ಪ್ರಿಯ ಸಖಿ,
ರೈಲು ಕ್ಷಣಕಾಲ ಇಲ್ಲಿ ನಿಂತಿದೆ. ಹತ್ತುವವರು ಹತ್ತಿದ್ದಾರೆ. ಇಳಿಯುವವರು ಇಳಿದಿದ್ದಾರೆ. ರೈಲು ಹತ್ತಿದವರಿಗೆಲ್ಲಾ ಸೀಟು ಸಿಕ್ಕಿಲ್ಲ. ಕೆಲವರು ನಿಂತಿದ್ದಾರೆ. ಕೆಲವರು ಕುಳಿತಿದ್ದಾರೆ. ಅದರಲ್ಲೂ ಅದೆಷ್ಟೊಂದು ರೀತಿಯ ಜನ ! ಕುಳಿತವರಲ್ಲಿ ಚಿಂತೆ ಇಲ್ಲದೇ ಆರಾಮ ನಿದ್ದೆಯಲ್ಲಿದ್ದಾರೆ. ಮತ್ತೆ ಕೆಲವರು ಇಳಿಯುವ ತಾಣ ಬಂತೇ ಎಂದು ಚಡಪಡಿಸುತ್ತಿದ್ದಾರೆ. ಮತ್ತೊಬ್ಬರ ಎದುರಿಗೆ ಕಾಲುಚಾಚಿ ಕೂರಲು ಆಗದಷ್ಟು ಲಗೇಜಿನ ಹೊರೆ, ಕುಳಿತುಕೊಳ್ಳಲು ಜಾಗ ಸಾಲದೇ ಅರ್ಧವಷ್ಟೇ ಕೂತವರು, ನೆಟ್ಟಗೆ ಕೂರಲೂ ಆಗದೇ, ನಿಲ್ಲಲೂ ಆಗದೇ ಸಿಡಿಮಿಡಿಗುಟ್ಟುತ್ತಿದ್ದಾರೆ. ಕೂತವಳ ಮಗುವೊಂದು ರಚ್ಚೆ ಹಿಡಿದಿದೆ. ಅದನ್ನು ಸುಧಾರಿಸಲಾಗದೇ ತಾಯಿ ಆತಂಕಕ್ಕೊಳಗಾಗಿದ್ದಾಳೆ. ರೈಲಿನಲ್ಲಿ ಕೂತಾಗಿದೆ ಪಕ್ಕದ ಪುಂಡು ಹುಡುಗನ ಕಿರಿಕಿರಿಯನ್ನು ಆಡಲಾಗದೇ, ಅನುಭವಿಸಲಾಗದೇ ಪ್ರಯಾಣ ಯಾವಾಗ ಮುಗಿಯುವುದೋ ಎಂದು ಕಾತುರಳಾಗಿದ್ದಾಳೆ ಈ ಯುವತಿ. ಮತ್ತೊಬ್ಬ ಆರಾಮವಾಗಿ ಬೀಡಾ ಜಗಿಯುತ್ತಾ ಕಿಟಕಿಯಾಚೆಯ ಪ್ರಕೃತಿ ಸೌಂದರ್ಯ ಆಸ್ವಾದಿಸುತ್ತಿದ್ದಾನೆ. ನಿಂತವರ ಪಾಡೂ ಒಬ್ಬೊಬ್ಬರದು ಒಂದೊಂದು ರೀತಿ. ಪ್ರಯಾಣದ ಆರಂಭದಿಂದ ಗಮ್ಯದವರೆಗೂ ನಿಂತೇ ಹಲವರ ಪಯಣ. ಮತ್ತೆ ಕೆಲವರಿಗೆ ಮಧ್ಯದ ಸ್ಟೇಷನ್ಗಳಲ್ಲಿ ಇಳಿದವರಿಂದ ಸೀಟು ಸಿಕ್ಕು ಆರಾಮ. ಕುಂಟರಾಗಲಿ, ಕುರುಡರಾಗಲಿ ಕೂರಬಹುದು ಇಲ್ಲದಿದ್ದರೆ ನಿಂತೇ ಪಯಣಿಸುವ ಹಣೆಬರಹ.
ಸಖಿ, ಬದುಕೆಂಬುದೂ ಹೀಗೇ ಒಬ್ಬೊಬ್ಬರದು ಒಂದೊಂದು ರೀತಿಯ ಸ್ಥಿತಿಯಲ್ಲವೇ? ಅದೇನು ಪೂರ್ವಪಾಪ ಪುಣ್ಯದ ಫಲವೋ, ಅದೃಷ್ಟವೋ. ಹಣೆಬರಹವೋ, ವಿಧಿಲಿಖಿತವೋ, ಸ್ವಯಂಕೃತ ಸ್ಥಿತಿಯೋ ಹೇಗೆ ವಿಶ್ಲೇಶಿಸುವುದು? ಬದುಕಿನುದ್ದಕ್ಕೂ ಕಷ್ಟಪಡುವವನು, ಬದುಕಿನುದ್ದಕ್ಕೂ ಸುಖಪಡುವವನು. ಅಕಸ್ಮಾತ್ತಾಗಿ ಸುಖಿ, ಅಸುಖಿಯಾಗುವುದು, ಬಡವ ಶ್ರೀಮಂತನಾಗುವುದು, ಶ್ರೀಮಂತ ಬಡವನಾಗುವುದು ಎಲ್ಲ ಅದ್ಭುತಗಳನ್ನು ಕಾಣುತ್ತಿರುತ್ತೇವೆ. ಇದೆಲ್ಲಾ ಹೇಗಾಯ್ತು? ಎಂದು ಆಶ್ಚರ್ಯಗೊಳ್ಳುತ್ತೇವೆ. ಅವರವರ ಅದೃಷ್ಟ ಎಂದು ಗೊಣಗುತ್ತೇವೆ. ಕೊನೆಗೂ ಬದುಕಿನ ಒಳಮರ್ಮ ನಮ್ಮ ಸೀಮಿತ ಬುದ್ಧಿಗೆ ನಿಲುಕುವುದೇ ಇಲ್ಲ. ಕಾಣದ ಶಕ್ತಿ ಕೈವಾಡ ಎಂಬ ಹೆಸರಿನಿಂದ ಎಲ್ಲವನ್ನೂ ಮುಚ್ಚಿಬಿಡುತ್ತೇವೆ. ಹಾಗೆ ನೋಡಿದರೆ ಈ ಬದುಕಿನಲ್ಲಿ ಮಾನವನಿಗೆ ಅರ್ಥವಾಗಿದ್ದಕ್ಕಿಂತ ಅರ್ಥವಾಗದ್ದೇ ಹೆಚ್ಚಲ್ಲವೇ ಸಖಿ?
*****