ಪ್ರಿಯ ಸಖಿ,
ಬೆಳಕಿನ ಹಬ್ಬ ದೀಪಾವಳಿಯನ್ನು ಮಾಮೂಲಿನಂತೆ ಉತ್ಸಾಹ, ಸಡಗರದಿಂದ ಆಚರಿಸಿ, ಮುಗಿಸಿದ್ದೇವೆ. ಅಂಧಕಾರವನ್ನು ತೊಡೆದು ಬೆಳಕನ್ನು ಮೂಡಿಸುವ ಸಂಕೇತವನ್ನು ಒಳಗೊಂಡಿರುವ ದೀಪಾವಳಿಯನ್ನು ನಾವು ಇತರ ಹಬ್ಬಗಳಂತೆಯೇ ಅತ್ಯಂತ ಸಾಂಪ್ರದಾಯಿಕವಾಗಿ, ರೂಢಿಗತ ಶೈಲಿಯಲ್ಲಿ ಅಚರಿಸುತ್ತೇವೆ.
ತಲೆಗೆ ನೀರೆರೆದುಕೊಂಡು, ಹೊಸ ಬಟ್ಟೆ ಉಟ್ಟು, ಪೂಜೆ ಮಾಡಿ, ದೇವಸ್ಥಾನಗಳಿಗೆ ಭೇಟಿ ನೀಡಿ, ಸಿಹಿ ಮಾಡಿಕೊಂಡು ಉಂಡು, ಒಂದಿಷ್ಟು ಪಟಾಕಿ ಸುಟ್ಟರೆ ಹಬ್ಬ ಮುಗಿದಂತೆಯೇ!
ಆದರೆ ಪ್ರತಿಯೊಂದು ಹಬ್ಬದಾಚರಣೆಯ ಮೂಲದಲ್ಲಿ ಒಂದು ತತ್ವವಿರುತ್ತದೆ. ಅದನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಅದನ್ನು ಅನುಸರಿಸುವ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ದಿಕ್ಕಿನಲ್ಲಿ ನಾವು ಕಾರ್ಯೋನ್ಮುಖರಾಗಬೇಕು. ಅದೇ ಹಬ್ಬಗಳಿಗೆ ನಾವು ನಿಜಕ್ಕೂ ನೀಡುವ ಬೆಲೆ.
ದೀಪಾವಳಿ ಎಂದರೆ ದೀಪಗಳ ಸಾಲು ಎಂದು ಅರ್ಥ. ದೀಪಾವಳಿಗೆ ಪೌರಾಣಿಕ, ಸಾಂಪ್ರದಾಯಿಕ ಹಿನ್ನೆಲೆ ಏನೇ ಇದ್ದರೂ ಅದಕ್ಕಿರುವ ತಾತ್ವಿಕ ಹಿನ್ನೆಲೆ ಮಹತ್ವದ್ದಾಗಿದೆ. ಅದರಲ್ಲೂ ಪ್ರಸ್ತುತ ಸಮಾಜದಲ್ಲಿರುವ ಅಶಾಂತಿ, ಅನೀತಿ, ಹಿಂಸೆ, ಕ್ರೌರ್ಯ ಇತ್ಯಾದಿ ಕತ್ತಲನ್ನು ತೊಲಗಿಸಲು ಎಷ್ಟೊಂದು ದೀಪಗಳ ಸಾಲನ್ನು ನಾವು ಬೆಳಗಿಸಬೇಕಿದೆ. ಪ್ರೀತಿಯ ದೀಪ, ಕರುಣೆಯ ದೀಪ, ಸ್ನೇಹದ ದೀಪ, ಮಮತೆಯ ದೀಪ, ಧರ್ಮದ ದೀಪ, ಕ್ಷಮೆಯ ದೀಪ, ಶಾಂತಿಯ ದೀಪ… ಇತ್ಯಾದಿ ದೀಪಗಳಿಂದ ಹೊರಹೊಮ್ಮುವ ಬೆಳಕಿನಿಂದ ನಮ್ಮ ಮನದ ಅಂಧಕಾರವನ್ನು ತೊಡೆದುಕೊಳ್ಳಬೇಕಿದೆ. ಇಂದು ಪ್ರತಿಯೊಬ್ಬ ವ್ಯಕ್ತಿಯ ಮನಸ್ಸೂ ಕತ್ತಲಿನ ಕೂಪವಾಗಿದೆ. ಆದರೆ ಬೆಳಕಿನ ಕಿಡಿಯೂ ಆಳದಲ್ಲಿ ಎಲ್ಲೋ ಇದ್ದೇ ಇದೆ. ಆ ಬೆಳಕಿನ ಕಿಡಿಯನ್ನು ಕತ್ತಲ ಗೋಡೆಗಳನ್ನೊಡೆದು ಹೊರತರುವ ಗುರುತರ ಜವಾಬ್ದಾರಿ ಈಗ ನಮ್ಮ ಮೇಲಿದೆ.
ನಾವು ಬೆಳಕಿಗಾಗಿ ನಿರಂತರವಾಗಿ ಹೊರಗೆಲ್ಲಾ ಹುಡುಕುತ್ತಿರುತ್ತೇವೆ. ಬೆಳಕು ಇಲ್ಲವೆಂದು ಕೊರಗುತ್ತಿರುತ್ತೇವೆ. ಆದರೆ ನಿಜದ ಬೆಳಕನ್ನು ಕಂಡುಕೊಳ್ಳುವ ಆ ಬೆಳಕನ್ನು ಮನಮನದಲ್ಲೂ, ಮನೆಮನೆಯಲ್ಲೂ ತುಂಬುವ ಕೆಲಸ ಈಗ ಆಗಬೇಕಿದೆ. ಬೆಳಕು ನೀಡಬೇಕೆಂಬ ಅದಮ್ಯ ಬಯಕೆಯಿರುವ ಪುಟ್ಟ ಹಣತೆ, ತನ್ನ ಬುತ್ತಿಯನ್ನು ಸುಟ್ಟುಕೊಂಡು ಬೆಳಕು ಹಚ್ಚಿಕೊಳ್ಳುತ್ತದೆ. ತನ್ನನ್ನು ಸುಟ್ಟುಕೊಳ್ಳುತ್ತದೆ. ಅದು ನೀಡಿದ ಬೆಳಕಿನಿಂದ ಅದರ ಸುತ್ತಲೂ ಬೆಳಕು ಮೂಡುತ್ತದೆ.
ಸಖಿ, ಆದ್ದರಿಂದಲೇ ಮೊದಲು ನಮ್ಮ ಮನಗಳಲ್ಲಿ ಪುಟ್ಟ ಹಣತೆಗಳನ್ನು ಹಚ್ಚಿಕೊಳ್ಳೋಣ. ತನ್ಮೂಲಕ ಆ ಬೆಳಕು ನಮ್ಮ ಸುತ್ತಲೆಲ್ಲಾ ಬೆಳಕು ಮೂಡಿಸಿಯೇ ತೀರುತ್ತದೆ. ಆ ಅರಿವಿನ, ಜ್ಞಾನದ, ವಿವೇಕದ ಬೆಳಕಿನಲ್ಲಿ ಕತ್ತಲು ನಿಧಾನಕ್ಕೆ ಕರಗಿ ವಿಶ್ವದೆಲ್ಲೆಡೆ ಶಾಂತಿ ಮೂಡಲಿ. ಮನಮನವು ನಿತ್ಯ ದೀಪಾವಳಿ ಆಚರಿಸಲಿ. ಪ್ರೀತಿಯ ದೀಪಗಳು ಎಲ್ಲೆಡೆ ಬೆಳಗಲಿ ಆ ದೀಪದ ಬೆಳಕು ಮುಂದೆಯೂ ಆರದಿರಲಿ.
*****