ಜೀವನ ಜೀವನ ಗಂಟು ಹಾಕುವ
ಭಾವವೇ ಕಲ್ಯಾಣವು
ಪ್ರಣಯಿಗಳು ನಿರ್ಮಲದಿ ನಲಿವುದೆ
ಮುಕ್ತಿಗದು ಸೋಪಾನವು
ಸೃಷ್ಟಿ ಇದು ಬಹು ಪಾತ್ರಗಳು ತು-
ಬಿರುವ ನಾಟಕ ರಂಗವು
ಸೂತ್ರಧಾರಿಯು ನಟಿಯು ಪ್ರಥಮದಿ
ಬರುವುದೇ ಕಲ್ಯಾಣವು
ಸತ್ಯವನು ಅನುಸರಿಸುವುದೆ ಈ
ನಾಟಕದ ಪರಮಾರ್ಥವು
ನೀತಿಮಾರ್ಗದಿ ವಿಜಯ ಹೊಂದುವ
ನ್ಯಾಸವೇ ಕಲ್ಯಾಣವು
ತತ್ವವೆಲ್ಲವು ದಾಂಪತ್ಯದಿ
ಆಳವನು ಹೊಕ್ಕಂತೆ ದೊರೆವುದು
ಸವಿ ಮಧುವು ಕಲ್ಯಾಣದಿ
ಎರಡನೊಂದಾಗಿಸುವ ಸಂಗಮ
ಕ್ಷೇತ್ರವೀ ಸಂಸಾರವು
ದ್ವೈತದೊಳಗದ್ವೈತ ಮಹಿಮೆಯ
ತಿಳಿವುದೇ ಕಲ್ಯಾಣವು
ತಾನ ತಾನದ ಲಹರಿ ಎಬ್ಬಿಸಿ
ತೂರಿರೈ ನವವಧುಗಳೆ!
ಕುಲುಕಿ ಬಳುಕುತ ನೃತ್ಯಮಾಡಿರಿ
ಪ್ರಕೃತಿದೇವಿಯ ಮಡಿಲೊಳು
ಬಾಸಿಗದ ಮದುವಣಿಗರನು ಶುಭ
ವೆಂದು ಹರಸುತ ಮುದದೊಳು
ಮದುವೆ ಹಂದರದೊಳಗೆ ಜನಕಜೆ
ಇಂತು ಮಂಗಳವೆಂದಳು
*****