ಯಾರಿಗೂ ಕೇಳಿಲ್ಲ
ಹೇಳಿಲ್ಲ
ನಿಂತ ನಿಲುವಲಿ
ಎಲ್ಲರಿಗೂ ಕಾಣುವಂತೇ…
ವಿಧಾನಸೌಧದಾ ಎದುರಲ್ಲೇ…
ಪ್ರತಿಮೆಯಾದರು…
ಈ ನಮ್ಮ ಅಂಬೇಡ್ಕರ್.
೧
ಪ್ರತಿಮೆಗೂ ಮಿಗಿಲು
ಮುಗಿಲು, ಹಗಲು-
ವಿಸ್ಮಯ ಪ್ರತಿಭೆ ಅವರದು!
ಮಲ್ಲಿಗೆ ಮನಸನು, ವಿಶಾಲ ಹೃದಯವನು…
ಕಲ್ಲು ಮಾಡಿ,
ಕೇರಿಗೆ ಸೀಮಿತ ಮಾಡಿ,
ಪ್ರತಿಮೆ ನಿಲ್ಲಿಸಿದವರು ನಾವು!!
೨
ಸ್ವಾರ್ಥಕೆ ನಿತ್ಯ ಎಳೆ ಎಳೆ ತಂದೂ…
ಸುಮ್ಮ ಸುಮ್ಮನೆ ಹಿಗ್ಗಿಸಲೋಗಿ,
ತನ್ನ ಜನ, ತನಗೇ ಮಾನ, ಹರಾಜಾಕಿದ್ದು,
ಕೈ, ಕೈ, ಕಾಲು, ಕಾಲು, ಕನ್ನಡ್ಕ ತೆಗೆವರೆಂದೂ…
ಈ ಮೊದಲು ತಿಳಿದಿದ್ದರೆ,
ಪ್ರತಿಮೆಯಾಗುವದಾ ಬಿಟ್ಟು,
ಸ್ವರ್ಗ ಸೇರುತ್ತಿದ್ದರು…?!
೩
ಸೂರ್ಯ ಕೋಟಿನ
ಬೆಳೆಕ್ಹೆಂಚು ಮಾಡಿ,
ಬಲು ಸಣ್ಣರಾದವರು
ಮೆಚ್ಚಿಸಲ್ಹೋಗಿದ್ದ ಕಂಡು-
ಹೌಹಾರಿ ನಿಂತಲ್ಲೇ…
ವಿಧಾನಸೌಧದ ಎದುರಲ್ಲೇ…
ಪ್ರತಿಮೆಯಾದರು…
ಈ ನಮ್ಮ ಅಂಬೇಡ್ಕರ್.
೪
ಜಗದಗಲ
ಮುಗಿಲಗಲವನು!
ಬರೀ ಕೇರಿಗೇ…
ಸೀಮಿತಗೊಳಿಸಿದ್ದಕ್ಕೆ
ಮಮ್ಮಲ ಮರುಗಿ,
ಕೊರಗಿ,
ನಿಂತಲ್ಲೇ…
ವಿಧಾನಸೌಧದಾ ಮುಂದೆ:
ಪ್ರತಿಮೆಯಾದರು…
ಈ ನಮ್ಮ ಅಂಬೇಡ್ಕರ್.
೫
ಪೂರ್ಣ ಮುಖಿ
ಚಂದ್ರವದನನ-
ಈ ಪುಟ್ಟ ಕನ್ನಡಿಯೊಳಗೆ,
ತೋರಿದ್ದ ಕಂಡು:
ಕೆಂಡಮಂಡಲವಾಗಿ
ನಿಂತಲ್ಲೇ…
ವಿಧಾನಸೌಧದ ಎದುರಲ್ಲೇ…
ಪ್ರತಿಮೆಯಾದರು…
ಈ ನಮ್ಮ ಅಂಬೇಡ್ಕರ್.
೬
ನಮ್ಮವರು: ಮೇಲಿನವರ ಅಂಜಿಸಲು…
ಹೇಗೆಗೋ ಬಿಂಬಿಸಲ್ಹೋಗಿ…
ಸ್ವಯಂ ಪ್ರಭೆ ಅರಿದೆ,
ಬಿಂಬವ ಪ್ರತಿಬಿಂಬವಾಗಿಸಿದ್ದು ಕಂಡೂ
ಮೌನದಲಿ,
ಪ್ರತಿಮೆಯಾದರು…
ವಿಧಾನಸೌದದ ಎದುರಲ್ಲೇ…
ಈ ನಮ್ಮ ಅಂಬೇಡ್ಕರ್.
೭
ಪ್ರತಿ ಹೆಜ್ಜೆ ಹೆಜ್ಜೆಗೂ…
ವಾದ, ಪ್ರತಿವಾದಕೂ…
ಈ ನಮ್ಮ ಅಂಬೇಡ್ಕರ್ ಬೇಕು!
ಭಾರತದ ಸಂವಿಧಾನ ಬೇಕೇ ಬೇಕು!
ಬದುಕಿದ್ದಾಗ: ಸವರ್ಣೀಯರ ಕಾಟ…
ಮೀಸಲಾತಿಯ ಪರದಾಟ…
ಬೇಸತ್ತು, ಬೌದ್ಧ ಧರ್ಮ ಸ್ವೀಕಾರ!!
ಸತ್ತಾಗ: ಈಗ ತನ್ನವರ ಕಾದಾಟ!
ಹೊಲೆ, ಮಾದಿಗನೆಂಬ ಜಗ್ಗಾಟ…
ಸಹಿಸಲಾಗದೆ… ಪ್ರತಿಮೆಯಾದರು!!
ಈಗ ಒಡೆಬಾರದಶ್ಟೇ…
ಪ್ರತಿಮೆಯನು…
ಪ್ರತಿಭೆಯನು…
ಭಾಜನು,
ಭುವಿ,
ಬೆಳಕನ್ನುಽಽ…
ಅಶ್ಟೇ…ಽಽ
*****