ಹಿಡಿಗಂಟು ಕೊಟ್ಟು ಹಿಡಿ ಹಿಡೀ ಎಂದ
ಹಿಡಿತ ಸಿಗಲೆ ಇಲ್ಲ
ಹಿಡಿಯಬೇಕು ಅನ್ನುವುದರೊಳಗೆ
ಪುಡಿ ಪುಡಿಯೆ ಆಯಿತಲ್ಲ
ಬೊಗಸೆಯೊಳಗೆ ಹಿಡಿದಂಥ ನೀರು
ಸಂದುಗಳ ಹಿಡಿದು ಜಾರಿ
ಕೈಗೆ ಬಾರದೇ ಬಾಯ್ಗೆ ಸೇರದೇ
ಹೋಯಿತಲ್ಲ ಸೋರಿ
ಕೊಟ್ಟಾಗ ಗಂಟು ಹಿಡಿದದ್ದೆ ಗಟ್ಟಿ
ಆಯ್ತು ಹ್ಯಾಂಗೆ ನೀರು
ನೀರು ನೀರಾಯ್ತು ಜೋರು ಜೋರಾಯ್ತು
ಆವಿಯಾಯ್ತು ನೀರು
ಅಯ್ಯೋ ಹೋಯ್ತು ಇದು ಹಿಡಿಯಬೇಕು
ಇದನಿನ್ನು ಬಿಡಲೆಬಾರ್ದು
ಎಂದುಕೊಂಡು ತುಟಿ ಕಚ್ಚಿಕೊಂಡು
ಹಿಡಿದಂತೆ ಗಾಳಿ ಸಾರ್ದು
ಗಾಳಿಯನ್ನು ಬೊಗಸೆಯಲಿ ಹಿಡಿಯ
ಲಾದೀತೆ ಗಟ್ಟಿಯಾಗಿ
ಹೇಳಿ ಕೇಳಿ ಅದು ಗಾಳಿ ಗೀಳು ಅದು
ಹೋಗಿತ್ತು ಶೂನ್ಯವಾಗಿ
ಬಯಲಿನಲ್ಲಿ ಬಯಲಾಟವಾಡಿ
ಬಯಲನ್ನೆ ಗಟ್ಟಿಗೊಳಿಸಿ
ಕೈಗೆ ಕೊಟ್ಟು ಹೋದವರು ಉಂಟು
ಇದರಲ್ಲೆ ಅರ್ಥ ಗಳಿಸಿ
ಆದರೇಕೆ ಈ ಕೈಗಳಲ್ಲಿ ಹಿಡಿ
ಗಂಟು ಸೊನ್ನೆಯಾಯ್ತು
ಕಾಲಕಾಲದಲಿ ಕೂಡಿಬಿದ್ದ
ಗಂಟೆಲ್ಲ ಸೋರಿ ಹೋಯ್ತು
*****