ಅಂತರದಲ್ಲಾಡುವಳತೆಗೋಲು ಅಳೆದೂ ಸುರಿದೂ
ಹಗಲಿರುಳು ಬಟ್ಟೆ ತೊಡಿಸುತ್ತದೆ-ಕಳಚುತ್ತದೆ-ತೊಡಿಸುತ್ತದೆ
ತನಗೆ ಸರಿಕಂಡಂತೆ ಕೆಲವ ತಲೆಮೇಲಿಂದಿಳಿಬಿಡುತ್ತದೆ
ಮತ್ತೆ ಕೆಲವ ಕಾಲೊಳಗಿಂದ ಮೇಲೇರಿಸುತ್ತದೆ
ಕೆಲವು ಸೈಲು ಜೋಲಾಗಿ, ನೆಲ ಬಳಿಯುತ್ತಾ ಹರಿದು
ಚಿಂದಿಯಾಗುತ್ತವೆ
ಕೆಲವು ನನ್ನ ಮೈಕೈ ಕಾಲುಗಳೊಡನೆ ಮುಖವನ್ನೂ ಮುಚ್ಚಿ
ಮೂಕವಾಗಿಸಿ, ಕಿವುಡಾಗಿಸಿ, ಕುರುಡಾಗಿಸಿ, ಉಸಿರು ಕಟ್ಟಿಸುತ್ತವೆ
ಇನ್ನೂ ಕೆಲವು ಸಂದುಗೂಂದುಗಳ ಹೊಲಿಗೆ ಕಿತ್ತುಕೊಳ್ಳುತ್ತದೆ ಮೈ
ಬಿಗಿಯ ತಾಳಲಾರದೆ ಒಂದೂ ಸರಿಹೊಂದವು
ನನಗಾಗಿ ದುಡಿಯುವಾ ಕೋಲಿಗೆ ಕೂಲಿಯೇ ಇಲ್ಲ
ಆದರೂ ನನ್ನಳತೆಯೇ ಅದಕ್ಕೆ ಸಿಗದೆ, ಎರವಲ ಬಟ್ಟೆಗಳಿಂದಲೆ
ನನ್ನನಂದಗೊಳಿಸುವ ಬಾಡಿಗೆ ರೂಪ ಕೊಡುವ ಯತ್ನಮಾಡುತ್ತಿದೆ
‘ನನ್ನದೇ ಅಳತೆ ತೆಗೆದುಕೊ, ನನ್ನದೇ ಆದ ಬಟ್ಟೆ ಸಿದ್ಧಮಾಡು’
ಎಂದರೆ ನನ್ನ ಅಳತೆಯೇ ಅದಕ್ಕೆ ನಂಬಿಕೆ ಇದ್ದಂತಿಲ್ಲ,
ಅಥವಾ ನನ್ನಳತೆಯೇ ಅದಕ್ಕೆ ಅಳವಟ್ಟಿಲ್ಲವೋ!
ಹಾಗೆ ಕೇಳಿದಾಗ ಅದು ನನ್ನ ಪಾಡಿಗೆ ಬಿಟ್ಟಾಗ
ಬೆತ್ತಲೆಗುಡುಗುವ, ಸುಡುವ, ತೋಯುವ, ನೋಯುವ ಕಷ್ಟ
ಭಯಂಕರ,
ಆದರೂ ಅದರ ಕೈ ಕಾಲು ಹಿಡಿದು ಕಾಡಿ ಬೇಡಿದ್ದರಿಂದ
ಪರಿಸ್ಥಿತಿ ಸ್ವಲ್ಪ ಸುಧಾರಿಸುತ್ತಿದೆ
ಎರವಲೇನೂ ಇಲ್ಲವಾದರೂ
ಮಾಸಲು ತೇಪೆಯ ಬಟ್ಟೆಗಳೀಗಿಲ್ಲವಾದರೂ
ಬಿಗಿತ ಜೋಲಾಟಗಳೇನೂ ತಪ್ಪಿಲ್ಲ,
ಇಷ್ಟು ಇರುವುದು ಸಹಜ ಸ್ವಾಮೀ ಎನ್ನುತ್ತದೆ
ಇತ್ತೀಚೆಗೆ ಬಂದ ಪರದೇಶಿ ಬಟ್ಟೆಗಳಬ್ಬರದಲ್ಲಂತೂ
ಅಳತೆಕೋಲು ದಿಕ್ಕೂ ತಪ್ಪಿದಂತಾಗಿದೆ. ಇವುಗಳಲ್ಲಿ
ನನ್ನ ಮಾನ ಮುಚ್ಚುವ ಅಳತೆಗೊಗ್ಗುವ ಬಟ್ಟೆ ಸಿಗುವುದೇ
ಕಠಿಣವಾಗಿದೆ
ಬಟ್ಟೆಯೇ ಇಲ್ಲದೆ ನಾನೇ ಎಲ್ಲಿ ಪರದೇಶಿಯಾಗಿಬಿಡುವೆನೋ ಎಂಬ
ಭಯವಾವರಿಸಿದೆ
*****
(೨೨-೭-೧೯೭೩)