಂಡಲದ ಉದ್ದಗಲಕು ಬೆಳೆದು ನಿಂತಿತು
ಮತಮತಗಳ ಗೂಡುಗಳನು ದಾಟಿ ಮೇಲೆ ಕುಳಿತುಕೊಂಡು
ಎಲ್ಲ ಹಕ್ಕಿಗಳನೊಂದೇ ಬಾನಂಗಳಕೆ ಕರೆದುಕೊಂಡು
ಮಾನವತೆಯ ಮಂತ್ರದಲ್ಲಿ ಮೋಡಿ ಮಾಡಿತು
ಬಂಧನ ಬೇಡಿಯ ಕಳಚಲು ದಾರಿ ಮಾಡಿತು
ಮೂಡಣ ಪಡುವಣದಗಲಕು ತನ್ನ ರೆಕ್ಕೆಗಳನು ಚಾಚಿ
ಬಿಳಿಯ ಕರಿಯ ಬಣ್ಣಗಳನು ಗೌಣ ಮಾಡಿತು
ಒಳಗಿನಂತರಂಗ ತಂತಿ ಮೀಟಿ ಒಂದೆ ರಾಗ ಹಾಡಿ
ಹಿಂಸೆ ಕ್ರೌರ್ಯಗಳಿಗೆ ಎದುರು ಮಾರ್ಗ ತೋರಿತು
*****