ಈ ಜಂಗಳ್ಯಾಗೆ ಎಲ್ಲದಾನವ್ನು ಮನಸ್ಯಾ ಅಂಬೋನು
ಕೆಲವು ಕಾಗದಾ ತಿಂಬೋ ಕತ್ತೆಗ್ಳು
ಕೆಲವು ಮೈಗೆ ಮಣ್ಣುಮೆತ್ತಿಗೆಂಡು ಮಣ್ಣುತಿಂಬೋ ಮುಕ್ಕುಗ್ಳು
ಕೆಲವು ಹೆಣಾತಿನ್ನೋ ಹದ್ದುಗಳು
ಕೆಲವು ಮಾಂಸಾ ಮೂಸೋ ನಾಯಿಗಳು
ಕೆಲವು ದುರ್ವಾಸನೆ ಗಟಾರದೊಳಗೇ ಹೊರಳೋ ಹಂದಿಗ್ಳು
ಕೆಲವೋ ಸತ್ತೋರ ಗೋರಿಗೆ ಬಟ್ಟೆ ಸುತ್ತಿ
ಸುತ್ತಿ ಬಳಸೋ ಮರುಳುಗುಳು
ಕೆಲವು ಗುಡಾಣಗಳಾದರೆ ಕೆಲವು ಗುಬ್ಬಚ್ಚಿ ಗೂಡುಗಳು
ಕೆಲವು ಕಿವಿಯಿಲ್ಲದ ಸೋರೆಬಾಯಿಗ್ಳು
ಕೆಲವು ಬಣ್ಣ ಬಣ್ಣ ಬದಲಸೋ ಊಸರವಳ್ಳಿಗುಳು
ಕೆಲವು ಸಣ್ಣ ಸಣ್ಣ ಪ್ರಾಣಿ ತಿನ್ನೋ ದಾಸರಹಾವುಗಳು
ಕೆಲವು ಹೊಟ್ಟೇನ ಕೈಯಾಗಿಟ್ಟುಗೊಂಡು
ಚಾಚಿರೊ ತಟ್ಟೆಗಳು
ಕೆಲವು ಕುಂಡಿ ತೊಳಿಯೊ ನೀರ್ನೆ ತೀರ್ಥಾಂತ
ಕುಡಿಯೊ ಕಿಲುಬು ಸೌಟುಗ್ಳು
ಕೆಲವು ಚಿಗುರೋದೂ ಬ್ಯಾಡಾ ಬಗ್ಗೋದೂ ಬ್ಯಾಡಾ
ಅಂಬೋ ಮೋಟುಗುಳು
ಕೆಲವು ತಲಿಯಿಲ್ದೆ ಆಡ್ಡಾದಿಡ್ಡಿ ನಡೆಯೊ ಮುಂಡುಗ್ಳು
ಕೆಲವು ಬಾಯ್ಬಾಯ್ಬಡಕೊಳ್ಳೊ, ಕೈಕಾಲಿಲ್ಲದ ರುಂಡುಗ್ಳು
ಹೃದಯಾನ ಬಾಯಾಗೆ ಹಿಂಡಿ ಹಾಡೋವು ಕೆಲವು
ಅದನ್ನೆ ಎಲುಬಿಂದ ಚುಚ್ಚಿ ರಕ್ತ ತಗದು
ಬಿಳಿಕರಿಮಾಡೋವು ಕೆಲವು
ವಾತಾ ಪಿತ್ಥ ಕಫ ನೆಣ ನರಾ ಏನೇನೋ ಕಾರಿಕೊಂಡು
ಸ್ವಚ್ಛನೆಲ್ಲ ಕೆಡಿಸಿ ಕಲೆಕಲೆ ಮಾಡೋವು ಕೆಲವು
ಕೆಲವು ಹೂವಿನಿಂದ ಕಲ್ಲನ್ನು ಕುಟ್ಟಿಕುಟ್ಟಿ ನಾಳಿನ
ಮೂರ್ತಿಗಳ ಮಾಡ್ತೀವಿ
ಅಂಬೋ ಬೆಪ್ಪುಗಳು
ಹೀಗೆ ಎಲ್ಲಿ ನೋಡಿದ್ರೂ ವಿರೂಪ ವಿಕೃತ ವೇಷಗಳು
ಇಂಥಾ ಗಲ್ಯಾಗೆ ಎಲ್ಲದಾನವ್ನು ಮನಸ್ಯಾ
ಕೈಕಾಲು ತಲೆ ಎದೆ ಬಟ್ಟೆ ರಟ್ಟೆ ಬಾಯಿ ಬೆಳ್ಳು ಕಳ್ಳು ಕಣ್ಣು
ಎಲ್ಲಾ ಸರಿಯಾಗಿರೋ ಮನಸ್ಯಾ
*****
(೨೧-೯-೭೭)