ವಾರಿಜಮುಖಿ ದೊಡ್ಡಶಹರ ಹುಬ್ಬಳ್ಳಿಯೊಳು
ಕೋರಿ ಗಂಗಪ್ಪ ಸಾವುಕಾರನು ||ಪ||
ಧಾರುಣಿಯೊಳು ಸಣ್ಣ ಊರು ಕರಡೀಗುಡ್ಡ
ಹಾರೈಸುತ ವ್ಯವಹಾರಕ್ಹೋಗಿ ಒಬ್ಬ
ವೀರ ಜಂಗಮನ ಹೇಣತಿ ಕೆಣಕಲು
ಮಾರಿಗೋಲಿಯೊಳು ಮರಣಹೊಂದಿದಾ ||ಅ.ಪ.||
ಸನುಮತಿಯಲ್ಲಿ ಸಾಧು ಸಜ್ಜನ ಸಂಪ್ರೀತನು
ಧನ ಸಿರಿ ಕನಕ ವಸ್ತು ಕೈಗೊಂಡು ಮೆರೆವ ಸಂಪ್ರೀತನು
ಗಣಗಣರತ್ನ ವಾಣಿಜ್ಯ ಕುಲಜಾತನು
ಅನುದಿನ ಕೂಡಿ ನಡೆವ ಸ್ನೇಹಿತ ಮಾಂತಯ್ಯನ ಪ್ರೀತನು
ಏನು ಹೇಳಲಿ ತನಗಾಗುವ ಹಾನಿಯು
ಕಣಗಾಣದೆ ಕೆಟ್ಟ ಹೆಣ್ಣಿನ ಸಂಗದಿ
ಮುಣ್ಣುಗೂಡಿಸಿ ಮಾಯದ ಉರ್ಲಗಣ್ಣಿಗೆ
ವಣ ಅಪಮೃತ್ಯುವಿನಿಂದ ಸತ್ತುಹೋದನೈ ||೧||
ಜಡಬುದ್ಧಿಗೆ ಜನ್ಮಾಂತರ ವಿಧಿಕೃತ ಕೂಡಿತು
ತಡೆಯದೆ ವಿಷಯದಿ ಮಾಯವ
ಒಡಲೊಳ್ ಮತ್ಸರ ಮೂಡಿತು
ಅಡಗಿಮಾಡಿ ಉಣಬಸಬೇಕೆಂಬುದು ಕಲಹವ ದೂಡಿತು
ಪ್ರೀತಿಯೆಡೆಗೊಂಡು ಅರಿವಿಲ್ಲದ ಕಲಹಕ ದೂಡಿತು
ನಡೆತಪ್ಪಿತುಯೆಂದೆನೆನುತಲೆ ಜಂಗಮ
ಕಡುರೋಷದಿ ಹಿಡಿದೆದ್ದು ಖಡ್ಲದಿಂ
ಕಡಿಯಲು ಪಕ್ಕದಿ ಎಲುಬು ಮುರಿದು ಶಿರ
ಸಿಡಿಮಿಡಿಗೊಳ್ಳುತಲಿ ಪೊಡವಿಗುದುರಿತೌ ||೨||
ಕೆಲ ಬಲದವರೆಚ್ಚಿಸಲು ಪೋಲೀಸ ಕೇಳಿದಾ
ಅಳವಳಗೊಳುತಲಿ ಮನದೊಳಗತಿ ಕೋಪವ ತಾಳಿದಾ
ಬಲುಗಡ ಕುಲಕರ್ಣಿಗಳ ಕರಿಯಂತ್ಹೇಳಿದಾ
ಒಳಗಿಂದೊಳಗೆ ಬರೆದು ಹುಜೂರರಿಗೆ ರೀಪೋರ್ಟವ ಮಾಡಿದಾ
ಒಳಮಾತಿಲೆ ಅಯ್ಯನ ಕೈ ಖಡ್ಗವ ಕೆಳಗಿಳುಹಿಸಿ
ಎಳೆದೊಯ್ದು ಚಾವಾಡಿಗೆ ಸೆಳೆದು ಪಿಚಂಡಿಯ ಬಿಗಿದು ಬೇಗನೆ
ಕಳುಹಿಸಿ ಸುದ್ದಿ ಹುಬ್ಬಳ್ಳಿಯ ಸ್ಥಳಕ್ಕೆ ||೩||
ಸುದ್ದಿ ಕೇಳಿ ಹುಚ್ಚಪ್ಪತಮ್ಮ ಅತಿ ದುಃಖದಿ ಎದಿ ಬಾಯಿ
ಗುದ್ದಿಕೊಳ್ಳುತ ಬಿದ್ದ್ಹೊರಳಿದ ಭೂಮಿಗೆ ಶೋಕದಿ ಸತಿ ಸುತ-
ರಿದ್ದರಾತ್ಮ ಬಾಂಧವರು ಬಂದರಲ್ಲೇ ರೌದ್ರದಿ-
ಸಧ್ಯಕ್ಕ್ಹೋಗಿ ಹೆಣ ಹುಗಿಯಲು ನಡೆದರು ದಗ್ಧದೀ
ಮಧ್ಯರಾತ್ರಿಯಲೆದ್ದು ಶ್ರವಕ ಮಣ್ಣ
ಮುದ್ದಿಯೊಳಗೆ ಮುಚ್ಚಿಟ್ಟ ವಾರ್ತಿಯದು
ಚೋದ್ಯವಾಯಿತು ಶಿಶುನಾಳಧೀಶನಿಗೆ
ತಿದ್ದಿ ನಿನಗೆ ನಾ ತಿಳಿಸಿದೆ ಗೆಳತಿ ||೪||
****