ಎಷ್ಟೊಂದು ಸಲ ಕೈಕೊಟ್ಟುಬಿಡುತ್ತವಲ್ಲ
ಹಿಗ್ಗು ಸಂತೋಷ ಆನಂದ
ಎಲ್ಲೋ ಲೆಕ್ಕ ತಪ್ಪಿ
ಮತ್ತೆಲ್ಲೋ ಮೋಸವಾಗಿ ಬಿಡುತ್ತದೆ
ಮಗದೊಮ್ಮೆ ಚದುರಂಗದಾಟ.
ಸುಖ ಸುಪ್ಪತ್ತಿಗೆಯ ಕಣ್ಣೀರು ಮಡುವಿಗೆ
ಸಿಕ್ಕಿತೊಂದು ಅನಾಥ ಶಿಶು ಮುತ್ತು
ಬೆಳಗಿನ ಹೊತ್ತು ಕಸದ ಗುಂಡಿಯೊಳಗಿಂದ
ಕತ್ತಲು ಸೀಳಿ ಬೆಳಕು ಹರಿದಿತ್ತು
ಮನ ಮನದ ಅಂಗಳಕೆ
ರಂಗೋಲಿ ಹಾಕಿತು.
ತಾಯ್ತನದ ತೊರೆ ತುಂಬಿ ಹರಿಯಿತು
ತೇಲಾಡಿತು, ಕುಣಿದು
ಕುಪ್ಪಳಿಸಿ ಹಗುರಾದಳವಳು.
ಕೋರ್ಟಾಜ್ಞೆ ಹೆತ್ತಮ್ಮನಿಗೆ ಮಗು
ತತ್ತರಿಸಿತು ಮತ್ತೆ ಎದೆ.
ಬದುಕು ಪ್ರೀತಿಸಿ ಸ್ವಾಗತಿಸಿದಳು ಮನೆಗೆ,
ಮಗು ಅದರಮ್ಮ ಶೋಷಿತೆಗೆ.
*****