ಬೆಳಗಾಗುವ ಮೊದಲೇ
ರಾತ್ರಿಯಲ್ಲೇ ಕರಗಿ ನಕ್ಷತ್ರವಾಗಿಬಿಡುವಾಸೆ
ಹೂವಾಗಿ ಅರಳುವ ಮೊದಲೇ
ಮೊಗ್ಗು ಮೊಗ್ಗಾಗಿಯೇ ಉಳಿದುಬಿಡುವಾಸೆ
ಬೆಳಗಿನ ಬೆಳಕು ಹೊರಲು ಅನುವಾಗುತಿದೆ
ನೋವು ದುಃಖದುಮ್ಮಾನಗಳಬ್ಬರ
ಎಲ್ಲರೆದೆಯೊಳಗೆ ಬಗೆ ಬಗೆಯ ಚಿತ್ತಾರ
ಎಲ್ಲ ಕಡೆಗೂ ಹೊತ್ತಿದೆ ಹಬ್ಬಿದೆ ತಾತ್ಸಾರ
ಕನಸಾಗಿ ಚಿಗುರುವ ಮನಸುಗಳಿಗೆಲ್ಲೆಲ್ಲೂ
ಸುಡು ಸುಡುತ ಕಾಡುತಿದೆ ಉರಿಬಿಸಿಲು
ಮಳೆಗೆ ಬೆಂಕಿಹತ್ತಿ ಉರಿಯುತಿದೆ
ಆಸೆಯ ಬೆನ್ನೇರಿದ ಓಟದ ಲಹರಿಗೆ-
ಗುಡಿಯ ಗಂಟೆ ಬಾರಿಸುತ ಕರೆಯುತಿದೆ
ಬನ್ನಿರೂಮ್ಮೆ ಒಳಗೆ ಜಗದ ಪರಿಯಬಿಟ್ಟು
ದೀಪದ ಕುಡಿ ನಗುನಗುತ ಮಾತನಾಡಿಸುತಿದೆ
ಯಾಕಿಷ್ಟೊಂದು ತರಾತುರಿ ಎಲ್ಲಿ ಹೋಗುವಿರೆಂದು-
ತಂಪುಹುಲ್ಲಿನ ಮೇಲೆ ಮಲಗಿ
ಚಂದಿರನ ನೋಡುತ ಚಿಂತೆಗಳ ಮರೆಯುವಾಸೆ
ಕತ್ತಲೆಯ ನಿರಮ್ಮಳ ರಾತ್ರಿಯಲಿ
ಎಲ್ಲವನೂ ಮರೆತು ಒಂದಿಷ್ಟು ನಿದ್ರಿಸುವಾಸೆ.
ಬೆಳಗಾಗುವ ಮೊದಲೇ
ರಾತ್ರಿಯಲ್ಲೇ ಕರಗಿ ನಕ್ಷತ್ರವಾಗಿಬಿಡುವಾಸೆ
ಹೂವಾಗಿ ಅರಳುವ ಮೊದಲೇ
ಮೊಗ್ಗು ಮೊಗ್ಗಾಗಿಯೇ ಉಳಿದುಬಿಡುವಾಸೆ.
*****